ಶುಕ್ರವಾರ, ಫೆಬ್ರವರಿ 21, 2020
29 °C
ನೇತಾಜಿ ಸುಭಾಷ್ ಚಂದ್ರ ಬೋಸ್

ನೇತಾಜಿ ಪತ್ನಿಯ ತ್ಯಾಗದ ಬದುಕು

ಚೂಡಿ ಶಿವರಾಂ Updated:

ಅಕ್ಷರ ಗಾತ್ರ : | |

ಆಸ್ಟ್ರಿಯಾ ಮೂಲದ ತಮ್ಮ ಪತ್ನಿ ಎಮಿಲಿ ಶೆಂಕ್ಲ್ ಹಾಗೂ ಮೂರು ತಿಂಗಳ ಮಗಳು ಅನಿತಾ ಇಬ್ಬರನ್ನೂ ಸುಭಾಷ್ ಚಂದ್ರ ಬೋಸರು ಕೊನೆಯದಾಗಿ ನೋಡಿದ್ದು ಜರ್ಮನ್‌ನ ಜಲಾಂತರ್ಗಾಮಿ ಮೂಲಕ ಜಪಾನ್ ಆಕ್ರಮಿತ ಆಗ್ನೇಯ ಏಷ್ಯಾದತ್ತ ಪ್ರವಾಸ ಹೊರಟಾಗ. ಬರ್ಲಿನ್‌ನಲ್ಲಿ ಇದ್ದ ಹೆಂಡತಿ, ಮಗಳಿಗೆ ಗುಡ್‌ಬೈ ಹೇಳಿ ಹೊರಟ ನೇತಾಜಿ ಅವರಿಗೆ, ಜಪಾನ್‌ನ ಬೆಂಬಲ ಪಡೆದು ಭಾರತಕ್ಕೆ ಸ್ವಾತಂತ್ರ್ಯ ದಕ್ಕಿಸಿಕೊಡುವ ಉದ್ದೇಶವಿತ್ತು.

ಹಾಲುಗಲ್ಲದ ಮಗಳು ಹಾಗೂ ಮೆಚ್ಚಿದ ಮಡದಿಯನ್ನು ಬಿಟ್ಟು ಹೊರಟ ನೇತಾಜಿ ಇನ್ನೆಂದೂ ಅವರನ್ನು ನೋಡಲು ಆಗಲೇ ಇಲ್ಲ. ಅಷ್ಟು ದೂರಕ್ಕೆ ಹೊರಟ ಬೋಸರನ್ನು ಅಮ್ಮ-ಮಗಳು ತುಂಬು ಪ್ರೀತಿಯಿಂದ ಕಳುಹಿಸಿಕೊಟ್ಟಿದ್ದರು, ತಾಯ್ನೆಲಕ್ಕೆ ಸ್ವಾತಂತ್ರ್ಯ ದಕ್ಕಿಸಿಕೊಡಲಿ ಎಂದು ಹಾರೈಸುತ್ತಾ.

ಭಾರತದ ಕುರಿತು ಸುಭಾಷ್ ಅವರಿಗಿದ್ದ ಪ್ರೇಮ ಹಾಗೂ ಬ್ರಿಟಿಷ್ ವಸಾಹತುಶಾಹಿಗಳಿಂದ ಸ್ವಾತಂತ್ರ್ಯ ದಕ್ಕಿಸಿಕೊಡುವ ನಿಟ್ಟಿನಲ್ಲಿನ ಕಾರ್ಯಾಚರಣೆಯನ್ನು ಎಮಿಲಿ ಗೌರವಿಸಿದ್ದೇ ಅಲ್ಲದೆ ಬೆಂಬಲಿಸಿದರು. ಸುಭಾಷ್ 1934ರಲ್ಲಿ ವಿಯೆನ್ನಾದಲ್ಲಿ ಎಮಿಲಿ ಅವರನ್ನು ಭೇಟಿ ಮಾಡಿದ್ದು. ಇಬ್ಬರಿಗೂ ಸ್ನೇಹಿತರಾಗಿದ್ದ ಭಾರತೀಯ ಭೌತಶಾಸ್ತ್ರಜ್ಞ ಡಾ. ಮಾಥುರ್ ಪರಸ್ಪರ ಪರಿಚಯ ಮಾಡಿಕೊಟ್ಟರು. ಮಾಥುರ್ ಕೂಡ ವಿಯೆನ್ನಾದಲ್ಲೇ ವಾಸವಿದ್ದರು. ಆ ದಿನಗಳಲ್ಲಿ ಆಸ್ಟ್ರಿಯಾದಲ್ಲಿ ಅಪರೂಪವೆನಿಸಿದ್ದ ಇಂಗ್ಲಿಷ್ ಅನ್ನು ಎಮಿಲಿ ನಿರರ್ಗಳವಾಗಿ ಮಾತನಾಡಿದ್ದನ್ನು ನೋಡಿ ಸುಭಾಷ್ ಆಕರ್ಷಿತರಾದರು.

