ಮಂಗಳವಾರ, ಮೇ 17, 2022
26 °C

ನೆಮ್ಮದಿಯ ಹೂಡಿಕೆಗೆ ಅಂಚೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತೀಯ ಅಂಚೆ ವಿಶ್ವದಲ್ಲಿಯೇ ಅತಿದೊಡ್ಡ ಸಂಪರ್ಕ ಜಾಲ ಹೊಂದಿದೆ. ಭಾರತೀಯ ಅಂಚೆಯು ತನ್ನ ವಿವಿಧ ಸೇವೆಗಳನ್ನು ಗ್ರಾಹಕರಿಗೆ ಒದಗಿಸುತ್ತಿದ್ದು, ಅದರಲ್ಲಿ ಪತ್ರ ವ್ಯವಹಾರ, ಶೀಘ್ರ ಅಂಚೆ, ಪಾರ್ಸಲ್ ಸೇವೆ, ಮನಿ ಆರ್ಡರ್ ಸೇವೆ, ಇ-ಅಂಚೆ, ತೆರೆದ ಅಂಚೆ, ನೋಂದಾಯಿತ ಅಂಚೆ ಇತರ ಉಪಯುಕ್ತ ಯೋಜನೆಗಳನ್ನು ಒದಗಿಸುತ್ತಿದೆ.ಅಂಚೆ ಉಳಿತಾಯ ಖಾತೆ: ಬ್ಯಾಂಕ್‌ಗಳಿಗೆ ಹೋಲಿಸಿದರೆ ಅಲ್ಲಿ ಕನಿಷ್ಠ ರೂ 500 ರಿಂದ ಖಾತೆಯನ್ನು ತೆರೆಯಬಯಬಹುದಾದರೆ, ಅಂಚೆ ಇಲಾಖೆಯಲ್ಲಿ ಕೇವಲ ರೂ 50ಕ್ಕೆ ಖಾತೆ ತೆರೆಯಬಹುದು. ನಿಮಗೆ ಬೇಕೆನಿಸಿದಾಗ ಮತ್ತೆ ತೆಗೆಯಬಹುದು. ಗರಿಷ್ಠ ಒಂಟಿ ಖಾತೆಗೆ ರೂ 1 ಲಕ್ಷವರೆಗೆ ಜಮಾ ಮಾಡಬಹುದು. ಜಂಟಿ ಖಾತೆಯಾದರೆ ಅವರಿಗೆ ರೂ 2ಲಕ್ಷ ಜಮಾ ಮಾಡಲು ಅವಕಾಶ ಇರುತ್ತದೆ.ಆವರ್ತ ಠೇವಣಿ (ಆರ್.ಡಿ. ಖಾತೆ): ಸಣ್ಣ ಉಳಿತಾಯದಾರಿಗೆಂದೇ ಇರುವ ಆರ್.ಡಿ. ಖಾತೆಯನ್ನು ಕನಿಷ್ಠ ಪ್ರತಿ ತಿಂಗಳು ರೂ 10ರಿಂದ ಆರಂಭಿಸಬಹುದು. ಒಬ್ಬರು ಬೇಕಾದಷ್ಟು ಖಾತೆಗಳನ್ನು ಗರಿಷ್ಠ ಹಣದ ಮಿತಿಯಿಲ್ಲದೇ ತೆರೆಯಬಹುದು. ಇದು ಐದು ವರ್ಷಗಳ ಅವಧಿಯದ್ದಾಗಿದ್ದು, ಮೂರು ವರ್ಷಗಳ ನಂತರ ಪ್ರೀಮ್ಯಾಚ್ಯೂರ್ ಕ್ಲೋಸರ್ ಆಗಿ ಪಡೆಯಬಹುದು.ತಿಂಗಳ ಬಡ್ಡಿ ಯೋಜನೆ (ಎಂ.ಐ.