ಸೋಮವಾರ, ಮೇ 23, 2022
21 °C

ನಿರ್ಲಕ್ಷ್ಯಕ್ಕೆ ತುತ್ತಾದ ಪಾದಚಾರಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹಾನಗರ ಬೆಳೆದಂತೆಲ್ಲ ಹೆಚ್ಚು ತೊಂದರೆಗೆ ಒಳಗಾಗಿರುವವರು ಪಾದಚಾರಿಗಳು.ರಸ್ತೆಗಳ ಅಭಿವೃದ್ಧಿಗೆ ಕೊಡುತ್ತಿರುವಷ್ಟು ಗಮನವನ್ನು ಪಾದಚಾರಿ ಮಾರ್ಗದ ಬಗ್ಗೆ ಹರಿಸುತ್ತಿಲ್ಲ.ಹಲವು ರಸ್ತೆಗಳಲ್ಲಿ ಪಾದಚಾರಿ ಮಾರ್ಗ ಇದ್ದರೂ ಮನುಷ್ಯ ಮಾತ್ರರು ನಡೆದಾಡುವ ಸ್ಥಿತಿಯಲ್ಲಿರುವುದಿಲ್ಲ.ಕೆಲವು ರಸ್ತೆಗಳಲ್ಲಿ ಪಾದಚಾರಿ ಮಾರ್ಗವನ್ನು ದುರ್ಬೀನು ಹಾಕಿಕೊಂಡು ಹುಡುಕಬೇಕಾದ ಪರಿಸ್ಥಿತಿ ಇದೆ.ಕೆಲವೇ ವರ್ಷಗಳ ಹಿಂದಿನವರೆಗೂ ಬೆಂಗಳೂರಿಗೆ ಪಿಂಚಣಿದಾರರ ಸ್ವರ್ಗ ಎಂಬ ಖ್ಯಾತಿ ಇತ್ತು.ಹಿರಿಯ ನಾಗರಿಕರ ಕಾಲ್ನಡಿಗೆಯ ಸಂಚಾರಕ್ಕೆ ನಗರದ ರಸ್ತೆಗಳು ಪ್ರಶಸ್ತವೂ ಸುರಕ್ಷಿತವೂ ಆಗಿದ್ದವು.ಆದರೆ ಈಗೇನಾಗಿದೆ? ವೃದ್ಧರು, ಮಕ್ಕಳು, ಮಹಿಳೆಯರು ಇರಲಿ, ಇತರರು ಸಹ ನಗರದ ರಸ್ತೆಗಳ ಬದಿಗಳಲ್ಲಿ ಕಾಲ್ನಡಿಗೆಯಲ್ಲಿ ನಡೆದಾಡಲು ಭಯಪಡಬೇಕಾದ ಸ್ಥಿತಿ ಇದೆ.ನಗರದ ಎಲ್ಲ ರಸ್ತೆಗಳಲ್ಲೂ ಪಾದಚಾರಿ ಮಾರ್ಗ ಒಂದೇ ತೆರನಾಗಿಲ್ಲ.ಎಲ್ಲ ರಸ್ತೆಗಳ ಮಾತಿರಲಿ, ಒಂದೇ ರಸ್ತೆಯಲ್ಲೂ ಏಕರೂಪವಾದ ಪಾದಚಾರಿ ಮಾರ್ಗ ಇಲ್ಲದ ಸ್ಥಿತಿ ಇದೆ.ಅನೇಕ ರಸ್ತೆಗಳಲ್ಲಿ ಕನಿಷ್ಠ ಅರ್ಧ ಕಿಲೋ ಮೀಟರ್‌ನಷ್ಟು ಉದ್ದವಾದ ಮಟ್ಟಸವಾಗಿರುವ ಪಾದಚಾರಿ ಮಾರ್ಗ ಸಿಗುವುದಿಲ್ಲ.ನೂರಿನ್ನೂರು ಮೀಟರ್‌ಗಳಿಗೆಲ್ಲ ಬದಲಾಗುವ ಪಾದಚಾರಿ ಮಾರ್ಗವನ್ನು ಏರಿಳಿಯಲು ಕಸರತ್ತು ನಡೆಸಬೇಕಾದ ಸ್ಥಿತಿ ಇದೆ.ಸ್ವಲ್ಪ ಮಟ್ಟಿಗೆ ಉತ್ತಮ ಸ್ಥಿತಿಯಲ್ಲಿದೆ ಎನ್ನಬಹುದಾದ ಪಾದಚಾರಿ ಮಾರ್ಗದಲ್ಲಿಯೂ ವಿದ್ಯುತ್ ಕಂಬಗಳು, ಟ್ರಾನ್ಸ್‌ಫಾರ್ಮರ್‌ಗಳು ಮತ್ತಿತರ ಅಡೆ ತಡೆಗಳು ಕಾಲ್ನಡಿಗೆಯ ಆಸೆಗೆ ತಣ್ಣೀರು ಎರಚುವಂತಿವೆ.