ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಲಬಸಳೆ, ನೆಲಬೇವು ಔಷಧ ಹಲವು

Last Updated 28 ಅಕ್ಟೋಬರ್ 2013, 19:30 IST
ಅಕ್ಷರ ಗಾತ್ರ

ಕಾಳು ಮೆಣಸಿಗೆ ರೋಗಗಳ ಕಾಟ ಎಂದು ಬಹುತೇಕ ರೈತರು ಕೊರಗುತ್ತಿರುವ ನಡುವೆಯೇ ತಮ್ಮ ತೋಟದ ತುಂಬಾ ಅವುಗಳನ್ನು ಬೆಳೆದಿರುವ ಉತ್ತರ ಕನ್ನಡದ ಹೊಸ್ಮನೆಯ ಶ್ರೀಧರ ಭಟ್‌ರ ತೋಟವನ್ನು ಸುತ್ತಾಡುತ್ತಿದ್ದೆ.

ಆ ತೋಟದಲ್ಲಿ ಸಂಚರಿಸಿದಾಗ ಒಂದು ಪುಟ್ಟ ಗಿಡವು ನನ್ನನ್ನು ಆಕರ್ಷಿಸಿತು. ನನಗೆ ಎಲ್ಲಿಯೂ ಕಂಡಿರದ ಆ ಗಿಡದ ಬಗ್ಗೆ ಕುತೂಹಲ ಉಂಟಾಯಿತು. ಅದರ ಸಮೀಪಕ್ಕೆ ಹೋದಾಗ ಆ ಗಿಡದ ಎಲೆಯನ್ನು ತಿನ್ನುವಂತೆ ಶ್ರೀಧರ ಭಟ್ ಒತ್ತಾಯಿಸಿದ್ದರು. ನಾನು ಆ ಕ್ಷಣ ತಿನ್ನಲು ಬಯಸದೇ ಅದರ ಸುವಾಸನೆ ನೋಡಿದೆ.

‘ಅದೇನು ವಿಷವಲ್ಲಾ ಮಾರಾಯ್ಯಾ. ಸ್ವಲ್ಪ ತಿಂದು ನೋಡು...’ ಎಂದು ಅವರು ಹುರಿದುಂಬಿಸಿದಾಗ, ಚಿಕ್ಕ ತುಂಡನ್ನು ಬಾಯಿಗೆ ಹಾಕಿದ್ದೆ. ಅದು ಪಕ್ಕಾ ಕಹಿಬೇವಿನಂತೆ ಇತ್ತು. ಆದರೆ, ಕಹಿಬೇವಿನ ಗಿಡವೇನೂ ಅದಾಗಿರಲಿಲ್ಲ. ರುಚಿಯಲ್ಲಿ ಬಹುತೇಕ ಎರಡರದ್ದೂ ಒಂದೇ ಪ್ರಮಾಣದ ಕಹಿಯಾಗಿದ್ದರೂ, ಎಲೆಯಲ್ಲಿ ಬಹಳ ವ್ಯತ್ಯಾಸವಿತ್ತು.

‘ಅದಕ್ಕೆ ನೆಲಬೇವು ಅಂತ ಹೇಳ್ತಾರೆ’ ಎಂದು ಶ್ರೀಧರ ಭಟ್ ನುಡಿದಾಗ, ಇನ್ನಷ್ಟು ಮಾಹಿತಿ ಪಡೆಯಲು ಅವರನ್ನು ಕೆದಕಿದ್ದೆ. ಈ ನೆಲಬೇವಿಗೆ ಗಿರಿರಾಜಕಡ್ಡಿ, ಕಹಿರಾಜ ಎಂಬ ಹೆಸರಿದೆ. ಹೊಟ್ಟೆಯುರಿ, ಅಜೀರ್ಣ ಮುಂತಾದ ರೋಗಗಳಿಗೆ ಈ ಸಸ್ಯ ರಾಮಬಾಣ. ಪಶ್ಚಿಮ ಬಂಗಾಳದಲ್ಲಿ ಈ ಕಹಿರಾಜ ಸಸ್ಯವು ಔಷಧಿಗೆ ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಆಗುತ್ತಿದೆ ಎಂಬ ಸಂಗತಿಯೂ ತಿಳಿಯಿತು.

ಅಡಿಕೆ ತೋಟಕ್ಕೆ ಸೈ
ಮುಳ್ಳುಗಳೇ ಇಲ್ಲದ ಈ ಸಸ್ಯವನ್ನು ಅಡಿಕೆ ತೋಟದಲ್ಲಿ ಧಾರಾಳವಾಗಿ ಬೆಳೆಯಬಹುದು. ಇದರಿಂದ ಬೇರು ಹುಳದ ನಿಯಂತ್ರಣ ಮಾಡಲು ಸಾಧ್ಯವೆಂದು ಅನೇಕ ಕೃಷಿಕರ ಅಂಬೋಣ. ಗದ್ದೆಯನ್ನು ತೆಗೆದು ತೋಟವಾಗಿ ಪರಿವರ್ತಿಸಿದ ಭೂಮಿಯಲ್ಲಿ ಹೇರಳವಾಗಿ ಬೇರು ಹುಳ ಇರುತ್ತವೆ. ಅಂಥವರು ಈ ಕಹಿರಾಜ ಗಿಡವನ್ನು ಹೊಸ ತೋಟದಲ್ಲಿ ಬೆಳೆಸುವುದು ಉತ್ತಮ ಎಂದು ತಜ್ಞರ ಅಭಿಮತ.
ಬಹಳ ಕಹಿಯಾಗಿರುವ ಈ ನೆಲಬೇವನ್ನು ಬೇವಿನ ಹಿಂಡಿಗೆ ಪರ್ಯಾಯವಾಗಿ ಬಳಸಲು ಸಾಧ್ಯವೇನೋ ಎಂಬ ಚರ್ಚೆ ಈಗ ಕೃಷಿಕರಲ್ಲಿ ವೇಗ ಪಡೆದುಕೊಂಡಿದೆ. ಅದರ ಬಗ್ಗೆ ಸಂಬಂಧಿಸಿದ ವಿಜ್ಞಾನಿಗಳು, ಕೃಷಿ ಸಂಶೋಧನಾ ಕೇಂದ್ರಗಳು ಅಧ್ಯಯನ ನಡೆಸಲಿ ಎಂಬುದೇ ಮಲೆನಾಡಿನ ಕೃಷಿಕರ ಒತ್ತಾಸೆ.

