ಭಾನುವಾರ, ಆಗಸ್ಟ್ 1, 2021
22 °C
ಕ್ರಿಕೆಟ್: ಚೊಚ್ಚಲ ವಿಶ್ವಕಪ್ ಗೆದ್ದ 30ನೇ ವರ್ಷದ ಸಂಭ್ರಮ

ನೆನಪಿನಾಳಕ್ಕಿಳಿದ ಆಟಗಾರರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ/ಐಎಎನ್‌ಎಸ್): ಭಾರತ ಕ್ರಿಕೆಟ್ ತಂಡ ಚೊಚ್ಚಲ ವಿಶ್ವಕಪ್ ಗೆದ್ದು ಮಂಗಳವಾರಕ್ಕೆ 30 ಸಂವತ್ಸರಗಳು ಸಂದಿವೆ. 1983ರ ವಿಶ್ವಕಪ್ ಗೆಲುವಿನ ಅವಿಸ್ಮರಣೀಯ ಕ್ಷಣದ ನೆನಪುಗಳನ್ನು ಮಾಜಿ ಕ್ರಿಕೆಟಿಗರು ತಮ್ಮದೇ ಆದ ದಾಟಿಯಲ್ಲಿ ವ್ಯಕ್ತಪಡಿಸಿದ್ದಾರೆ. ಲಂಡನ್‌ನ ಲಾರ್ಡ್ಸ್‌ನಲ್ಲಿ ದೊರೆತ ಗೆಲುವು ದೇಶದಲ್ಲಿನ ಕ್ರಿಕೆಟ್ ಆಟದ ಆಯಾಮವನ್ನೇ ಬದಲಿಸಿತು ಎಂದು ಆ ವಿಶ್ವಕಪ್ ಗೆದ್ದಾಗ ತಂಡವನ್ನು ಮುನ್ನಡೆಸಿದ್ದ ಕಪಿಲ್ ದೇವ್ ನುಡಿದಿದ್ದಾರೆ.`1983ರ ವಿಶ್ವಕಪ್ ಗೆಲುವು ಸದಾ ಸ್ಮರಣೀಯ. ಅದು ಭಾರತೀಯ ಕ್ರಿಕೆಟ್‌ಗೆ ಹೊಸ ಆಯಾಮ ಒದಗಿಸಿತು. ನಮ್ಮದು ಯುವ ಆಟಗಾರರನ್ನು ಒಳಗೊಂಡಿದ್ದ ತಂಡವಾಗಿತ್ತು. ಯಾರೂ ನಮ್ಮ ಮೇಲೆ ಭರವಸೆ ಇಟ್ಟಿರಲಿಲ್ಲ. ಆದರೆ ಮೊದಲ ಪಂದ್ಯವೇ (ವೆಸ್ಟ್ ಇಂಡೀಸ್ ವಿರುದ್ಧ) ನಮಗೆ ವಿಶ್ವಾಸ ಮೂಡಿಸಿತ್ತು. ಬಳಿಕ ಅಂತಿಮ ನಾಲ್ಕರ ಘಟ್ಟದತ್ತ ನಮ್ಮ ಗುರಿ ನೆಟ್ಟಿತ್ತು. ಅದಾದ ಬಳಿಕ ಪ್ರತಿ ಪಂದ್ಯವೂ ಹೆಚ್ಚು ಗಂಭೀರವಾಗುತ್ತಾ ಸಾಗಿತು' ಎಂದು ಕಪಿಲ್  ವಿವರಿಸಿದ್ದಾರೆ.`ಉತ್ತಮವಾಗಿ ಆಟವಾಡಿಯೇ ನಾವು ಫೈನಲ್ ತಲುಪ್ದ್ದಿದೆವು. ಖುಷಿಯಿಂದ ಚೆನ್ನಾಗಿ ಆಟವಾಡಿ ಎಂದಷ್ಟೇ ನಮಗೆ ಆ ಸಂದರ್ಭದಲ್ಲಿ ಸೂಚಿಸಲಾಗಿತ್ತು'  ಎಂದು ರವಿಶಾಸ್ತ್ರಿ ಆ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ. `ಫೈನಲ್ ಪಂದ್ಯವನ್ನು ಸ್ಮರಣೀಯ ಕ್ಷಣವನ್ನಾಗಿಸಲು ಪ್ರಯತ್ನಿಸಿ ಎಂದು ಕಪಿಲ್ ಹೇಳಿದ್ದರು. ನಾವು ಶ್ರಮವಹಿಸಿ ಆಡಿ ಫೈನಲ್‌ನಲ್ಲಿ ಗೆದ್ದೆವು' ಎಂದು ಸುನಿಲ್ ಗಾವಸ್ಕರ್ ಹೇಳಿದ್ದಾರೆ.1983ರ ಜೂನ್ 25 ರಂದು ಇಂಗ್ಲೆಂಡ್‌ನ ಲಾರ್ಡ್ಸ್‌ನಲ್ಲಿ ಫೈನಲ್ ಪಂದ್ಯ ನಡೆಯಿತು. ಟಾಸ್ ಗೆದ್ದ ಕೆರಿಬಿಯನ್ನರು ಭಾರತವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದ್ದರು. ಮೈದಾನಕ್ಕಿಳಿದ ಕಪಿಲ್ ಪಡೆ 54.4 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 183 ರನ್ ಗಳಿಸಿತ್ತು.184 ರನ್‌ಗಳ ಗುರಿ ಬೆನ್ನಟ್ಟಿದ್ದ ವಿಂಡೀಸ್ ತಂಡವನ್ನು ಕಾಡಿದ್ದು ಮದನ್ ಲಾಲ್ (31ಕ್ಕೆ 3) ಹಾಗೂ ಮೊಹಿಂದರ್ ಅಮರನಾಥ್ (12ಕ್ಕೆ 3). ಅವರು ಪಂದ್ಯಕ್ಕೆ ರೋಚಕ ತಿರುವು ನೀಡಿದರು. 140 ರನ್ ಗಳಿಸುವಷ್ಟರಲ್ಲಿ ವಿಂಡೀಸ್ ಸರ್ವಪತನ ಕಂಡು ಸೋಲಿಗೆ ಶರಣಾಯಿತು. ಭಾರತ ಮೊದಲ ಬಾರಿಗೆ ವಿಶ್ವಕಪ್ ಜಯಿಸಿತು. ಅಮರನಾಥ್ `ಪಂದ್ಯ ಶ್ರೇಷ್ಠ' ಗೌರವ ಪಡೆದಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.