ಕಾಯಿಲೆಯಿಂದ ಗುಣಮುಖರಾಗಿ, ‘ದಿ ಇಂಡಿಯನ್ ಸ್ಟ್ರಗಲ್’ ಎಂಬ ಸಮಕಾಲೀನ ಭಾರತ ಚರಿತ್ರೆಯ ಪುಸ್ತಕ ಬರೆಯಲಾರಂಭಿಸಿದ್ದ ಸುಭಾಷ್ ಅವರಿಗೆ ಆಗ ತಕ್ಷಣಕ್ಕೆ ಒಬ್ಬ ಸಹಾಯಕ ಅಥವಾ ಸಹಾಯಕಿಯ ಅವಶ್ಯಕತೆ ಇತ್ತು. ಶಾರ್ಟ್‌ಹ್ಯಾಂಡ್ ಗೊತ್ತಿದ್ದ, ಟೈಪಿಂಗ್ ಕೌಶಲವೂ ಇದ್ದ ಎಮಿಲಿ ಅವರನ್ನೇ ಸಹಾಯಕಿಯಾಗಿ ನೇಮಿಸಿಕೊಂಡರು. ಹೊರದೇಶದಲ್ಲಿ ಇದ್ದುಕೊಂಡು ರಾಜಕೀಯ ಕೆಲಸವನ್ನೂ ಮಾಡುತ್ತಿದ್ದ ಬೋಸರಿಗೆ ಆ ಕಾರ್ಯದಲ್ಲೂ ನೆರವಾದ ಎಮಿಲಿ ಅವರದ್ದು ಸ್ಫೂರ್ತಿದಾಯಕ ವ್ಯಕ್ತಿತ್ವ. ಇಬ್ಬರ ನಡುವೆ ಪ್ರೇಮಾಂಕುರವಾಗಿ, 1942ರಲ್ಲಿ ಹಿಂದೂ ಸಂಪ್ರದಾಯದಂತೆ ಗುಟ್ಟಾಗಿ ಮದುವೆಯಾದರು.

ನೇತಾಜಿ ಪತ್ನಿ ಎಮಿಲಿ ಶೆಂಕ್ಲ್, ಪುತ್ರಿ ಅನಿತಾ

ಯುದ್ಧದ ಸಂದರ್ಭದಲ್ಲಿ ಆಸ್ಟ್ರಿಯಾವು ನಾಜಿ ವಶದಲ್ಲಿದ್ದಾಗ ವಿದೇಶಿಗನ ಜೊತೆ ಒಬ್ಬ ಹೆಣ್ಣುಮಗಳು ಮದುವೆಯಾಗುವುದು ಕಷ್ಟವಿತ್ತು. ಮೇಲಾಗಿ ಸರ್ಕಾರಗಳ ‘ಬೇಕಾಗಿದ್ದಾರೆ’ ಎಂಬ ಪಟ್ಟಿಯಲ್ಲಿ ಸುಭಾಷ್ ಹೆಸರೂ ಇತ್ತು. ಅದಕ್ಕೇ ಎಮಿಲಿ, ಸುಭಾಷ್ ಇಬ್ಬರಿಗೂ ತಮ್ಮ ಮದುವೆಯನ್ನು ಗುಟ್ಟಾಗಿಡುವುದು ಆಗ ಅನಿವಾರ್ಯವಾಗಿತ್ತು.

1942ರ ನವೆಂಬರ್‌ನಲ್ಲಿ ಅನಿತಾ ಹುಟ್ಟಿದಳು. 1943ರ ಫೆಬ್ರುವರಿಯಲ್ಲಿ ಸುಭಾಷ್ ತಮ್ಮ ಕಾರ್ಯಾಚರಣೆಯ ನಿಮಿತ್ತ ಹೊರಟುಬಿಟ್ಟರು. ಹುಟ್ಟಿನಿಂದ ಆಸ್ಟ್ರಿಯನ್ ಆದ ಎಮಿಲಿ ಸ್ವತಂತ್ರ ಮನೋಭಾವದವರು. ತಮ್ಮದೇ ತತ್ವಗಳಿಗೆ ಬದ್ಧರಾಗಿದ್ದ ಗಟ್ಟಿಗಿತ್ತಿ. ಸುಭಾಷರು ಹೊರಟಮೇಲೆ ವಿಶ್ವ ಯುದ್ಧ ನಡೆಯುತ್ತಿದ್ದ ಯುರೋಪ್‌ನಲ್ಲಿ ಮಗಳನ್ನು ಒಬ್ಬರೇ ಬೆಳೆಸುವುದು ಸುಲಭವಾಗಿರಲಿಲ್ಲ. ಯುದ್ಧದ ಸಂದಿಗ್ಧ ಸನ್ನಿವೇಶದಲ್ಲಿ ಆಹಾರ ಅಭಾವದ ಆತಂಕವೂ ಇತ್ತು. ರಷ್ಯನ್ನರ ಹಿಡಿತಕ್ಕೆ ವಿಯೆನ್ನಾ ಸಿಲುಕಿತು. ಪೊಲೀಸರು ಆಗ ಅವರ ಮನೆಗೆ ನುಗ್ಗಿ, ಕುಟುಂಬದ ಸದಸ್ಯರ ನಡುವೆ ಕ್ಷೇಮ ಸಮಾಚಾರ ವಿನಿಮಯವಾಗಿದ್ದ ಪತ್ರಗಳೂ ಸೇರಿದಂತೆ ಅನೇಕ ಖಾಸಗಿ ದಾಖಲೆಗಳನ್ನು ಕಿತ್ತುಕೊಂಡು ಹೋದರು.

