ಮಂಗಳವಾರ, ಮೇ 24, 2022
24 °C

ನೊಬೆಲ್ ಶಾಂತಿ ಪ್ರಶಸ್ತಿ ಮಹಿಳೆಯರಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಓಸ್ಲೊ, (ಎಪಿ): 2011ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿಯನ್ನು, ಸ್ತ್ರೀಯರ ಪರವಾಗಿ ಅಹಿಂಸಾತ್ಮಕವಾಗಿ ಹೋರಾಡಿದ ಮೂವರು ಮಹಿಳೆಯರಿಗೆ ನೀಡಲಾಗಿದೆ.ಲೈಬೀರಿಯಾದ ಅಧ್ಯಕ್ಷೆ ಎಲೆನ್ ಜಾನ್ಸನ್ ಸರ್‌ಲೀಫ್, ಅದೇ ದೇಶದ  ಮಹಿಳಾ ಹಕ್ಕು ಹೋರಾಟಗಾರ್ತಿ ಲೆಮಾ ಬೊವೀ ಹಾಗೂ ಯೆಮನ್‌ನ ಪತ್ರಕರ್ತೆ ತವಕ್ಕಲ್ ಕರ್ಮನ್ ಮಹಿಳೆಯರ ಹಕ್ಕು ರಕ್ಷಣೆಗೆ ಶ್ರಮಿಸಿದ್ದಕ್ಕಾಗಿ 1.5 ದಶಲಕ್ಷ ಡಾಲರ್ ಮೊತ್ತದ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ.ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ `ಸಾರ್ವಜನಿಕ ಆಡಳಿತ~ವನ್ನು ಅಧ್ಯಯನ ಮಾಡಿರುವ ಸರ್‌ಲೀಫ್ 2005ರಲ್ಲಿ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಆಫ್ರಿಕಾದ ಪ್ರಥಮ ಅಧ್ಯಕ್ಷೆ ಮತ್ತು ಈ ತಿಂಗಳು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ.ಅಧ್ಯಕ್ಷೆಯಾದ ನಂತರ ಸುಧಾರಣೆ ಮತ್ತು ಶಾಂತಿ ಸ್ಥಾಪನೆಗೆ ಶ್ರಮಿಸಿದ 72 ವರ್ಷದ ಸರ್‌ಲೀಫ್ `ಉಕ್ಕಿನ ಮಹಿಳೆ~ ಎಂದೇ ಖ್ಯಾತರಾಗಿದ್ದಾರೆ.ಲೆಮಾ ಬೊವೀ ಲೈಬೀರಿಯಾದಲ್ಲಿ ಅಂತರ್ಯುದ್ಧ ನಡೆಯುತ್ತಿದ್ದ ಸಂದರ್ಭದಲ್ಲಿ ಕ್ರೈಸ್ತ ಮತ್ತು ಮುಸ್ಲಿಮ್ ಮಹಿಳೆಯರನ್ನು ಸಂಘಟಿಸಿ ಶಾಂತಿಗಾಗಿ ಹೋರಾಟ ನಡೆಸಿದವರು. ಸಾವಿರಾರು ಮಹಿಳೆಯರನ್ನು ಬೀದಿಗೆ ಕರೆತಂದು 14 ವರ್ಷಗಳ `ನಾಗರಿಕ ಯುದ್ಧ~ ಅಂತ್ಯಗೊಳಿಸುವಂತೆ ಶಾಂತ ರೀತಿಯಲ್ಲಿ ಆಗ್ರಹಿಸಿದ್ದವರು.ಯೆಮನ್‌ನ ತೈಜ್ ನಗರದವರಾದ 32 ವರ್ಷದ ತವಕ್ಕಲ್ ಕರ್ಮನ್ ಪತ್ರಕರ್ತೆಯರ ಸಂಘಟನೆಯ ಮುಖ್ಯಸ್ಥರಾಗಿ ಪತ್ರಕರ್ತರ ಮಾನವ ಹಕ್ಕುಗಳ ರಕ್ಷಣೆಗಾಗಿ ಹೋರಾಟ ನಡೆಸಿದ್ದಾರೆ. ಈ ಪ್ರಶಸ್ತಿಗೆ ಪಾತ್ರರಾದ ಅರಬ್‌ನ ಮೊದಲ ಮಹಿಳೆಯಾಗಿರುವ ಕರ್ಮನ್, ಯೆಮನ್‌ನ ಅಧ್ಯಕ್ಷ ಅಲಿ ಅಬ್ದುಲ್ಲ ಸಲೇಹ್ ಅವರ `ದುರಾಡಳಿತ~ದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.`ಆಡಳಿತ ವಿರೋಧಿ ದಂಗೆಯ ಸವಾಲು ಎದುರಿಸುತ್ತಿರುವ ಅರಬ್ ರಾಷ್ಟ್ರಗಳಲ್ಲಿ ಮಹಿಳೆಯರು ಮತ್ತು ಇಸ್ಲಾಂ ಹೊಂದಿರುವ ಪ್ರಮುಖ ಪಾತ್ರವನ್ನು ಕರ್ಮನ್ ಅವರಿಗೆ ದೊರೆತಿರುವ ಪ್ರಶಸ್ತಿ ಬಿಂಬಿಸುತ್ತಿದೆ~ ಎಂದು ನಾರ್ವೆ ನೊಬೆಲ್ ಸಮಿತಿಯ ಅಧ್ಯಕ್ಷ ಥಾರ್ಬ್‌ಜಾರ್ನ್ ಜಾಗ್‌ಲ್ಯಾಂಡ್ ಹೇಳಿದ್ದಾರೆ.ಕಳೆದ ವರ್ಷದ ನೊಬೆಲ್ ಶಾಂತಿ ಪ್ರಶಸ್ತಿ, ಚೀನಾದಲ್ಲಿ ಬಂಧನದಲ್ಲಿರುವ ಭಿನ್ನಮತೀಯ ನಾಯಕ ಲಿಯು ಜಿಯಾಬೊ ಅವರಿಗೆ ಸಂದಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.