ಮಂಗಳವಾರ, ಆಗಸ್ಟ್ 4, 2020
25 °C

ನಿವೇಶನವೇ ಇಲ್ಲ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಿವೇಶನವೇ ಇಲ್ಲ!

ರಾಜ್ಯ ಸರ್ಕಾರದ ಬಸವ ವಸತಿ ಯೋಜನೆಯಡಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 4 ಸಾವಿರ ಮನೆ ಮಂಜೂರಾಗಿದೆ. ಮನೆ ನಿರ್ಮಿಸಲು ಫಲಾನುಭವಿಗಳು ನಿವೇಶನ ಹೊಂದಿರಬೇಕೆಂಬ ಷರತ್ತು ಇದೆ. ಅಚ್ಚರಿ ಎಂದರೆ, ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಬಡವರಿಗೆ ಮನೆ ನಿರ್ಮಿಸಲು ಬೇಕಾದ ನಿವೇಶನಗಳೇ ಇಲ್ಲ.ಈ ಯೋಜನೆಯಡಿ ದ.ಕ ಜಿಲ್ಲೆಗೆ 2010-11ನೇ ಸಾಲಿನಲ್ಲಿ 28 ಸಾವಿರ ಮನೆಗಳು ಮಂಜೂರಾಗಿವೆ. ಆದರೆ, ಸ್ವಂತ ನಿವೇಶನವಿರುವ ಅರ್ಹ ಫಲಾನುಭವಿಗಳು ಲಭಿಸಿದ್ದು 18,500 ಮಂದಿ ಮಾತ್ರ.  7,500 ಮನೆಗಳ ನಿರ್ಮಾಣ ಆರಂಭಗೊಂಡಿದ್ದು, 1650 ಮನೆಗಳು ಮಾತ್ರ ಪೂರ್ಣಗೊಂಡಿವೆ.ನಿವೇಶನರಹಿತರಿಗೆ ನಿವೇಶನ ನೀಡಲು ಸರ್ಕಾರಿ ಜಾಗ ಗುರುತಿಸಲಾಗುತ್ತಿದೆ. ಸರ್ಕಾರಿ ಜಾಗ ಲಭ್ಯ ಇಲ್ಲದ ಕಡೆಗಳಲ್ಲಿ ಖಾಸಗಿ ಜಾಗ ಖರೀದಿಸಿ ಹಂಚಿಕೆ ಮಾಡಲು ಅವಕಾಶವಿದೆ. ಖಾಸಗಿ ಜಾಗ ಖರೀದಿಗೆ ಸೆಂಟ್ಸ್‌ಗೆ 3 ಸಾವಿರ ರೂಪಾಯಿಯನ್ನು ಮಾತ್ರ ಸರ್ಕಾರ ನೀಡುತ್ತದೆ. ಅಷ್ಟು ಕಡಿಮೆ ಮೊತ್ತದಲ್ಲಿ ಜಿಲ್ಲೆಯಲ್ಲಿ ಎಲ್ಲೂ ಖಾಸಗಿ ಜಾಗ ಲಭ್ಯ ಇಲ್ಲ, ಇದೇ ಸಮಸ್ಯೆಯ ಮೂಲ ಎನ್ನುತ್ತಾರೆ ಜಿಲ್ಲಾ ಪಂಚಾಯತ್ ಅಧಿಕಾರಿಗಳು.ಆದರೆ, ಈ ಮಾತನ್ನು ಬಡವರಿಗೆ ವಸತಿ ಕಲ್ಪಿಸಲು ಹೋರಾಟ ನಡೆಸುತ್ತಿರುವ ಸಂಘಟನೆಗಳು ಒಪ್ಪುವುದಿಲ್ಲ. ಪಟ್ಟಣಗಳಲ್ಲಿ ಹಾಗೂ ಆಸುಪಾಸಿನ ಗ್ರಾಮಗಳಲ್ಲಿ ಸರ್ಕಾರಿ ಜಾಗ ಇಲ್ಲದಿರಬಹುದು. ಆದರೆ ಗ್ರಾಮೀಣ ಪ್ರದೇಶದಲ್ಲಿ ಈಗಲೂ ಸಾಕಷ್ಟು ಸರ್ಕಾರಿ ಜಾಗ ಖಾಲಿ ಇದೆ.ಅನೇಕ ಕಡೆ ಸರ್ಕಾರಿ ಜಾಗ ಒತ್ತುವರಿಯಾಗಿದೆ. ಅವುಗಳನ್ನು ವಶಪಡಿಸಿಕೊಂಡು ಬಡವರಿಗೆ ಹಂಚಲು ಅಧಿಕಾರಿಗಳಿಗೆ ಇಚ್ಛಾಶಕ್ತಿ ಇಲ್ಲ. ನಮ್ಮ ಸಂಘಟನೆಯ ನೇತೃತ್ವದಲ್ಲಿ 15 ಸಾವಿರಕ್ಕೂ ಅಧಿಕ ಬಡವರು ವಸತಿಗಾಗಿ ಅರ್ಜಿ ಸಲ್ಲಿಸ್ದ್ದಿದಾರೆ. ಹೀಗಿರುವಾಗ ಅಧಿಕಾರಿಗಳು ಫಲಾನುಭವಿಗಳು ಸಿಗುತ್ತಿಲ್ಲ ಎನ್ನುವುದು ಎಷ್ಟು ಸರಿ?~ ಎಂದು ಪ್ರಶ್ನಿಸುತ್ತಾರೆ ಡಿವೈಎಫ್‌ಐ ದ.ಕ. ಜಿಲ್ಲಾ ಘಟಕದ ಅಧ್ಯಕ್ಷ ಮುನೀರ್ ಕಾಟಿಪಳ್ಳ.