ಎಸ್.): ಈ ಖಾತೆಯಲ್ಲಿ ಸುಮಾರು ರೂ 1 ಲಕ್ಷ ತೊಡಗಿಸಿದ್ದರೆ, ಪ್ರತಿ ತಿಂಗಳು ರೂ 666 ಬಡ್ಡಿ ಪಡೆಯಬಹುದು. ಒಂಟಿ ಖಾತೆಯಲ್ಲಿ ರೂ 4 ಲಕ್ಷ 50 ಸಾವಿರ ಗರಿಷ್ಠ ಹಣ ತೊಡಗಿಸಬಹುದಾದರೆ, ಅದೇ ಜಂಟಿ ಖಾತೆಯಲ್ಲಿ ರೂ 9ಲಕ್ಷ ಹಣ ಜಮಾ ಮಾಡಿ ತಿಂಗಳು, ತಿಂಗಳು ಯಾವುದೇ ಅಡಚಣೆ ಇಲ್ಲದೇ ಬಡ್ಡಿಯನ್ನು ನಿಮ್ಮದಾಗಿಸಿ ಕೊಳ್ಳಬಹುದು.ನೂತನ ಪಿಂಚಣಿ ಯೋಜನೆ (ಎನ್‌ಪಿಎಸ್): ಸರ್ಕಾರಿ ನೌಕರರಿಗಿರುವ ಪಿಂಚಣಿ ಭಾಗ್ಯ ನಮಗಿಲ್ಲವೆಂದು ಬೇಸರ ಪಡಬೇಕಿಲ್ಲ. 60 ವರ್ಷಗಳ ನಂತರ ತಿಂಗಳು, ತಿಂಗಳು ಪಿಂಚಣಿ ಪಡೆದು ಸಂತೋಷದ ಜೀವನ ಕಳೆಯಲೆಂದೇ ಕೇಂದ್ರ ಸರ್ಕಾರ ನಿಗದಿತ ಅಂಚೆ ಕಚೇರಿಗಳಲ್ಲಿ ನೂತನ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದೆ. 18ರಿಂದ 55 ವರ್ಷ ವಯೋಮಿತಿಯಲ್ಲಿ ಪ್ರತಿ ತಿಂಗಳು ರೂ 500 ಅನ್ನು ತೊಡಗಿಸಿ (ಗರಿಷ್ಠ ಮಿತಿ ಇಲ್ಲ) ಸಂಧ್ಯಾಸಮಯವನ್ನು ಸುರಕ್ಷಿತ ಆಸರೆಯೊಂದಿಗೆ ಕಳೆಯಬಹುದು.ಅಂಚೆ ಚೀಟಿ ಸಂಗ್ರಹಣೆ (ಪಿಲ್ಯಾಟೆ) ಅಂಚೆ ಚೀಟಿ ಸಂಗ್ರಹಣ ಮಾಡುವುದು ಮುಖ್ಯ ಹವ್ಯಾಸಗಳಲ್ಲಿ ಒಂದಾಗಿದೆ. ಇದರಿಂದ ಸಂಗ್ರಹಣಾ ಕ್ರಿಯೆ ಜೊತೆಗೆ ನಮ್ಮ ಜ್ಞಾನ ವೃದ್ಧಿಯಾಗುತ್ತಾ ಹೋಗುತ್ತದೆ. ಇದರಲ್ಲಿ ಸಾಮಾನ್ಯ ಸಂಗ್ರಹಣೆ, ದೇಶಿ ಸಂಗ್ರಹಣೆ ಮತ್ತು ವಿಷಯಾಧರಿತ ಸಂಗ್ರಹಣೆ ಹೀಗೆ ಮೂರು ಭಾಗಗಳನ್ನಾಗಿ ಸಂಗ್ರಹಿಸಬಹುದು. ಇಂಥ ಅಂಚೆ ಚೀಟಿಗಳ ಪ್ರದರ್ಶಿಕೆಯನ್ನು ಸಾಮಾನ್ಯವಾಗಿ ಬೃಹತ್ ಅಂಚೆ ಚೀಟಿ ಪ್ರದರ್ಶನಗಳಲ್ಲಿ ಕಾಣಬಹುದು.