ಶನಿವಾರ, ಮೇ 15, 2021
24 °C

ನೀರಿನಲ್ಲಿ ಮುಳುಗಿ ಇಬ್ಬರು ಮಕ್ಕಳ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೀರಿನಲ್ಲಿ ಮುಳುಗಿ ಇಬ್ಬರು ಮಕ್ಕಳ ಸಾವು

ಬೆಂಗಳೂರು: ಕೆ.ಆರ್.ಪುರ ಸಮೀಪದ ದೇವಸಂದ್ರ ಕೆರೆಗೆ ಬುಧವಾರ ಮಧ್ಯಾಹ್ನ ಈಜಲು ಹೋಗಿದ್ದ ಇಬ್ಬರು ಮಕ್ಕಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಗುರುವಾರ ಬೆಳಿಗ್ಗೆ ಮೃತದೇಹಗಳನ್ನು ನೀರಿನಿಂದ ಹೊರತೆಗೆಯಲಾಗಿದೆ.ಕೆ.ಆರ್.ಪುರ ಬಳಿಯ ಬಚ್ಚಪ್ಪಲೇಔಟ್ ನಿವಾಸಿಗಳಾದ ರಾಂಬಾಬು ಮತ್ತು ಸತ್ಯವತಿ ದಂಪತಿಯ ಪುತ್ರ ದರ್ಶನ್ (8) ಹಾಗೂ ಕೋಲಾರ ಜಿಲ್ಲೆ ಶ್ರೀನಿವಾಸಪುರದ ನಾಗರಾಜ್ ಮತ್ತು ನಾಗಮ್ಮ ದಂಪತಿಯ ಮಗ ವೆಂಕಟೇಶ್ (12) ಮೃತಪಟ್ಟವರು. ಗ್ರಾಮದ ಸರ್ಕಾರಿ ಶಾಲೆಯಲ್ಲಿ ಆರನೇ ತರಗತಿ ಓದುತ್ತಿದ್ದ ವೆಂಕಟೇಶ್, ಬೇಸಿಗೆ ರಜೆ ಕಳೆಯಲು ಬಚ್ಚಪ್ಪಲೇಔಟ್‌ನಲ್ಲಿರುವ ಚಿಕ್ಕಮ್ಮ ಶಾರದ ಅವರ ಮನೆಗೆ ಬಂದಿದ್ದ.ಘಟನೆ ಹಿನ್ನೆಲೆ: ಬುಧವಾರ ಮಧ್ಯಾಹ್ನ ವೆಂಕಟೇಶ್, ದರ್ಶನ್ ಮತ್ತು ಆತನ ತಮ್ಮ ಜಗದೀಶ್ ಆಟವಾಡಲು ದೇವಸಂದ್ರ ಕೆರೆಗೆ ಹೋಗಿದ್ದರು. ಈ ವೇಳೆ ದರ್ಶನ್ ಮತ್ತು ವೆಂಕಟೇಶ್ ಈಜಲು ನೀರಿಗೆ ಇಳಿದಿದ್ದಾರೆ. ಈಜು ಬಾರದ ಅವರು, ಆಳ ನೀರಿರುವ ಸ್ಥಳಕ್ಕೆ ಹೋಗಿ ಮುಳುಗಿದ್ದಾರೆ. ಈ ವೇಳೆ ದಡದಲ್ಲಿ ಆಟವಾಡುತ್ತಿದ್ದ ಐದು ವರ್ಷದ ಜಗದೀಶ್, ಗಾಬರಿಯಿಂದ ಮನೆಗೆ ಓಡಿದ್ದಾನೆ.ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ತಾಯಿ ಸತ್ಯವತಿ, ಕೆಲಸ ಮುಗಿಸಿಕೊಂಡು ಮನೆಗೆ ಬಂದಾಗಲೂ ಜಗದೀಶ್ ಅಳುತ್ತಲೇ ಇದ್ದ. ಮಗನನ್ನು ಸಮಾಧಾನಪಡಿಸಿದ ತಾಯಿ, ಅಣ್ಣನ ಬಗ್ಗೆ ವಿಚಾರಿಸಿದ್ದಾರೆ.ಆಗ ಜಗದೀಶ್, ಬಿಕ್ಕುತ್ತಲೇ `ಅಣ್ಣ ಮತ್ತು ವೆಂಕಟೇಶ್ ನೀರಿನಲ್ಲಿ ಮುಳುಗಿದರು' ಎಂದು ಹೇಳಿದ್ದಾನೆ. ಮಗನ ಮಾತನ್ನು ಕೇಳಿ ಗಾಬರಿಗೊಂಡ ಸತ್ಯವತಿ, ಸ್ಥಳೀಯರಿಗೆ ವಿಷಯ ತಿಳಿಸಿ ಕೆರೆ ಸಮೀಪ ಹೋಗಿದ್ದಾರೆ. ತಡರಾತ್ರಿವರೆಗೂ ಮಕ್ಕಳಿಗಾಗಿ ಹುಡುಕಾಟ ನಡೆಸಿ ವಿಫಲರಾದ ಅವರು, ಅಂತಿಮವಾಗಿ ಮಕ್ಕಳು ಕಾಣೆಯಾಗಿರುವ ಬಗ್ಗೆ ಕೆ.ಆರ್.ಪುರ ಠಾಣೆಗೆ ದೂರು ಕೊಟ್ಟಿದ್ದಾರೆ.ಮಗು ಜಗದೀಶ್‌ನ ಹೇಳಿಕೆ ಪಡೆದ ಪೊಲೀಸರು, ಗುರುವಾರ ಬೆಳಿಗ್ಗೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಸಿಬ್ಬಂದಿ ಸ್ಥಳೀಯರ ನೆರವಿನೊಂದಿಗೆ ಕಾರ್ಯಾಚರಣೆ ಆರಂಭಿಸಿದರು. ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ವೆಂಕಟೇಶ್‌ನ ಶವ ಪತ್ತೆಯಾಯಿತು.ಅರ್ಧ ತಾಸಿನ ನಂತರ ದರ್ಶನ್‌ನ ಮೃತದೇಹವೂ ಸಿಕ್ಕಿದೆ. ಅಂಬೇಡ್ಕರ್ ವೈದ್ಯಕೀಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಶವಗಳನ್ನು ಕುಟುಂಬ ಸದಸ್ಯರಿಗೆ ಒಪ್ಪಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.`ದೇವಸಂದ್ರ ಕೆರೆ ಹಲವು ವರ್ಷಗಳಿಂದ  ಬಳಕೆಗೆ ಯೋಗ್ಯವಾಗಿರಲಿಲ್ಲ. ಹೀಗಾಗಿ ಖಾಸಗಿ ಸಂಸ್ಥೆಯೊಂದು ಒಂದು ತಿಂಗಳಿಂದ ಕೆರೆಯಲ್ಲಿ ಹೂಳೆತ್ತುವ ಹಾಗೂ ಸ್ವಚ್ಛಗೊಳಿಸುವ ಯೋಜನೆಯನ್ನು ಕೈಗೆತ್ತಿಕೊಂಡಿತ್ತು. ಜೆಸಿಬಿ ಮೂಲಕ ಸುಮಾರು 30 ಅಡಿಯಷ್ಟು ಆಳಕ್ಕೆ ಗುಂಡಿ ತೆಗೆಯಲಾಗಿತ್ತು.ಕಳೆದ ವಾರದಿಂದ ಸತತವಾಗಿ ಮಳೆ ಸುರಿದ ಪರಣಾಮ ಕೆರೆಯ ಗುಂಡಿಗಳಲ್ಲಿ ನೀರು ತುಂಬಿಕೊಂಡಿದೆ. ಮಕ್ಕಳು ಆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ' ಎಂದು ಪೊಲೀಸರು ಹೇಳಿದ್ದಾರೆ. ಕೆ.ಆರ್.ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಶುಲ್ಕ ಪಾವತಿಸಿದ್ದರೆ ಮಗ ಉಳಿಯುತ್ತಿದ್ದ

