ಶುಕ್ರವಾರ, ಮೇ 14, 2021
29 °C

ನೋಡಲು ಒರಟ, ಬಲ್ಲವರಿಗೆ ಸಹೃದಯಿ

ಪ್ರಜಾವಾಣಿ ವಾರ್ತೆ / ಶಿವರಾಂ Updated:

ಅಕ್ಷರ ಗಾತ್ರ : | |

ಬೆಂಗಳೂರು: `ನಾನು ನೋಡಲು ಒರಟು-ಒರಟಾಗಿರಬಹುದು. ಹೊಸದಾಗಿ ನೋಡಿದವರಿಗೆ ನಾನು ಆ ರೀತಿ ಕಾಣಬಹುದು. ಆದರೆ, ನನ್ನನ್ನು ಹತ್ತಿರದಿಂದ ಬಲ್ಲವರು ಹಾಗೂ ನನ್ನ ಜತೆ ಒಡನಾಟ ಬೆಳೆಸಿದವರಿಗೆ ನನ್ನ ಹೃದಯ ಎಷ್ಟು ಮೃದು ಎಂಬುದು ಗೊತ್ತು. ಇನ್ನು ಮುಂದೆ `ಜನ ಸ್ನೇಹಿ~ಯಾಗಿ ಕೆಲಸ ಮಾಡಲು ಪ್ರಯತ್ನಿಸುತ್ತೇನೆ. ಅಧಿಕಾರಿಗಳು ಕೆಲಸ ಮಾಡದಿದ್ದರೆ ಕಟುವಾಗಿ ದಂಡಿಸುವುದು ಅನಿವಾರ್ಯವಾಗುತ್ತದೆ~

- ಇದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಆಯ್ಕೆಯಾಗಿರುವ ಡಿ. ವೆಂಕಟೇಶಮೂರ್ತಿ ಅವರ ಪ್ರತಿಕ್ರಿಯೆ.

ಮೇಯರ್ ಆಗಿ ಆಯ್ಕೆಯಾದ ನಂತರ `ಪ್ರಜಾವಾಣಿ~ಗೆ ನೀಡಿದ ಸಂದರ್ಶನದಲ್ಲಿ ಮನ ಬಿಚ್ಚಿ ಮಾತನಾಡಿದ ಅವರು, `ನನ್ನನ್ನು ಹೊಸದಾಗಿ ನೋಡಿದವರಿಗೆ ಒರಟು ಒರಟು ತರ ಕಾಣಬಹುದು. ಹಾಗಿದ್ದಲ್ಲಿ ಮೂರು ಬೇರೆ ಬೇರೆ ವಾರ್ಡ್‌ಗಳಲ್ಲಿ ಮೂರು ಬಾರಿ ಗೆಲ್ಲಲು ಸಾಧ್ಯವೇ ಆಗುತ್ತಿರಲಿಲ್ಲ. ಅದಕ್ಕೆ ಮೇಯರ್ ಆಯ್ಕೆಯಾದ ನಂತರ ನನ್ನನ್ನು ಅಭಿನಂದಿಸಲು ಬಂದ ಜನರೇ ಸಾಕ್ಷಿ. ಮೇಯರ್ ಅಂತಹ ಜವಾಬ್ದಾರಿಯುತ ಹುದ್ದೆ ನನ್ನ ನಡವಳಿಕೆಯನ್ನೂ ಇನ್ನಷ್ಟು ಬದಲಿಸಬಹುದು ಎಂಬುದು ನನ್ನ ಭಾವನೆ~ ಎಂದು ಪ್ರತಿಕ್ರಿಯಿಸಿದರು.

ಸಂದರ್ಶನದ ಆಯ್ದ ಭಾಗ ಇಲ್ಲಿದೆ.

ಬೆಂಗಳೂರಿನ ಬಗ್ಗೆ ನಿಮ್ಮ ಕನಸಿನ ಯೋಜನೆಗಳೇನು?

ಬರೀ ಕನಸು ಕಂಡರಷ್ಟೇ ಪ್ರಯೋಜನವಾಗುವುದಿಲ್ಲ. ಅದಕ್ಕೆ ಮುಖ್ಯವಾಗಿ ಸಂಪನ್ಮೂಲ ಬೇಕು. ಇನ್ನು 8-10 ದಿನಗಳಲ್ಲಿ ಪಾಲಿಕೆಯ ಹಣಕಾಸಿನ ಸ್ಥಿತಿಗತಿ ಒಂದು ಚಿತ್ರಣ ಸಿಗಬಹುದು. ಆನಂತರ ಯಾವ ರೀತಿಯ ಯೋಜನೆಗಳನ್ನು ರೂಪಿಸಬೇಕು ಎಂಬ ಬಗ್ಗೆ ಚಿಂತನೆ ನಡೆಸಲಾಗುವುದು.