ಅಂಚೆ ಜೀವ ವಿಮೆ: ಗ್ರಾಮೀಣ ಪ್ರದೇಶಗಳಲ್ಲಿ ಅಂಚೆ ಕಚೇರಿ ಅವರ ಮನೆಯ ಒಬ್ಬ ಸದಸ್ಯನಂತೆ ಕೆಲಸ ಮಾಡುತ್ತದೆ. ಅವರಿಗೆಂದೇ ಗ್ರಾಮೀಣ ಅಂಚೆ ಜೀವ ವಿಮೆ (ಆರ್‌ಪಿಎಲ್‌ಐ) ಜಾರಿಯಲ್ಲಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಿ ಉದ್ಯೋಗಿಗಳಿಗೆ ಅರೆ ಸರ್ಕಾರಿ ಸಂಸ್ಥೆಗಳ ಉದ್ಯೋಗಿಗಳಿಗೆ ಅಂಚೆ ಜೀವ ವಿಮೆ (ಪಿಎಲ್‌ಐ) ಸೀಮಿತವಾಗಿದೆ. ಸುರಕ್ಷಾ, ಸಂತೋಷ, ಸುವಿಧಾ, ಸುಮಂಗಳಾ ಹೀಗೆ 19 ರಿಂದ 55 ವರ್ಷ ವಯೋಮಿತಿಯಲ್ಲಿ ವಿಮೆಯ ಉಪಯೋಗ ಪಡೆಯಬಹುದು. ಅವರವರ ಅನುಕೂಲತೆಗೆ ತಕ್ಕಂತೆ ವಿಮೆಯ ಸೌಲಭ್ಯವನ್ನು ಪಡೆಯಬಹುದು. ಕಡಿಮೆ ಪ್ರೀಮಿಯಂ ಹೆಚ್ಚು ಬೋನಸ್ ಹೊಂದಿರುವ ಏಕೈಕ ವಿಮೆ ಈ ಅಂಚೆ ವಿಮೆ.ಆಯ್ದ ಅಂಚೆ ಕಚೇರಿಗಳಲ್ಲಿ 24 ಕ್ಯಾರೆಟ್ ಚಿನ್ನದ ನಾಣ್ಯಗಳು ಲಭ್ಯವಿರುತ್ತವೆ. ಹಾಗೆಯೇ ವಿದೇಶಗಳಿಂದ ಕೆಲವೇ ನಿಮಿಷಗಳಲ್ಲಿ ನಿಮ್ಮ ಬಂಧುಗಳಿಂದ ಹಣ ಪಡೆಯಬಹುದು. ಅದು ಡಬ್ಲ್ಯೂ.ಯು.ಎಂ.ಟಿ ಮೂಲಕ ನಿಮ್ಮ ಗುರುತಿನ ಚೀಟಿಯೊಂದಿಗೆ ಯಾವುದೇ ತೊಂದರೆಯಿಲ್ಲದೇ ನಿಮಗೆ ಕಳಿಸಿದ ಹಣ ನಿಮ್ಮ ಕೈ ಸೇರುತ್ತದೆ. ಹಿರಿಯ ನಾಗರಿಕರಿಗಾಗಿಯೇ ಅನೇಕ ಸೌಲಭ್ಯಗಳಿವೆ. ಭಾರತದ ಯಾವುದೇ ಊರಿಗೆ ಹೋದರೂ ನಿಮಗೆ ಅಂಚೆ ಕಚೇರಿ ಕಾಣಸಿಗುವುದರಿಂದ ಸಾರ್ವಜನಿಕರು ದೇಶದ ಎಲ್ಲ ಪ್ರದೇಶಗಳಿಂದ ಸಂಪರ್ಕದಲ್ಲಿರಲು ಸಾಧ್ಯವಾಗಿದೆ. ಅಂಚೆ ಇಲಾಖೆ ಪಾಸ್ ಪುಸ್ತಕಗಳನ್ನು ಸಿಬ್ಬಂದಿ ಬರೆದುಕೊಡುವ ಕಾಲವಿನ್ನು ದೂರವಾಗಬಹುದು. ಈ ಇಲಾಖೆ ಕೋರ್ ಬ್ಯಾಂಕಿಂಗ್‌ನತ್ತ ಮುಖ ಮಾಡಿದ್ದು, ತನ್ನ ಗ್ರಾಹಕರಿಗೆ ಎಟಿಎಂ, ಡೆಬಿಟ್ ಕಾರ್ಡ್ ಸೌಲಭ್ಯವೂ ಶೀಘ್ರವೇ ಸಿಗಬಹುದು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.