ದರ್ಶನ್ ಮತ್ತು ಜಗದೀಶ್ ಹೋಲಿ ಏಂಜಲ್ಸ್ ಪಬ್ಲಿಕ್ ಶಾಲೆಯಲ್ಲಿ ಓದುತ್ತಿದ್ದರು. ಇತ್ತೀಚೆಗೆ ರಾಂಬಾಬು ಅವರು ಮಕ್ಕಳ ಶಾಲಾ ಶುಲ್ಕವೆಂದು 24 ಸಾವಿರ ರೂಪಾಯಿ ಕಟ್ಟಿದ್ದರು. ಆದರೆ, ಕಳೆದ ವರ್ಷದ ಶುಲ್ಕ 10 ಸಾವಿರ ರೂಪಾಯಿ ಬಾಕಿ ಇದ್ದ ಕಾರಣ, ಶಾಲೆ ಆರಂಭವಾದರೂ ಇಬ್ಬರೂ ಶಾಲೆಗೆ ಹೋಗುತ್ತಿರಲಿಲ್ಲ.`ಬಾಕಿ ಶುಲ್ಕವನ್ನು ಪಾವತಿಸುವಂತೆ ಶಾಲೆಯ ಮುಖ್ಯಸ್ಥರು ಒತ್ತಡ ಹೇರುತ್ತಿದ್ದರು. ಹೀಗಾಗಿ ಬಾಕಿ ಹಣ ಕಟ್ಟುವರೆಗೂ ಶಾಲೆಗೆ ಹೋಗುವುದು ಬೇಡ ಎಂದು ಮಕ್ಕಳಿಗೆ ತಿಳಿಸಿದ್ದೆ. ಪತ್ನಿ ಸತ್ಯವತಿ ಕೂಡಾ ಮನೆ ಕೆಲಸಕ್ಕೆ ಹೋಗುತ್ತಿದ್ದುದರಿಂದ ಮನೆಯಲ್ಲಿ ಮಕ್ಕಳನ್ನು ಬಿಟ್ಟು ಬೇರಾರೂ ಇರುತ್ತಿರಲಿಲ್ಲ. ಇತ್ತೀಚೆಗೆ ಸಮೀಪದ ಶಾರದಾ ಅವರ ಮನೆಗೆ ಬಂದಿದ್ದ ವೆಂಕಟೇಶ್ ಜತೆಯಲ್ಲಿ ಮಕ್ಕಳು ಆಟವಾಡುತ್ತಿದ್ದರು' ಎಂದು ರಾಮಬಾಬು ಹೇಳಿದರು.`ಮಕ್ಕಳ ಶಾಲಾ ಶುಲ್ಕ ಕಟ್ಟಬೇಕು ಎಂದು ಹಗಲೂ ರಾತ್ರಿ ಆಟೊ ಓಡಿಸುತ್ತಿದ್ದೆ. ಶಾಲೆಯ ಶುಲ್ಕವನ್ನು ಕಟ್ಟಿ ಮಕ್ಕಳನ್ನು ಶಾಲೆಗೆ ಕಳಿಸಿದ್ದರೆ ಈ ದುರಂತ ನಡೆಯುತ್ತಿರಲಿಲ್ಲ' ಎಂದು ಅವರು ಕಣ್ಣೀರಿಟ್ಟರು.ನಾನು ನೀರಿಗೆ ಇಳಿಯಲಿಲ್ಲ