ಬ್ರಿಟಿಷರು ಸೇರಿದಂತೆ ಅನೇಕರು ಎಮಿಲಿ ಕುಟುಂಬದ ಮೇಲೆ ಕಣ್ಣಿಟ್ಟರು. ಬೋಸರು ನಿಧನರಾದರೆಂಬ ಸುದ್ದಿ ಹಬ್ಬಿದ ಮೇಲೆ ಭಾರತ ಸರ್ಕಾರದವರು ಎಮಿಲಿ ನಿಧನರಾಗುವವರೆಗೆ ಅವರ ಮೇಲೆ ಕಣ್ಣಿಟ್ಟಿದ್ದರು. ಎರಡನೇ ವಿಶ್ವಯುದ್ಧದ ನಂತರ ನಾಜಿ ಆಕ್ರಮಣಕ್ಕೆ ವಿಯೆನ್ನಾ ವಶಪಟ್ಟ ಮೇಲೆ ಎಮಿಲಿ ಅವರಿಗೆ ಎದುರಾದದ್ದು ಕಷ್ಟಗಳ ಮಳೆ. ರಷ್ಯಾ ತಾತ್ಕಾಲಿಕವಾಗಿ ವಶಪಡಿಸಿಕೊಂಡಾಗ ಮಾತ್ರ ಪರಿಸ್ಥಿತಿ ಸ್ವಲ್ಪ ನಿರಾಳವಾಗಿತ್ತು. ಯಾಕೆಂದರೆ, ರಷ್ಯಾ ಯೋಧರು ಒಂದಿಷ್ಟು ಕರುಣೆ, ಸಹಾನುಭೂತಿ ತೋರಿದರು.

ಎಮಿಲಿ ಶೆಂಕ್ಲ್ ಏಕಾಂಗಿಯಾಗಿ ಕೌಟುಂಬಿಕ ಜವಾಬ್ದಾರಿ ನಿಭಾಯಿಸಿದರು. ವಯಸ್ಸಾಗಿದ್ದ ಅಮ್ಮನನ್ನು ನೋಡಿಕೊಳ್ಳುವುದರ ಜೊತೆಗೆ ಪುಟ್ಟ ಕಂದಮ್ಮನನ್ನು ಬೆಳೆಸುವ ಹೊಣೆಗಾರಿಕೆ ಅವರ ಮೇಲಿತ್ತು. ವಿಯೆನ್ನಾದ ಅಂಚೆ ಮತ್ತು ತಂತಿ ಕಚೇರಿಯಲ್ಲಿ ಕೆಲಸ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದರು. ‘ಬದುಕಿನುದ್ದಕ್ಕೂ ಮಗಳು ಅನಿತಾ ಸುರಕ್ಷೆಯೊಂದೇ ಅವರಿಗೆ ಆದ್ಯತೆಯಾಗಿತ್ತು. ಅವಳ ರಕ್ಷಣೆಗೆಂದೆ ಇಡೀ ಜೀವನ ತೇಯ್ದರು’ ಎಂದು ನೇತಾಜಿ ಅವರ ಅಣ್ಣ ಶರತ್ ಚಂದ್ರ ಬೋಸರ ಸೊಸೆ ನಂದಿತಾ ಬೋಸ್, ಎಮಿಲಿ ಬದುಕಿನ ಪುಟಗಳನ್ನು ಚುಟುಕಾಗಿ ತೆರೆದಿಟ್ಟರು.

ಪತ್ನಿ ಎಮಿಲಿ ಅವರೊಂದಿಗೆ ನೇತಾಜಿ

‘ಅಡುಗೆ ಮನೆಯಲ್ಲಿ ತನ್ನ ಅಮ್ಮನ ಜೊತೆ ಇದ್ದಾಗ ರೇಡಿಯೊದಲ್ಲಿ ಸುಭಾಷ್ ಚಂದ್ರ ಬೋಸ್ ವಿಮಾನ ಅಪಘಾತದಲ್ಲಿ ಮೃತಪಟ್ಟರು ಎಂಬ ಸುದ್ದಿ ಕೇಳಿಬಂತು. 1945ರ ಆಗಸ್ಟ್ 18ರ ಆ ದಿನ ಅಂಥದೊಂದು ಸುದ್ದಿ ಕಿವಿಮೇಲೆ ಬಿದ್ದಿದ್ದೇ ಎಮಿಲಿ ಸ್ತಂಭೀಭೂತರಾದರು. ಅವರ ಅಮ್ಮನಿಗೂ ಕೈಕಾಲು ಆಡಲಿಲ್ಲ. ಆಮೇಲೆ ಆ ಆಘಾತದಿಂದ ಹೊರಬಂದು, ಓಡಿಹೋಗಿ ಮಗಳು ಅನಿತಾಳನ್ನು ಬಿಗಿಯಾಗಿ ಅಪ್ಪಿಕೊಂಡಿದ್ದಾಗಿ ಆಂಟಿ ಹೇಳಿದ್ದರು’ ಎಂದು ನಂದಿತಾ ಸ್ಮರಿಸಿಕೊಂಡರು.

‘ನೋವು, ದುಃಖ, ಕೋಪದಿಂದ ತಕ್ಷಣಕ್ಕೆ ಪ್ರತಿಕ್ರಿಯಿಸಿದರೂ ದಿನಗಳು ಉರುಳಿದಂತೆ ಎಮಿಲಿ ಆಂಟಿ ವಿಮಾನ ಅಪಘಾತದ ಸಿದ್ಧಾಂತವನ್ನು ನಂಬಲಿಲ್ಲ. ಜಪಾನ್‌ನಲ್ಲಿ ಇಟ್ಟಿದ್ದ, ನೇತಾಜಿ ಅವರದ್ದೇ ಎನ್ನಲಾದ ಅಸ್ಥಿಯನ್ನು ಭಾರತಕ್ಕೆ ತರಿಸಲು ಅವರು ಸುತರಾಂ ಒಪ್ಪಲಿಲ್ಲ’ ಎಂದು ನೇತಾಜಿ ಅವರ ಸಹೋದರನ ಮೊಮ್ಮಗಳು ಮಾಧುರಿ ಬೋಸ್ ತಮ್ಮ ಅನುಭವ ಹಂಚಿಕೊಂಡಿದ್ದರು. ಜರ್ಮನಿಯಲ್ಲಿ ಎಮಿಲಿ ಜೊತೆ ಕೆಲವು ಕಾಲ ಕಳೆದಿದ್ದ ಮಾಧುರಿ, ಅವರಿಗೆ ತುಂಬಾ ಹತ್ತಿರವಾಗಿದ್ದರು.

