ಗುರುವಾರ , ಮೇ 19, 2022
19 °C

ನೈಋತ್ಯ ಪದವೀಧರ ಕ್ಷೇತ್ರ: 1,556 ಮತದಾರರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ನೈಋತ್ಯ ಪದವೀಧರರ ಕ್ಷೇತ್ರದ ಕೊಡಗು ಜಿಲ್ಲೆ ವ್ಯಾಪ್ತಿಯಲ್ಲಿ 2011ರ ಡಿಸೆಂಬರ್ 12ರಂದು ಪ್ರಕಟಗೊಂಡ ಮತದಾರರ ಪಟ್ಟಿಯಂತೆ ಒಟ್ಟಾರೆ 1,556 ಮತದಾರರಿದ್ದು, ಇದರಲ್ಲಿ 1,000 ಮಂದಿ ಪುರುಷ ಹಾಗೂ 556 ಮಹಿಳೆಯರಿದ್ದಾರೆ.ಮಡಿಕೇರಿ ನಗರಸಭೆ ಮತಗಟ್ಟೆ ವ್ಯಾಪ್ತಿಯಲ್ಲಿ 538, ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಮತಗಟ್ಟೆ ವ್ಯಾಪ್ತಿಯಲ್ಲಿ 329, ಕುಶಾಲನಗರ ಪಟ್ಟಣ ಪಂಚಾಯಿತಿ ಮತಗಟ್ಟೆ ವ್ಯಾಪ್ತಿಯಲ್ಲಿ 340 ಮತ್ತು ವಿರಾಜಪೇಟೆ ಪಟ್ಟಣ ಪಂಚಾಯಿತಿ ಮತಗಟ್ಟೆ ವ್ಯಾಪ್ತಿಯಲ್ಲಿ 349 ಮತದಾರರು ಇದ್ದಾರೆ.ಇದೇ ರೀತಿ 2012ರ ಜನವರಿ 20ರಂದು ಪ್ರಕಟಗೊಂಡ ಮತದಾರರ ಪಟ್ಟಿಯಂತೆ ನೈಋತ್ಯ ಶಿಕ್ಷಕರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೊಡಗು ಜಿಲ್ಲೆಯಲ್ಲಿ 716 ಪುರುಷ ಮತ್ತು 538 ಮಹಿಳಾ ಮತದಾರರು ಸೇರಿದಂತೆ ಒಟ್ಟು 1,254 ಮತದಾರರಿದ್ದಾರೆ.ಇದರಲ್ಲಿ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಮತಗಟ್ಟೆಯಲ್ಲಿ 173 ಮಂದಿ, ಕುಶಾಲನಗರ ಪಟ್ಟಣ ಪಂಚಾಯಿತಿ ಮತಗಟ್ಟೆ ವ್ಯಾಪ್ತಿಯಲ್ಲಿ 364, ಮಡಿಕೇರಿ ನಗರಸಭೆ ವ್ಯಾಪ್ತಿ ಮತಗಟ್ಟೆಯಲ್ಲಿ 294 ಮತ್ತು ವಿರಾಜಪೇಟೆ ಪಟ್ಟಣ ಪಂಚಾಯಿತಿ ಮತಗಟ್ಟೆ ವ್ಯಾಪ್ತಿಯಲ್ಲಿ 423 ಮತದಾರರಿದ್ದಾರೆ.ಶಾಸಕರ ಸರ್ವಾಧಿಕಾರಿ ಧೋರಣೆ- ಆರೋಪ