ಕಡಿಮೆ ಹಣ: ಪ್ರತಿ ಮನೆಗೆ ರೂ ಒಂದು ಲಕ್ಷ ರೂಪಾಯಿ ನೀಡಲಾಗುತ್ತಿದೆ. ಈ ಮೊತ್ತದಲ್ಲಿ ಇಲ್ಲಿ ಮನೆ ನಿರ್ಮಿಸುವುದು ಕಷ್ಟಸಾಧ್ಯ. ಕರಾವಳಿಯಲ್ಲಿ ಮೇಸ್ತ್ರಿಗೆ ದಿನಕ್ಕೆ 450 ರೂಪಾಯಿ ಹಾಗೂ ಕೂಲಿಯಾಳುಗಳಿಗೆ 300 ರೂಪಾಯಿ ಸಂಬಳ ನೀಡಬೇಕು.

 

ಕಟ್ಟಡ ನಿರ್ಮಾಣ ಸಾಮಗ್ರಿಗಳ ಬೆಲೆ ಗಗನಕ್ಕೇರಿದೆ. ಬಡವರು ಇಷ್ಟು ಕಡಿಮೆ ಹಣದಲ್ಲಿ ಮನೆ ಕಟ್ಟುವುದು ಹೇಗೆ. ಹಾಗಾಗಿ ಮಂಜೂರಾದ ಮನೆಗಳ ಪೈಕಿ ಶೇ 40ರಷ್ಟು ಪೂರ್ಣಗೊಳ್ಳುವುದಿಲ್ಲ~ ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ತಿಳಿಸಿದರು.

