ಗುರುವಾರ , ಜನವರಿ 23, 2020
20 °C

ನ್ಯಾ. ಗಂಗೂಲಿ ಅಸಭ್ಯ ವರ್ತನೆ: ಸಮಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ್ಯಾ. ಗಂಗೂಲಿ ಅಸಭ್ಯ ವರ್ತನೆ: ಸಮಿತಿ

ನವದೆಹಲಿ (ಪಿಟಿಐ): ಕಾನೂನು ತರಬೇತಿ ವಿದ್ಯಾರ್ಥಿನಿ­ ಜತೆ  ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯ­ಮೂರ್ತಿ ಎ.ಕೆ. ಗಂಗೂಲಿ ಅವರು ಲೈಂಗಿಕವಾಗಿ ಅಸ­ಭ್ಯ ವರ್ತನೆ ತೋರಿರು­ವುದನ್ನು ಸುಪ್ರೀಂ ಕೋರ್ಟ್‌ನ ಸಮಿತಿ ದೃಢಪಡಿಸಿದೆ.ನ್ಯಾ. ಗಂಗೂಲಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದ ತಕ್ಷಣ ತನಿಖೆಗಾಗಿ ನೇಮಿಸಲಾಗಿದ್ದ ಮೂವರು ನ್ಯಾಯ­ಮೂರ್ತಿಗಳ­ನ್ನು ಒಳಗೊಂಡ ಸಮಿತಿಯು, ನಿವೃತ್ತ ನ್ಯಾಯ­ಮೂರ್ತಿ ಅವರ ವರ್ತನೆ  ‘ಅಸಭ್ಯ­ವಾದದ್ದು ಮತ್ತು ಲೈಂಗಿಕ ಸ್ವರೂಪದ್ದು’ ಎಂಬುದು ಮೇಲ್ನೋ­ಟಕ್ಕೆ ಸಾಬೀತಾಗಿದೆ ಎಂದು ಹೇಳಿದೆ.ಆದರೆ, ಕಳೆದ ವರ್ಷದ ಡಿಸೆಂಬರ್‌ 24ರಂದು ಈ ಘಟನೆ ನಡೆದ ಸಂದರ್ಭ­ದಲ್ಲಿ ನ್ಯಾ. ಗಂಗೂಲಿ ಅವರು ಸೇವೆಯಿಂದ ನಿವೃತ್ತರಾಗಿದ್ದರಿಂದ ಅವರ ವಿರುದ್ಧ ಸುಪ್ರೀಂ ಕೋರ್ಟ್‌ ಯಾವುದೇ ರೀತಿಯ ಕ್ರಮ ಕೈಗೊಳ್ಳುವ ಅಗತ್ಯವಿಲ್ಲ ಎಂದು ಸಮಿತಿ ತಿಳಿಸಿದೆ.‘ತರಬೇತಿ ವಿದ್ಯಾರ್ಥಿನಿ ನೀಡಿರುವ ಮೌಖಿಕ ಹಾಗೂ ಲಿಖಿತ ಹೇಳಿಕೆ­ಗಳನ್ನು, ಆಕೆ ಉಲ್ಲೇಖಿಸಿರುವ ಮೂವರು ಸಾಕ್ಷಿಗಳು ನೀಡಿರುವ ಪ್ರಮಾಣ­ಪತ್ರಗಳನ್ನು ಮತ್ತು  ಗಂಗೂಲಿ ಅವರ ಹೇಳಿಕೆಗಳನ್ನು ಕೂಲಂ­ಕಷವಾಗಿ ಪರಿಶೀಲಿಸಿದ್ದೇವೆ. 2012ರ ಡಿ.24ರಂದು  ವಿದ್ಯಾರ್ಥಿನಿಯು, ಗಂಗೂಲಿ ಅವರ ಕೆಲಸಕ್ಕೆ ನೆರವಾಗಲು ಅವರು ತಂಗಿದ್ದ ಹೋಟೆಲ್‌ ಲಿ ಮೆರಿಡಿಯನ್‌ಗೆ ಭೇಟಿ ನೀಡಿದ್ದು ದೃಢಪಟ್ಟಿದೆ. ಸ್ವತಃ ಗಂಗೂಲಿ ಅವರು ಕೂಡ ಇದನ್ನು ಒಪ್ಪಿಕೊಂಡಿ­ದ್ದಾರೆ’ ಎಂದು ಸಮಿತಿ ವರದಿಯಲ್ಲಿ ಹೇಳಿದೆ.‘ನಂತರ ವಿದ್ಯಾರ್ಥಿನಿ ನೀಡಿದ ಮೌಖಿಕ ಹಾಗೂ ಲಿಖಿತ ಹೇಳಿಕೆಗಳನ್ನು ಪರಿಶೀಲಿಸಿದಾಗ, ಆ ದಿನ ಲಿ ಮೆರಿಡಿ­ಯನ್‌ ಹೋಟೆಲ್‌ನ ಕೋಣೆಯಲ್ಲಿ ರಾತ್ರಿ 8.30ರಿಂದ 10.30ರ ನಡುವಣ ಅವಧಿಯಲ್ಲಿ ಆಕೆಯೊಂದಿಗಿನ ಗಂಗೂಲಿ ಅವರ ವರ್ತನೆ ‘ಲೈಂಗಿಕವಾಗಿ ಅಸಭ್ಯತೆಯ ಸ್ವರೂಪದ್ದು’ ಎಂಬುದು ಮೇಲ್ನೋಟಕ್ಕೆ ತಿಳಿದು ಬಂದಿದೆ’ ಎಂದು ಸಮಿತಿಯ ವರದಿಯಲ್ಲಿ ಹೇಳಲಾಗಿದೆ.