ಸದಾ ಅಪಾಯಕ್ಕೆ ಆಹ್ವಾನ ನೀಡುವಂತಿವೆ.ಸಾಮಾನ್ಯವಾಗಿ ಪಾದಚಾರಿ ಮಾರ್ಗವು ರಸ್ತೆ ಬದಿಯಲ್ಲಿ ಚರಂಡಿ ಮೇಲೆ ನಿರ್ಮಾಣವಾಗಿರುತ್ತದೆ.ಬಹಳಷ್ಟು ಕಡೆ ಚರಂಡಿ ಮೇಲೆ ಹಾಕಿರುವ ಕಾಂಕ್ರಿಟ್ ಮಿಶ್ರಣದ ಸ್ಲಾಬ್‌ಗಳು ಇಲ್ಲವೇ ಕಲ್ಲು ಚಪ್ಪಡಿಗಳನ್ನು ಸರಿಯಾಗಿ ಜೋಡಿಸಿರುವುದಿಲ್ಲ, ಇಲ್ಲವೇ ಅವು ಮುರಿದು ಬಿದ್ದಿರುತ್ತವೆ.ಇದರಿಂದಲೂ ಅಪಾಯ ತಪ್ಪಿದ್ದಲ್ಲ.ರಸ್ತೆ ವಿಸ್ತರಣೆ ಮತ್ತು ಅಭಿವೃದ್ಧಿಗೆ ನೀಡುವ ಆದ್ಯತೆಗೆ ಹೋಲಿಸಿದರೆ ಪಾದಚಾರಿ ಮಾರ್ಗಕ್ಕೆ ಕೊಡುತ್ತಿರುವ ಗಮನ ಏನೇನೂ ಸಾಲದು.ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 2010- 11ರ ಬಜೆಟ್‌ನಲ್ಲಿ ಆಯ್ದ ರಸ್ತೆಗಳಲ್ಲಿ ನವೀನ ರೀತಿಯ ಪಾದಚಾರಿ ಮಾರ್ಗ ನಿರ್ಮಾಣಕ್ಕೆ ರೂ. 20 ಕೋಟಿ ಹಾಗೂ ಇತರ ಪಾದಚಾರಿ ಮಾರ್ಗಗಳ ನವೀಕರಣಕ್ಕೆ ರೂ. 24 ಕೋಟಿ ಒಟ್ಟು ರೂ. 44 ಕೋಟಿ ಹಣವನ್ನು ಮಾತ್ರ ಮೀಸಲಿರಿಸಲಾಗಿದೆ.ಬಿಐಎಎಲ್ ಸಂಪರ್ಕಿಸುವ ಇತರ ರಸ್ತೆಗಳ ಸುಧಾರಣೆಗಾಗಿಯೇ ರೂ. 40 ಕೋಟಿ ಮೀಸಲಿರಿಸಿರುವುದನ್ನು ನೋಡಿದರೆ ಪಾದಚಾರಿ ಮಾರ್ಗದ ಬಗ್ಗೆ ಪಾಲಿಕೆ ವಹಿಸಿರುವ ಕಾಳಜಿ ಅತ್ಯಲ್ಪ.ನಾಗರಿಕರ ಆರೋಗ್ಯದ ದೃಷ್ಟಿಯಿಂದಲೂ ಕಾಲ್ನಡಿಗೆ ಉತ್ತಮ.ಹೆಚ್ಚು ಹೆಚ್ಚು ಜನರು ಕಾಲ್ನಡಿಗೆ ಅಭ್ಯಾಸ ಬೆಳೆಸಿಕೊಂಡರೆ, ಅದಕ್ಕೆ ಪೂರಕವಾಗಿ ಪಾದಚಾರಿ ಮಾರ್ಗಗಳು ಅಭಿವೃದ್ಧಿಯಾದರೆ ಅದರಿಂದ ಸಮಾಜದ ಆರೋಗ್ಯ ಸುಧಾರಿಸಲಿದೆ. ಅಷ್ಟರ ಮಟ್ಟಿಗೆ ವಾಹನಗಳ ಓಡಾಟ ಕಡಿಮೆಯಾದರೆ ಪರಿಸರ ಮಾಲಿನ್ಯ ಕೂಡ ಕಡಿಮೆಯಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.