ಗುರುವಾರ , ಮೇ 6, 2021
23 °C

ನೂರು ಟೆಸ್ಟ್ ವಿಜಯ ಕಂಡ ಪಾಂಟಿಂಗ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಾಲ್ (ಪಿಟಿಐ): ಆಸ್ಟ್ರೇಲಿಯಾದ ಕ್ರಿಕೆಟಿಗ ರಿಕಿ ಪಾಂಟಿಂಗ್ ಅವರು ಶನಿವಾರ ವಿಶಿಷ್ಟವಾದ ಹಿರಿಮೆಯ ಗರಿಯನ್ನು ತಮ್ಮ ಕಿರೀಟಕ್ಕಿಟ್ಟುಕೊಂಡರು. ತಂಡದಲ್ಲಿದ್ದುಕೊಂಡು ನೂರು ಟೆಸ್ಟ್ ವಿಜಯದ ಸಂಭ್ರಮವನ್ನು ಕಂಡ ಮೊಟ್ಟ ಮೊದಲ ಆಟಗಾರ ಎನ್ನುವ ಶ್ರೇಯ ಅವರದ್ದಾಯಿತು.ಶನಿವಾರ ಇಲ್ಲಿ ಮುಕ್ತಾಯವಾದ ಶ್ರೀಲಂಕಾ ವಿರುದ್ಧ ಪ್ರಥಮ ಟೆಸ್ಟ್‌ನಲ್ಲಿ 125 ರನ್‌ಗಳ ಅಂತರದಿಂದ ಆಸ್ಟ್ರೇಲಿಯಾ ಗೆಲುವು ಸಾಧಿಸುವುದರೊಂದಿಗೆ ಆಟಗಾರರಾಗಿ ತಮ್ಮ ತಂಡದ ನೂರನೇ ಟೆಸ್ಟ್ ವಿಜಯದಲ್ಲಿ ಭಾಗಿಯಾದ ವಿಶ್ವದ ಮೊದಲಿಗೆ ಎನ್ನುವ ಗೌರವವನ್ನು ಪಾಂಟಿಂಗ್ ತಮ್ಮದಾಗಿಸಿಕೊಂಡರು.ಆಸ್ಟ್ರೇಲಿಯಾ ತಂಡದ ಮಾಜಿ ನಾಯಕರಾದ 36 ವರ್ಷ ವಯಸ್ಸಿನ ರಿಕಿ ಈಗಾಗಲೇ ಯಶಸ್ವಿ ಟೆಸ್ಟ್ ನಾಯಕ ಎನ್ನುವ ಕಿರೀಟ ತೊಟ್ಟುಕೊಂಡಿದ್ದಾರೆ. ಅವರ ಮುಂದಾಳತ್ವದಲ್ಲಿ ಆಡಿದ್ದ ಕಾಂಗರೂಗಳ ನಾಡಿನ ಕ್ರಿಕೆಟ್ ಪಡೆಯು 48 ವಿಜಯ ದಾಖಲಿಸಿತ್ತು. ಕಳೆದ ಏಪ್ರಿಲ್‌ನಲ್ಲಿ ಪಾಂಟಿಂಗ್ ನಾಯಕತ್ವದಿಂದ ಕೆಳಗೆ ಇಳಿದ ನಂತರ ಆ ಸ್ಥಾನವನ್ನು ಮೈಕಲ್ ಕ್ಲಾರ್ಕ್ ಪಡೆದುಕೊಂಡಿದ್ದಾರೆ.1995ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಪಾಂಟಿಂಗ್ ಈವರೆಗೆ 153 ಪಂದ್ಯಗಳನ್ನು ಆಡಿದ್ದಾರೆ. ಗರಿಷ್ಠ ಟೆಸ್ಟ್ ರನ್ ಗಳಿಕೆಯ ಪಟ್ಟಿಯಲ್ಲಿ `ಪಂಟರ್~ ಖ್ಯಾತಿಯ ಈ ಬ್ಯಾಟ್ಸ್‌ಮನ್ (12,411 ರನ್) ಮೂರನೇ ಸ್ಥಾನದಲ್ಲಿದ್ದಾರೆ. ಇಷ್ಟೆಲ್ಲ ವಿಶೇಷಗಳನ್ನು ಹೊಂದಿರುವ ಪಾಂಟಿಂಗ್ ಆಟಗಾರರಾಗಿ ತಮ್ಮ ತಂಡದ ನೂರನೇ ಟೆಸ್ಟ್ ಗೆಲುವಿನಲ್ಲಿ ಭಾಗಿಯಾಗಿದ್ದು ಇನ್ನೊಂದು ಮಹತ್ವದ ಮೈಲಿಗಲ್ಲಾಗಿದೆ.ಈ ರೀತಿಯಲ್ಲಿ ಹೆಚ್ಚು ಟೆಸ್ಟ್ ವಿಜಯಗಳನ್ನು ಕಂಡಿರುವ ಕ್ರಿಕೆಟಿರರ ಪಟ್ಟಿಯಲ್ಲಿ ಆಸ್ಟ್ರೇಲಿಯಾದವರದ್ದೇ ಮೇಲುಗೈ. ಶೇನ್ ವಾರ್ನ್ (92), ಸ್ಟೀವ್ ವಾ (86), ಗ್ಲೆನ್ ಮೆಕ್‌ಗ್ರಾ (84), ಆ್ಯಡಮ್ ಗಿಲ್‌ಕ್ರಿಸ್ಟ್ (73), ಮಾರ್ಕ್ ವಾ (72) ಹಾಗೂ ಮ್ಯಾಥ್ಯೂ ಹೇಡನ್ (71) ಅವರು ಪಾಂಟಿಂಗ್ ನಂತರದ ಸ್ಥಾನದಲ್ಲಿದ್ದಾರೆ.ಶ್ರೀಲಂಕಾ ವಿರುದ್ಧದ ಮೊದಲ   ಟೆಸ್ಟ್ ನಂತರ ಪಾಂಟಿಂಗ್ ಸ್ವದೇಶಕ್ಕೆ ಪ್ರಯಾಣ ಬೆಳೆಸಿದ್ದಾರೆ. ಅವರ ಪತ್ನಿ ರಿಯಾನ್ನಾ ಗರ್ಭಿಣಿಯಾಗಿದ್ದು, ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.ಆದ್ದರಿಂದ ಈ ಸಂದರ್ಭದಲ್ಲಿ ತಮ್ಮ ಪತ್ನಿಯೊಂದಿಗೆ ಇರಬೇಕು ಎನ್ನುವ ಉದ್ದೇಶದಿಂದ ರಿಕಿ ಒಂದು ಪಂದ್ಯದ ಮಟ್ಟಿಗೆ ವಿರಾಮ ಪಡೆದು ಸ್ವದೇಶದ ಕಡೆಗೆ ಮುಖಮಾಡಿದ್ದಾರೆ. ಅವರು ಶ್ರೀಲಂಕಾ ವಿರುದ್ಧ ಗುರುವಾರ ಆರಂಭವಾಗಲಿರುವ ಎರಡನೇ ಟೆಸ್ಟ್‌ಗೆ ಲಭ್ಯವಾಗುವುದಿಲ್ಲ. ಅವರ ಬದಲಿಗೆ ಆಕ್ರಮಣಕಾರಿ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.