ಈ ಸಂಬಂಧ, ಮುಖ್ಯ ನ್ಯಾಯ­ಮೂರ್ತಿ ಪಿ. ಸದಾಶಿವಂ ಅವರು ಬಿಡುಗಡೆ ಮಾಡಿರುವ ವರದಿ ಆರೋಪ ಮಾಡಿರುವ ವಿದ್ಯಾರ್ಥಿನಿಯ ಹೆಸರನ್ನು ಬಹಿರಂಗ ಪಡಿಸಿದ್ದರೂ ಕಾನೂನಿನ ಅಗತ್ಯಗಳನ್ನು ಮನಗಂಡು ಮತ್ತು ಮಾಧ್ಯಮ ನೀತಿಯ ಅನುಸಾರವಾಗಿ ಸುದ್ದಿ ಸಂಸ್ಥೆಯು ಆಕೆಯ ಹೆಸರನ್ನು ಬಹಿರಂಗಗೊಳಿಸಿಲ್ಲ.ಕ್ರಮ ಕೈಗೊಳ್ಳುವ ಅಗತ್ಯವಿಲ್ಲ: ದೂರು ನೀಡಿರುವ ತರಬೇತಿ ವಿದ್ಯಾರ್ಥಿನಿಯು ಸುಪ್ರೀಂ ಕೋರ್ಟ್‌ನ ಅಧೀನದಲ್ಲಿ ತರಬೇತಿ ಪಡೆಯುತ್ತಿರಲಿಲ್ಲ­ವಾದ್ದರಿಂದ ಮತ್ತು ಘಟನೆ ನಡೆದಾಗ ಗಂಗೂಲಿ ಅವರು ಸೇವೆಯಿಂದ ನಿವೃತ್ತ­ರಾಗಿದ್ದ­ರಿಂದ ನ್ಯಾಯಾಲಯವು ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವ ಅಗತ್ಯವಿಲ್ಲ ಎಂದು ಮುಖ್ಯ ನ್ಯಾಯ­ಮೂರ್ತಿ ಪಿ. ಸದಾಶಿವಂ ಹೇಳಿದ್ದಾರೆ.ಲೈಂಗಿಕ ಕಿರುಕುಳ ನೀಡಿರುವ ಆರೋಪಕ್ಕೆ ಸಂಬಂಧಿಸಿದಂತೆ ನವೆಂಬರ್‌ 12ರಂದು ಮಾಧ್ಯಮ­ಗಳಲ್ಲಿ ವರದಿಗಳು ಪ್ರಕಟಗೊಂಡ ಹಿನ್ನೆಲೆ­ಯಲ್ಲಿ  ನ್ಯಾಯ­ಮೂರ್ತಿ­ಗಳಾದ ಆರ್‌.ಎಂ. ಲೋಧಾ, ಎಚ್‌.ಎಲ್‌. ದತ್ತು ಹಾಗೂ ರಂಜನಾ ಪ್ರಕಾಶ್‌ ದೇಸಾಯಿ ಅವರನ್ನೊಳ­ಗೊಂಡ ಮೂವರು ಸದಸ್ಯರ ಸಮಿತಿ­ಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಸದಾಶಿವಂ ರಚಿಸಿದ್ದರು.ಇಡೀ ದೇಶವು ಡಿಸೆಂಬರ್‌ 16ರ ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಗ್ಗೆ ಚರ್ಚಿಸುತ್ತಿರುವಾಗ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯ­ಮೂರ್ತಿಯೊಬ್ಬರಿಂದ ತನಗೆ ಆಘಾತ­ಕಾರಿ ಅನುಭವವಾಗಿತ್ತು ಎಂದು ಕಾನೂನು ತರಬೇತಿ ವಿದ್ಯಾರ್ಥಿನಿ ಗಂಗೂಲಿ ಅವರ ಹೆಸರನ್ನು ಉಲ್ಲೇಖಿಸದೆ ತನ್ನ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಳು.ರಾಜೀನಾಮೆಗೆ ಒತ್ತಡ, ಕ್ರಮಕ್ಕೆ ಆಗ್ರಹ:  ಗಂಗೂಲಿ ಅವರ ವಿರುದ್ಧ ಕ್ರಮಕೈಗೊಳ್ಳು­ವಂತೆ ಆಗ್ರಹಿಸಿ ಕೋಲ್ಕತ್ತದ ಎನ್‌ಜಿಒ ಒಂದು ಪೊಲೀಸರಿಗೆ ಪತ್ರ ಬರೆದಿದೆ.ಇತ್ತ, ಗಂಗೂಲಿ ಅವರು ರಾಜ್ಯ ಮಾನವ ಹಕ್ಕುಗಳ ಆಯೋಗದ ಮುಖ್ಯಸ್ಥನ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್‌, ತೃಣಮೂಲ ಕಾಂಗ್ರೆಸ್‌ನ ಹಲವು ಸಂಸದರು ಆಗ್ರಹಿಸಿದ್ದಾರೆ.ಆದರೆ, ರಾಜೀನಾಮೆ ಬೇಡಿಕೆಯನ್ನು ತಳ್ಳಿ ಹಾಕಿರುವ ಗಂಗೂಲಿ, ‘ನಾನು ಇನ್ನೂ ಆ ಬಗ್ಗೆ ನಿರ್ಧಾರ ಕೈಗೊಂಡಿಲ್ಲ. ಅದರ ಕುರಿತಾಗಿ ಯೋಚಿಸಲು ಸಮಯವೂ ಬಂದಿಲ್ಲ’ ಎಂದು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)