ಬುಧವಾರ, ಜುಲೈ 15, 2020
22 °C

ನೀತಿಬೋಧೆಯ ಕಹಿ ಗುಳಿಗೆ

ವಿಶಾಖ ಎನ್. Updated:

ಅಕ್ಷರ ಗಾತ್ರ : | |

ನೀತಿಬೋಧೆಯ ಕಹಿ ಗುಳಿಗೆ

‘ಹಲ್ಲಿದ್ದರೆ ಕಡಲೆ ಇಲ್ಲ ಕಡಲೆ ಇದ್ದರೆ ಹಲ್ಲಿಲ್ಲ’ ಎಂಬ ನಾಣ್ಣುಡಿಯನ್ನು ‘ಶ್ರಾವಣ’ ಚಿತ್ರಕ್ಕೆ ಅನ್ವಯಿಸಬಹುದು. ಗಂಭೀರ ಸಾಮಾಜಿಕ ಸಮಸ್ಯೆಯಿರುವ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ಆದರೆ, ಅದನ್ನು ದೃಶ್ಯಕ್ಕೆ ಒಗ್ಗಿಸಲು ಅಗತ್ಯವಿರುವ ಕಸುಬುದಾರಿಕೆ ಸಂಪೂರ್ಣವಾಗಿ ಮಾಯ.ಸಾಮಾಜಿಕ ಸಮಸ್ಯೆಗಳನ್ನು ತೆರೆಮೇಲೆ ತೋರಿಸುವುದು ಸವಾಲಿನ ಕೆಲಸ. ಅದರಲ್ಲೂ ಜನಪ್ರಿಯ ಸಿನಿಮಾ ಮಾದರಿಯಲ್ಲಿ ಇಂಥ ಚಿತ್ರಕಥೆಯ ನೇಯ್ಗೆ ಸೂಕ್ಷ್ಮಗಳನ್ನು ಬೇಡುತ್ತದೆ. ಮನರಂಜನೆಯ ಒಗ್ಗರಣೆಯನ್ನು ಹಾಕುತ್ತಲೇ ತನ್ನ ಉದ್ದೇಶವನ್ನು ಅಚ್ಚುಕಟ್ಟಾಗಿ ದಾಟಿಸುವ ಹೊಣೆ ನಿರ್ದೇಶಕನ ಮೇಲಿರುತ್ತದೆ. ಕಥೆಯನ್ನಷ್ಟೇ ನೆಚ್ಚಿಕೊಂಡಿರುವ ಹೊಸ ನಿರ್ದೇಶಕ ರಾಜಶೇಖರ್ ಅವರಿಗೆ ಸಿನಿಮಾದ ತಾಂತ್ರಿಕ ಪಟ್ಟುಗಳು ಹಿಡಿತಕ್ಕೆ ಸಿಕ್ಕಿಲ್ಲದಿರುವುದರಿಂದ ಅವರು ಸವಾಲು ಎದುರಿಸುವಲ್ಲಿ ಸೋತಿದ್ದಾರೆ.ಚಿತ್ರದ ಮೊದಲರ್ಧ ಅನಗತ್ಯವಾಗಿ ಲಂಬಿಸುತ್ತದೆ. ಕಥಾನಕಗಳ ಕೊರತೆ, ಪಾತ್ರಗಳ ನಿರ್ಭಾವುಕ ಕಸರತ್ತಿನಲ್ಲೇ ಅರ್ಧ ಸಿನಿಮಾ ಮುಗಿದುಹೋಗುತ್ತದೆ. ಎರಡನೇ ಅರ್ಧದಲ್ಲಿ- ಫ್ಯಾಷ್‌ಬ್ಯಾಕ್‌ನಲ್ಲಿ- ಬಿಚ್ಚಿಕೊಳ್ಳುವುದು ಸಾಮಾಜಿಕ ಸಮಸ್ಯೆಯ ಮುಖ್ಯಕಥೆ.ಈ ಕಥೆ ಎದುರಾಗುವ ಮೊದಲೇ ತಾಳ್ಮೆಯ ಪರೀಕ್ಷೆಯಾಗಿರುವುದರಿಂದ ಮುಂದೇನಾಗುತ್ತದೆ ಎಂಬ ಕುತೂಹಲವೂ ಉಳಿದಿರುವುದಿಲ್ಲ. ನಡುನಡುವೆ ನುಸುಳಿರುವ ಹಾಸ್ಯವಂತೂ ತುಂಬಾ ಬಾಲಿಶ. ನಿರ್ದೇಶಕರ ಅನನುಭವ ಹಾಗೂ ವಿಷಯದ ಮೇಲಿನ ಸಡಿಲವಾದ ಹಿಡಿತಕ್ಕೆ ನಿರೂಪಣೆಯೂ ಕನ್ನಡಿ ಹಿಡಿಯುತ್ತದೆ.