ಎಮಿಲಿ ಅವರಿಗೆ ಎದುರಾದ ಕಷ್ಟಗಳು ಒಂದೆರಡಲ್ಲ. ವಿಮಾನ ಅಪಘಾತದಲ್ಲಿ ಬೋಸರು ಮೃತಪಟ್ಟಿಲ್ಲ ಎನ್ನುವ ನಂಬಿಕೆ ದೃಢವಾದಾಗ, ಅವರು ಎಲ್ಲಿರಬಹುದು ಎಂದು ಹುಡುಕುವ ಉಸಾಬರಿ ಒಂದು ಕಡೆ. ಇನ್ನೊಂದು ಕಡೆ ಜರ್ಮನ್‌ನ ಸಾಂಪ್ರದಾಯಿಕ ಸಮಾಜವು ಗಂಡನಿಲ್ಲದೆ ಮಗುವನ್ನು ಸಾಕುತ್ತಿದ್ದಾಳೆ ಎಂದು ಮೂದಲಿಸಿದ ಕಷ್ಟ. ಎಲ್ಲವನ್ನೂ ನುಂಗಿಕೊಂಡು ಏಗಿದ ಎಮಿಲಿ ಎಂದೂ ಇನ್ನೊಂದು ಮದುವೆಗೆ ಒಪ್ಪಲಿಲ್ಲ. ಅವರು ಸುಭಾಷರ ಸಹಧರ್ಮಿಣಿ ತಾನು ಎಂದೇ ಸದಾ ಬದುಕಿದರು. ಮಾಧುರಿ ಹೇಳಿದ ಈ ಮಾತು ಅದನ್ನು ಪುಷ್ಟೀಕರಿಸುತ್ತದೆ: ‘ಎಂದಾದರೂ ಇನ್ನೊಂದು ಮದುವೆ ಆಗಬೇಕೆನಿಸಿತೆ ಎಂದು ಆಂಟಿಯನ್ನು ನಾನು ಕೇಳಿದೆ. ಅದಕ್ಕೆ ಅವರು, ಆ ಪ್ರಶ್ನೆಯೇ ಇಲ್ಲ; ತಾನು ಮದುವೆಯಾದ ವ್ಯಕ್ತಿಯನ್ನು ಹೋಲುವ ಇನ್ನೊಬ್ಬರು ಈ ಭೂಮಿ ಮೇಲೆ ಇಲ್ಲವೇ ಇಲ್ಲ ಎಂದಿದ್ದರು’.

ಬೋಸರು ಎಮಿಲಿ ಅವರನ್ನು ಮದುವೆಯಾಗಿಯೇ ಇಲ್ಲ ಎಂದು ಭಾರತದಲ್ಲಿ ವದಂತಿ ಹಬ್ಬಿತು. ಇದು ಎಮಿಲಿ ಅವರನ್ನು ತುಂಬಾ ಘಾಸಿಗೊಳಿಸಿತು. ಭಾರತದಲ್ಲಿ ಇದ್ದ ಸುಭಾಷ್ ಚಂದ್ರ ಬೋಸರ ಕುಟುಂಬದವರನ್ನು ಭೇಟಿ ಮಾಡಿ, ಅವರಿಗೆ ನಡೆದ ಸತ್ಯವನ್ನು ತಿಳಿಸಬೇಕು ಎಂದು ಆಗ ಅವರು ಚಡಪಡಿಸಿದ್ದರು.

ನೇತಾಜಿ ಮಗಳು ಅನಿತಾ

‘ನಿಮ್ಮ ತಮ್ಮನು ಪ್ರೇಮಿಸಿ, ಜರ್ಮನ್ ಹುಡುಗಿಯನ್ನು ಮದುವೆಯಾಗಿದ್ದು, ಅವರಿಗೆ  ಒಂದು ಮಗುವೂ ಇದೆ’ ಎಂದು ಸ್ವಾತಂತ್ರ್ಯ ಘೋಷಣೆಯಾಗುವ ಕೆಲವು ದಿನಗಳ ಮೊದಲು ಜವಾಹರಲಾಲ್ ನೆಹರೂ ಹಾಗೂ ಸರ್ದಾರ್ ಪಟೇಲ್ ಇಬ್ಬರೂ ನೇತಾಜಿ ಅಣ್ಣ ಶರತ್ ಚಂದ್ರ ಬೋಸ್ ಅವರಿಗೆ ಹೇಳಿದ್ದರು. ಅದನ್ನು ಕೇಳಿ ಶರತ್ ಕುದ್ದುಹೋಗಿದ್ದರು. ತನ್ನ ತಮ್ಮ ಯಾವುದೇ ತಪ್ಪು ಮಾಡಲಾರ ಎಂದು ನಂಬಿದ್ದ ಅವರಿಗೆ ಆಗ ಅದನ್ನು ಸ್ಪಷ್ಟಪಡಿಸಿಕೊಳ್ಳಲು ಯಾವ ದಾರಿಯೂ ಇರಲಿಲ್ಲ.

