ಶುಕ್ರವಾರ, ಮೇ 27, 2022
22 °C

ನಿವೇಶನ ಹಗರಣ ತನಿಖೆಯಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಜೆಪಿ ಸರ್ಕಾರಕ್ಕೆ ಹಗರಣ, ಕಳಂಕ, ಆಪಾದನೆ ತಪ್ಪಿದ್ದೇ ಅಲ್ಲ. ಹಗರಣಗಳ ಸರಮಾಲೆಯಿಂದಾಗಿ  ನಾಲ್ಕು ವರ್ಷಗಳಲ್ಲಿ ಈಗಾಗಲೇ 11 ಸಚಿವರು ನಿರ್ಗಮಿಸಿದ್ದಾರೆ.  ಈಗ ನಿವೇಶನ ಹಗರಣದ ಆರೋಪ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಸ್.ಸುರೇಶ್ ಕುಮಾರ್ ಅವರ ರಾಜೀನಾಮೆಗೆ ಕಾರಣವಾಗಿದೆ.ಸುಳ್ಳು ಪ್ರಮಾಣ ಪತ್ರ ನೀಡಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಮುಖ್ಯಮಂತ್ರಿಗಳ ವಿವೇಚನಾ ಕೋಟಾದಡಿ ನಿವೇಶನ ಪಡೆದ ಆರೋಪಕ್ಕೆ ಒಳಗಾಗಿರುವ ಸಚಿವ ಸುರೇಶ್‌ಕುಮಾರ್, ಈ ವಿಷಯದಲ್ಲಿ `ತಪ್ಪು ಮಾಡಿಲ್ಲ~ ಎಂದು ಸ್ಪಷ್ಟ ಪಡಿಸಿದ್ದಾರಲ್ಲದೆ, `ತೇಜೋವಧೆ ಮಾಡುವ  ಸಲುವಾಗಿ ಮಾಡಿರುವ ಆಧಾರರಹಿತ ಆರೋಪ~ ಎಂದು ಹೇಳಿದ್ದಾರೆ.ಆದರೂ  ನೈತಿಕತೆ ದೃಷ್ಟಿಯಿಂದ ತಕ್ಷಣವೇ ರಾಜೀನಾಮೆ ಸಲ್ಲಿಸಿರುವುದು  ದಿಟ್ಟ ತೀರ್ಮಾನ ಅಲ್ಲದೆ ಶ್ಲಾಘನೀಯ ಕಾರ್ಯ. ಅಧಿಕಾರಕ್ಕೆ ಜೋತುಬೀಳುವ ಪ್ರವೃತ್ತಿಯೇ ಹೆಚ್ಚಾಗಿರುವ ಪ್ರಸ್ತುತ ರಾಜಕೀಯ ಸಂದರ್ಭದಲ್ಲಿ ಇದೊಂದು ಅಪರೂಪದ  ನಡವಳಿಕೆ.