ಮೂರು ದಿನದ ಹಿಂದೆ ಕೆರೆ ಸಮೀಪ ಆಟವಾಡಿಕೊಂಡು ಬಂದಿದ್ದೆವು. ಹಾಗೆ ಬುಧವಾರ ಕೂಡ ವೆಂಕಟೇಶ್, ನಮ್ಮನ್ನು ಕೆರೆಗೆ ಕರೆದುಕೊಂಡು ಹೋಗಿದ್ದ. ಕೆರೆ ಸಮೀಪ ಆಟವಾಡುವಾಗ ಹಿರಿಯರೊಬ್ಬರು ಅಲ್ಲಿಂದ ಬೈಯ್ದು ಕಳುಹಿಸಿದರು. ಹೀಗಾಗಿ, ಮತ್ತೊಂದು ಬದಿಗೆ ಹೋಗಿದ್ದೆವು. ನಾನು ದಡದಲ್ಲಿ  ಆಟವಾಡುತ್ತಿದ್ದಾಗ ಅಣ್ಣ ಮತ್ತು ವೆಂಕಟೇಶ್ ನೀರಿಗೆ ಇಳಿದರು. ಅವರು ಮುಳುಗಿ ಸಹಾಯಕ್ಕಾಗಿ ಕೂಗಿದರು. ಇದರಿಂದ ಗಾಬರಿಯಾಗಿ ಅಲ್ಲಿಂದ ಓಡಿದೆ.

- ಜಗದೀಶ್, ಮೃತ ದರ್ಶನ್ ತಮ್ಮಬೇಸಿಗೆ ರಜೆಗೆ ಬಂದಿದ್ದ


`ಬೇಸಿಗೆ ರಜೆ ಕಳೆಯಲು ಮಗ ಚಿಕ್ಕಮ್ಮನ ಮನೆಗೆ ಹೋಗಿದ್ದ. ರಜೆ ಮುಗಿದು ಶಾಲೆ ಆರಂಭಗೊಂಡಿದ್ದರೂ ಆತ ಇನ್ನೂ ಊರಿಗೆ ಬಂದಿರಲಿಲ್ಲ. ಹೀಗಾಗಿ ಆತನನ್ನು ಕರೆದುಕೊಂಡು ಬರುವಂತೆ ಸಂಬಂಧಿ ಚಲಪತಿ ಎಂಬುವರನ್ನು ಬುಧವಾರ ಬಚ್ಚಪ್ಪಲೇಔಟ್‌ಗೆ ಹೋಗಿದ್ದರು. ಆದರೆ, ಆಟವಾಡಲು ಹೋಗಿದ್ದ ಮಗ ಜೀವಂತವಾಗಿ ಮನೆಗೆ ಮರಳಲಿಲ್ಲ. ಇದ್ದ ಒಬ್ಬನೇ ಮಗನನ್ನು ಕಳೆದುಕೊಂಡು ದಿಕ್ಕು ತೋಚದಂತಾಗಿದೆ' ಎಂದು ವೆಂಕಟೇಶ್ ಪೋಷಕರು ರೋದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.