ಶುಕ್ರವಾರ, ಮಾರ್ಚ್ 5, 2021
28 °C

ನ್ಯಾಯಮಾರ್ಗದಲ್ಲಿ ನಡೆದುಹೋದ ‘ಸಂತ’

ಪ್ರವೀಣ ಕುಲಕರ್ಣಿ Updated:

ಅಕ್ಷರ ಗಾತ್ರ : | |

ನ್ಯಾಯಮಾರ್ಗದಲ್ಲಿ ನಡೆದುಹೋದ ‘ಸಂತ’

ಬೆಂಗಳೂರು: ಹಾಲಿನಂತಹ ಪರಿಶುಭ್ರವಾದ ಅಂಗಿ–ಪಂಚೆ, ಕಪ್ಪುಬಣ್ಣದ ದಪ್ಪ ಫ್ರೇಮಿನ ಕನ್ನಡಕ, ಮೊಗದಲ್ಲಿ ಸದಾ ಮಂದಹಾಸ, ಮೆತ್ತನೆ ಹೆಜ್ಜೆ ಹಾಕುತ್ತಾ ಬಂದರೆ ಗೌರವಭಾವ ಮೂಡುವಂತಹ ಚಹರೆ. ಹೌದು, ನ್ಯಾಯಮೂರ್ತಿ ಡಿ.ಆರ್‌.ವಿಠಲರಾವ್‌ ಅವರದು ಬಲು ನಿರಾಡಂಬರದ ಬದುಕು.  ವೈಭೋಗದ ಸಂತೆಯೇ ಸುತ್ತ ನೆರೆದರೂ ಸಂತನಾಗಿ ಬಾಳಿದವರು ಅವರು.ನ್ಯಾಯಮೂರ್ತಿಗಳಾದ ಎಂ.ಎನ್‌.ವೆಂಕಟಾಚಲಯ್ಯ, ಜಿ.ವಿ. ಸಭಾಹಿತ ಅವರಂತಹ ಘಟಾನುಘಟಿಗಳ ಒಡನಾಡಿಯಾಗಿದ್ದ ವಿಠಲರಾವ್‌, ಅವರೊಂದಿಗೆ ಹಲವು ಮಹತ್ವದ ಪ್ರಕರಣಗಳ ವಿಚಾರಣೆಯನ್ನೂ ನಡೆಸಿದ್ದರು.ಕೊಪ್ಪಳ ಜಿಲ್ಲೆಯ ಕಾತರಕಿ ಎಂಬ ಪುಟ್ಟ ಗ್ರಾಮದ ವಿಠಲರಾವ್‌, ನ್ಯಾಯಪೀಠ ಏರುವಷ್ಟು ಮಟ್ಟಕ್ಕೆ ಬೆಳೆದ ದಾರಿ ಅನನ್ಯವಾದುದು.ತುಂಗಭದ್ರಾ ಅಣೆಕಟ್ಟೆಯ ಹಿನ್ನೀರಿನಲ್ಲಿ ಮನೆ–ಜಮೀನು ಎಲ್ಲ ಮುಳುಗಿದಾಗ ಅಲ್ಲಿನ ಜನರೆಲ್ಲ ಕೊಪ್ಪಳದ ಹೊರವಲಯದಲ್ಲಿ ಭಾಗ್ಯನಗರ ಎಂಬ ಹೊಸ ಊರನ್ನು ಕಟ್ಟಿದರು. ಶಿಕ್ಷಣಕ್ಕಾಗಿ ವಿಠಲರಾವ್‌ ಊರೂರು ಸುತ್ತಬೇಕಾಯಿತು. ಹೈಸ್ಕೂಲ್‌ವರೆಗೆ ಕೊಪ್ಪಳದಲ್ಲೇ ಓದಿದ ಅವರು, ಎಚ್‌ಎಸ್‌ಸಿ ಮುಗಿಸಿದ್ದು ಕಲಬುರ್ಗಿಯಲ್ಲಿ. ಕಾನೂನು ಪದವಿಯನ್ನು ಹೈದರಾಬಾದ್‌ನ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಪೂರೈಸಿದರು.ಹೈದರಾಬಾದ್‌ನಿಂದ ವಾಪಸು ಬಂದಬಳಿಕ ರಾಯಚೂರಿನಲ್ಲಿ ಡಿ.ಮಾಣಿಕ್‌ರಾವ್‌ ಅವರ ಬಳಿ ವಕೀಲಿ ವೃತ್ತಿ ಆರಂಭಿಸಿದರು. ನೇಕಾರರ ಕುಟುಂಬದಿಂದ ಬಂದಿದ್ದ ಅವರಿಗೆ ಬಡತನದ ಬೇಗುದಿ ಹೇಗೆಲ್ಲಾ ಕಾಡುತ್ತದೆ ಎಂಬುದರ ಸ್ಪಷ್ಟ ಅರಿವಿತ್ತು. ಹೀಗಾಗಿ ಬರಿಗೈಯಲ್ಲಿ ಬಂದ ಕಕ್ಷಿದಾರರಿಗೆ ಅವರ ಕಚೇರಿಯ ಬಾಗಿಲು ಸದಾ ತೆರೆದಿರುತ್ತಿತ್ತು. ಸ್ವಂತ ದುಡ್ಡು ಖರ್ಚು ಮಾಡಿ ಅಂತಹವರ ಕೇಸು ನಡೆಸುತ್ತಿದ್ದರು. ನಿಜಾಮರ ಆಡಳಿತಾವಧಿಯಲ್ಲಿ ಕಾನೂನು ಅಧ್ಯಯನ ಮಾಡಿದ ಫಲವಾಗಿ ಮುಸ್ಲಿಂ ವೈಯಕ್ತಿಕ ಕಾನೂನಿನ ಆಳವಾದ ಜ್ಞಾನವೂ ಅವರಲ್ಲಿತ್ತು.ಈ ವಾಮನಮೂರ್ತಿಯನ್ನು ಕಂಡರೆ ಮಿಕ್ಕ ನ್ಯಾಯಮೂರ್ತಿಗಳಿಗೆ ಬಲುಪ್ರೀತಿ.  ‘ವಿಠಲರಾವ್‌ ಅವರದು ತುಂಬಾ ಘನವಾದ ವ್ಯಕ್ತಿತ್ವ. ಅಂತಹ ಮಹಾಪುರುಷನ ಜತೆ ಕೆಲಸ ಮಾಡಿದ್ದು ನನ್ನ ಜೀವನದ ಸೌಭಾಗ್ಯ’ ಎನ್ನುತ್ತಾರೆ ಎಂ.ಎನ್‌. ವೆಂಕಟಾಚಲಯ್ಯ. ‘ಅವರು ನನಗೆ ಮಾನವತೆಯ ಸಾಕಾರರೂಪವಾಗಿ ಕಂಡಿದ್ದರು’ ಎಂದು ಹೇಳುತ್ತಾರೆ.ಅವರು ನಿತ್ಯ ನಸುಕಿನಲ್ಲಿ ಎದ್ದು ಎರಡು ಗಂಟೆಯಷ್ಟು ಅಧ್ಯಯನ ನಡೆಸುತ್ತಿದ್ದರು. ಮನೆಯಲ್ಲೊಂದು ದೊಡ್ಡ ಗ್ರಂಥಾಲಯವನ್ನೇ ಇಟ್ಟುಕೊಂಡಿದ್ದರು. ನ್ಯಾಯಮೂರ್ತಿ ಸಂತೋಷ ಹೆಗ್ಡೆ ಸೇರಿದಂತೆ ಹಲವು ಕಾನೂನು ದಿಗ್ಗಜರು ಅವರಲ್ಲಿ ಸಲಹೆ ಅಪೇಕ್ಷಿಸಿ ಬರುತ್ತಿದ್ದರು.ಕಾನೂನಿನಷ್ಟೇ ಅಧ್ಯಾತ್ಮದ ಕಡೆಗೂ ಅವರಿಗೆ ಒಲವಿತ್ತು. ‘ಧರ್ಮದ ಕೊನೆಯೇ ಅಧ್ಯಾತ್ಮದ ಆರಂಭ’ ಎಂಬ ಸಂದೇಶ ಸಾರಿದ್ದ ಷಹಜಹಾನ್‌ಪುರದ (ಉತ್ತರ ಪ್ರದೇಶ) ಶ್ರೀ ರಾಮಚಂದ್ರ (ಬಾಬೂಜಿ) ಅವರ ನಿಲುವಿಗೆ ಮಾರುಹೋಗಿದ್ದ ವಿಠಲರಾವ್‌, ಅವರಲ್ಲಿ ಆಧ್ಯಾತ್ಮಿಕ ತರಬೇತಿ ಪಡೆದಿದ್ದರು. ಸ್ವಾತಂತ್ರ್ಯ ಪೂರ್ವದಲ್ಲೇ ಬಾಬೂಜಿ ಅವರು, ಧರ್ಮ, ಮತ, ಜಾತಿಗಳ ಗೋಡೆಗಳನ್ನು ಒಡೆದು ಹಾಕಿದವರು. ನೂರು ಮತದ ಹೊಟ್ಟು ತೂರಿ ಎಲ್ಲ ತತ್ವಗಳ ಎಲ್ಲೆಯನ್ನು ಮೀರಿ ನಿಂತವರು. ಮೂರ್ತಿ ಪೂಜೆಗೆ, ಗೊಡ್ಡು ಆಚರಣೆಗೆ, ಮೂಢನಂಬಿಕೆಗೆ ಸಡ್ಡು ಹೊಡೆದವರು. ಅಂತಹ ಗುರು ಹಾಕಿಕೊಟ್ಟ ‘ಸಹಜ ಮಾರ್ಗ’ದಲ್ಲೇ ವಿಠಲರಾವ್‌ ಹೆಜ್ಜೆ ಹಾಕಿದರು. ಒಂದು ರೊಟ್ಟಿ, ಲೋಟ ಹಾಲು ಅವರ ನಿತ್ಯದ ಆಹಾರವಾಗಿತ್ತು.ಇತ್ತೀಚಿನ ದಿನಗಳಲ್ಲಿ ಸಮಾಜದ  ಅಧಃಪತನ ಅವರಲ್ಲಿ ವ್ಯಾಕುಲ ಉಂಟುಮಾಡಿತ್ತು. ‘ಮನಸ್ಸಿನ ಕಾರ್ಯಕ್ಕೆ ಹೃದಯವೇ ಕ್ಷೇತ್ರ. ಮನಸ್ಸು ಯಾವಾಗಲೂ ತಾನಿದ್ದಂತೆಯೇ ಇರುವುದು. ಮನಸ್ಸಿನ ಕ್ಷೇತ್ರವಾದ ಹೃದಯವನ್ನೇ ನಾವು ಸರಿಪಡಿಸಬೇಕು. ಅದಕ್ಕೆ ಧ್ಯಾನವೇ ದಾರಿ’ ಎನ್ನುವ ತತ್ವವನ್ನು ಸದಾ ಪ್ರತಿಪಾದಿಸುತ್ತಿದ್ದರು. ತಾವು ಗಳಿಸಿದ್ದೆಲ್ಲವನ್ನೂ ಸದ್ದಿಲ್ಲದೆ ಸಮುದಾಯಕ್ಕಾಗಿ ವಿನಿಯೋಗಿಸಿದರು.ಅವರ ಪ್ರೇಮದ ಲಾಭ ಪಡೆದವರು ರಾಜ್ಯದೆಲ್ಲೆಡೆ ಇದ್ದಾರೆ. ವಾಕಿಂಗ್‌ಗೆ ಹೋಗಿದ್ದಾರೋ ಏನೋ ಎಂಬುವಷ್ಟು ಸುಲಭವಾಗಿ ಅವರು ಇಹದ ಬದುಕಿಗೇ ವಿದಾಯ ಹೇಳಿಬಿಟ್ಟಿದ್ದಾರೆ. ಆ ಆಳವಾದ ಕಣ್ಣು, ಮಂದಸ್ಮಿತ ವದನ ಮತ್ತೆ ಮತ್ತೆ ಕಣ್ಮುಂದೆ ಬಂದು ನಿಲ್ಲುತ್ತಿದೆ.ನ್ಯಾಯಮೂರ್ತಿ ವಿಠಲರಾವ್‌ ಇನ್ನಿಲ್ಲ

ಮೂಲತಃ ಕೊಪ್ಪಳ ಜಿಲ್ಲೆಯವರಾಗಿದ್ದ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಡಿ.ಆರ್‌. ವಿಠಲರಾವ್‌ (87) ಶುಕ್ರವಾರ ಸಂಜೆ ನಿಧನ ಹೊಂದಿದರು. ಇವರು ರಾಜ್ಯ ಗ್ರಾಹಕ  ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾಗಿಯೂ  ಸೇವೆ ಸಲ್ಲಿಸಿದ್ದರು. ಕೊಪ್ಪಳ ಜಿಲ್ಲೆಯ ಭಾಗ್ಯನಗರದಲ್ಲಿ ಶನಿವಾರ  ಅಂತ್ಯಕ್ರಿಯೆ ನಡೆಯಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.