ಒಂದು ಇಡೀ ಹಳ್ಳಿಯನ್ನು ತಮ್ಮ ಪಾಳೇಗಾರಿಕೆಯ ತಾಣವಾಗಿ ಮಾಡಿಕೊಂಡ ಅಣ್ಣ-ತಮ್ಮನ ಕಥೆಯನ್ನು ಈ ಕಾಲಮಾನಕ್ಕೆ ಒಗ್ಗಿಸಿ ಹೇಳುವ ಸಾಧ್ಯತೆ ಇತ್ತು. ನಿರ್ದೇಶಕರು ಅದಕ್ಕೂ ಬೆನ್ನುಮಾಡಿದ್ದಾರೆ. ಸಮಸ್ಯೆ ಎಷ್ಟು ಗಾಢ ಎಂಬುದನ್ನು ತೋರಿಸಲು ಸಶಕ್ತ ಪಾತ್ರಗಳನ್ನು ಕೂಡ ಅವರು ಸೃಷ್ಟಿಮಾಡಿಲ್ಲ. ಈ ಕೊರತೆಯನ್ನು ನೀಗಿಸಲು ಸಂಭಾಷಣೆಯಿಂದಲೂ ಸಾಧ್ಯವಾಗಿಲ್ಲ.ಪಾತ್ರದಲ್ಲಿ ಪೌಷ್ಟಿಕಾಂಶದ ಕೊರತೆ ಇದ್ದರೂ ವಿಜಯ ರಾಘವೇಂದ್ರ ತಾವೊಬ್ಬ ಸಮರ್ಥ ನಟ ಎಂಬುದನ್ನು ಅಭಿನಯದ ಮೂಲಕ ರುಜುವಾತು ಪಡಿಸಿದ್ದಾರೆ. ಹಿರಿಯ ಛಾಯಾಗ್ರಾಹಕ ಕೆ.ವಾಸುದೇವ್  ಅವರೂ ಅನೇಕ ಸನ್ನಿವೇಶಗಳಲ್ಲಿ ಭಾವುಕತೆಯನ್ನು ಹಿಡಿಯುವಲ್ಲಿ ಸೋತಿದ್ದಾರೆ.ಸುಂದರ ವದನದ ನಾಯಕಿ ಗಾಯತ್ರಿ ಅಯ್ಯರ್ ದೇಹಭಾಷೆ ಪಾತ್ರದ ಅಗತ್ಯಕ್ಕೆ ತಕ್ಕಂತೆ ಇದೆ. ಆದರೆ, ಅವರಿಂದ ಸೂಕ್ತ ಅಭಿನಯ ತೆಗೆಸಲು ನಿರ್ದೇಶಕರಿಗೆ ಆಗಿಲ್ಲ. ಕೆಲವು ದೃಶ್ಯಗಳಲ್ಲಿ ಅವರ ತುಟಿಯ ಚಲನೆಯು ಡಬ್ ಆದ ಮಾತಿಗೆ ಹೊಂದಾಣಿಕೆಯಾಗಿಲ್ಲದಿರುವುದೇ ಇದಕ್ಕೆ ಸಾಕ್ಷಿ.ಚಿತ್ರದ ಬಹುತೇಕ ಪಾತ್ರಗಳು ನಿಸ್ತೇಜವಾಗಿವೆ. ಕೆಲವರ ಪ್ರತಿಕ್ರಿಯಾತ್ಮಕ ಅಭಿನಯವು ನಾಟಕದಂತಿದ್ದರೆ, ಮತ್ತೆ ಕೆಲವರ ಚಹರೆಗಳಲ್ಲಿ ಕ್ರಿಯೆಗೆ ಪ್ರತಿಕ್ರಿಯೆಯೇ ಇಣುಕುವುದಿಲ್ಲ. ಹಿನ್ನೆಲೆಯಲ್ಲಿ ನಿಲ್ಲುವ ಜನರೂ ಸ್ತಂಭೀಭೂತರಾದಂತೆ ಸುಮ್ಮನೆ ನಿಂತಿರುತ್ತಾರೆ. ನಟನೆಯಲ್ಲಿ ಚೆನ್ನಾಗಿಯೇ ಪಳಗಿರುವ ನೀನಾಸಂ ಅಶ್ವತ್ಥ್ ಮುಖದ ಮೇಲಿನ ಮೇಕಪ್ ಎದ್ದುಕಾಣುತ್ತದೆ. ಪಾತ್ರದ ಸಹಜತೆಗೆ ಅದೇ ಭಂಗ. ಭುವನಚಂದ್ರ ಹಾಗೂ ಸಂದೀಪ್ ಕೇವಲ ಉತ್ಸಾಹ ನೆಚ್ಚಿಕೊಂಡ ನಟರು. ಹಿನ್ನೆಲೆ ಸಂಗೀತಕ್ಕೂ ಚಿತ್ರದ ಪರಿಣಾಮವನ್ನು ಹೆಚ್ಚಿಸಲು ಆಗಿಲ್ಲ. ನೀತಿಬೋಧೆಯ ದುರ್ಬಲ ಕವಚದ ಗುಳಿಗೆಯಂತಿದೆ ‘ಶ್ರಾವಣ’. ನುಂಗುವುದು ಬಲು ಕಷ್ಟ!

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.