ಭಾನುವಾರ, ಜೂನ್ 13, 2021
26 °C

ನೆರೆ ರಾಷ್ಟ್ರಗಳಿಗೆ ತಪ್ಪು ಸಂದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್ (ಐಎಎನ್‌ಎಸ್): ಪ್ರಸಕ್ತ ಸಾಲಿನಲ್ಲಿ ಭಾರತವು ರಕ್ಷಣಾ ಕ್ಷೇತ್ರಕ್ಕೆ ಬಜೆಟ್ ಅನುದಾನವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿರುವುದು ನೆರೆ ರಾಷ್ಟ್ರಗಳಿಗೆ ತಪ್ಪು ಸಂದೇಶವನ್ನು ನೀಡಿದಂತೆ ಆಗಿದೆ ಮತ್ತು ದಕ್ಷಿಣ ಏಷ್ಯಾದಲ್ಲಿ ದೀರ್ಘಕಾಲದವರೆಗೆ ಉದ್ವಿಗ್ನ ಸ್ಥಿತಿ ನೆಲೆಯೂರಲು ಕಾರಣವಾಗಿದೆ ಎಂದು `ಡಾನ್~ ಪತ್ರಿಕೆಯ ಸಂಪಾದಕೀಯದಲ್ಲಿ ವಿಶ್ಲೇಷಿಸಲಾಗಿದೆ.ರಕ್ಷಣಾ ಕ್ಷೇತ್ರಕ್ಕೆ 38.6 ಶತಕೋಟಿ ಡಾಲರ್‌ನಷ್ಟು ಅಪಾರ ಪ್ರಮಾಣದ ಮೊತ್ತವನ್ನು ಹೆಚ್ಚಿಸಿರುವುದರಿಂದ ನೆರೆಯ ದೇಶಗಳು ಎಚ್ಚರದಿಂದಿರುವಂತೆ ಮತ್ತೊಂದು ಸಂದೇಶ ರವಾನಿಸಿದಂತಾಗಿದೆ~ ಎಂದೂ ಅದು ಹೇಳಿದೆ.`ಸದ್ಯ ಬೇಡಿಕೆಗೆ ಅನುಗುಣವಾಗಿ ಹಣ ನೀಡಲಾಗಿದೆ. ಅಗತ್ಯ ಬಿದ್ದರೆ ದೇಶದ ಭದ್ರತೆಗೆ ಸಂಬಂಧಿಸಿದಂತೆ ಸರ್ಕಾರ ಮತ್ತಷ್ಟು ಹಣ ಬಿಡುಗಡೆ ಮಾಡಲಿದೆ~ ಎಂದು ಬಜೆಟ್ ಮಂಡನೆ ವೇಳೆ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಹೇಳಿದ್ದರು.ಈಗಾಗಲೇ ಜಗತ್ತಿನ ಅತಿ ದೊಡ್ಡ ಸೇನಾ ಪಡೆ ಹೊಂದಿರುವ ರಾಷ್ಟ್ರಗಳ ಸಾಲಿನಲ್ಲಿ ಒಂದಾಗಿರುವ ಭಾರತವು, ರಕ್ಷಣಾ ಕ್ಷೇತ್ರದ ಬಜೆಟ್ ಅನ್ನು ಶೇ 17ರಷ್ಟು ಹೆಚ್ಚಿಸುವ ಮೂಲಕ ಪರಮಾಣು ಮತ್ತು ಸೇನಾ ಶಕ್ತಿಯನ್ನು ಮತ್ತಷ್ಟು ಬಲವರ್ಧಿಸಲು ಮುಂದಾಗಿದೆ ಎಂದು ಪತ್ರಿಕೆ ಹೇಳಿದೆ.`ಭಾರತವು 51 ಮಿರಾಜ್-2000 ಯುದ್ಧ ವಿಮಾನಗಳನ್ನು ಮೇಲ್ದರ್ಜೆಗೇರಿಸುತ್ತಿದೆ. ಅಲ್ಲದೇ 126 ರ‌್ಯಾಫೆಲ್ ಯುದ್ಧ ವಿಮಾನಗಳ ಖರೀದಿಗೆ ಸಂಬಂಧಿಸಿದಂತೆ ಫ್ರಾನ್ಸ್ ಮೂಲದ ಕಂಪೆನಿಯೊಂದಿಗೆ 20 ಶತಕೋಟಿ ಡಾಲರ್ ಮೊತ್ತದ ಒಪ್ಪಂದವು ಅಂತಿಮ ಹಂತದಲ್ಲಿದೆ ಹಾಗೂ 145 ಅತಿ ಹಗುರ ಬಂದೂಕುಗಳ ಖರೀದಿ ಕುರಿತು ಅಮೆರಿಕದೊಡನೆ ಒಪ್ಪಂದ ಮಾಡಿಕೊಂಡಿದೆ. ನೌಕಾಪಡೆಯ ಬಲವರ್ಧನೆಗಾಗಿ 49 ಹೊಸ ಯುದ್ಧ ನೌಕೆಗಳಿಗೆ ಈಗಾಗಲೇ ಬೇಡಿಕೆ ಸಲ್ಲಿಸಲಾಗಿದೆ.`ಭಾರಿ ಪ್ರಮಾಣದಲ್ಲಿ ರಕ್ಷಣಾ ಕ್ಷೇತ್ರದ ಬಜೆಟ್ ಹೆಚ್ಚಿಸಿ, ಭಾರತಕ್ಕೆ ಅಗತ್ಯ ಭದ್ರತಾ ವ್ಯವಸ್ಥೆ ಕಲ್ಪಿಸುವುದು ಎಲ್ಲಕ್ಕಿಂತ ಮಿಗಿಲಾದದ್ದು ಎಂಬುದನ್ನು ಈ ಮೂಲಕ ತಿಳಿಸಲಾಗಿದೆ. ಆದರೆ, ಭಾರತದ ಈ ಕ್ರಮವು ನೆರೆಯ ರಾಷ್ಟ್ರಗಳನ್ನು ಚಿಂತೆಗೀಡು ಮಾಡಿದೆ~ ಎಂದು ಪತ್ರಿಕೆ ಹೇಳಿದೆ.`ಈ ಹಿಂದೆ ಪಾಕ್ ಮತ್ತು ಚೀನಾ ಜತೆ ಭಾರತ ಯುದ್ಧ ಮಾಡಿದೆ. ಹಾಗಾಗಿ ಅದು ತನ್ನ ಬಜೆಟ್‌ನಲ್ಲಿ ರಕ್ಷಣಾ ಅನುದಾನ ಹೆಚ್ಚಿರುವುದು ತೀವ್ರ ಕಳವಳಕ್ಕೆ ಕಾರಣವಾಗಿದೆ~ ಎಂದೂ ಅದು ಹೇಳಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.