ಶನಿವಾರ, ಮೇ 21, 2022
20 °C

ನೈಸರ್ಗಿಕ ಶೋಷಣೆ ನಿಲ್ಲಲ್ಲಿ: ತೋಂಟದ ಶ್ರೀ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ಜನಜಾಗೃತಿ ಮೂಡಿಸುವಲ್ಲಿ ಪತ್ರಿಕೆಗಳ ಪಾತ್ರ ತುಂಬ ಮಹತ್ವದ್ದು ಎಂದು ತೋಂಟದಾರ್ಯ ಮಠದ ಡಾ.ಸಿದ್ದಲಿಂಗ ಸ್ವಾಮೀಜಿ ಹೇಳಿದರು.ನಗರದ ತೋಂಟದಾರ್ಯ ಮಠದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ ನಡೆದ ಶಿವಾನುಭವದಲ್ಲಿ ನಡೆದ ಪತ್ರಿಕಾ ದಿನಾಚರಣೆಯಲ್ಲಿ ಹಿರಿಯ ಪತ್ರಕರ್ತ, ಸಾಹಿತಿ ಗೋಪಾಲ ವಾಜಪೇಯಿ ಅವರ ಸನ್ಮಾನ ನೆರವೇರಿಸಿ ಮಾತನಾಡಿದ ಅವರು, ದೇಶದ ಸಾಮಾಜಿಕ, ರಾಜಕೀಯ, ಸಾರ್ವಜನಿಕ ರಂಗಗಳ ಆಗುಹೋಗುಗಳು, ಅವಘಡ ಕುರಿತು ಜನಸಾಮಾನ್ಯರಿಗೆ ನೇರ, ಸರಳ ಹಾಗೂ ಸಹಜವಾದ ರೀತಿಯಲ್ಲಿ ಜಾಗ್ರತಗೊಳಿಸಲು ಮಾಧ್ಯಮಗಳು ತಮ್ಮದೆ ಆದ ಮಹತ್ವದ ಪಾತ್ರವಾಡುತ್ತಿವೆ ಎಂದು  ಅಭಿಪ್ರಾಯಪಟ್ಟರು.ಪತ್ರಿಕೆಗಳ ಪಾತ್ರ ಎಷ್ಟರ ಮಟ್ಟಿಗೆ ಪ್ರಭಾವ ಬೀರಿತ್ತು ಎಂಬುದಕ್ಕೆ ಗದಗ ಜಿಲ್ಲೆಯಲ್ಲಿ ತುಂಗಭದ್ರ ನದಿ ನೀರು ಸೇರಿದಂತೆ ಕಪ್ಪತಗುಡ್ಡ ಶ್ರೇಣಿಯ ನೈಸರ್ಗಿಕ ಸಂಪನ್ಮೂಲ ಕಬಳಿಸಲು ಬಂದಿದ್ದ ಪೊಸ್ಕೊ ಕಂಪೆನಿ ಜಿಲ್ಲೆಯಿಂದ ಕಾಲ್ಕಿತ್ತಿದ್ದು ನಿದರ್ಶನ. ನಿಸರ್ಗ ಮುನಿದರೆ ಏನಾಗುವುದೆಂಬುದಕ್ಕೆ ಉತ್ತರಾಖಂಡದ ಜಲಪ್ರಳಯ ಎಚ್ಚರಿಕೆಯಾಗಿದೆ.ಕಪ್ಪತಗುಡ್ಡ ಶ್ರೇಣಿ, ಪಶ್ಚಿಮ ಘಟ್ಟಗಳನ್ನು ಉಳಿಸದಿದ್ದರೆ ಉತ್ತರ ಭಾರತದಲ್ಲಿ ಉಂಟಾದ ನೈಸರ್ಗಿಕ ಪ್ರಕೋಪ ರಾಜ್ಯದಲ್ಲೂ ನಡೆಯುವ ಅಪಾಯ ಇದ್ದೇ ಇದೆ. ನೈಸರ್ಗಿಕ ಸಂಪತ್ತುಗಳ ಮೇಲೆ ಮನುಷ್ಯ ದುರಾಸೆಯಿಂದ ನಡೆಸುವ ಶೋಷಣೆ ತಡೆಯಲು ಮಾಧ್ಯಮಗಳು ಈಗಲೂ ಹೋರಾಡುತ್ತಲೇ ಇವೆ ಎಂದು ಸ್ವಾಮೀಜಿ ಹೇಳಿದರು.