ಮಡಿಕೇರಿ: ಶಿಕ್ಷಣ ರಂಗ ಹಾಗೂ ಶಿಕ್ಷಕರ ಪ್ರಾತಿನಿಧ್ಯಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿಧಾನಪರಿಷತ್ತಿನ ಚುನಾವಣೆಯಲ್ಲಿ ಪ್ರಚಾರ ಕೈಗೊಳ್ಳದಂತೆ ಬಡಶಿಕ್ಷಕರ ವಿರುದ್ಧ ಶಾಸಕರು ಬೆದರಿಕೆ ಹಾಕುತ್ತಿದ್ದಾರೆ ಎಂದು ನೈಋತ್ಯ ಶಿಕ್ಷಕರ ಕ್ಷೇತ್ರಕ್ಕೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕೆ.ಕೆ.ಮಂಜುನಾಥ್ ಕುಮಾರ್ ಆರೋಪಿಸಿದರು.ನಗರದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರೊಬ್ಬರು ಈ ರೀತಿಯಾಗಿ ಬಡ ಶಿಕ್ಷಕರನ್ನು ಅಮಾನತು ಮಾಡುವುದಾಗಿ ಬೆದರಿಸುವುದು `ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ~ ಬಿಟ್ಟಹಾಗೆ ಎಂದು ಹೇಳಿದರು.ಈ ಶಾಸಕರ ವಿಧಾನಸಭಾ ಕ್ಷೇತ್ರದಲ್ಲಿ ನೂರಾರು ಜನ ಶಿಕ್ಷಕರು ಹಾಗೂ ಅವರ ಕುಟುಂಬದವರು ಮತದಾರರಾಗಿದ್ದಾರೆ. ಶಾಸಕರ ಈ ಸರ್ವಾಧಿಕಾರದ ಧೋರಣೆಯ ವಿರುದ್ಧ ಈ ಮತದಾರರು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಾಠ ಕಲಿಸಲಿದ್ದಾರೆ ಎಂದು ನುಡಿದರು.ಈಗ ನಡೆಯುತ್ತಿರುವ ವಿಧಾನಪರಿಷತ್ತಿನ ಸ್ಥಾನಗಳು ಶಿಕ್ಷಕರು ಹಾಗೂ ಶಿಕ್ಷಣ ರಂಗಕ್ಕೆ ಸಂಬಂಧಿಸಿದವು. ಈ ರಂಗದ ಸಮಸ್ಯೆಗಳ ಬಗ್ಗೆ ತಿಳಿದುಕೊಂಡಿರುವ ಶಿಕ್ಷಕರೇ ಇವುಗಳಿಗೆ ಪರಿಹಾರ ಹುಡುಕಲು ಸಾಧ್ಯ. ಹೀಗಾಗಿ ಈ ರಂಗದ ಅಭಿವೃದ್ಧಿಯಾಗಬೇಕಾದರೆ ಶಿಕ್ಷಕರೇ ಆಯ್ಕೆಯಾದರೆ ಉತ್ತಮ. ಇದನ್ನು ಅರ್ಥೈಸಿಕೊಂಡು ಶಿಕ್ಷಕರು ಮತಚಲಾಯಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.ಶಿಕ್ಷಕರ ಕ್ಷೇತ್ರವನ್ನು ರಾಜಕೀಯದಿಂದ ಹೊರಗಿಡೋಣ. ಯಾವುದೇ ರಾಜಕೀಯ ಪಕ್ಷಗಳನ್ನು ಬೆಂಬಲಿಸದೇ ಸಂಪೂರ್ಣವಾಗಿ ಶಿಕ್ಷಕರಾಗಿರುವವರನ್ನೇ ಶಿಕ್ಷಕರು ಆಯ್ಕೆ ಮಾಡಿ ಕಳುಹಿಸಿದರೆ ಮಾತ್ರ ಇದು ಸಾಧ್ಯವಾಗುತ್ತದೆ ಎಂದು ಅವರು ನುಡಿದರು.ಪದವೀಧರ ಕ್ಷೇತ್ರ: ಬಿಜೆಪಿ ಮತಯಾಚನೆ

