ಮಂಗಳವಾರ, ಮೇ 18, 2021
30 °C

ನಿವೇಶನ ಒದಗಿಸಲು ಡಿಎಸ್‌ಎಸ್ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗೇಪಲ್ಲಿ: ತಾಲ್ಲೂಕಿನ ಎಲ್ಲ ನಿವೇಶನ ರಹಿತರಿಗೆ ನಿವೇಶನ ಒದಗಿಸಬೇಕೆಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯ ಸಾವಿರಾರು ಕಾರ್ಯಕರ್ತರು ಸೋಮವಾರ ಪಟ್ಟಣದ ಮುಖ್ಯರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ಮಿನಿ ವಿಧಾನಸೌಧದ ಎದುರು ಧರಣಿ ನಡೆಸಿದರು.ಧರಣಿ ನಿರತರನ್ನು ಉದ್ದೇಶಿಸಿ ಮಾತನಾಡಿದ ಡಿಎಸ್‌ಎಸ್ ರಾಜ್ಯ ಘಟಕದ ಸಂಘಟನಾ ಸಂಚಾಲಕ ಹೆಣ್ಣೂರು ಶ್ರೀನಿವಾಸ್, ತಾಲ್ಲೂಕಿನ ದಲಿತರು ವಾಸಿಸುವ ಪ್ರದೇಶಗಳ ಅಭಿವೃದ್ಧಿ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂದರು.ನಿವೇಶಗಳಿಲ್ಲದ ದಲಿತರು ಗುಡಿಸಲಿನಲ್ಲಿ ವಾಸ ಮಾಡಬೇಕಾದ ಅನಿವಾರ್ಯತೆ ಇದೆ. ಎಲ್ಲ ವರ್ಗದ ನಿವೇಶನ ರಹಿತರಿಗೂ ಈ ಕೂಡಲೇ ಸರ್ಕಾರಿ, ಖರಾಬು ಹಾಗೂ ಗೋಮಾಳ ಜಮೀನು ಗಳಲ್ಲಿ ನಿವೇಶನಗಳನ್ನು ಮಂಜೂರು ಮಾಡಿ ಕೊಡ ಬೇಕೆಂದು ಒತ್ತಾಯಿಸಿದರು.ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಮೇಲೂರು ಮಂಜುನಾಥ್ ಮಾತನಾಡಿ, ಚಿಕ್ಕಬಳ್ಳಾಪುರ ಜಿಲ್ಲೆ ರೂಪುಗೊಂಡು 4 ವರ್ಷ ಕಳೆದರೂ ಬಡವರಿಗೆ ಮೂಲ ಸೌಕರ್ಯ ಒದಗಿಸುವಲ್ಲಿ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತಗಳು ವಿಫಲವಾಗಿವೆ. ಮುಂದಿನ ದಿನಗಳಲ್ಲಿ ದಲಿತರಿಗೆ ನಿವೇಶನಗಳನ್ನು ವಿತರಿಸದಿದ್ದರೆ ತಾಲ್ಲೂಕು ಕಚೇರಿ ಎದುರು ಅನಿರ್ದಿಷ್ಟ ಧರಣಿ ಪ್ರಾರಂಭಿಸಲಾಗುತ್ತದೆ ಎಂದು ಎಚ್ಚರಿಸಿದರು.ಸ್ಥಳಕ್ಕೆ ಜಿಲ್ಲಾಧಿಕಾರಿಯೇ ಭೇಟಿ ನೀಡಿ ನೋವು ಆಲಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿ ದರು. ನಂತರ ತಮ್ಮ ಕಚೇರಿಯಲ್ಲಿ ಮುಖಂಡ ರೊಂದಿಗೆ ಸಭೆ ನಡೆಸಿದ ತಹಸೀಲ್ದಾರ್ ಟಿ.ಎ.ಹನು ಮಂತರಾಯ ನಿವೇಶನ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ ನಂತರ, ಪ್ರತಿಭಟನಾ ನಿರತರು ಧರಣಿ ಹಿಂಪಡೆದರು.ಡಿಎಸ್‌ಎಸ್ ಮುಖಂಡರಾದ ವಿ.ನಾರಾಯಣ ಸ್ವಾಮಿ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎ.ವಿ.ಪೂಜಪ್ಪ, ಬಿ.ಎನ್.ಗಂಗಾಧರ, ಜಯಣ್ಣ, ಮೇಲೂರು ಮಂಜುನಾಥ್, ಎಸ್.ಆಂಜಿನಪ್ಪ, ಸನಂದ್ ಕುಮಾರ್, ಜಿ.ಎನ್.ಆಂಜಿನಪ್ಪ, ಲಕ್ಷ್ಮೀ ನಾರಾಯಣ, ವೆಂಕಟರಮಣಪ್ಪ, ಕಡ್ಡೀಲು ವೆಂಕಟರಮಣಪ್ಪ, ಎಂ.ಕೇಶವ, ಶ್ರೀನಿವಾಸ್, ಲಕ್ಷ್ಮಿದೇವಮ್ಮ, ಬಿ.ನರಸಿಂಹಪ್ಪ, ಜಿ.ಎಲ್. ರಾಮಾಂಜಿನೇಯಪ್ಪ, ವೆಂಕಟರಾಯಪ್ಪ, ಅಪ್ಪಣ್ಣ, ಬೂರಗುಮಡುಗು ಲಕ್ಷ್ಮೀನರಸಿಂಹಪ್ಪ ಮತ್ತಿತರರು ಉಪಸ್ಥಿತರಿದ್ದರು.ಪಟ್ಟಣದ ನ್ಯಾಷನಲ್ ಕಾಲೇಜಿನ ಮುಂಭಾಗದಿಂದ ಮೆರವಣಿಗೆ ಪ್ರಾರಂಭಿಸಿದ ಪ್ರತಿಭಟನಾಕಾರರು ಪಟ್ಟಣದ ಮುಖ್ಯರಸ್ತೆಯಲ್ಲಿ ಸಂಚರಿಸಿದ್ದರಿಂದ ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.