ಭಾನುವಾರ, ಏಪ್ರಿಲ್ 11, 2021
33 °C

ನ್ಯಾಯಾಂಗ ಅಧಿಕಾರಿಗಳ ಸಮ್ಮೇಳನ ನಾಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: “ಇಂದಿನ ಮಾಹಿತಿ ತಂತ್ರಜ್ಞಾನದ ದಶಕದಲ್ಲಿ ಜನರಿಗೆ ತೀವ್ರ ಹಾಗೂ ಸರ್ವಸಮ್ಮತ ನ್ಯಾಯ ದೊರಕಿಸಲು ನ್ಯಾಯಾಂಗದ ಅಧಿಕಾರಿಗಳಲ್ಲಿ ಇರಬೇಕಾದ ನ್ಯಾಯ ಕೌಶಲಗಳ ಕುರಿತು ಚರ್ಚಿಸಲು ಇಲ್ಲಿನ ಸತ್ತೂರಿನ ಎಸ್‌ಡಿಎಂ ವೈದ್ಯಕೀಯ ಕಾಲೇಜಿನ ಆವರಣದ ಡಾ. ಡಿ.ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಮಾ. 12 ಹಾಗೂ 13ರಂದು ಸಮ್ಮೇಳನ ಆಯೋಜಿಸಲಾಗಿದೆ. ಕರ್ನಾಟಕ ರಾಜ್ಯ ನ್ಯಾಯಾಂಗದ ಅಧಿಕಾರಿಗಳ ಸಂಘದ 15ನೇ ದ್ವೈವಾರ್ಷಿಕ ಸಮ್ಮೇಳನ ಇದಾಗಿದೆ” ಎಂದು ಸಂಘದ ಅಧ್ಯಕ್ಷ, ನ್ಯಾಯಾಧೀಶ ಐ.ಎಸ್.ಆಂಟಿನ್ ತಿಳಿಸಿದರು.ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ನ್ಯಾಯಾಂಗ ಅಧಿಕಾರಿಗಳ ಈ ಸಮ್ಮೇಳನವನ್ನು 12 ರಂದು ಬೆಳಿಗ್ಗೆ 10.30ಕ್ಕೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೆಹರ್ ಉದ್ಘಾಟಿಸುವರು ಎಂದು ತಿಳಿಸಿದರು. ‘ಕಾನೂನು ಸಚಿವ ಎಸ್.ಸುರೇಶಕುಮಾರ ಸಮಾರಂಭದ ಅಧ್ಯಕ್ಷತೆ ವಹಿಸುವರು. ನ್ಯಾಯಮೂರ್ತಿಗಳಾದ ಮಂಜುಳಾ ಚೆಲ್ಲೂರ, ಕೆ.ಶ್ರೀಧರರಾವ್ ಗೌರವಾನ್ವಿತ ಅತಿಥಿಗಳಾಗಿರುವರು. 13ರಂದು ಮಧ್ಯಾಹ್ನ 3ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು ನ್ಯಾಯಮೂರ್ತಿ ಕೆ.ಎಲ್.ಮಂಜುನಾಥ ಸಮಾರೋಪ ಭಾಷಣ ಮಾಡುವರು. ನ್ಯಾಯಮೂರ್ತಿ ಡಿ.ವಿ.ಶೈಲೇಂದ್ರಕುಮಾರ ಅಧ್ಯಕ್ಷತೆ ವಹಿಸುವರು. ಗೌರವಾನ್ವಿತ ಅತಿಥಿಯಾಗಿ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಆಗಮಿಸುವರು ಎಂದು ವಿವರಿಸಿದರು.