ಉಡುಪಿ ಜಿಲ್ಲೆಯಲ್ಲೂ ಇದೇ ಸ್ಥಿತಿ ಇದೆ.ಬಸವ ವಸತಿ ಯೋಜನೆಯಲ್ಲಿ 2011-12ನೇ ಸಾಲಿನಲ್ಲಿ ಒಟ್ಟು 6,684 ಫಲಾನುಭವಿಗಳನ್ನು ಗುರುತಿಸಲಾಗಿತ್ತು. ಇದರಲ್ಲಿ 5312 ಮನೆಗಳ ನಿರ್ಮಾಣ ಕಾರ್ಯವನ್ನು ಆರಂಭಿಸಲಾಗಿದೆ. ಆದರೆ, ಪೂರ್ಣಗೊಂಡಿರುವ ಮನೆಗಳ ಸಂಖ್ಯೆ 1,716 ಮಾತ್ರ. 3596 ಮನೆಗಳ ನಿರ್ಮಾಣ ಪ್ರಗತಿಯಲ್ಲಿದೆ.ಸರ್ಕಾರಿ ಭೂಮಿ ಇಲ್ಲ:
ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಸವ ವಸತಿ ಯೋಜನೆಯ ಫಲಾನುಭವಿಗಳಿಗೆ ನಿವೇಶನ ನೀಡಲು ಒಂದೇ ಒಂದು ಗುಂಟೆ ಸರ್ಕಾರಿ ಭೂಮಿ ಖಾಲಿ ಇಲ್ಲ. ಆದರೆ, ಬಾಲಸುಬ್ರಹ್ಮಣ್ಯ ನೇತೃತ್ವದ ಸಮಿತಿ ವರದಿ ಪ್ರಕಾರ ಜಿಲ್ಲೆಯಲ್ಲಿ ಅಂದಾಜು 1.60 ಲಕ್ಷ ಹೆಕ್ಟೇರ್‌ಗೂ ಅಧಿಕ ಸರ್ಕಾರಿ ಭೂಮಿ ಒತ್ತುವರಿಯಾಗಿದೆ!ಕಳೆದ ವರ್ಷ ಆಶ್ರಯ ನಿವೇಶನಕ್ಕಾಗಿಯೇ ಜಿಲ್ಲಾಧಿಕಾರಿ ಖಾತೆಗೆ 3.12 ಕೋಟಿ ರೂಪಾಯಿ ಅನುದಾನ ಬಂದಿದೆ. ಈ ಹಣ ಇನ್ನೂ ವಿನಿಯೋಗ ಆಗಿಲ್ಲ. ಭೂಮಿಗೆ ಸರ್ಕಾರ ನಿಗದಿಪಡಿಸಿರುವ ಬೆಲೆಗೂ ಮತ್ತು ಮಾರುಕಟ್ಟೆ ಬೆಲೆಗೂ ಅಜಗಜಾಂತರವಿದೆ.

 

ಜಮೀನು ಇರುವವರು ಸರ್ಕಾರಿ ಬೆಲೆಗೆ ಭೂಮಿ ಕೊಡಲು ಸಿದ್ಧರಿಲ್ಲ. ಈ ವರ್ಷ ಜಿಲ್ಲೆಯಲ್ಲಿ ಬಸವ ವಸತಿ ಯೋಜನೆಗೆ 10,793 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಈಗಾಗಲೇ 1,811 ಮನೆಗಳು ಪೂರ್ಣಗೊಂಡಿವೆ. 5,570 ಮನೆಗಳು ಪ್ರಗತಿಯಲ್ಲಿವೆ. 3412 ಮನೆಗಳ ನಿರ್ಮಾಣ ಇನ್ನಷ್ಟೆ ಶುರುವಾಗಬೇಕಿದೆ.ಆದರೆ, ವಾಸ್ತವವೇ ಬೇರೆ. ಮೂಡಿಗೆರೆ ತಾಲ್ಲೂಕಿನಲ್ಲಿ ಸುಮಾರು 6ರಿಂದ 7 ಸಾವಿರ ಮಂದಿ ಅರ್ಹರು ವಸತಿ ಯೋಜನೆಯಿಂದ ವಂಚಿತರಾಗಿದ್ದಾರೆ. ಮೂಡಿಗೆರೆ ತಾಲ್ಲೂಕಿನಲ್ಲಿ ಕಳೆದ 15 ವರ್ಷಗಳಿಂದ ಒಂದೇ ಒಂದು ನಿವೇಶನ ವಿತರಿಸಿಲ್ಲ.ಫಲಾನುಭವಿಗಳು ಯಾವ ನಿವೇಶನ ತೋರಿಸಿ ಮನೆ ಪಡೆಯಬೇಕು? ಜಿಲ್ಲೆಯಲ್ಲಿ ಕನಿಷ್ಠ 25 ಸಾವಿರ ಅರ್ಹ ಕುಟುಂಬಗಳು ವಸತಿ ಯೋಜನೆಯಿಂದ ವಂಚಿತವಾಗಿವೆ ಎನ್ನುತ್ತಾರೆ ಪ್ರಶ್ನಿಸುತ್ತಾರೆ ಸಿಪಿಐ ರಾಜ್ಯ ಸಹಕಾರ್ಯದರ್ಶಿ ಸಾತಿ ಸುಂದರೇಶ್.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.