ಸುರೇಶ್‌ಕುಮಾರ್ ಅವರ ಅಧಿಕಾರ ತ್ಯಾಗ ಮತ್ತು ರಾಜಕೀಯ ಸೂಕ್ಷ್ಮತೆ, ಎಷ್ಟೇ ಹಗರಣಗಳು, ಆಪಾದನೆಗಳು ಹೆಗಲೇರಿದರೂ ಅಧಿಕಾರಕ್ಕಾಗಿ ಹಪಹಪಿಸುವ ರಾಜಕಾರಣಿಗಳಿಗೆ ಒಂದು ಪಾಠ. ಕಳಂಕರಹಿತ ಸಾರ್ವಜನಿಕ ವರ್ಚಸ್ಸು ರಾಜಕಾರಣಿಗಳಿಗೆ ಬಹಳ ಮುಖ್ಯ.  ಸಚ್ಚಾರಿತ್ರ್ಯ ಹೊಂದಿರುವವರ ವಿರುದ್ಧ ಕೇಳಿ ಬಂದಿರುವ ಈ ರೀತಿಯ ಆರೋಪಗಳಿಗೆ ಬೆಲೆ ಕೊಡಬೇಕಾಗಿಲ್ಲ ಎಂದು ಸಂಪುಟ ಸಹೋದ್ಯೋಗಿಯನ್ನು ಸಮರ್ಥಿಸಿಕೊಂಡಿರುವ ಮುಖ್ಯಮಂತ್ರಿಗಳು, ರಾಜೀನಾಮೆ ಅಂಗೀಕರಿಸುವುದಿಲ್ಲ ಎಂದು ಹೇಳಿದ್ದಾರೆ.ಆದರೂ ಪ್ರಾಮಾಣಿಕ, ದಕ್ಷ ಎಂದೇ ಹೆಸರಾಗಿರುವ, ಸಂಘ ಪರಿವಾರದ ಮೂಸೆಯಲ್ಲಿ ತಯಾರಾಗಿ, ಶಿಸ್ತುಬದ್ಧ ರಾಜಕಾರಣಿ ಎಂದೇ  ಹೆಸರಾಗಿದ್ದ,  ಸುರೇಶ್‌ಕುಮಾರ್ ಅವರ ವಿರುದ್ಧ ಇಂತಹ ಆಪಾದನೆ ಬಿರುಗಾಳಿಯಂತೆ ಬಂದು ಎರಗಿರುವುದು  ಪಕ್ಷಕ್ಕೆ ಆಘಾತವೇ ಸರಿ. ಮೊದಲೇ ಬಿಕ್ಕಟ್ಟಿನ ಭಾರದಿಂದ ಬಳಲುತ್ತಿರುವ ಸರ್ಕಾರಕ್ಕೆ ಈಗ ಮತ್ತೊಂದು ಇಕ್ಕಟ್ಟು.ಮುಖ್ಯಮಂತ್ರಿಗಳು ಈ ಬಗ್ಗೆ ಕೂಡಲೇ ತನಿಖೆಗೆ ಆದೇಶ ನೀಡುವುದು ಸೂಕ್ತವಾದ ಕ್ರಮವಾಗುತ್ತದೆ. ಮಾಹಿತಿ ಹಕ್ಕು ಮೂಲಕ ದೊರಕಿರುವ  ದಾಖಲೆಗಳ ಪರಾಮರ್ಶೆ ಆದಾಗ ಸತ್ಯ ಹೊರಬರುತ್ತದೆ. ಸಚಿವ ಸಂಪುಟದಲ್ಲಿರುವವರ ಪಾರದರ್ಶಕ ಬದುಕು ಇಲ್ಲಿ ಮುಖ್ಯ. ತುರ್ತು ತನಿಖೆ ಮೂಲಕ ಈ ಹಗರಣಕ್ಕೆ ಒಂದು ತಾರ್ಕಿಕ ಅಂತ್ಯ ಕಾಣಿಸುವುದು ಮುಖ್ಯಮಂತ್ರಿಗಳ ಹೊಣೆಯಾಗಿದೆ. ಈಗಾಗಲೇ 19 ಖಾತೆಗಳ ಭಾರ ಹೊತ್ತಿರುವ ಮುಖ್ಯಮಂತ್ರಿಗಳಿಗೆ ಈಗ ಅದೊಂದೇ ದಾರಿ. ಬಿಜೆಪಿ ಸರ್ಕಾರ ಈಗಾಗಲೇ 165 ಶಾಸಕರಿಗೆ  ಮುಖ್ಯಮಂತ್ರಿಗಳ ವಿವೇಚನಾ ಕೋಟಾದಡಿ ಬೆಂಗಳೂರು ನಗರದಲ್ಲಿ ನಿವೇಶನಗಳನ್ನು ನೀಡಿದೆ. ಪ್ರತೀಸಲ ಶಾಸಕರಿಗೆ ನಿವೇಶನಗಳನ್ನು ನೀಡುವಾಗಲೂ ಅದಕ್ಕೆ ಒಂದು ನೆವ ಹೇಳಲಾಗುತ್ತದೆ.

 

ರಾಜಕೀಯವಾಗಿ ಓಲೈಸುವ ಒಂದು ಯತ್ನವಾಗಿ ಇದನ್ನು ಬಳಸಿಕೊಳ್ಳಲಾಗುತ್ತದೆ. ಇಂತಹ ಒಂದು `ಲಾಭ~ದ ನಿವೇಶನಕ್ಕಾಗಿ ಶಾಸಕರೂ ಹಂಬಲಿಸುತ್ತಿರುತ್ತಾರೆ. ಅದಕ್ಕಾಗಿ ಎಲ್ಲರೂ ವಾಮಮಾರ್ಗಗಳನ್ನು ಅನುಸರಿಸುತ್ತಾರೆ. ಎಲ್ಲ 165 ಶಾಸಕರಿಗೆ ನೀಡಿರುವ ನಿವೇಶನಗಳು ನಿಯಮಾನುಸಾರವಾಗಿಯೇ ವಿತರಣೆಯಾಗಿದೆಯೇ ಎನ್ನುವುದೂ ತನಿಖೆ ವ್ಯಾಪ್ತಿಗೆ ಒಳಪಡಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.