ಸೋಮವಾರ, ಜೂನ್ 14, 2021
23 °C

ನಿಶ್ಶಬ್ದ ಕನ್ನಡಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪತ್ರಿಕೆಯೊಂದಕ್ಕೆ ಅವರು ಮಾಲೀಕ. ಮತ್ತೊಬ್ಬರು ವರದಿಗಾರ. ಇಬ್ಬರಲ್ಲೂ ಸಿನಿಮಾ ಮಾಡುವ ಹುಚ್ಚು. ತಮ್ಮದು ಮಾಮೂಲಿ ಸಿನಿಮಾಗಳ ಸಾಲಿನಲ್ಲಿ ಒಂದು ಎಂಬಂತೆ ಆಗಬಾರದು, ಸಮಾಜಕ್ಕೆ ಕನ್ನಡಿ ಹಿಡಿಯುವ ಪ್ರಯತ್ನವಾಗಬೇಕು ಎನ್ನುವ ಅಭಿಲಾಷೆ. ಮಾಲೀಕರೇ ಹಣ ಹೂಡಿದರು, ವರದಿಗಾರರೇ ಕಥೆ ಹೆಣೆದು ಆ್ಯಕ್ಷನ್‌ ಕಟ್‌ ಹೇಳಿದರು.ಕುಬ್ಜ ದೇಹದ ಸಮಸ್ಯೆಯುಳ್ಳ ಹುಡುಗನೊಬ್ಬನ ಕಥನವನ್ನು ಮನೋಜ್ಞವಾಗಿ ಹೆಣೆದಿರುವ ಮಂಜುನಾಥ ಬಾಬು (ಮಾ.ಬಾ.) ಚಿತ್ರಕ್ಕೆ ಇಟ್ಟಿರುವ ಹೆಸರು ‘ಮಿರರ್‌’. ಬದುಕಿನ ಪ್ರತಿಬಿಂಬವನ್ನು ಮೂಡಿಸುವ ತುಡಿತ ಅವರದು. ಪ್ರತಿಬಿಂಬ ಕಾಣಲು ಕನ್ನಡಿ ಸಾಕು, ಮಾತಿನ ಅಗತ್ಯವಿಲ್ಲ ಎಂದೂ ಅವರಿಗೆ ಅನಿಸಿದೆ. ಅದಕ್ಕೆಂದೇ ಮಾತಿನ ಉಸಾಬರಿ ಬೇಡವೆಂದು ಮೌನವನ್ನು ಅಪ್ಪಿಕೊಂಡಿದ್ದಾರೆ. ಮಾತೇ ಬಂಡವಾಳವಾಗಿರುವ ಈಗಿನ ಸಿನಿಮಾಗಳ ನಡುವೆ ಅವರು ಮೂಕಿ ಚಿತ್ರದ ಪ್ರಯೋಗಕ್ಕೆ ಕೈಹಾಕಿದ್ದಾರೆ.ತೆಲುಗಿನಲ್ಲಿ ದೊಡ್ಡ ಹೆಸರು ಮಾಡಿರುವ ಪುಟ್ಟ ದೇಹದ ಅಜಯ್‌ ಕುಮಾರ್‌ ಚಿತ್ರದ ನಾಯಕ. ದೈಹಿಕವಾಗಿ ಬೆಳವಣಿಗೆ ಹೊಂದದ ಹುಡುಗನೊಬ್ಬನ ಬದುಕು, ಆತನ ಸಂಕಟಗಳು, ತಾಯಿ ವಾತ್ಸಲ್ಯ, ನಿರಂತರ ಸೋಲುಗಳನ್ನೇ ಕಾಣುತ್ತಾ ಹೋಗುವ ಆತ ತನ್ನಲ್ಲಿನ ಕಲಾ ಪ್ರತಿಭೆ ಬಳಸಿಕೊಂಡು ಬೆಳೆಯುವುದು, ತನ್ನ ತಾಯಿಯ ಹೆಸರಿನಲ್ಲಿ ಆಸ್ಪತ್ರೆ ಕಟ್ಟಿಸುವುದು...