‘ಎಮಿಲಿ ಜೊತೆ ನೇತಾಜಿ ಮದುವೆಯಾಗಿತ್ತು ಎನ್ನುವುದು ನೆಹರೂ ಹಾಗೂ ಪಟೇಲರಿಗೆ ಮೊದಲೇ ಗೊತ್ತಿತ್ತು. ಆದರೆ, ಅದನ್ನು ತಕ್ಷಣವೇ ಶರತ್ ಚಂದ್ರ ಬೋಸರಿಗೆ ತಿಳಿಸಲಿಲ್ಲ. ಅವರ ಉದ್ದೇಶ ಬೇರೆಯದೇ ಆಗಿತ್ತು. ನೇತಾಜಿ ಮೇಲಿನ ದ್ವೇಷದಿಂದ ಅವರನ್ನು ಚರಿತ್ರಹೀನ, ಸ್ತ್ರೀಲೋಲ ಎಂದು ವ್ಯವಸ್ಥಿತವಾಗಿ ಅಪಪ್ರಚಾರ ಮಾಡಿದ್ದರು’ ಎಂದು ಮಾಧುರಿ ಬೋಸ್ ಹೇಳಲು ಅವರದ್ದೇ ಆದ ಕಾರಣಗಳಿವೆ. ನೇತಾಜಿ ಅವರ ವಿರುದ್ಧ ಏನೆಲ್ಲಾ ಪಿತೂರಿ ನಡೆದಿತ್ತು ಎಂಬ ಗುಟ್ಟನ್ನು ರಟ್ಟು ಮಾಡಬಯಸಿದ ಕುಟುಂಬವರ್ಗದವರಲ್ಲಿ ಮಾಧುರಿ ಕೂಡ ಒಬ್ಬರು.

‘ಸುಭಾಷರ ದೊಡ್ಡ ಜನಪ್ರಿಯತೆಯಿಂದ ನೆಹರೂ ಈರ್ಷ್ಯೆಗೆ ಒಳಗಾಗಿ ಹೀಗೆಲ್ಲಾ ಅಪಪ್ರಚಾರ ಮಾಡಿದ್ದರು’ ಎನ್ನುವ ಮಾಧುರಿ, ತಾನು ಈ ಅಭಿಪ್ರಾಯಕ್ಕೆ ಬಂದದ್ದು ಏಕೆ ಎನ್ನುವುದನ್ನು ಬಿಡಿಸಿಡುವುದು ಹೀಗೆ: ‘ಅಪಪ್ರಚಾರ ಮಾಡಿದ ಸಂದರ್ಭ ನೋಡಿ; ಇನ್ನೇನು ಸ್ವಾತಂತ್ರ್ಯ ದೊರೆಯುವುದರಲ್ಲಿತ್ತು. ಭಾರತದ ನಾಯಕ ಯಾರಾಗುತ್ತಾರೆ, ಮೊದಲ ಪ್ರಧಾನಿ ಯಾರು ಎಂಬ ಕುರಿತು ಆಗ ಅಸ್ಪಷ್ಟತೆ ಇತ್ತು. ನೇತಾಜಿ ಭಾರತಕ್ಕೆ ಮರಳಿದರೆ ದೇಶದ ಜನರು ಅವರೇ ನಾಯಕರಾಗಲಿ ಎಂದು ಒತ್ತಾಯಿಸಬಹುದು ಎಂಬ ಆತಂಕ ನೆಹರೂ, ಪಟೇಲ್ ಮತ್ತಿತರ ಕಾಂಗ್ರೆಸ್ ನಾಯಕರಿಗೆ ಇತ್ತು’.

ಎಮಿಲಿ ಶೆಂಕ್ಲ್ 1946ರ ಮಾರ್ಚ್ 12ರಂದು  ಶರತ್ ಚಂದ್ರ ಬೋಸರಿಗೆ ಒಂದು ಪತ್ರ ಬರೆದರು: ‘ಜರ್ಮನ್ ಸರ್ಕಾರದಿಂದ ಮದುವೆಗೆ ಅನುಮತಿ ಪಡೆಯುವುದು ಕಷ್ಟವಿತ್ತು. ಆದ್ದರಿಂದ 1942ರ ಜನವರಿಯಲ್ಲಿ ನಾವು ಹಿಂದೂ ಸಂಪ್ರದಾಯದಂತೆ ಮದುವೆಯಾದೆವು. 1942ರ ನವೆಂಬರ್‌ನಲ್ಲಿ ಮಗಳು ಹುಟ್ಟಿದಳು. ಪೂರ್ವದತ್ತ ಹೊರಡುವ ಒಂದು ದಿನ ಮೊದಲು ನಿಮಗೆ ಸುಭಾಷ್ ಒಂದು ಪತ್ರ ಬರೆದಿದ್ದರು. ಅದರ ಫೋಟೊಪ್ರತಿಯನ್ನು ಮಾಡಿಸಿ  ಇಟ್ಟುಕೊಳ್ಳುವಂತೆ ನನಗೆ ಹೇಳಿದ್ದರು. ತನಗೆ ಏನಾದರೂ ತೊಂದರೆ ಆದರೆ ನಿಮಗೆ ಅದನ್ನು ಕಳುಹಿಸುವಂತೆ ಸೂಚಿಸಿದ್ದರು’.