ಎರಡು ವರ್ಷಗಳಿಂದ ರಾಜ್ಯ ಸರ್ಕಾರ ಪಾಲಿಕೆಗೆ ನಿರೀಕ್ಷಿತ ಅನುದಾನ ನೀಡಿಲ್ಲ. ಇಂತಹ ಸನ್ನಿವೇಶದಲ್ಲಿ ನಿಮಗೆ ಹೇಗೆ ಸರ್ಕಾರದಿಂದ ಅನುದಾನ ತರುವ ಭರವಸೆಯಿದೆ?

ಈಗಾಗಲೇ ಮುಖ್ಯಮಂತ್ರಿಗಳು ವಾರದಲ್ಲಿ ಎರಡು ದಿನ ನಗರ ಪ್ರದಕ್ಷಿಣೆ ನಡೆಸುವುದಾಗಿ ಘೋಷಿಸಿದ್ದಾರೆ. ನಾನು ಕೂಡ ಸಮಸ್ಯೆಗಳಿರುವ ಕಡೆಗಳಿಗೆ ಮುಖ್ಯಮಂತ್ರಿಗಳನ್ನು ಕರೆದೊಯ್ದು ಸಮಸ್ಯೆಗಳ ಬಗ್ಗೆ ಸ್ಥಳದಲ್ಲಿಯೇ ಮನವರಿಕೆ ಮಾಡಿಕೊಡಲು ಪ್ರಯತ್ನಿಸುತ್ತೇನೆ. ಆನಂತರ ಸರ್ಕಾರದ ಮೇಲೆ ಒತ್ತಡ ತಂದು ಅನುದಾನ ತರಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ. ಈ ವಿಚಾರದಲ್ಲಿ ನಾನು ಜಿಲ್ಲಾ ಉಸ್ತುವಾರಿ ಸಚಿವರು, ನಗರ ಶಾಸಕರು, ಉಪ ಮೇಯರ್, ಆಯುಕ್ತರೂ ಸೇರಿದಂತೆ ಪಾಲಿಕೆಯ ಎಲ್ಲ ಸದಸ್ಯರು ಹಾಗೂ ಅಧಿಕಾರಿಗಳ ಸಹಾಯ ಪಡೆಯುತ್ತೇನೆ.

ಅಕ್ರಮ- ಸಕ್ರಮ ಯೋಜನೆ ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದೆಯಲ್ಲಾ?

ಖಂಡಿತಾ, ಈ ವಿಚಾರದಲ್ಲಿ ತಕ್ಷಣ ಸರ್ಕಾರದ ಮೇಲೆ ಒತ್ತಡ ಹೇರಲು ಪ್ರಯತ್ನಿಸುತ್ತೇನೆ. ಇದರಿಂದ ಪಾಲಿಕೆಗೆ ಕೋಟ್ಯಂತರ ರೂಪಾಯಿ ಆದಾಯ ಬರಲಿದೆ.

ಕಸದ ಟೆಂಡರ್ ಪ್ರಕ್ರಿಯೆ ಅಂತಿಮಗೊಳಿಸುವುದಕ್ಕೆ `ಮಾಫಿಯಾ~ ಅಡ್ಡಗಾಲು ಹಾಕುತ್ತಿದೆ ಎಂಬ ಆರೋಪವಿದೆ? ಹಾಗಾದರೆ ನಿಮ್ಮಿಂದ `ಮಾಫಿಯಾ~ ಎದುರಿಸಲು ಸಾಧ್ಯವೇ?

ಕಳೆದ ನಾಲ್ಕೈದು ವರ್ಷಗಳಿಂದ ಕಸದ ಟೆಂಡರ್ ಅಂತಿಮಗೊಳಿಸಲು ಅವಕಾಶವನ್ನೇ ನೀಡಿಲ್ಲ. ಇದೀಗ ಹೈಕೋರ್ಟ್‌ನಲ್ಲಿ ಪಾಲಿಕೆ ಪರವಾಗಿ ತೀರ್ಪು ಬಂದಿದೆ. ಕೂಡಲೇ ಅಧಿಕಾರಿಗಳ ಸಭೆ ನಡೆಸಿ ಟೆಂಡರ್ ಪ್ರಕ್ರಿಯೆ ಅಂತಿಮಗೊಳಿಸಲು ಕ್ರಮ ಕೈಗೊಳ್ಳುತ್ತೇನೆ. ಕಸ ಸಮಸ್ಯೆ ಪರಿಹಾರಕ್ಕೆ ಒತ್ತು ನೀಡುತ್ತೇನೆ.

ಹಿಂದಿನ ಮೇಯರ್ ಅವಧಿಯಲ್ಲಿಯೂ ಜನಸ್ಪಂದನ ಸಭೆಗಳನ್ನು ಸರಿಯಾಗಿ ನಡೆಸಲು ಸಾಧ್ಯವಾಗಲಿಲ್ಲ. ನೀವೇನು ಮಾಡುತ್ತೀರಿ?

