ಶನಿವಾರ, ಜೂನ್ 12, 2021
28 °C

ನೇರ ತೆರಿಗೆ ಪದ್ಧತಿಗೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ: ಸಹಕಾರಿ ಸಂಸ್ಥೆಗಳ ಮೇಲೆ ಕೇಂದ್ರ ಸರ್ಕಾರ  ಜಾರಿಗೆ ತರಲು ಉದ್ದೇಶಿಸಿರುವ ನೇರ ತೆರಿಗೆ ಪದ್ಧತಿಯನ್ನು  ವಿರೋಧಿಸಿ ಜಿಲ್ಲೆಯ ಎಲ್ಲ ಸಹಕಾರಿ ಸಂಸ್ಥೆಗಳು ಸಹಕಾರ ಭಾರತಿ ನೇತೃತ್ವದಲ್ಲಿ  ಪ್ರತಿಭಟನೆ ನಡೆಸಿ ತೆರಿಗೆ ವಿಧಿಸದಂತೆ ಸಹಕಾರಿಗಳು ಆಗ್ರಹಿಸಿದರು.ಈ ಕುರಿತು ಜಿಲ್ಲಾ ಸಹಕಾರ ಭಾರತಿ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದ ಸಹಕಾರಿಗಳು ಮುಂಬರುವ  ವರ್ಷದ ಏಪ್ರಿಲ್ 1 ರಿಂದ ಸಹಕಾರಿ ಸಂಸ್ಥೆಗಳಿಗೆ ನೇರ ತೆರಿಗೆ ಅನ್ವಯವಾಗಲಿದೆ. ಈ ಕ್ರಮ ಸಹಕಾರಿ ಆಂದೋಲನಕ್ಕೆ ಮಾರಕವಾಗಲಿದ್ದು  ಈ ಕ್ರಮದಿಂದ ಕೇಂದ್ರ ಸರ್ಕಾರ ಹಿಂದೆ ಸರಿಯುವಂತೆ ಆಗ್ರಹಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಸಂಯುಕ್ತ ಸೌಹಾರ್ದ ಸಹಕಾರಿ ನಿರ್ದೇಶಕ ಎಲ್.ಎಸ್ ಆನಂದ್ ಮಾತನಾಡಿ, ಸಹಕಾರಿ ಸಂಸ್ಥೆಗಳು ಗಳಿಸುವ ಲಾಭಾಂಶವೇ ಕಡಿಮೆಯಾಗಿದ್ದು, ಈ ಲಾಭದ ಶೇ.33 ರಷ್ಟು ತೆರಿಗೆ ರೂಪದಲ್ಲಿ ಪಾವತಿ ಮಾಡಬೇಕಾಗುತ್ತದೆ. ಆದರೆ ಈಗಾಗಲೇ ಸಂಕಷ್ಟದಲ್ಲಿರುವ ಸಹಕಾರಿ ಸಂಸ್ಥೆಗಳು ತೆರಿಗೆ ಕಟ್ಟಲಾರದೆ ಮುಚ್ಚುವ ಸ್ಥಿತಿಗೆ ಬರಲಿವೆ. ಈ ಕಾರಣದಿಂದ ಕೇಂದ್ರ ಸರ್ಕಾರ ತೆರಿಗೆ ವಿಧಿಸುವುದನ್ನು ತಡೆಯುವಂತೆ ಆಗ್ರಹಿಸಿದರು.  ಬ್ರಿಟಿಷ್ ಆಳ್ವಿಕೆಯಿಂದ ಈ ವರೆಗೂ ನೇರ ತೆರಿಗೆ ಸಂಹಿತೆಯ 6ನೇ ಷೆಡ್ಯೂಲಿನ 47ನೇ ಕ್ರಮಾಂಕದಲ್ಲಿ ಸಹಕಾರಿ ಸಂಸ್ಥೆಗಳಿಗೆ ವಿನಾಯಿತಿ ನೀಡಲು ಅವಕಾಶವಿತ್ತು  ಆದರೆ ಕೇಂದ್ರ ಸರ್ಕಾರ ಈ ಬಗ್ಗೆ ಯೋಚಿಸದೇ ಅಲ್ಪ ಲಾಭಾಂಶದಲ್ಲಿ ಮುನ್ನಡೆಯುತ್ತಿರುವ ಸಹಕಾರ ಸಂಸ್ಥೆಗಳ ಮೇಲೆ ನೇರ ತೆರಿಗೆ ಭಾರವನ್ನು ಹೇರಲು ಹೊರಟಿರುವ ಕ್ರಮವು ಅತ್ಯಂತ ಖಂಡನೀಯವಾದದು ಎಂದು ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿದರು.ಕರ್ನಾಟಕದಾದ್ಯಂತ ಸಹಕಾರ ಭಾರತಿ  ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಸಹಕಾರಿಗಳು ತಹಶೀಲ್ದಾರರ ಮೂಲಕ  ಮನವಿಯನ್ನು ಸಲ್ಲಿಸಿದರು.ಸಹಕಾರ ಭಾರತಿ ತಾಲ್ಲೂಕು ಅಧ್ಯಕ್ಷ ಉಪ್ಪಿನ ಹನುಮಂತಪ್ಪ, ಕೆ.ಮಹೇಶ, ಅನಂತ ಜೋಶಿ, ರಮೇಶ ಪುರೋಹಿತ್, ಶಾಂತನಗೌಡ, ಗೌಳಿ ಕುಮಾರ, ಡಾ.ಕೆ.ಹನುಮಂತರಾವ್, ಸೇರಿದಂತೆ ಪ್ರಸನ್ನ ವಿವಿಧೋದ್ದೇಶ ಸೌಹಾರ್ದ ಸಹಕಾರಿ, ಗಾಯತ್ರಿ ಪತ್ತಿನ ಸೌಹಾರ್ದ ಸಹಕಾರಿ, ಸ್ವಾತಿ ಪತ್ತಿನ ಸೌಹಾರ್ದ ಸಹಕಾರಿ,