ಶರತ್ ಬೋಸರಿಗೆ ಈ ಪತ್ರ ತಲುಪಲೇ ಇಲ್ಲ. ಬ್ರಿಟಿಷ್ ಸರ್ಕಾರದವರು ಪತ್ರ ತಲುಪದಂತೆ ತಡೆಹಿಡಿದಿರಬೇಕು ಎಂದು ನೇತಾಜಿ ಕುಟುಂಬದವರು ಅನುಮಾನ ವ್ಯಕ್ತಪಡಿಸುತ್ತಾರೆ. ಎಲ್ಲಾ ಬೆಳವಣಿಗೆಗಳಿಂದ ವಿಚಲಿತರಾಗಿದ್ದ ಶರತ್ ಬೋಸ್ 1948ರಲ್ಲಿ ತಮ್ಮ ಹೆಂಡತಿ ಬಿಭಾಬತಿ ಹಾಗೂ ಮಕ್ಕಳಾದ ಶಿಶಿರ್, ರೋಮಾ, ಚಿತ್ರಾ ಜೊತೆ ವಿಯೆನ್ನಾಗೆ ಹೋದರು. ಎಮಿಲಿ, ಅನಿತಾ ಇಬ್ಬರನ್ನೂ ಭೇಟಿಯಾದರು. ತಮ್ಮ ಕುಟುಂಬಕ್ಕೆ ಅವರನ್ನು ಸೇರಿಸಿಕೊಳ್ಳಲು ಒಪ್ಪಿದ ಅವರು, ಕೋಲ್ಕತ್ತದಲ್ಲಿ ಎಲ್ಲರ ಜೊತೆಗೆ ಬಂದು ಇರುವಂತೆ ಕೇಳಿಕೊಂಡರು. ವಯಸ್ಸಾದ ಅಮ್ಮನ ಆರೈಕೆ ಮಾಡುತ್ತಿದ್ದ ಎಮಿಲಿ ಅವರಿಗೆ ಅದು ಸಾಧ್ಯವಿರಲಿಲ್ಲ. ಆದ್ದರಿಂದ ವಿಯೆನ್ನಾ ಬಿಟ್ಟು ಭಾರತ ಸೇರಲು ಒಪ್ಪಲಿಲ್ಲ.

ಸೊಸೆಯನ್ನು ಕುಟುಂಬಕ್ಕೆ ಸೇರಿಸಿಕೊಳ್ಳುವ ಶಾಸ್ತ್ರವನ್ನು ಬಂಗಾಳಿ ಸಂಪ್ರದಾಯದಂತೆಯೇ ಬಿಭಾಬತಿ ನೆರವೇರಿಸಿದರು. ಎರಡು ಜೊತೆ ಚಿನ್ನದ ಬಳೆಗಳನ್ನು ಎಮಿಲಿ ಅವರಿಗೆ ಕೊಟ್ಟರು. ಅವು ಎಮಿಲಿ ಮುಂಗೈಗಳನ್ನು ತೂರುವುದು ಕಷ್ಟವಿದ್ದರೂ, ಸಂಪ್ರದಾಯಕ್ಕೆ ಬೆಲೆ ಕೊಡಲೆಂದು ಅವನ್ನು ತೊಟ್ಟರು. ವರ್ಷಗಳ ನಂತರ ಆ ಬಳೆಗಳನ್ನು ದೊಡ್ಡದಾಗಿಸಲು ಕೋಲ್ಕತ್ತಗೆ ಕಳುಹಿಸಿದಾಗ, ಅಕ್ಕಸಾಲಿಗನು ಅದಕ್ಕೆ ಹಣವನ್ನೇ ಪಡೆಯಲಿಲ್ಲ. ಅವು ಯಾರ ಬಳೆಗಳು ಎಂದು ಗೊತ್ತಾದದ್ದೇ ಅಕ್ಕಸಾಲಿಗನ ಮನಸ್ಸು ಕರಗಿಹೋಗಿತ್ತು. ಆಗ ಭೇಟಿಯಾದ ತಕ್ಷಣ, ಸುಭಾಷ್ ಬೋಸರು ನೀಡಿದ್ದ ಹಸ್ತಾಕ್ಷರದ ಪತ್ರವನ್ನು ಶರತ್ ಬೋಸರಿಗೆ ಎಮಿಲಿ ಕೊಟ್ಟರು. ಇಬ್ಬರಿಗೂ ಅದು ಭಾವತೀವ್ರತೆಯ ಕ್ಷಣ. ಈಗ ಆ ಪತ್ರವನ್ನು ಕೋಲ್ಕತ್ತದ ನೇತಾಜಿ ಭವನದಲ್ಲಿ ಸಂರಕ್ಷಿಸಿ ಇಡಲಾಗಿದೆ.