ಸಮ್ಮೇಳನದಲ್ಲಿ ನ್ಯಾಯ ಒದಗಿಸುವಿಕೆಯನ್ನು ತ್ವರಿತಗೊಳಿಸುವ ನಿಟ್ಟಿನಲ್ಲಿ ಜಿಲ್ಲಾಮಟ್ಟದಿಂದ ಕೆಳಸ್ತರದ ಎಲ್ಲ ನ್ಯಾಯಾಧೀಶರು ಹಾಗೂ ಅಧಿಕಾರಿಗಳನ್ನು ಸನ್ನದ್ಧಗೊಳಿಸುವ ಬಗ್ಗೆ ಚರ್ಚೆ ನಡೆಯಲಿದೆ. ಉಚಿತ ಕಾನೂನು ನೆರವು, ಗುಣಾತ್ಮಕ ನ್ಯಾಯದಾನ, ವೈಜ್ಞಾನಿಕ ಸಂಗತಿಗಳು ಹಾಘೂ ಸಾಕ್ಷಿಗಳನ್ನು ಪರಿಗಣಿಸುವ ಕುರಿತಂತೆ ಮಾಹಿತಿ ವಿನಿಮಯ, ಜನರಲ್ಲಿ ಕಾನೂನು ಕುರಿತ ಜಾಗೃತಿ ಹೆಚ್ಚಿಸಲು ಹಳ್ಳಿ ಹಳ್ಳಿಗಳಲ್ಲಿ ಕಾನೂನು ಸಾಕ್ಷರತೆ ಆಂದೋಲನ ರೂಪಿಸುವ ಅಗತ್ಯ ಕುರಿತು ಚರ್ಚೆ ನಡೆಯಲಿದೆ ಎಂದರು.ನೊಂದವರಿಗೆ ತ್ವರಿತ ಪರಿಹಾರ ನೀಡಲು ಕೌಟುಂಬಿಕ ನಿಯಮಗಳಲ್ಲಿ ಬದಲಾವಣೆ ತರಲಾಗಿದ್ದು, ಗೃಹಕೃತ್ಯದ ಹಿಂಸೆಗೆ ತಡೆ ಹಾಕುವ ಬಿಗಿಯಾದ ಕ್ರಮ ಜಾರಿಗೆ ತರಲಾಗಿದೆ. ಅದೇ ರೀತಿ ಸರ್ಕಾರಿ ಅಧಿಕಾರಿ, ಸಿಬ್ಬಂದಿ, ಚುನಾಯಿತ ಪ್ರತಿನಿಧಿಗಳ ಭ್ರಷ್ಟಾಚಾರ ತಡೆಗೆ ಕಾನೂನು, ಅದರ ವಿಶೇಷ ಪ್ರಕರಣಗಳ ಕುರಿತು ನ್ಯಾಯದಾನ ಸಂದರ್ಭದಲ್ಲಿ ಉಂಟಾಗುವ ಅನವಶ್ಯಕ ಸಂಗತಿಗಳನ್ನು ತೆಗೆದುಹಾಕುವುದು, ಪರಿಣಾಮಕಾರಿ ನ್ಯಾಯ ನೀಡಲು 1860ರಲ್ಲಿ ರೂಪಿತವಾದ ಪೆನಲ್ ನಿಯಮಾವಳಿಗಳಲ್ಲಿ ಬದಲಾವಣೆ ತರುವ ಕುರಿತು ಸಮ್ಮೇಳನದಲ್ಲಿ ಚರ್ಚಿಸಲಾಗುವುದು.ಸೈಬರ್ ಅಪರಾಧ ಸೇರಿದಂತೆ ಮತ್ತಿತರ ವಿಷಯಗಳ ಬಗ್ಗೆಯೂ ಚರ್ಚೆ ನಡೆಯಲಿದೆ. ಸಮ್ಮೇಳನದಲ್ಲಿ ಸ್ವೀಕರಿಸುವ ಗೊತ್ತುವಳಿಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಹೇಳಿದರು.

ಸಮ್ಮೇಳನದಲ್ಲಿ ನ್ಯಾಯಾಂಗಕ್ಕೆ ಸಂಬಂಧಿತ ಒಟ್ಟು 9 ವಿಷಯಗಳ ಬಗ್ಗೆ ಗೋಷ್ಠಿಗಳು ನಡೆಯಲಿವೆ. ರಾಜ್ಯದ 789 ಜನ ಪ್ರತಿನಿಧಿಗಳು ಭಾಗವಹಿಸುವರು ಎಂದು ತಿಳಿಸಿದರು. ಸಂಘದ ಕಾರ್ಯದರ್ಶಿ ಹಾಗೂ ನ್ಯಾಯಾಧೀಶ ಎಂ.ಮಹದೇವಯ್ಯ, ಜಿಲ್ಲಾ ನ್ಯಾಯಾಧೀಶ ಕೆ.ನಟರಾಜನ್, ನ್ಯಾಯಾಧೀಶ ಬಿರಾದಾರ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.