 

ಶ್ರೀಗುರು ಗಾದಿಲಿಂಗೇಶ್ವರ ಪತ್ತಿನ ಸೌಹಾರ್ದ ಸಹಕಾರಿ, ಬಳ್ಳಾರಿ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕರು,  ಮಿತ್ರ ಸೌಹಾರ್ದ ಸಹಕಾರ, ಪ್ರಗತಿ ಪತ್ತಿನ ಸೌಹಾರ್ದ ಸಹಕಾರಿ, ಗೌಳಿಗರ ವಿವಿಧೋದ್ದೇಶ ಸೌಹಾರ್ದ ಸಹಕಾರಿ, ವಿದ್ಯಾರಣ್ಯ ಸೌಹಾರ್ದ ಸಹಕಾರಿ, ಕಲ್ಪವಕ್ಷ ಸೌಹಾರ್ದ ಸಹಕಾರಿ, ಜಂಭುನಾಥೇಶ್ವರ ಸೌಹಾರ್ದ ಸಹಕಾರಿ, ವಿಕಾಸ ಸೌಹಾರ್ದ ಸಹಕಾರಿ ಬ್ಯಾಂಕ್, ನವ ಕರ್ನಾಟಕ ಸೌಹಾರ್ದ, ಕೃತಿಕಾ ಪತ್ತಿನ ಸೌಹಾರ್ದ ಸಹಕಾರಿ, ಪದ್ಮಶಾಲಿ ಸೌಹಾರ್ದ ಸಹಕಾರಿ ಹಾಗೂ ನಗರದ ಎಲ್ಲಾ ಕೃಷಿ ಪತ್ತಿನ ವ್ಯವಸಾಯ ಸೇವಾ ಸಹಕಾರಿ ಸಂಘಗಳ ಮತ್ತು ಪತ್ತಿನ ಸಹಕಾರಿಗಳು, ಸ್ಥಳೀಯ ಮುಖಂಡರು, ಸಹಕಾರಿ ಪ್ರತಿನಿಧಿಗಳು ಭಾಗವಹಿಸಿದ್ದರು. ಸಹಕಾರಿ ಸಂಸ್ಥೆಗಳ ಬಂದ್ ಹಿನ್ನೆಲೆಯಲ್ಲಿ ಇ-ಸ್ಟ್ಯಾಂಪ್ ಹಾಗೂ ಪತ್ತಿನ ವ್ಯವಹಾರಗಳಿಗೆ ತೊಂದರೆಯಾಗಿ ಗ್ರಾಹಕರು ಪರದಾಡುವಂತಾಗಿತ್ತು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.