ಬುಧವಾರ, ಮೇ 18, 2022
21 °C

ನೈಸ್: ಇಂದು ರೈತಸಂಘ ರಸ್ತೆತಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ನೈಸ್’ ಸಂಸ್ಥೆಯ ಉದ್ದೇಶಿತ ಟೌನ್‌ಶಿಪ್‌ಗಾಗಿ ಜಮೀನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರವು, ಜಮೀನಿಗೆ ಏಕಪಕ್ಷೀಯವಾಗಿ ಅತ್ಯಂತ ಕಡಿಮೆ ಬೆಲೆ ನಿಗದಿಪಡಿಸಿದೆ. ಇದನ್ನು ಖಂಡಿಸಿ ಬುಧವಾರ ಮೈಸೂರು ರಸ್ತೆತಡೆ ಚಳವಳಿ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.‘ಗೋಣಿಪುರ, ಸೀಗೇಹಳ್ಳಿ, ತಿಪ್ಪೂರು ಸೇರಿದಂತೆ ಹಲವು ಗ್ರಾಮಗಳ ಜಮೀನುಗಳನ್ನು ಸರ್ಕಾರ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ. ಇದರ ನಿಮಿತ್ತ ಜಮೀನು ದರ ನಿಗದಿ ಸಂಬಂಧ ಕರೆಯಲಾಗಿದ್ದ ಸಭೆಯಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಎಂ.ಕೆ. ಅಯ್ಯಪ್ಪ ಅವರು ಏಕಪಕ್ಷೀಯವಾಗಿ ಅತ್ಯಂತ ಕಡಿಮೆ ಬೆಲೆ ಪ್ರಕಟಿಸಿದ್ದಾರೆ. ಪ್ರತಿ ಎಕರೆಗೆ ಕೇವಲ ರೂ 40ರಿಂದ 41 ಲಕ್ಷ ಪ್ರಕಟಿಸಿದ್ದಾರೆ. ಈ ಪ್ರದೇಶದಲ್ಲಿ ಪ್ರತಿ ಎಕರೆಗೆ ರೂ 5 ಕೋಟಿ ಮಾರುಕಟ್ಟೆ ಬೆಲೆ ಇದೆ’ಎಂದು ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.‘ಟೌನ್‌ಶಿಪ್ ನಿರ್ಮಾಣ ಮಾಡುತ್ತಿರುವುದು ‘ನೈಸ್’ ಸಂಸ್ಥೆ ಖಾಸಗಿಯದ್ದಾಗಿದೆ. ಇದಕ್ಕಾಗಿ ಸರ್ಕಾರ ಇಷ್ಟು ಕಡಿಮೆ ಬೆಲೆ ಏಕೆ ನಿಗದಿಪಡಿಸಬೇಕು’ ಎಂದು ಅವರು ಪ್ರಶ್ನಿಸಿದರು. ‘ಇದನ್ನು ಖಂಡಿಸಿ ಬುಧವಾರ ಬೆಳಿಗ್ಗೆ ಕುಂಬಳಗೋಡು ಪ್ರದೇಶದಲ್ಲಿ ಬೆಂಗಳೂರು-ಮೈಸೂರು ರಸ್ತೆ ತಡೆ ಚಳವಳಿ ನಡೆಸುತ್ತೇವೆ. ಇದರಲ್ಲಿ ನೂರಾರು ರೈತರು ಪಾಲ್ಗೊಳ್ಳಲಿದ್ದಾರೆ’ ಎಂದು ತಿಳಿಸಿದರು.ವಿರೋಧ: ನ್ಯಾಯಾಧೀಶರಿಗೆ ವಸತಿ ಗೃಹಗಳನ್ನು ನಿರ್ಮಿಸಿಕೊಡಲು ಹೆಬ್ಬಾಳದ ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ಕಾಲೇಜಿನ ಭೂಮಿ ಪಡೆಯಲು ಮುಂದಾಗಿರುವ ಸರ್ಕಾರದ ಕ್ರಮವನ್ನು ಕೋಡಿಹಳ್ಳಿ ಚಂದ್ರಶೇಖರ್ ತೀವ್ರವಾಗಿ ಖಂಡಿಸಿದರು.ತಕ್ಷಣ ಈ ಕ್ರಮವನ್ನು ಕೈಬಿಟ್ಟು, ವಸತಿ ಗೃಹಗಳ ನಿರ್ಮಾಣಕ್ಕೆ ಬೇರೆಡೆ ಭೂಮಿ ನೀಡುವಂತೆ ಸರ್ಕಾರವನ್ನು ಒತ್ತಾಯಿಸಲು ಫೆ. 26ರಂದು ಕಾಲೇಜಿನಿಂದ ರಾಜಭವನದವರೆಗೆ ಪಾದಯಾತ್ರೆ ಮಾಡುವುದಾಗಿ ಅವರು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.