ಶನಿವಾರ, ಜೂನ್ 19, 2021
26 °C

ನೌಕರರ ಕಾಯಂಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯಲ್ಲಿ ಒಂಬತ್ತು ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ಆರು ಮಂದಿ ನೌಕರರನ್ನು ಕಾಯಂಗೊಳಿಸಬೇಕು ಎಂದು ಪೌರ ಸೇವಾ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ವಿ.ವೆಂಕಟೇಶ್ ಆಗ್ರಹಿಸಿದರು.ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಮಲ ಹೊರುವ ಪದ್ಧತಿಯನ್ನು ನಿಷೇಧ ಮಾಡಿದ್ದರೂ ಕಾರ್ಮಿಕರಿಂದ ಈ ಕೆಲಸ ಮಾಡಿಸಲಾಗುತ್ತಿದೆ. ಈ ಕುರಿತು ಸದ್ಯದಲ್ಲಿಯೇ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.ನಗರದಲ್ಲಿರುವ ಮ್ಯೋನ್‌ಹೋಲ್‌ಗಳನ್ನು ಸ್ವಚ್ಛಗೊಳಿಸಲು ಒಳಚರಂಡಿ ಮಂಡಳಿಯವರು ಜೆಟ್ಟಿಂಗ್ ಯಂತ್ರ ಬಳಸುತ್ತಿದ್ದಾರೆಂದು ನಾವು ತಿಳಿದಿದ್ದೆವು. ಆದರೆ ಮಾ 3ರಂದು ನಗರಸಭೆಯ 2ನೇ ವಾರ್ಡನ ಮ್ಯೋನ್ ಹೋಲ್ ಸ್ವಚ್ಛಗೊಳಿಸಲು ಕಾರ್ಮಿಕರನ್ನು ಬಳಸಿಕೊಳ್ಳಲಾಗಿದೆ.ಒಳಚರಂಡಿ ಮಂಡಳಿ ಎಂಜಿನಿಯರ್ ಜಯರಾಮ್, ನಗರಸಭೆ ಸದಸ್ಯ ರೈಡ್ ನಾಗರಾಜ್ ಅವರ ಒತ್ತಾಯಕ್ಕೆ ಮಣಿದು ಕಾರ್ಮಿಕರು ಈ ಕೆಲಸ ಮಾಡಿದ್ದಾರೆ ಎಂದು ಅವರು ದೂರಿದರು.ನಗರಸಭೆ ವ್ಯಾಪ್ತಿಯಲ್ಲಿ 9 ವರ್ಷಗಳಿಂದ ಮಲ ಸ್ವಚ್ಛತೆ ಮಾಡುವ ಹೀನ ಪದ್ಧತಿ ಇರುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದೇವೆ. ಈ ಕಾರ್ಯ ನಿರ್ವಹಿಸುತ್ತಿರುವ ಒಳ ಚರಂಡಿ ಮಂಡಳಿಯ ಕಾರ್ಮಿಕರಿಗೆ ಸರಿಯಾಗಿ ವೇತನವನ್ನೂ ನೀಡುತ್ತಿಲ್ಲ. ಸರ್ಕಾರದ ಈ ಕೆಲಸಕ್ಕೆ  ಖಾಸಗಿ ವ್ಯಕ್ತಿಯೊಬ್ಬರಿಂದ ವೇತನ ಪಡೆಯುವಂತೆ ಅಧಿಕಾರಿಗಳು ಸೂಚಿಸುತ್ತಿದ್ದಾರೆ.ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡು, ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಅವರು ಆಗ್ರಹಿಸಿದರು.  ಗುತ್ತಿಗೆ ಕಾರ್ಮಿಕರಾದ ಕೇಶವಕುಮಾರ, ರಾಮು, ಎಂ.ವೆಂಕಟೇಶ್, ಶೇಖರ್, ಲಕ್ಷ್ಮಣ, ವೆಂಕಟೇಶ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.ಒಳಚರಂಡಿ ಸ್ವಚ್ಛತೆ ವಿವಾದ: ಪಿತೂರಿ ಆರೋಪ

`ಕೆಲಸ ಕಾಯಂ ಮಾಡಿಸುವುದಾಗಿ ಆಮಿಷ ತೋರಿಸಿ ಕೆಲವರು ನಗರಸಭೆಯ ನೂತನ ಸದಸ್ಯ ರೈಡ್ ನಾಗರಾಜ್ ವಿರುದ್ಧ ಪೊಲೀಸ್‌ಠಾಣೆಯಲ್ಲಿ ದೂರು ನೀಡುವಂತೆ ಮಾಡಿದರು. ತಪ್ಪಿನ ಅರಿವಾಗಿ ಈ ದೂರನ್ನು ಹಿಂಪಡೆದಿರುವುದಾಗಿ~ ಒಳಚರಂಡಿ ಮಂಡಳಿಯ ಗುತ್ತಿಗೆ ನೌಕರರಾದ ಕೇಶವ ಕುಮಾರ್, ರಾಜು ತಿಳಿಸಿದರು.ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, `ಮ್ಯಾನ್‌ಹೋಲ್ ಒಳಗೆ ಇಳಿದು ಶುಚಿಗೊಳಿಸುವಂತೆ ನಗರಸಭೆ ಸದಸ್ಯ ನಾಗರಾಜ್ ಒತ್ತಾಯಿಸಲಿಲ್ಲ. ಬದಲಿಗೆ ಜಲಮಂಡಳಿ ಅಧಿಕಾರಿಗಳ ಸೂಚನೆ ಮೇರೆಗೆ ನಾವೇ ಸಕ್ಕಿಂಗ್ ಯಂತ್ರದ ನೆರವಿನಿಂದ ಕೆಲಸ ಮಾಡಿದ್ದೇವೆ~ ಎಂದು ಅವರು ಹೇಳಿದರು.ಈ ಹೇಳಿಕೆಯನ್ನು ಒಳಚರಂಡಿ ಮಂಡಳಿಯ ಗುತ್ತಿಗೆ ನೌಕರರಾದ ವೆಂಕಟೇಶ್, ಶೇಖರ್, ಲಕ್ಷ್ಮಣ, ವೆಂಕಟೇಶ್ ಅನುಮೋದಿಸಿದರು.`ನಗರಸಭೆಯ ಎರಡನೇ ವಾರ್ಡ್ ಉಪ ಚುನಾವಣೆಯಲ್ಲಿ ನಾನು ಜಯಗಳಿಸಿದ್ದೇನೆ. ಇದನ್ನು ಸಹಿಸದ ಕೆಲವರು ನನ್ನ ವಿರುದ್ಧ ಈ ರೀತಿ ಪಿತೂರಿ ಮಾಡಿದ್ದಾರೆ. ಇದು ರಾಜಕೀಯ ದುರುದ್ದೇಶದಿಂದ ಕೂಡಿತ್ತು. ಈ ಸಂಬಂಧ ದೂರು ನೀಡಿದವರು ಸತ್ಯವನ್ನು ಅರಿತು ದೂರು ಹಿಂಪಡೆದಿದ್ದಾರೆ.

 

ಇದರಿಂದ ಜನತೆಗೆ ಎಲ್ಲ ಗೊತ್ತಾದಂತಾಗಿದೆ. ನಾನು ನಿರಪರಾಧಿ ಎಂಬುದೂ ಸಾಬೀತಾಗಿದೆ~ ಎಂದು ನಗರಸಭೆ ಸದಸ್ಯ ರೈಡ್ ನಾಗರಾಜ್ ಪ್ರತಿಕ್ರಿಯಿಸಿದರು.ನಗರಸಭೆ ಅಧ್ಯಕ್ಷ ಸಾಬಾನ್ ಸಾಬ್, ಸದಸ್ಯ ಚಿಕ್ಕವೀರೇಗೌಡ, ಸೋಮಶೇಖರ್, ದಲಿತ ಮುಖಂಡರಾದ ರಾ.ಸಿ.ದೇವರಾಜ್, ಶಿವಶಂಕರ್, ನರಸಿಂಹಯ್ಯ, ಶಿವಣ್ಣ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.