ಕೈಗಾರಿಕೆ ಮತ್ತು ಕೃಷಿ ಎರಡೂ ದೇಶದ ಅಭಿವೃದ್ಧಿಗೆ ಎರಡು ಕಣ್ಣುಗಳಿದ್ದಂತೆ ನಿಜ. ಆದರೆ ಇದೆ ನೆಪದಲ್ಲಿ ನಿಸರ್ಗದ ಅಮೂಲ್ಯ ಕೊಡುಗೆಗಳಾದ ನದಿ ನೀರು, ಬೆಟ್ಟಗುಡ್ಡ, ಹವಾಮಾನ ಪರಿಸರ ನಾಶಕ್ಕೆ ಆಸ್ಪದ ನೀಡುವ ಅಪಾಯಕಾರಿ ಕೆಲಸವಾಗಬಾರದು ಎಂದು ಸಲಹೆ ನೀಡಿದರು.ಜನಜಾಗೃತಿಯಲ್ಲಿ  ಪತ್ರಿಕಾ ಮಾಧ್ಯಮ ಪಾತ್ರ ಕುರಿತು ಮಾತನಾಡಿದ ಅಂಕೋಲಾ ವಿ.ಸಿ.ಪದವಿ ಕಾಲೇಜಿನ ಪ್ರಾಧ್ಯಾಪಕರು ಪ್ರಜಾವಾಣಿ ಅರೆಕಾಲಿಕ ವರದಿಗಾರ ಪ್ರೊ. ಎಸ್.ವಿ.ವಸ್ತ್ರದ, ಪತ್ರಕರ್ತರಾದವರು ತಮ್ಮನ್ನು ತಾವು ತಿದ್ದಿಕೊಂಡು  ಸತ್ಯವಾದದ್ದನ್ನು ಬರೆಯಲು ಪಣ ತೊಡಬೇಕೆಂದರು.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗದೀಶ ಕುಲಕರ್ಣಿ ಮಾತನಾಡಿದರು.  ತೋಂಟದಾರ್ಯ ವಿದ್ಯಾಪೀಠದ ಶ್ರೀಬಸವೇಶ್ವರ ಪ್ರೌಢಶಾಲೆ ಮಕ್ಕಳು ಉತ್ತರಾಖಂಡ ಜಲಪ್ರಳಯ ಸಂತ್ರಸ್ತ ನಿಧಿಗೆ ಮುಖ್ಯೋಪಾಧ್ಯಾಯ  ಶಿವನಗೌಡ ಗೌಡರ ನೇತೃತ್ವದಲ್ಲಿ ರೂ 25 ಸಾವಿರ ದೇಣಿಗೆ ಅರ್ಪಿಸಿದರು.ಅಕ್ಕಮಹಾದೇವಿ ವೃತ್ತಿ ನಿರತ ಮಹಿಳಾ ವಸತಿ ನಿಲಯದ ವಾರ್ಡನ್ ಮತ್ತು ಸಿಬ್ಬಂದಿ ವರ್ಗ ಸೇರಿದಂತೆ ಹಿರಿಯ ಸಹಕಾರಿಗಳು, ವಕೀಲರಾಗಿದ್ದ ದಿ.ವಿ.ಆರ್.ಮಾಳಗೊಂಡ ಸ್ಮರಣಾರ್ಥ ಶಿವಾನುಭವ ಭಕ್ತಿಸೇವೆ ವಹಿಸಿದ್ದ ನಗರಸಭೆ ಮಾಜಿ ಸದಸ್ಯ  ಚಂದ್ರು ವಿ.ಮಾಳಗೊಂಡ ಹಾಗೂ ಕುಟುಂಬ ಪರಿವಾರದವರನ್ನು ಸನ್ಮಾನಸಿದರು.ಸಂಘದ ಅಧ್ಯಕ್ಷ ಪ್ರಕಾಶ ಕರಿಸೋಮನಗೌಡ್ರ ಸ್ವಾಗತಿಸಿದರು. ಸಮಿತಿ ಅಧ್ಯಕ್ಷ  ಪ್ರೊ.ಎಸ್.ಎನ್.ಆದಿ  ಪರಿಚಯಿಸಿದರು. ಪ್ರೊ.ರಾಜಕುಮಾರ ತಳವಾರ ನಿರೂಪಿಸಿದರು. ಉಪಾಧ್ಯಕ್ಷ ಮೃತ್ಯುಂಜಯ ಸಂಕೇಶ್ವರ, ಶಿವಲೀಲಾ ಅಕ್ಕಿ, ಕಾರ್ಯದರ್ಶಿ ವೀರಣ್ಣ ಹೊನಗಣ್ಣವರ, ಸಹ ಕಾರ್ಯದರ್ಶಿ ಗುರುಬಸವಲಿಂಗ ತಡಸದ, ಕೋಶಾಧ್ಯಕ್ಷ ಪ್ರಭಯ್ಯ ಹಿರೇಮಠ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.