ಮಂಗಳವಾರ, ಜನವರಿ 21, 2020
28 °C

ನಿವೇಶನರಹಿತ ದಲಿತರಿಗೆ ವಸತಿ ಸೌಲಭ್ಯದ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಜಿಲ್ಲೆಯಲ್ಲಿ ನಿವೇಶನರಹಿತ ದಲಿತರಿಗೆ ವಸತಿ ಸೌಲಭ್ಯ ಕಲ್ಪಿಸಲು ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಸ್‌.ಟಿ.ಅಂಜನಕುಮಾರ್‌ ಭರವಸೆ ನೀಡಿದರು.ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ನಡೆದ ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಜಿಲ್ಲೆಯಲ್ಲಿ (ನಗರ– 25 ಸಾವಿರ, ಇತರೆಡೆ 10 ಸಾವಿರ) ನಿವೇಶನರಹಿತ 35 ಸಾವಿರ ದಲಿತರನ್ನು ಗುರುತಿಸಲಾಗಿದೆ. ಅಗತ್ಯ ಜಮೀನು ಸಿಕ್ಕಿ, ಮುಖ್ಯಮಂತ್ರಿ ಅವರು ಅನುಮೋದನೆ ನೀಡಿದರೆ ಪ್ರಕ್ರಿಯೆ ಸುಲಭವಾಗಲಿದೆ. ವರ್ಷದೊಳಗೆ ವಸತಿ ಸೌಲಭ್ಯ ಕಲ್ಪಿಸಬಹುದು. 12 ವರ್ಷದಿಂದ ಈ ಕಾರ್ಯ ನಡೆದಿಲ್ಲ. ಇದಕ್ಕಾಗಿ ಅವಕಾಶ ಕಲ್ಪಿಸಬೇಕು ಎಂದು ದಲಿತ ಸಂಘಟನೆಗಳು ಸಿಎಂಗೆ ಮನವಿ ನೀಡಿದರೆ ಅನುಕೂಲ ಆಗುತ್ತದೆ. ದಲಿತರ ಸ್ಮಶಾನ ಹಾಗೂ ವಸತಿ ಸೌಲಭ್ಯಕ್ಕೆ ಮೊದಲ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.ಚಿಕ್ಕನಹಳ್ಳಿ ನಿವಾಸಿಗಳಿಗೆ ವಸತಿ ಸೌಲಭ್ಯ ಕಲ್ಪಿಸಬೇಕು ಎಂಬ ದಲಿತ ಮುಖಂಡ ಹೂವಿನಮಡು ಅಂಜಿನಪ್ಪ ಅವರ ಒತ್ತಾಯಕ್ಕೆ, ಪರಿಶೀಲಿಸುವ ಭರವಸೆಯನ್ನು ಜಿಲ್ಲಾಧಿಕಾರಿ ನೀಡಿದರು. ಲೋಕಿಕೆರೆ ದಲಿತರಿಗೆ ಹಕ್ಕುಪತ್ರ ನೀಡಬೇಕು ಎಂದು ತಾಲ್ಲೂಕು ಪಂಚಾಯ್ತಿ ಇಒ ಹಾಗೂ ತಹಶೀಲ್ದಾರ್‌ಗೆ ಸೂಚಿಸಿದರು.ಎಸಿಎಫ್‌ಗೆ ತರಾಟೆ!: ಹೊನ್ನಾಳಿ ತಾಲ್ಲೂಕಿನ ಹಳೇ ಜೋಗದಲ್ಲಿ ದಲಿತ ಕುಟುಂಬಗಳು ಸಾಗುವಳಿ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ದಲಿತ ಮುಖಂಡ ಕೊಡತಾಳ್‌ ರುದ್ರೇಶ್‌, ಎಸಿಎಫ್‌ ಅನ್ನು ಪ್ರಶ್ನಿಸಿದರು.ಅರಣ್ಯ ಇಲಾಖೆ ಅಧಿಕಾರಿಗಳು ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುತ್ತಿದ್ದಾರೆ. ಜೋಳ ಬಿತ್ತುತ್ತಿದ್ದವರ ಮೇಲೆ ಪೊಲೀಸರು ಲಾಠಿಪ್ರಹಾರ ನಡೆಸಲು ಅವರೇ ಕಾರಣ. ಬಡ ದಲಿತ ಮಹಿಳೆಯರು ಹರಿದ ಬಟ್ಟೆಯಲ್ಲಿ ನ್ಯಾಯಾಲಯಲ್ಲಿ ನಿಲ್ಲುವಂತಾಗಿದೆ ಎಂದು ದೂರಿದರು.ಬೇರೆ ಜಾತಿಯವರೂ ಅಲ್ಲಿ ಸಾಗುವಳಿ ಮಾಡುತ್ತಾರೆ. ಆದರೆ, ಆದಿ ಕರ್ನಾಟಕದವರನ್ನು ಮಾತ್ರ ಏಕೆ ಒಕ್ಕಲೆಬ್ಬಿಸಲಾಗುತ್ತಿದೆ ಎಂದು ಪ್ರಶ್ನಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಎಸಿಎಫ್‌, ‘ಎಲ್ಲ ಭೂಮಿಯನ್ನೂ ತೆರವುಗೊಳಿಸಲಾಗುತ್ತಿದೆ’ ಎಂದರು. ಇದಕ್ಕೆ ಕೆರಳಿದ ರುದ್ರೇಶ್‌, ‘ತಪ್ಪು ಮಾಹಿತಿ ನೀಡಬೇಡಿ. ಎಲ್ಲರನ್ನೂ ತೆರವುಗೊಳಿಸಿದ್ದರೆ ನಾನು ನಿಮ್ಮ ಮನೆಯಲ್ಲಿ ಸಂಬಳಕ್ಕೆ ಇರುತ್ತೇನೆ’ ಎಂದು ಸವಾಲು ಹಾಕಿದರು.

ಎಲ್ಲರಿಗೂ ಒಂದೇ ಮಾನದಂಡ ಇರಬೇಕು. ಜಂಟಿ ಸಮೀಕ್ಷೆ ನಡೆಸಬೇಕು. ಯಥಾಸ್ಥಿತಿ ಮುಂದುವರಿಸಿಕೊಂಡು ಹೋಗಬೇಕು

ಎಂದು ಹೇಳಿದ ಜಿಲ್ಲಾಧಿಕಾರಿ ಚರ್ಚೆಗೆ ತೆರೆ ಎಳೆದರು.ಪ್ರತಿ ಗ್ರಾಮದಲ್ಲಿಯೂ ದಲಿತರಿಗೆ ಪ್ರತ್ಯೇಕ ಸ್ಮಶಾನ ಅಭಿವೃದ್ಧಿಪಡಿಸಲು, 2 ಎಕರೆ ಜಾಗ ಮೀಸಲಿಡಬೇಕು ಎಂಬ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ, ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಭರವಸೆ ನೀಡಿದರು.ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಪ್ರಕಾಶ್, ಜಿಲ್ಲಾ ಪಂಚಾಯ್ತಿ ಸಿಇಒ ಎ.ಬಿ.ಹೇಮಚಂದ್ರ, ನಗರಪಾಲಿಕೆ ಆಯುಕ್ತ ಬಿ.ಎಚ್‌.ನಾರಾಯಣಪ್ಪ ಮೊದಲಾದವರು ಹಾಜರಿದ್ದರು.

ಪ್ರತಿಕ್ರಿಯಿಸಿ (+)