ಹೀಗೆ ಹಲವು ಘಟನೆಗಳನ್ನು ಬೆಸೆದು ಬದುಕಿನ ಕ್ರೌರ್ಯ, ಒಂದಷ್ಟು ನಗು, ಅಳು ಮುಂತಾದವುಗಳನ್ನು ಬೆರೆಸಿದ್ದಾರೆ ಮಾ.ಬಾ. ತಮ್ಮ ವಿನೂತನ ಪ್ರಯತ್ನವನ್ನು ಚಿತ್ರರಂಗದ ಹಿರಿಯರಿಗೆ ತೋರಿಸುವುದು ಚಿತ್ರತಂಡದ ಉದ್ದೇಶ. ಹಿರಿಯ ನಿರ್ಮಾಪಕರಾದ ಭಗವಾನ್‌, ರಾಜಶೇಖರ್‌, ತಿಪಟೂರು ರಘು, ಜೋಸೈಮನ್‌, ಸಿದ್ದಲಿಂಗಯ್ಯ, ಗೀತಪ್ರಿಯ ಮುಂತಾದವರು ಚಿತ್ರ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.ನಿರ್ಮಾಪಕ ಸುರೇಶ್‌ ವಾರಪತ್ರಿಕೆಯೊಂದರ ಮಾಲೀಕ. ಬದುಕಿನ ಸಂಕಟಗಳನ್ನು ಎದುರಿಸುತ್ತಲೇ ಬೆಳೆದ ಅವರಲ್ಲಿ ಸಂಕೀರ್ಣ ಸಮಸ್ಯೆಗಳನ್ನಿಟ್ಟುಕೊಂಡ ಸಿನಿಮಾ ನಿರ್ಮಿಸಬೇಕು ಎಂಬ ಬಯಕೆ ಇತ್ತು. ಅದು ಕೈಗೂಡಿರುವ ಸಂತಸ ಅವರಲ್ಲಿತ್ತು. ನಿರ್ದೇಶಕ ಮಾ.ಬಾ. ಅದೇ ಪತ್ರಿಕೆಯಲ್ಲಿ ವರದಿಗಾರ.ಕುಬ್ಜ ಹುಡುಗನೊಬ್ಬನ ಕುರಿತು ಕಥೆ ಹೆಣೆದ ಅವರಿಗೆ ತೆಲುಗಿನ ನಟ ಅಜಯ್‌ ಕುಮಾರ್‌ ಅವರ ಬಗ್ಗೆ ತಿಳಿದದ್ದು ಸಂಕಲನಕಾರ ಸೌಂದರ್‌ರಾಜ್‌ ಅವರಿಂದ. ಪದ್ಮಾ ವಾಸಂತಿ ನಾಯಕನ ತಾಯಿಯ ಪಾತ್ರದಲ್ಲಿ ನಟಿಸಿದ್ದಾರೆ. ರಮೇಶ್‌ ಭಟ್‌, ಅಭಿನಯ, ಕಾಶಿ, ದತ್ತಣ್ಣ ಮುಂತಾದ ಕಲಾವಿದರ ದಂಡು ಚಿತ್ರದಲ್ಲಿದೆ. ಹೆಚ್ಚಿನ ಪ್ರತಿಫಲಾಪೇಕ್ಷೆ ಇಲ್ಲದೆ ಮಾಡಿರುವ ಸಿನಿಮಾ ಇದು. ಜನರಿಗೆ ತಲುಪಿದರೆ ಅಷ್ಟೇ ಸಾಕು ಎಂದರು ಮಾ.ಬಾ. ಮಾರ್ಚ್‌ ಅಂತ್ಯದ ವೇಳೆಗೆ ಚಿತ್ರಮಂದಿರಗಳಲ್ಲಿ ‘ಮಿರರ್‌’ ಇಡುವ ಬಯಕೆ ಚಿತ್ರತಂಡದ್ದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.