ನಗರದ 28 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮೊದಲು ವಾರಕ್ಕೊಂದು ಜನಸ್ಪಂದನ ಸಭೆ ನಡೆಸಲು ಉದ್ದೇಶಿಸಿದ್ದೇನೆ. ಆಯುಕ್ತರನ್ನೂ ಸಭೆಗೆ ಕರೆದೊಯ್ಯುವ ಮೂಲಕ ಜನರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಲು ಪ್ರಯತ್ನಿಸುತ್ತೇನೆ. ಅಲ್ಲದೆ, ಮೇಯರ್ ಕಚೇರಿಗೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ಸಹಾಯವಾಣಿ ತೆರೆಯಲು ಕ್ರಮ ಕೈಗೊಳ್ಳುತ್ತೇನೆ. ಆನ್‌ಲೈನ್ ಮೂಲವೂ ಜನರು ದೂರು ಸಲ್ಲಿಸಬಹುದು. ಸಂಬಂಧಪಟ್ಟ ದೂರುಗಳನ್ನು ಆಯಾ ಇಲಾಖೆಗಳಿಗೆ ಸಲ್ಲಿಸಲಾಗುವುದು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಪಟ್ಟು ಹಿಡಿದಿದ್ದ ನೀವು ಮೇಯರ್ ಆಗಲು ಸಾಧ್ಯವಾಯಿತೇ?

ಖಂಡಿತಾ ಇಲ್ಲ. ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಆರ್. ಅಶೋಕ ಸೇರಿದಂತೆ ನಗರದ ಬಿಜೆಪಿ ಶಾಸಕರು ಹಾಗೂ ಪಾಲಿಕೆ ಸದಸ್ಯರ ಬೆಂಬಲದಿಂದ ಮೇಯರ್ ಸ್ಥಾನಕ್ಕೆ ಆಯ್ಕೆಯಾಗಲು ಸಾಧ್ಯವಾಯಿತು. ಇದಕ್ಕೆ ಹಿರಿತನ, ಪಕ್ಷಕ್ಕೆ ನಾನು ಸಲ್ಲಿಸಿದ ಸೇವೆ ಕೂಡ ಕಾರಣ.

ನಿಮ್ಮ ಅವಧಿಯಲ್ಲೇ ರಾಜ್ಯ ವಿಧಾನಸಭೆಗೆ ಚುನಾವಣೆ ಎದುರಾಗುತ್ತಿದೆ. ನಗರದಲ್ಲಿ ಪಕ್ಷ ಸಂಘಟನೆಗೆ ನಿಮ್ಮ ಪ್ರಯತ್ನ?

ಬಿಬಿಎಂಪಿಯಲ್ಲಿ ಬಿಜೆಪಿ ಆಡಳಿತವಿರುವುದರಿಂದ ರಾಜ್ಯ ವಿಧಾನಸಭಾ ಚುನಾವಣೆಗೂ ಅನುಕೂಲವಾಗಲಿದೆ. ಖಂಡಿತಾ ನಮ್ಮ ಶಾಸಕರು, ಸಚಿವರು, ಸಂಸದರು, ಪಾಲಿಕೆ ಸದಸ್ಯರೊಂದಿಗೆ ಕೈಜೋಡಿಸುವ ಮೂಲಕ ಪಕ್ಷದ ಬೆಳವಣಿಗೆಗೆ ಅಗತ್ಯ ಬಿದ್ದಾಗ ಸಹಕಾರ ನೀಡುತ್ತೇನೆ.

ನಿಮ್ಮ ಪ್ರಥಮ ಆದ್ಯತೆ ಯಾವುದಕ್ಕೆ?

ಬಿಬಿಎಂಪಿಗೆ ಹೊಸದಾಗಿ ಸೇರ್ಪಡೆಯಾದ ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಹಳಷ್ಟಿದೆ. ಈ ವಾರ್ಡ್‌ಗಳಿಗೆ ಕಾವೇರಿ ನೀರು ಪೂರೈಕೆಯಾಗಲು ಇನ್ನೂ ತಡ ಆಗಬಹುದು. ಅದಕ್ಕೂ ಮುನ್ನ ಯಾವ ರೀತಿ ಸಮಸ್ಯೆ ಪರಿಹರಿಸಬಹುದು ಎಂಬುದರ ಬಗ್ಗೆ ಒಂದೆರಡು ದಿನಗಳಲ್ಲಿ ಅಧಿಕಾರಿಗಳ ಜತೆ ತುರ್ತು ಸಭೆ ನಡೆಸುತ್ತೇನೆ. ಜಲಮಂಡಳಿಯ ಅಧಿಕಾರಿಗಳೊಂದಿಗೂ ಈ ಸಂಬಂಧ ಚರ್ಚೆ ನಡೆಸುತ್ತೇನೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.