ಶನಿವಾರಸಂತೆ:
ಭಾನುವಾರ ನಡೆಯಲಿರುವ ನೈಋತ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಡಿ.ಎಚ್.ಶಂಕರ್‌ಮೂರ್ತಿ ಹಾಗೂ ಗಣೇಶ್ ಕಾರ್ಣಿಕ್ ಅವರನ್ನು ಬೆಂಬಲಿಸುವಂತೆ ಬಿಜೆಪಿಯ ಪದಾಧಿಕಾರಿಗಳು ಗುರುವಾರ ಪಟ್ಟಣದ ವಿಘ್ನೇಶ್ವರ ಬಾಲಕಿಯರ ಪದವಿಪೂರ್ವ ಕಾಲೇಜು, ಭಾರತಿ ವಿದ್ಯಾಸಂಸ್ಥೆ ಹಾಗೂ ಬಾಪೂಜಿ ವಿದ್ಯಾಸಂಸ್ಥೆಗೆ ಆಗಮಿಸಿ ಶಿಕ್ಷಕರ ಮತ ಯಾಚಿಸಿದರು.ಜಿಲ್ಲಾ ಪಂಚಾಯಿತಿ ನ್ಯಾಯ ಸಮಿತಿ ಅಧ್ಯಕ್ಷ ಡಿ.ಬಿ.ಧರ್ಮಪ್ಪ, ಕೆ.ವಿ.ಮಂಜುನಾಥ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ಎನ್.ರಘು, ಸದಸ್ಯೆ ಭುವನೇಶ್ವರಿ ಹಾಗೂ ರಾಜು ಹಾಜರಿದ್ದರು.ವಿಧಾನಪರಿಷತ್ ಚುನಾವಣೆ: ಬಿರುಸಿನ ಪ್ರಚಾರ

ವಿರಾಜಪೇಟೆ:
ಭಾನುವಾರ ನಡೆಯಲಿರುವ ವಿಧಾನ ಪರಿಷತ್ ಪದವೀಧರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಗಾಗಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪಕ್ಷದ ಕಾರ್ಯಕರ್ತರು ಬಿರುಸಿನ ಪ್ರಚಾರ ನಡೆಸಿದರು.ವಿರಾಜಪೇಟೆಯ ಜೂನಿಯರ್ ಕಾಲೇಜು, ಕಾವೇರಿ ಕಾಲೇಜು, ಸಂತ ಅನ್ನಮ್ಮ ಪದವಿ ಕಾಲೇಜು ಹಾಗೂ ಸರ್ಕಾರಿ ಪದವಿ ಕಾಲೇಜುಗಳಲ್ಲಿರುವ ಮತದಾರರನ್ನು ಭೇಟಿ ಮಾಡಿ ಪಕ್ಷದ ಅಭ್ಯರ್ಥಿಗಳಾದ ಡಿ.ಎಚ್.ಶಂಕರ್‌ಮೂರ್ತಿ ಹಾಗೂ ಗಣೇಶ್ ಕಾರ್ಣಿಕ್ ಅವರ ಪರವಾಗಿ ಮತಯಾಚಿಸಿದ ಕಾರ್ಯಕರ್ತರು ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗಿರುವ ಪ್ರಗತಿ ಹಾಗೂ ಅಭಿವೃದ್ಧಿ ಸಾಧನೆಗಳ ಕುರಿತು ವಿವರಿಸಿದರು.ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ಕೆ.ಕಾಂತಿ ಬೆಳ್ಳಿಯಪ್ಪ, ಆರ್.ಎಂ.ಸಿ ಅಧ್ಯಕ್ಷ ಪಿ.ರಘು ನಾಣಯ್ಯ, ಯುವ ಮೋರ್ಚಾ ತಾಲ್ಲೂಕು ಸಮಿತಿ ಅಧ್ಯಕ್ಷ ಸುವಿನ್ ಗಣಪತಿ, ನಾಡು ಸಮಿತಿ ಅಧ್ಯಕ್ಷ ಗಣೇಶ್, ಜೋಕಿಂ ಮೊದಲಾದವರು ಹಾಜರಿದ್ದರು.ಪ್ರಚಾರ:

ಚುನಾವಣೆ ಬಗ್ಗೆ ಬುಧವಾರ ಹಾಗೂ ಗುರುವಾರ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರು ವಿವಿಧೆಡೆ ಮತಯಾಚಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.