ಯುರೋಪ್‌ನಲ್ಲಿ ಯುದ್ಧ ನಡೆದ ಸಂದರ್ಭದಲ್ಲಿ ಭಾರತಕ್ಕೆ ತನ್ನ ಕುಟುಂಬವನ್ನು ಕರೆತರಲು ಸುಭಾಷ್ ಬೋಸರಿಗೆ ಸಾಧ್ಯವಾಗಲಿಲ್ಲ. ಅದಕ್ಕೇ ಬಂಗಾಳಿಯಲ್ಲಿ ಪತ್ರ ಬರೆದು, ಅದನ್ನು ಶರತ್ ಬೋಸರಿಗೆ ನೀಡುವಂತೆ ಕೊಟ್ಟಿದ್ದರು. ತಮ್ಮ ಹೆಂಡತಿ, ಮಗಳನ್ನು ಕುಟುಂಬದವರು ಪತ್ತೆಹಚ್ಚಲಿ ಎನ್ನುವ ಉದ್ದೇಶದಿಂದಲೇ ಆ ಪತ್ರ ಬರೆದಿದ್ದರು. ಒಂದು ವೇಳೆ ಯುದ್ಧದಲ್ಲಿ ತಾನು ಮೃತಪಟ್ಟರೆ ಕುಟುಂಬದವರಿಗೆ ತನ್ನ ಪತ್ನಿ, ಮಗಳು ಗೊತ್ತಾಗಲಿ ಎಂಬ ಕಾರಣಕ್ಕೆ ಬೋಸರು ಈ ರೀತಿ ಯೋಚಿಸಿದ್ದರು. ‘ನನಗೆ ತೋರಿದ ಪ್ರೀತಿಯನ್ನೇ ಅವರಿಗೂ ತೋರಿ’ ಎಂದು ಪತ್ರದಲ್ಲಿ ಸುಭಾಷ್ ವಿನಂತಿಸಿಕೊಂಡಿದ್ದರು. ಆ ಪತ್ರವನ್ನು ಶರತ್ ಓದಿದಾಗ ಎಮಿಲಿ ಕಣ್ಣಲ್ಲಿ ನೀರು ತುಂಬಿತ್ತು.

‘ಅನಿತಾಳನ್ನು ಕಂಡಾಕ್ಷಣ ನನ್ನ ಮಾವ ಶರತ್‌ಗೆ ಸಹೋದರನ ನೆನಪಾಗಿ, ಬಿಗಿಯಾಗಿ ಅಪ್ಪಿಕೊಂಡರು. ಚಿಕ್ಕ ವಯಸ್ಸಿನಲ್ಲಿ ಸುಭಾಷ್ ಹೇಗಿದ್ದರೋ ಅನಿತಾ ಹಾಗೆಯೇ ಇದ್ದರಂತೆ. ಒಂದಿಷ್ಟು ಉಡುಗೊರೆಗಳನ್ನೂ ಮಾವ ಅನಿತಾಗೆ ಕೊಟ್ಟಿದ್ದರು. ಅದನ್ನು ಕಂಡು ಆಂಟಿ, ಅವಳಿಗೆ ಹೆಚ್ಚು ಉಡುಗೊರೆಗಳನ್ನು ಕೊಡಬೇಡಿ. ಐಷಾರಾಮದಲ್ಲಿ ಅವಳನ್ನು ಬೆಳೆಸುವುದು ತನಗೆ ಸಾಧ್ಯವಿಲ್ಲ’ ಎಂದು ಹೇಳಿದ್ದರು ಎಂದು ನಂದಿತಾ ಬೋಸ್ ನೆನೆಯುತ್ತಾರೆ.

ನೇತಾಜಿ ಕುಟುಂಬದವರು ಎಮಿಲಿ, ಅನಿತಾ ಇಬ್ಬರನ್ನೂ ತಮ್ಮೊಟ್ಟಿಗೆ ಸೇರಿಸಿಕೊಂಡು, ಅವರಿಗೆ ಪ್ರೀತಿ ನೀಡಿದರು. ನೇತಾಜಿ ಎಂದಾದರೊಂದು ದಿನ ಬಂದೇ ಬರುತ್ತಾರೆ ಎಂಬ ನಂಬಿಕೆ ಎಮಿಲಿ ಹಾಗೂ ಶರತ್‌ ಬೋಸ್‌ ಇಬ್ಬರಿಗೂ ಇತ್ತು. ತಮ್ಮ ಮೇಜಿನ ಮೇಲೆ ಎಮಿಲಿ ಸದಾ ಸುಭಾಷ್‌ ಚಂದ್ರ ಅವರ ಫೋಟೊ ಇಟ್ಟುಕೊಳ್ಳುತ್ತಿದ್ದರು. ‘ನಮ್ಮ ಸಂಬಂಧಿಕರೆಲ್ಲರ ಪರಿಚಯ ಅವರಿಗಿತ್ತು. ಅವರಲ್ಲಿ ಕೆಲವರು ನಮಗೇ ಗೊತ್ತಿರಲಿಲ್ಲ. ಕುಟುಂಬದವರ ಜೊತೆ ಅವರು ಅಷ್ಟು ಸಂಪರ್ಕ ಹೊಂದಿದ್ದರು’ ಎಂಬ ನಂದಿತಾ ಬೋಸ್‌ ಮಾತೇ ನೇತಾಜಿ ಕುಟುಂಬವರ್ಗದಲ್ಲಿ ಎಮಿಲಿ ಕೂಡ ಒಬ್ಬರಾಗಿದ್ದರೆನ್ನುವುದನ್ನು ಸ್ಪಷ್ಟಪಡಿಸುತ್ತದೆ. ಎಮಿಲಿ ಭಾರತಕ್ಕೆ ಒಮ್ಮೆಯೂ ಬರಲಿಲ್ಲ. ಸುಭಾಷ್‌ ಜೊತೆಗೇ ಇಲ್ಲಿಗೆ ಬರಬೇಕು ಎನ್ನುವುದು ಅವರ ಕನಸಾಗಿತ್ತು. 1996ರಲ್ಲಿ ಎಮಿಲಿ ನಿಧನರಾದರು.