ಸವಿಗಾಗಿ ನೆಲಬಸಳೆ
ನೆಲಬೇವಿನಂತೆಯೇ ಅನೇಕ ದಿವ್ಯ ಔಷಧಗಳನ್ನು ಹೊಂದಿರುವ ಸೊಪ್ಪು ನೆಲಬಸಳೆ. ಸೊಪ್ಪಿನಲ್ಲಿ ವಿವಿಧ ಬಗೆಯಿವೆ. ಒಂದೊಂದು ಭಾಗದಲ್ಲಿ ಒಂದೊಂದು ಬಗೆಯ ಸೊಪ್ಪು ಲಭ್ಯ. ಬಸಳೆ ಸೊಪ್ಪು ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಮಂದಿಯ ಮನೆಯಂಗಳದಲ್ಲೂ ಕಾಣಸಿಗುತ್ತದೆ. ದೇಹವನ್ನು ತಂಪಾಗಿರಿಸುವ ಅಂಶವುಳ್ಳ ಈ ಬಸಳೆಯನ್ನು ಸಾಮಾನ್ಯವಾಗಿ ಚಪ್ಪರದಲ್ಲಿ ಹಬ್ಬಿಸುತ್ತಾರೆ. ಆದರೆ, ಈ ಬಸಳೆಯ ವಿಶೇಷ, ನೆಲದಲ್ಲಿ ಬೆಳೆಯುವುದು.

ಇಂಗ್ಲಿಷ್‌ನಲ್ಲಿ ಇದರ ಹೆಸರು ಸಿಲೋನ್ ಸ್ಪಿನಾಚ್, ಫಿಲಿಪ್ಪೀನ್ಸ್ ಸ್ಪಿನಾಚ್. ಅಂಡಾಕಾರದ ಎಲೆಗಳು, ಚಿಕ್ಕಚಿಕ್ಕ ಗುಲಾಬಿ ಬಣ್ಣದ ಹೂಗಳು. ಬಲ್ಬ್ ಆಕಾರದ ಚಿಕ್ಕ ಚಿಕ್ಕ ಕಾಯಿಗಳಲ್ಲಿ ಹರಿವೆಯ ಬೀಜಗಳಂತಹ ಕಪ್ಪು ಬಣ್ಣದ ಬೀಜ ಈ ಬಸಳೆಯ ಔಚಿತ್ಯ.

ಸಾಂಬಾರ್, ಪಲ್ಯ, ಗೊಜ್ಜು ಮುಂತಾದ ಆಹಾರ ಪದಾರ್ಥ ತಯಾರಿಸಲು ಈ ಸೊಪ್ಪು ಸೂಕ್ತ. ಈರುಳ್ಳಿ ಜೊತೆ ಸಾಂಬಾರ್ ಬಹಳ ರುಚಿಕರ. ಹೆಸರುಕಾಳಿನೊಂದಿಗೆ ಬೆರೆಸಿ ಇನ್ನೊಂದು ಬಗೆಯ ವ್ಯಂಜನವನ್ನು ತಯಾರಿಸಬಹುದು. ಇದು ಹರಿವೆ, ಪಾಲಾಕ್, ಬಸಳೆ ಮುಂತಾದ ಸೊಪ್ಪು ತರಕಾರಿಗಳಂತೆಯೇ ಹೇರಳವಾದ ಪೌಷ್ಠಿಕಾಂಶ ಹೊಂದಿದೆ. ಚಪ್ಪರದ ಮೇಲೆ ಬೆಳೆಯುವ ಬಸಳೆಯ ಲೋಳೆ ಕೆಲವರಿಗೆ ಇಷ್ಟವಾಗುವುದಿಲ್ಲ. ಅಂಥವರಿಗೆ ಈ ಬಸಳೆ ಇಷ್ಟವಾಗುತ್ತದೆ. ಹಿತ್ತಲಿನಲ್ಲಿರುವ ಸ್ವಲ್ಪವೇ ಸ್ವಲ್ಪ ಜಾಗದಲ್ಲೂ ಇದನ್ನು ಬೆಳೆಸಬಹುದು. ಬೀಜಗಳಿಂದಲೂ ಗಿಡಗಳ ತಯಾರಿ ಸಾಧ್ಯ. ನಗರಗಳಲ್ಲಿ ಛಾವಣಿಯ ಮೇಲೆ, ಕುಂಡಗಳಲ್ಲಿ, ಗೋಣಿಚೀಲಗಳಲ್ಲೂ ಇದನ್ನು ಬಳಸಬಹುದು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT