ಗುರುವಾರ , ಮೇ 19, 2022
24 °C

ನೀರು, ಆರೋಗ್ಯದ ಮೇಲೆ ದುಷ್ಪರಿಣಾಮ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾಂಡೇಲಿ: ಇಲ್ಲಿಗೆ ಸಮೀಪದ ರಾಮನಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಪಾಂಡ್ರಿ ನದಿಯಲ್ಲಿ ಅನೇಕ ದಿನಗಳಿಂದ ಅನಧಿಕೃತವಾಗಿ ಮರಳು ತೆಗೆಯುವ ಕಾರ್ಯ ನಡೆಯುತ್ತಿರು ವುದರಿಂದ ರಾಮನಗರಕ್ಕೆ ಸರಬರಾಜು ಆಗುವ ಕುಡಿಯುವ ನೀರು ಕಲುಷಿತಗೊಂಡ ಪರಿಣಾಮವಾಗಿ ಜನರು ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ಪ್ರಕರಣ ಇದೀಗ ಬೆಳಕಿಗೆ ಬಂದಿದೆ.ರಾಮನಗರವು ಸೂಪಾ ಮುಳುಗಡೆ ಪ್ರದೇಶದ ನಂತರ ಪುನರ್‌ವಸತಿ ಕೇಂದ್ರವಾಗಿ ಬೆಳೆದ ಪ್ರದೇಶವಾಗಿದ್ದು, ಇಲ್ಲಿಗೆ ಖಾನಾಪುರ ತಾಲ್ಲೂಕಿನ ಲೋಂಡಾ ಮೂಲಕ ಹರಿದು ಗಣೇಶಗುಡಿ ಡ್ಯಾಂಗೆ ಸೇರುವ ಪಾಂಡ್ರಿ ನದಿಯಿಂದ ಜಾಕ್ವೆಲ್ ಮೂಲಕ ಕುಡಿಯುವ ನೀರಿನ ಪೂರೈಕೆ ಆಗುತ್ತಿದೆ. ರಾಮನಗರ ಜನರಿಗೆ ಕುಡಿಯುವ ನೀರನ್ನು ಪೂರೈಸುವ ಏಕಮಾತ್ರ ಮೂಲಾಧಾರ ಇದಾಗಿದೆ. ಆದರೆ ಕಳೆದ ಕೆಲ ತಿಂಗಳಿಂದ ಈ ನದಿಯ ಮೇಲ್ಭಾಗವಾದ ಲೋಂಡಾ ಪ್ರದೇಶದಲ್ಲಿ ಅನಧಿಕೃತವಾಗಿ ಬೃಹತ್ ಯಂತ್ರಗಳ ಮೂಲಕ ಬೋಟ್‌ಗಳಲ್ಲಿ ಉಸುಕು ತೆಗೆಯುವ ಕಾರ್ಯ ನಡೆದಿದ್ದರಿಂದ ಆ ಪ್ರದೇಶದಲ್ಲಿ ಕಲುಷಿತಗೊಂಡ ನೀರು ರಾಮನಗರಕ್ಕೆ ಪೂರೈಕೆಯಾಗುತ್ತದೆ.  ಉಸುಕು ಮಾಫಿಯಾ ಚಟುವಟಿಕೆಗಳಿಗೆ ಬಳಸುವ ಬೃಹತ್ ಯಂತ್ರಗಳು ಹರಿದು ಹೋಗುವ ಇಡೀ ನದಿಯ ನೀರನ್ನೇ ಇಂದು ಕಲುಷಿತಗೊಳಿಸಿದೆ. ಇದೇ ನೀರನ್ನು ಅಡಿಗೆ ಹಾಗೂ ಕುಡಿಯಲು ಬಳಸುವ ರಾಮನಗರದ ಜನರ ಆರೋಗ್ಯದ ಮೇಲೆ ಕೆಲ ತಿಂಗಳಿಂದ ದುಷ್ಪರಿಣಾಮ ಉಂಟಾಗುತ್ತಿದ್ದು, ಅನೇಕರಿಗೆ ಜ್ವರ, ಕೆಮ್ಮು, ಹೊಟ್ಟೆನೋವು ಹಾಗೂ ವಾಂತಿಯ ವ್ಯಾಧಿಗಳು ಆಗುತ್ತಿದೆ ಎಂಬ ದೂರುಗಳು ಸಾರ್ವಜನಿಕರಿಂದ ಬಂದಿದೆ. ಈ ಕುರಿತು ನಾಗರಿಕ ಮುಖಂಡರು ಹಾಗೂ ಸಾರ್ವಜನಿಕರು ಸಂಬಂಧಪಟ್ಟವರಿಗೆ ತಿಳಿಸಿದ ನಂತರದಲ್ಲಿ ಇದೀಗ ಉಸುಕು ಮಾಫಿಯಾ ಕಾರ್ಯಾಚರಣೆ ಹಗಲು ಹೊತ್ತಿನಲ್ಲಿ ನಡೆಯದೇ ರಾತ್ರಿವಿಡಿ ನಿರಂತರವಾಗಿ ನಡೆಯುತ್ತಲೇ ಇದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ. ರಾಮನಗರದ ಈ ಕುಡಿಯುವ ನೀರನ್ನು ಇಲ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ಗಳು ಪರೀಕ್ಷಿಸಿ ನೀಡಿದ ಪ್ರಮಾಣಪತ್ರದಲ್ಲಿ ‘ಕುಡಿಯುವ ನೀರು ಕಲುಷಿತಗೊಂಡಿದ್ದು, ಸಾರ್ವ ಜನಿಕರಿಗೆ ಕುಡಿಯಲು ಯೋಗ್ಯವಿಲ್ಲ. ಈ ನೀರನ್ನು ಜನರಿಗೆ ಶುದ್ಧೀಕರಿಸಿ ಸರಬರಾಜು ಮಾಡಬೇಕು’ ಎಂದು ತಿಳಿಸಲಾಗಿದೆ.ಈಗಾಗಲೇ ಎಚ್ಚೆತ್ತ ರಾಮನಗರ ಗ್ರಾಮ ಪಂಚಾಯತಿ ಜನಪ್ರತಿನಿಧಿಗಳು ಸಭೆಯಲ್ಲಿ ಸರ್ವಾನುಮತದಿಂದ ಠರಾವು ಪಾಸುಮಾಡಿ, ಗ್ರಾ.ಪಂ. ಅಧ್ಯಕ್ಷ-ಉಪಾಧ್ಯಕ್ಷರು ಬೆಳಗಾವಿ ಹಾಗೂ ಕಾರವಾರದ ಜಿಲ್ಲಾಧಿಕಾರಿಗಳಿಗೆ, ಜೋಯಿಡಾ ಹಾಗೂ ಖಾನಾಪುರದ ತಹಸೀಲ್ದಾರರು ಮತ್ತು ಸಿ.ಪಿ.ಐ.ಗಳಿಗೆ ಲಿಖಿತ ದೂರನ್ನು ನೀಡಿ ಉಸುಕು ತೆಗೆಯುವ ಮಾಫೀಯಾದ ಕಾರ್ಯಾಚರಣೆಯನ್ನು ತಕ್ಷಣವೇ ನಿಲ್ಲಿಸಬೇಕೆಂದು ಆಗ್ರಹಿಸಿದ್ದಾರೆ.ಒಂದು ವೇಳೆ ಸಾರ್ವಜನಿಕರ ಆರೋಗ್ಯದ ಮೆಲೆ ನಿರಂತರ ದುಷ್ಪರಿಣಾಮಕ್ಕೆ ಕಾರಣವಾದ ರಾತ್ರಿ ಉಸುಕು ತೆಗೆಯುವ ಕಾರ್ಯಾಚರಣೆಯನ್ನು ತಕ್ಷಣವೇ ನಿಲ್ಲಿಸದಿದ್ದಲ್ಲಿ ಸಾರ್ವಜನಿಕರೊಂದಿಗೆ ಗ್ರಾಮ ಪಂಚಾಯಿತಿಯ ಜನಪ್ರತಿನಿಧಿಗಳು ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ.                       

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.