ಎಮಿಲಿ ಹಾಗೂ ಅನಿತಾ ಇಬ್ಬರನ್ನೂ ನಮ್ಮ ದೇಶ ದೂರ ಇಟ್ಟಿದ್ದೇ ಅಲ್ಲದೆ ಅವರ ಮೇಲೆ ಸದಾ ನಿಗಾ ಇಟ್ಟಿತ್ತು. ದೇಶದ ನೆಲದಿಂದ ದೂರವಿದ್ದೂ ದೊಡ್ಡ ತ್ಯಾಗ ಮಾಡಿದ ಎಮಿಲಿ ಅವರ ಪಾರ್ಥಿವ ಶರೀರಕ್ಕೆ ಸರ್ಕಾರಿ ಮರ್ಯಾದೆಗಳೊಂದಿಗೆ ಅಂತ್ಯಸಂಸ್ಕಾರ ಮಾಡಬೇಕಿತ್ತು. ದೇಶದ ಮಹತ್ವದ ವ್ಯಕ್ತಿಯ ಪತ್ನಿಯಾಗಿ ಅವರಿಗೆ ಸಿಗಬೇಕಿದ್ದ ಮನ್ನಣೆಯನ್ನು ಸರ್ಕಾರ ಕೊಡಲೇ ಇಲ್ಲ. ಅವರು ಮೃತಪಟ್ಟ ದಾಖಲೆಗಳು ಸಹ ಪ್ರಧಾನಿ ಕಚೇರಿಯಲ್ಲಿ ಗುಪ್ತ ಕಡತಗಳ ಭಾಗವಾಗಿಬಿಟ್ಟಿವೆ.

ನೇತಾಜಿ ಕುರಿತು ಸಂಶೋಧನೆ ಮಾಡಿದ ಅನುಜ್‌ ಧರ್‌ ಪ್ರಕಾರ, ಕೆಲವು ಕಡತಗಳು ಅನಿತಾ ಅವರು ಸುಭಾಷ್‌ ಮಗಳೇ ಅಲ್ಲ ಎಂದು ಹೇಳುವ ಮಟ್ಟಕ್ಕೆ ಇವೆ. ಅನಿತಾ ಈಗ ಹೆಸರು ಮಾಡಿದ ಅರ್ಥಶಾಸ್ತ್ರಜ್ಞೆ. ಬಂಧು ಬಾಂಧವರಿಂದಷ್ಟೆ ಅಪ್ಪನ ಬಗೆಗೆ ಕೇಳಿ ಬೆಳೆದವರು. ತನ್ನ ತಂದೆ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂಬ ಸಿದ್ಧಾಂತವನ್ನು ಒಪ್ಪಿಕೊಂಡಿದ್ದ ಅವರು ಪದೇಪದೇ ಅಮ್ಮನ ಜೊತೆ ಈ ವಿಷಯವಾಗಿ ವಾಗ್ವಾದ ಮಾಡಿದ್ದಿದೆ. ‘ಕುಟುಂಬದ ಬಹುತೇಕ ಸದಸ್ಯರ ಅಭಿಪ್ರಾಯಕ್ಕೆ ವಿರುದ್ಧವಾದ, ವಿಮಾನ ಅಪಘಾತದ ಸಿದ್ಧಾಂತವನ್ನು ಅವರು ತಮ್ಮದೇ ಕಾರಣಗಳಿಂದಾಗಿ ಒಪ್ಪಿಕೊಂಡಿದ್ದರು. ಕುಟುಂಬದ ಸದಸ್ಯರ ಜೊತೆ ಅವರು ಕೂಡ ಉತ್ತಮ ಸಂಪರ್ಕ ಹೊಂದಿದ್ದರು’ ಎನ್ನುತ್ತಾರೆ ನೇತಾಜಿ ಅಣ್ಣನ ಮೊಮ್ಮಗ ಸುಚರಿತ ಬಸು.

ಕಡತಗಳ ಒಳಗಿನ ವಿಚಾರವನ್ನು ರಟ್ಟು ಮಾಡುವುದರಿಂದ ನಿಗೂಢ ಸಂಗತಿಗಳು ಗೊತ್ತಾಗಬಹುದು. ಆದರೆ, ಸುಭಾಷ್ ಬೋಸರ ಕಠಿಣ ಶ್ರಮ, ತತ್ವ ಹಾಗೂ ಬದ್ಧತೆಯನ್ನು ಹಂಚುವುದಷ್ಟೇ ತಮಗೂ ತಮ್ಮ ಮಕ್ಕಳಿಗೂ ಇಷ್ಟವಾದ ಕೆಲಸ ಎನ್ನುವುದು ಅನಿತಾ ನಂಬಿಕೆ.

(ಅಂಕಣಕಾರ್ತಿ ಚೂಡಿ ಶಿವರಾಂ ಹಿರಿಯ ಪತ್ರಕರ್ತೆ. ಅವರ ಲೇಖನಗಳು ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವಿದೇಶಿ ವಿಶ್ವವಿದ್ಯಾಲಯಗಳು ಇವರ ಬರಹಗಳನ್ನು ಆಕರವಾಗಿಯೂ ಬಳಸಿಕೊಂಡಿವೆ. ಈ ಬರಹವು ಪ್ರಜಾವಾಣಿಯ ‘ಈ ಭಾನುವಾರ’ ಪುಟದಲ್ಲಿ ಅಕ್ಟೋಬರ್ 25, 2015ರಂದು ಮೊದಲ ಬಾರಿಗೆ ಪ್ರಕಟವಾಗಿತ್ತು).

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು