ಬುಧವಾರ, ಏಪ್ರಿಲ್ 14, 2021
29 °C

ನ್ಯೂ ಏಜ್ ಲಕ್ಷ್ಮಿಯರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತೀಯ ಪುರಾಣಗಳಲ್ಲಿ ‘ಲಕ್ಷ್ಮಿ’ ಐಶ್ವರ್ಯದ ದೇವತೆ. ‘ಲಕ್ಷ್ಮಿ ಕಾಲು ಮುರಿದುಕೊಂಡು ಮನೆಯಲ್ಲಿ ಬಿದ್ದಿದ್ದಾಳೆ’ ಎಂಬಂತಹ ನುಡಿಗಟ್ಟನ್ನು ಸಿರಿವಂತರ ಐಶ್ವರ್ಯವನ್ನು ಬಣ್ಣಿಸಲು ಈಗಲೂ ಬಳಸಲಾಗುತ್ತದೆ.ತೆರೆಗಳಿಲ್ಲದ ಕೊಳದಲ್ಲಿ ಅರಳಿದ ತಾವರೆಯ ಮೇಲೆ ನಿಂತ ಸರ್ವಾಲಂಕಾರಭೂಷಿತೆ ಲಕ್ಷ್ಮಿ ತನ್ನ ಹಸ್ತದಿಂದ ಚಿಮ್ಮಿಸುತ್ತಿರುವ ಚಿನ್ನದ ನಾಣ್ಯಗಳ ಚಿತ್ರ ಭಾರತೀಯರ ಮನಗಳಲ್ಲಿ ಅಚ್ಚೊತ್ತಿದೆ. ತಾನು ಸೃಷ್ಟಿಸಿರದ ನಾಣ್ಯಗಳನ್ನು ಸುರಿಯುತ್ತಿರುವ, ಗೋಡೆಯಲ್ಲಿ ಸ್ಥಾಯಿಯಾದ ಈ ಕ್ಯಾಲೆಂಡರ್ ಚಿತ್ರ, ಸಂಪತ್ತು ಸೃಷ್ಟಿಯ ಪಿತೃಪ್ರಧಾನ ಸ್ವರೂಪ ಹಾಗೂ ನಿಯಂತ್ರಣಗಳಿಗೆ ಬೆದರಿಕೆ ಆಗಿರಲಿಲ್ಲ.ಆದರೆ ಲಕ್ಷ್ಮಿ ಸ್ಥಾಯಿಯಾಗಿ ನೆಲೆಸಿದ್ದ ಕೊಳದಲ್ಲಿ ನಿಧಾನವಾಗಿ ತೆರೆಗಳೆದ್ದವು. ಇವು ದೊಡ್ಡ ಅಲೆಗಳಾದಾಗ ಪಾದಗಳು ಕೊಚ್ಚಿಹೋದವು. ಕೊಳ ತೊರೆದು ವಾಸ್ತವ ಜಗತ್ತಿಗೆ ಕಾಲಿಟ್ಟಳಾಕೆ. ಪುರಾಣ ಮತ್ತು ವಾಸ್ತವ ವಿಲೀನಗೊಂಡಿತು. ಈ 21ನೇ ಶತಮಾನದ ‘ಲಕ್ಷ್ಮಿ’ ಸಂಪತ್ತಿನ ಸೃಷ್ಟಿಕರ್ತಳು ಮಾತ್ರವಲ್ಲ; ಸಮಾಜದಲ್ಲಿ ಸಕ್ರಿಯವಾಗಿರುವಾಕೆ.ಲ್ಯಾಪ್‌ಟಾಪ್ ಹೊತ್ತು, ಸೆಲ್ ಫೋನ್ ಹಿಡಿದು, ಹೆಣ್ತನದ ಗುಣವಿಶೇಷಗಳನ್ನು ಪ್ರದರ್ಶಿಸುತ್ತಾ ಜಗತ್ತು ಸುತ್ತುವವಳು.ಆಕೆ ಸರಹದ್ದುಗಳನ್ನು ದಾಟಿದ  ‘ಲಕ್ಷ್ಮಿ’. ಹೊಸ ಯುಗದ ಈ  ‘ಲಕ್ಷ್ಮಿ’ಯರನ್ನು ಬೆಂಗಳೂರು ಮೂಲದ ಲೇಖಕಿ ಗೀತಾ ಅರವಾಮುದನ್ ತಮ್ಮ  ‘ಅನ್‌ಬೌಂಡ್: ಇಂಡಿಯನ್ ವಿಮೆನ್@ ವರ್ಕ್’ (ಪೆಂಗ್ವಿನ್ ಪ್ರಕಾಶನ, 2010) ಪುಸ್ತಕದಲ್ಲಿ ಅನಾವರಣಗೊಳಿಸಿದ್ದಾರೆ.  ಉದ್ಯೋಗ ಮಾರುಕಟ್ಟೆ ಪ್ರವೇಶಿಸಿದ ಭಾರತೀಯ ಮಹಿಳೆಯರ ಮೊದಲ ಪೀಳಿಗೆ, ಮದುವೆಯಾದರೆ ಅಥವಾ ಗರ್ಭಿಣಿಯಾದರೆ ಉದ್ಯೋಗ ಕಳೆದುಕೊಳ್ಳಬೇಕಾದಂತಹ ಸ್ಥಿತಿ ಇತ್ತು. ಈ ಸರಹದ್ದುಗಳಾಚೆಗೆ ಆಕೆಯ ಬಿಡುಗಡೆ ನಿಧಾನವಾದ ಪ್ರಕ್ರಿಯೆ ಆಗಿತ್ತು. ಇದಕ್ಕಾಗಿ ಹಲವಾರು ವರ್ಷಗಳ ಹೋರಾಟಗಳು, ಕಾನೂನು ಸಮರಗಳು, ಜೊತೆ ಜೊತೆಗೇ ಲಿಂಗ ಸಂವೇದನಾಶೀಲತೆ ಮೂಡಿಸುವ ಪ್ರಯತ್ನಗಳೆಲ್ಲಾ ಅಲ್ಲಿದ್ದವು. ಆರಂಭದ ಸ್ತ್ರೀವಾದಿಗಳು ಹೋರಾಡಿದ್ದಂತಹ ಅನೇಕ ಮೂಲ ವಿಚಾರಗಳು, ಹೊಸ ಸಹಸ್ರಮಾನದ ಉದಯದೊಂದಿಗೆ ಹಿನ್ನೆಲೆಗೆ ಸರಿದವು. 1990ರ ದಶಕದ ಅಂತ್ಯದಲ್ಲಿ ಮಹಿಳೆಯರಿಗೆ ಉದ್ಯೋಗದ ಅವಕಾಶಗಳು ಬಹಳ ದೊಡ್ಡ ಮಟ್ಟದಲ್ಲಿ ತೆರೆದುಕೊಂಡಿದ್ದಂತೂ ಹೌದು. ಈ ಹೊಸ ಉದ್ಯೋಗಗಳು ‘ಪಾರಂಪರಿಕ ಕೆಲಸ’ ಆಗಿರಲಿಲ್ಲ ಅಥವಾ ‘ಪುರುಷ ಪ್ರಾಧಾನ್ಯ ಕೋಟೆ’ಗಳೂ ಆಗಿರಲಿಲ್ಲ. ಹೊಸ ವೃತ್ತಿಗಳಲ್ಲಿ ಜೆಂಡರ್ ಅಪ್ರಸ್ತುತ ಆಗಿತ್ತು. ಹೊಸ ತಂತ್ರಜ್ಞಾನದಿಂದಾಗಿ ತೆರೆದುಕೊಂಡಂತಹ ಕಾಲ್ ಸೆಂಟರ್‌ಗಳು, ಸಾಫ್ಟ್‌ವೇರ್ ಕಂಪೆನಿಗಳು, ಬಯೊಟೆಕ್ನಾಲಜಿ, ನ್ಯೂ ಏಜ್ ಮಾಧ್ಯಮಗಳು, ಮನರಂಜನಾ ಉದ್ಯಮ....ಹೀಗೆ ಹಲವು ಆಯ್ಕೆಗಳು ಮಹಿಳೆಗೆ ತೆರೆದುಕೊಂಡವು. ಹೆಚ್ಚಿನ ಹಣ ಸಂಪಾದನೆ, ಹೊಸ ಬಗೆಯ ಜೀವನ ಶೈಲಿಗಳಿಗೂ ಈ ಉದ್ಯೋಗಗಳು ಕಾರಣವಾದವು.‘ಈ ಉದ್ಯೋಗಗಳನ್ನು ನೀಡಿದ ಅನೇಕ ಕಂಪೆನಿಗಳಲ್ಲಿ ಜೆಂಡರ್ ಸಂವೇದನಾಶೀಲತೆಯೂ ಕಂಪೆನಿಗಳ ನೀತಿಯ ಭಾಗವಾಗಿದ್ದರಿಂದಾಗಿ  ತಮ್ಮ ವೃತ್ತಿಗಳಲ್ಲಿ ಅನೇಕ ಮಹಿಳೆಯರು ತ್ವರಿತವಾಗಿ ಮೇಲೇರಿದರು. ಹೆಚ್ಚು ಹೆಚ್ಚು ವೇತನ ಗಳಿಸತೊಡಗಿದರು. ಹೆಚ್ಚು ಹೆಚ್ಚು ಜಗತ್ತು ಸುತ್ತ ತೊಡಗಿದರು. ಜೊತೆಗೇ ಹಿಂದೆಂದಿಗಿಂತಲೂ ಹೆಚ್ಚಿನ ಒತ್ತಡಗಳಿಗೆ ಸಿಲುಕಿದರು’ ಎಂದು ಬರೆಯುತ್ತಾರೆ ಗೀತಾ ಅರವಾಮುದನ್.ಹೆಣ್ಣು ಭ್ರೂಣ ಹತ್ಯೆಯನ್ನು ಕುರಿತಂತೆ ಗೀತಾ ಅರವಾಮುದನ್ ಅವರು ‘ಡಿಸಪಿಯರಿಂಗ್ ಡಾಟರ್ಸ್’ ಎಂಬಂತಹ ಪುಸ್ತಕವನ್ನು 2007ರಲ್ಲಿ ಪೆಂಗ್ವಿನ್ ಪ್ರಕಾಶನಕ್ಕಾಗಿ ಬರೆದಿದ್ದರು. ಹೆಣ್ಣು ಭ್ರೂಣ ಹತ್ಯೆ ಮಧ್ಯಮ ವರ್ಗ ನಡೆಸುವಂತಹ ಘೋರ ಅಪರಾಧ. ಈ ಪುಸ್ತಕ ರಚನೆಗಾಗಿ ರಾಷ್ಟ್ರದಾದ್ಯಂತ ಓಡಾಡಿ ಮಾಹಿತಿಗಳನ್ನು ಕಲೆ ಹಾಕಿದ್ದ ಗೀತಾ ಅವರಿಗೆ ಸುಶಿಕ್ಷಿತ ಕುಟುಂಬಗಳೂ ಹೆಣ್ಣುಮಕ್ಕಳನ್ನು ಹೊರೆಯೆಂದು ಪರಿಗಣಿಸುವುದು ಕಂಡು ನೋವಾಗಿತ್ತು. ಹಾಗಿದ್ದಲ್ಲಿ ವಿದ್ಯಾವಂತ ಹೆಣ್ಣುಮಕ್ಕಳು ಹಾಗೂ ಅವರ ಕೆರಿಯರ್‌ಗಳು ಸಮಾಜಕ್ಕೆ ಉಪಯೋಗಕಾರಿ ಆಗಿಯೇ ಇಲ್ಲವೆ? ಎಂಬಂತಹ ಪ್ರಶ್ನೆಯನ್ನು ಅವರಲ್ಲಿ ಹುಟ್ಟುಹಾಕಿತ್ತು. ಇದು ಹೊಸ ಹೊಸ ಬಗೆಯ ವೃತ್ತಿಗಳಲ್ಲಿ ತೊಡಗಿಕೊಂಡು  ಹೆಚ್ಚಿನ ಹಣ ಸಂಪಾದಿಸುತ್ತಾ ಯಶಸ್ವಿಯಾಗಿರುವ ಮಹಿಳೆಯರ ಕಥೆಗಳನ್ನು ದಾಖಲಿಸುವ ಕೃತಿ ರಚನೆಗೆ ಪ್ರೇರಣೆಯಾಯಿತು ಎನ್ನುತ್ತಾರೆ ಅವರು.ಈ ಕೃತಿ ರಚನೆಗಾಗಿ ರಾಷ್ಟ್ರದಾದ್ಯಂತ ಓಡಾಡಿ ಸುಮಾರು 150 ಮಹಿಳೆಯರನ್ನು ಗೀತಾ ಅರವಾಮುದನ್ ಸಂದರ್ಶಿಸಿದ್ದಾರೆ. ಆದರೆ ಸುಮಾರು 30 ರಿಂದ 40 ಮಹಿಳೆಯರ ದನಿಗಳು ಈ ಪುಸ್ತಕದಲ್ಲಿ ದಾಖಲಾಗಿವೆ.ಕೆಲವು ಪುರುಷರ ದನಿಗಳೂ ಇಲ್ಲಿವೆ. ಕೆಲವರ ಹೆಸರನ್ನು ಮಾತ್ರ ಅವರ ಖಾಸಗಿತನ ಗೌರವಿಸಲು ಮರೆಮಾಚಲಾಗಿದೆ.ವೃತ್ತಿ ಬದುಕು, ಸೋಲು - ಗೆಲುವು, ಮದುವೆ, ಕುಟುಂಬ, ಪ್ರೇಮ ಸಂಬಂಧಗಳು - ಈ ಎಲ್ಲಾ ಸಂಗತಿಗಳು ಇಲ್ಲಿ ಅನಾವರಣಗೊಂಡಿವೆ. ಹೀಗಾಗಿ ಇಂದಿನ  ‘ವೃತ್ತಿಪರ ಮಹಿಳೆ’ಯರ ಸಾಹಸಮಯ ಹೊಸ ವಿಶ್ವವನ್ನೇ ಈ ಪುಸ್ತಕ ನಮ್ಮೆದುರು ಕಡೆದು ನಿಲ್ಲಿಸುತ್ತದೆ. ದುಡಿಯುವ ಸ್ಥಳದಲ್ಲಿ ಲೈಂಗಿಕ ಕಿರುಕುಳವನ್ನು ಐಟೆಮ್ ಗರ್ಲ್ ಹೇಗೆ ನಿಭಾಯಿಸುತ್ತಾಳೆ? ಭಾರಿ ವೇತನ ಪಡೆಯುವ ಮಹಿಳಾ ಸಾಫ್ಟ್‌ವೇರ್ ಎಂಜಿನಿಯರ್ ವರದಕ್ಷಿಣೆ ಕೊಡಬೇಕೇಕೆ? ಬ್ರೆಸ್ಟ್ ಪಂಪ್‌ಗಳು (ಮೊಲೆ ಹಾಲು ಶೇಖರಿಸಿಡುವ ಸಾಧನ)....ಬ್ಲಾಕ್‌ಬೆರಿ ಫೋನ್‌ಗಳು ಒಟ್ಟೊಟ್ಟಿಗೆ ಸಾಗುವುದು ಸಾಧ್ಯವೆ? ಕೆರಿಯರ್‌ನತ್ತ ಮಹಿಳೆ ಗಮನ ಕೇಂದ್ರೀಕರಿಸಿದಲ್ಲಿ ಹೆಂಡತಿಯಾಗಿ, ತಾಯಿಯಾಗಿ ಅವಳು ವಿಫಲಳಾಗುತ್ತಾಳೆಯೆ? ‘ಪುರುಷ ಮಾದರಿ’ಗಿಂತ ಭಿನ್ನವಾದ  ‘ಸಾಧನೆಯ ಮಹಿಳಾ ಮಾದರಿ’ ಎಂಬುದಿದೆಯೆ? ಈ ಎಲ್ಲಾ ಪ್ರಶ್ನೆಗಳು ಈ ಪುಸ್ತಕದಲ್ಲಿ ದನಿ ಪಡೆಯುತ್ತಲೇ ಉತ್ತರಗಳನ್ನು ಅರಸುವ ಪ್ರಯತ್ನವನ್ನು ಈ ಪುಸ್ತಕ ಮಾಡುತ್ತದೆ.ನ್ಯೂಸ್ ರೂಂಗಳು ಪುರುಷಕೋಟೆ ಆಗಿರುವಂತಹ ಕಾಲ ಇದಲ್ಲ. 1990ರ ದಶಕದಲ್ಲಿ ಖಾಸಗಿ ಬಂಡವಾಳಕ್ಕೆ ಟೆಲಿವಿಷನ್ ತೆರೆದುಕೊಂಡ ನಂತರ ಈ ವಲಯದಲ್ಲಿ ಮಹಿಳಾ ವೃತ್ತಿಪರರ ಪ್ರಮಾಣ ಗಣನೀಯವಾಗಿ ಹೆಚ್ಚಾಗಿರುವುದನ್ನು ಮೊದಲ ಅಧ್ಯಾಯದಲ್ಲೇ ಈ ಪುಸ್ತಕದಲ್ಲಿ ಗುರುತಿಸುತ್ತಾರೆ ಗೀತಾ ಅರವಾಮುದನ್.1970ರ ದಶಕದಲ್ಲಿ ಸ್ವಲ್ಪ ಕಾಲ ಸ್ವತಃ ತಾವೂ ಪತ್ರಕರ್ತೆಯಾಗಿ ಕೆಲಸ ಮಾಡಿದಾಗ ಇದ್ದ ಸಂದರ್ಭಕ್ಕೂ ಈಗ ಆಗಿರುವ ಬದಲಾವಣೆಗಳನ್ನೂ ಗೀತಾ ಅರವಾಮುದನ್ ಗುರುತಿಸುತ್ತಾರೆ.ಕಳೆದುಹೋದ ಈ ಅವಧಿಯಲ್ಲಿ ಹೆಚ್ಚು ಹೆಚ್ಚು ಮಹಿಳೆಯರು ಅಧಿಕಾರದ ಸ್ಥಾನಗಳಿಗೇರಿದಂತೆ ವರದಿಗಾರಿಕೆಯ ರಾಜಕೀಯ ಬದಲಾಗಿದೆ ಎನ್ನುತ್ತಾರೆ ಅವರು.ಜೆಂಡರ್ ದೃಷ್ಟಿಕೋನ ಎಂಬುದು ಅಂಗೀಕಾರಾರ್ಹ ಮಾತ್ರವಲ್ಲದೆ, ಮುಖ್ಯವಾಹಿನಿಯ ಮಾಧ್ಯಮ ವರದಿಗಾರಿಕೆಗೆ ಪ್ರಸ್ತುತವಾದ ವಾಸ್ತವವಾಗಿ ಅಪೇಕ್ಷಣೀಯವಾಗತೊಡಗಿತು.ಹೀಗಾಗಿಯೇ ಎನ್‌ಡಿಟಿವಿಯ ರಾಧಿಕಾ ಬೋರ್ಡಿಯಾ ‘ಮುಖ್ಯವಾಹಿನಿ ವರದಿಗಾರಿಕೆ ಎಂದರೆ ಬರೀ ರಾಜಕೀಯ ವರದಿಗಾರಿಕೆ ಅಲ್ಲ’ ಎಂದು ಪ್ರತಿಪಾದಿಸುತ್ತಾರೆ. ಟಿವಿ ವರದಿಗಾರಿಕೆಯ ಒತ್ತಡಗಳು ಸಂಕೀರ್ಣವಾದುದು.  ಒಳ್ಳೆಯ ಪತ್ರಕರ್ತೆಯಾಗುವುದರ ಜೊತೆಗೆ ದೃಶ್ಯ ಮಾಧ್ಯಮದಲ್ಲಿ ಮಹಿಳೆಯ ರೂಪ ಹಾಗೂ ‘ಗ್ರೂಮಿಂಗ್’ (ಅಂದಗೊಳಿಸಿಕೊಳ್ಳುವಿಕೆ) ಮುಖ್ಯವಾಗುವುದನ್ನೂ ರಾಧಿಕಾ ಪ್ರಸ್ತಾಪಿಸುತ್ತಾರೆ. ‘ಪುರುಷ ದಿಟ್ಟಿ (ಮೇಲ್ ಗೇಜ್) ‘ಅನಗತ್ಯ ತಲೆಹಾಕುವಿಕೆ’ ಎಂದು ಸ್ತ್ರೀವಾದಿಯಾಗಿ ನನಗನಿಸಬಹುದು. ಆದರೆ ಟಿವಿ ಪರ್ಸನಾಲಿಟಿಯಾಗಿ ನಾನಿದನ್ನು ಅನುಸರಿಸಲೇಬೇಕು. ಏಕೆಂದರೆ ಒಂದು ನಿರ್ದಿಷ್ಟ ಇಮೇಜ್‌ಗೆ ಹೊಂದಿಕೆ ಆಗಬೇಕಾದುದು ನನ್ನ ಉದ್ಯೋಗದ ಅಗತ್ಯ....ಟಿವಿ ಉದ್ಯಮ ಮಾತ್ರವಲ್ಲ. ಎಲ್ಲಾ ಕೆರಿಯರ್ ಮಹಿಳೆಯರೂ ಅಂದವಾಗಿ ಕಾಣಿಸಿಕೊಳ್ಳಬೇಕೆಂಬ ಒತ್ತಡಕ್ಕೆ ಸಿಲುಕಿದ್ದಾರೆ’ ಎಂದು  ರಾಧಿಕಾ ಹೇಳಿಕೊಳ್ಳುತ್ತಾರೆ.ವೈಧವ್ಯ, ವಿಚ್ಛೇದನಗಳಿಂದಾಗಿ ಮನೆ ನಿರ್ವಹಣೆಯ ಹೊಣೆ ಹೊತ್ತು ಕೆರಿಯರ್ ಲೋಕಕ್ಕೆ ಕಾಲಿರಿಸಿದ ಮಹಿಳೆಯರು ಎದುರಿಸುವ ಸವಾಲುಗಳು ಹಾಗೂ ಅವರು ಅದನ್ನು ನಿರ್ವಹಿಸಿದ ಬಗೆಗಳನ್ನೂ ಈ ಕೃತಿಯಲ್ಲಿ ನಿರೂಪಿಸಲಾಗಿದೆ.ಮನೆಗೆಲಸ ಮಾಡುವವರ ಕುಟುಂಬದ ಹಿನ್ನೆಲೆಯಿಂದ ಬಂದು ಈಗ ಕಾಲ್ ಸೆಂಟರ್ ಉದ್ಯೋಗಿಯಾಗಿ ಕೈ ತುಂಬಾ ಗಳಿಸುತ್ತಿರುವ ಸುಮತಿಯ ಜೊತೆ ಜೊತೆಗೇ ಟೆಸ್ಕೊ ಹಿಂದೂಸ್ತಾನ್ ಸರ್ವೀಸ್ ಸೆಂಟರ್‌ನ ಮಾಜಿ ಸಿ ಇ ಓ ಮೀನಾ ಗಣೇಶ್ ಹಾಗೂ ಬಯೋಕಾನ್ ಸಂಸ್ಥೆಯ ಕಿರಣ್ ಮಜುಂದಾರ್ ಷಾ, ತಮ್ಮ ಕೆರಿಯರ್‌ಗಳಲ್ಲಿ ಉತ್ತುಂಗ ಶಿಖರಕ್ಕೇರಿದ ಕಥಾನಕಗಳೂ ಇಲ್ಲಿವೆ. ಸಾಧನೆಯ ಮಹಿಳಾ ಮಾದರಿಗಳಾಗಿ ಹೊರಹೊಮ್ಮುತ್ತಾರೆ.ತಮಿಳು ಚಿತ್ರೋದ್ಯಮಲ್ಲಿ ಸೌಂಡ್ ಎಂಜಿನಿಯರ್ ಆಗಿ ಸುಮಾರು 15 ವರ್ಷಗಳ ಅನುಭವ ಪಡೆದ ಬೆಂಗಳೂರಿನ ಕನ್ನಡಿಗ ಮಹಿಳೆ ಗೀತಾ ಗುರಪ್ಪ ಅವರದ್ದು ವಿಭಿನ್ನ ಅನುಭವ. ಸರ್ವ ಪುರುಷಮಯ ಕೆಲಸದ ಪರಿಸರದಲ್ಲಿ ಕಾರ್ಯ ನಿರ್ವಹಿಸುವ ಗೀತಾಗೆ, ತನ್ನ ಕೆಲಸ ಎಷ್ಟು ಗಂಟೆಗೆ ಯಾವಾಗ ಮುಗಿಯಬಹುದು ಎಂಬುದೇ ಖಚಿತ ಇರುವುದಿಲ್ಲ.ಹೀಗಾಗಿಯೇ ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳಲು ತೊಂದರೆ ಇದ್ದರೆ, ಎರಡೂ ಮಕ್ಕಳನ್ನು ಉದ್ಯೋಗದ ಸ್ಥಳಕ್ಕೇ ಕರೆತರುತ್ತಾರೆ ಅವರು. ಈ ನಿಟ್ಟಿನಲ್ಲಿ ಅವರಿಗೆ ಸಿಕ್ಕಂತಹ ಪುರುಷ ಸಹೋದ್ಯೋಗಿಗಳ ಸಹಕಾರ ವಿಶಿಷ್ಟವಾದುದು.ಚೆನ್ನೈನಲ್ಲಿ ಗೀತಾ ಸೇರಿದಂತೆ ಮಹಿಳಾ ಸೌಂಡ್ ಎಂಜಿನಿಯರ್‌ಗಳ ಸಂಖ್ಯೆ ಕೇವಲ ಮೂರು. ‘ಇಷ್ಟು ವರ್ಷ ಈ ಕ್ಷೇತ್ರದಲ್ಲಿದ್ದರೂ ಆಕೆ ಈ ಕೆಲಸ ಮಾಡಬಲ್ಲಳೆ ಎಂದು ಕೆಲವು ಗ್ರಾಹಕರು ಅನುಮಾನಿಸುತ್ತಾರೆ. ನಾನು ಮಹಿಳೆ ಆಗಿರುವುದರಿಂದ ನನ್ನ ಜೊತೆ ಸಂವಹನ ಮಾಡುವುದೂ ಕೆಲವರಿಗೆ ಕಷ್ಟ’ ಎಂದೂ ಗೀತಾ ಗುರಪ್ಪ ಹೇಳುತ್ತಾರೆ.ಹೀಗಾಗಿಯೇ ‘ಮಹಿಳಾ ಸಹೋದ್ಯೋಗಿಗಳೊಡನೆ ಕೆಲಸ ಮಾಡುವುದು ಹೆಚ್ಚು ಆರಾಮದಾಯಕ ಎಂಬುದನ್ನು ನಾನು ಕಂಡುಕೊಂಡೆ. ರೇವತಿಯ ‘ಮಿತ್ರ್ ಮೈ ಫ್ರೆಂಡ್’ ಸಿನಿಮಾಗೆ ಕೆಲಸ ಮಾಡುತ್ತಿದ್ದಾಗ ನಮ್ಮದು ಪೂರ್ಣ ಮಹಿಳಾ ತಂಡವಾಗಿತ್ತು. ಅದು ಎಷ್ಟೊಂದು ರಿಲೀಫ್ ಎನ್ನಿಸಿತ್ತು. ಸಂವಹನ ಎಷ್ಟೊಂದು ಸುಲಭವಾಗಿತ್ತು. ನಾನೇನು ಕಳೆದುಕೊಂಡಿದ್ದೆ ಎಂಬುದು ನನಗೆ ಅರ್ಥವಾಗಿತ್ತು’ ಎನ್ನುತ್ತಾರೆ ಗೀತಾ ಗುರಪ್ಪ.ಮದುವೆ, ಮಕ್ಕಳ ಪಾಲನೆ ಪೋಷಣೆ - ಹಳೆಯ ಈ ಸಮಸ್ಯೆಗಳು ಮಹಿಳೆಗೆ ಈಗಲೂ ಇವೆ.ಮಕ್ಕಳನ್ನು ನೋಡಿಕೊಳ್ಳುವ ವಿಚಾರದಲ್ಲಿ ಪತ್ನಿಯನ್ನು ಬೆಂಬಲಿಸುವ ಪತಿ ಇದ್ದಲ್ಲಿ, ಪತಿಯ ಕೆರಿಯರ್ ರೂಪುರೇಷೆಯೂ ಬದಲಾಗಬಹುದು. ಇದಕ್ಕೆ ಉದಾಹರಣೆ, ಪತ್ನಿಯ ಕೆರಿಯರ್‌ಗಾಗಿ ತನ್ನ ಕೆರಿಯರ್ ದಿಕ್ಕು ಬದಲಿಸಿಕೊಳ್ಳಲು ಮುಕ್ತ ಮನ ಹೊಂದಿದಂತಹ ಜಾರ್ಜ್ ಜೋಸೆಫ್. ಹೊರದೇಶಗಳು ಅಥವಾ ಹೊರ ಊರುಗಳ ಅಸೈನ್‌ಮೆಂಟ್‌ಗಳಿಗಾಗಿ ಪತ್ನಿ ಪ್ರವಾಸದಲ್ಲಿದ್ದಾಗ, ತನಗೆ ಬಂದ ಪ್ರವಾಸ ಅವಕಾಶಗಳನ್ನು ನಿರಾಕರಿಸಿದ ಸಂದರ್ಭಗಳನ್ನು ಜಾರ್ಜ್ ಜೋಸೆಫ್ ವಿವರಿಸುತ್ತಾರೆ.ಮನೆಯ ಜವಾಬ್ದಾರಿಗಳಿಗೆ ಪತ್ನಿಯ ಥರ ತಾನೂ ಬದ್ಧನಾಗಬೇಕಾದುದು ತನ್ನ ಕರ್ತವ್ಯ ಎಂಬುದು ಜಾರ್ಜ್ ಜೋಸೆಫ್ ನಂಬಿಕೆ. ಈಚಿನ ದಿನಗಳಲ್ಲಿ ಕಂಪೆನಿಗಳೂ ಕುಟುಂಬ ಸ್ನೇಹಿ ನೀತಿಗಳನ್ನು ಹೊಂದುವುದರ ಪ್ರಾಮುಖ್ಯವನ್ನು  ಅರ್ಥ ಮಾಡಿಕೊಳ್ಳತೊಡಗಿವೆ. ಪೆಟರ್ನಿಟಿ ಲೀವ್ (ಪಿತೃ ರಜೆ), ಟ್ರೇಲಿಂಗ್ ಸ್ಪೌಸ್ ಪಾಲಿಸಿ (ಬೇರೆಡೆ ವರ್ಗವಾಗುವ ಪತ್ನಿಯನ್ನು ಹಿಂಬಾಲಿಸುವ ಪತಿಗೆ ಉದ್ಯೋಗ ಅವಕಾಶ ಒದಗಿಸಿಕೊಡುವ ಯತ್ನ), ಟೆಲಿಕಮ್ಯುಟಿಂಗ್ ಆಪ್ಷನ್ಸ್ (ಕಚೇರಿಯಲ್ಲಿ ಕುಳಿತು ಕೆಲಸ ಮಾಡುವ ಬದಲು ಟೆಲಿಸಂಪರ್ಕ ಆಯ್ಕೆಗಳನ್ನು ಬಳಸಿಕೊಳ್ಳುವುದು), ಕಚೇರಿ ಶಿಶುಕೇಂದ್ರ..ಇತ್ಯಾದಿ ಸೌಲಭ್ಯಗಳನ್ನು ನೀಡಲಾರಂಭಿಸಿರುವುದೂ ಉಂಟು.ಮಕ್ಕಳನ್ನು ನೋಡಿಕೊಳ್ಳುವ ಸಮಸ್ಯೆಗಳಿಗೆ ತಮ್ಮದೇ ಪರಿಹಾರಗಳನ್ನು ಕಂಡುಕೊಂಡವರೂ ಇದ್ದಾರೆ. ಈ ಪರಿಹಾರಗಳೂ ವಿಭಿನ್ನ. ಅನಿರೀಕ್ಷಿತ ರೀತಿಗಳಲ್ಲಿ ಒದಗಿ ಬಂದಿವೆ. 21ನೇ ಶತಮಾನದಲ್ಲಿ ವಿವಾಹ ಹಾಗೂ ತಾಯ್ತನ ದುಡಿಯುವ ಮಹಿಳೆಯ ಕೆರಿಯರ್ ಅನ್ನು ಹಾಳುಗೆಡವಿಲ್ಲ. ವಿಭಿನ್ನ ರೀತಿಯಲ್ಲಿ ರೂಪುಗೊಳಿಸಲೂ ಕೆಲವೊಮ್ಮೆ ನೆರವು ನೀಡಿವೆ ಎಂಬುದನ್ನು ಉದಾಹರಣೆಗಳ ಸಹಿತ ಗೀತಾ  ಈ ಪುಸ್ತಕದಲ್ಲಿ ನಿರೂಪಿಸುತ್ತಾರೆ. ಹಾಗೆಯೇ ಅನೇಕ ಮಹಿಳೆಯರು ಒಂಟಿಯಾಗಿ ಇರಲು ಬಯಸುತ್ತಿದ್ದಾರೆ.ಕೆಲವರಿಗೆ ವಿವಾಹವಾಗುವುದು ಇಷ್ಟವಿಲ್ಲ ಅಥವಾ ಇನ್ನು ಕೆಲವರು ಕೆಟ್ಟ ವಿವಾಹಗಳಿಂದ ಹೊರಬಂದು ಕೆರಿಯರ್‌ಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ‘ಮೈಂಡ್ ಟ್ರೀ, ಐಟಿ ಸರ್ವೀಸಸ್’ ಉಪಾಧ್ಯಕ್ಷೆ ರಾಧಾ ಹೇಳುವುದು ಹೀಗೆ: ‘ಆರ್ಥಿಕವಾಗಿಯಾಗಲಿ, ಭಾವನಾತ್ಮಕವಾಗಿಯಾಗಲಿ ಪುರುಷನನ್ನು ನಾನು ಅವಲಂಬಿಸಬೇಕಿಲ್ಲ. ನನ್ನದು ಒಳ್ಳೆಯ ಬದುಕು. ಚೆನ್ನಾಗಿ ಸಂಪಾದಿಸುತ್ತೇನೆ. ನನ್ನ ಸೋದರಿಯರು, ನಾನು ಒಟ್ಟಾಗಿ ಹಾಲಿಡೇಗಳಿಗೆ ಹೋಗುತ್ತೇವೆ. ನಾನೇನೂ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದೆನಿಸುವುದಿಲ್ಲ.’ವಾಸ್ತುಶಿಲ್ಪಿಯಾಗಿದ್ದು ಈಗ ಕಾಲ್ ಸೆಂಟರ್ ಎಕ್ಸಿಕ್ಯುಟಿವ್ ಆಗಿರುವ ಶಾಲಿನಿ ಕಾಲ್ರಾ ಏಕಾಂಗಿಯಾಗಿಯೇ ಇರುವುದನ್ನು ಆಯ್ಕೆ ಮಾಡಿಕೊಂಡಿದ್ದು 4 ಆಮೆಗಳು, 5 ಪಕ್ಷಿಗಳು, 1 ನಾಯಿ, 7 ಗಿಳಿಗಳು ಹಾಗೂ 1 ಹ್ಯಾಮ್‌ಸ್ಟರ್ (ಮೂಷಿಕ ಜಾತಿಗೆ ಸೇರಿದ ಸಾಕುಪ್ರಾಣಿ) ಜೊತೆ ಫ್ಲ್ಯಾಟ್‌ನಲ್ಲಿ ಬದುಕುತ್ತಿದಾರೆ.ಹೊಸ ಉದ್ಯೋಗ ಸಾಧ್ಯತೆಗಳು, ಆತ್ಮವಿಶ್ವಾಸದ ಮಹತ್ವಾಕಾಂಕ್ಷಿ ಮಹಿಳೆಯನ್ನು ಹುಟ್ಟು ಹಾಕಿದೆ. ಆದರೆ ಈ ಬೆಳವಣಿಗೆಯನ್ನು ಸಮಾಜ ಇನ್ನೂ ಪರಿಪೂರ್ಣ ಮನಸ್ಸಿನಿಂದ ಸ್ವೀಕರಿಸಿಲ್ಲ. 30 ವಯಸ್ಸು ದಾಟಿದ ಆಕರ್ಷಕ ಸ್ವತಂತ್ರ ಮಹಿಳೆಯರು ‘ಲಭ್ಯ’ ಎಂದು ಪರಿಗಣಿಸುವ ಮನೋಭಾವವಿದೆ. ಏಕೆಂದರೆ ಸಾಂಪ್ರದಾಯಿಕ ‘ವಿವಾಹ ಮಾರುಕಟ್ಟೆ’ಗೆ ವಯಸ್ಸು ಮೀರಿಯಾಗಿದೆ ಎಂಬಂತಹ ಭಾವನೆ ಅದು. ವ್ಯಂಗ್ಯದ ವಿಚಾರ ಎಂದರೆ ಮುಂಬೈನಂತಹ ನಗರದಲೂ ವಿವಾಹವಾಗಿ, ವಿಚ್ಛೇದನ ಪಡೆದ ಮಹಿಳೆ, ಮೂವತ್ತು ಮೀರಿ ಇನ್ನೂ ವಿವಾಹವಾಗದ ಮಹಿಳೆಗಿಂತ ಸಾಮಾಜಿಕವಾಗಿ ಹೆಚ್ಚು ಅಂಗೀಕಾರಾರ್ಹಳು ಎಂದು ಮುಂಬೈನ ಡಿಸೈನ್ ಸ್ಟುಡಿಯೊ ಒಂದರ ಕ್ರಿಯೇಟಿವ್ ಡೈರೆಕ್ಟರ್ ದಿವ್ಯಾ ಠಾಕೂರ್ ಹೇಳುತ್ತಾರೆ.ಮನರಂಜನಾ ಉದ್ಯಮದಲ್ಲಿನ ‘ಕ್ಯಾಸ್ಟಿಂಗ್ ಕೌಚ್’ (ಅವಕಾಶಗಿಟ್ಟಿಸಿಕೊಳ್ಳುವುದಕ್ಕಾಗಿ ಲೈಂಗಿಕ ಸೇವೆ ನೀಡುವಂತಹದ್ದು), ದುಡಿಯುವ ಸ್ಥಳಗಳಲ್ಲಿನ ಲೈಂಗಿಕ ಕಿರುಕುಳಗಳು, ಪ್ರೀತಿ, ಪ್ರೇಮ, ಸಂಬಂಧಗಳ ಸಂಕೀರ್ಣ ಆಯಾಮಗಳು, ಅವೇಳೆಗಳಲಿ ದುಡಿಯುವ ಮಹಿಳೆಯರ ಸುರಕ್ಷತೆ ಇತ್ಯಾದಿ ವಿಚಾರಗಳನ್ನೂ ಗೀತಾ ಚರ್ಚಿಸುತ್ತಾರೆ. ಕಚೇರಿಗಳು ವ್ಯವಸ್ಥೆ ಮಾಡುವ ಪಿಕ್ ಅಪ್, ಡ್ರಾಪ್ ವ್ಯವಸ್ಥೆಯ ಬಗ್ಗೆ ಬಹಳಷ್ಟು ಮಹಿಳೆಯರಿಗೆ ಸಮಾಧಾನ ಇದೆ. ಆದರೆ ಮನೆ ತಲುಪಿದಾಗ, ಗೃಹಕೃತ್ಯ ವಿಚಾರಗಳ ಸವಾಲುಗಳೇ ದೊಡ್ಡದು ಎಂದು ಈ ಮಹಿಳೆಯರು ಹೇಳುವುದಾಗಿ ಗೀತಾ ಬರೆಯುತ್ತಾರೆ.ಮನರಂಜನಾ ಉದ್ಯಮದ ಗ್ಲಾಮರಸ್ ಮಹಿಳೆಯರ ಪೈಕಿ, ‘ಕಾಂತಾ ಲಾಗಾ’ ಹುಡುಗಿಯಾಗಿ ಹೆಸರು ಪಡೆದ ಷೆಫಾಲಿ ಝರಿವಾಲಾ, ಭಾರತದ ‘ಮೊದಲ ಮಹಿಳಾ ಡಿಜೆ’ ಪರ್ಲ್ ಮಿಗ್‌ಲಾನಿ, ಚಾನೆಲ್ (ವಿ) ಯ  ‘ಲೋಲಾಕುಟ್ಟಿ ಟಾಕ್ ಷೋ’ನ ಅನುರಾಧಾ ಮೆನನ್, ಹಾಗೆಯೇ ಆತಿಥೇಯ ಉದ್ಯಮದಲ್ಲಿ ಹೆಜ್ಜೆ ಗುರುತು ಮೂಡಿಸುತ್ತಿರುವ ಮಹಿಳೆಯರು ತಮ್ಮ ಅನುಭವಗಳನ್ನಿಲ್ಲಿ ಹಂಚಿಕೊಂಡಿದ್ದಾರೆ. ಮಹಿಳಾ ಬಾರ್‌ಟೆಂಡರ್‌ಗಳು, ಪಂಚತಾರಾ ಹೋಟೆಲುಗಳಲ್ಲಿ ಪುರುಷ ಪ್ರಾಧಾನ್ಯದ ಕಿಚನ್‌ಗಳಲ್ಲಿ ಷೆಫ್ ಹುದ್ದೆಗಳನ್ನು ಗಿಟ್ಟಿಸಿರುವ ಮಹಿಳೆಯರು ತಮ್ಮ ವಿಭಿನ್ನ ಅನುಭವಗಳನ್ನು ನಿರೂಪಿಸಿದ್ದಾರೆ.ಹೊಸ ಯುಗದಲ್ಲಿ ಭಾರತೀಯ ದುಡಿಯುವ ಮಹಿಳೆಯ ವೃತ್ತಿಪರ ಪ್ರಾತಿನಿಧ್ಯ ಸಾಕಷ್ಟು ಹೆಚ್ಚಾಗಿಯೇ ಇದೆ. ಕೆರಿಯರ್ ಮಹತ್ವಾಕಾಂಕ್ಷೆಗಳಿಂದಾಗಿ, ಗೃಹಕೃತ್ಯ ನಿರ್ಲಕ್ಷಿಸಿದ ತಪ್ಪಿತಸ್ಥ ಭಾವನೆ ಹೊಂದಬೇಕಾದ  ಅಗತ್ಯವೂ ಈಗಿಲ್ಲ.ಹೀಗಿದ್ದೂ ಮನೆ-ಕೆರಿಯರ್ ಸಮತೋಲನದ ಸಮಸ್ಯೆ ಮಹಿಳೆಗೇ ಈಗಲೂ ಹೆಚ್ಚು.  ‘ಭಾರತೀಯ ದುಡಿಯುವ ಮಹಿಳೆ ಸರಹದ್ದುಗಳನ್ನು ದಾಟುವ ಪ್ರಕ್ರಿಯೆ ಹಂತಹಂತದಲ್ಲಾಗುತ್ತಿದೆ. ಆರ್ಥಿಕ ಅಗತ್ಯ, ಸುಧಾರಿತ ಶಿಕ್ಷಣ, ಹೆಚ್ಚಿದ ಅವಕಾಶಗಳು, ಪೂರಕ ಕಾನೂನುಗಳು, ಕುಟುಂಬ ಬೆಂಬಲ .....ಇವೆಲ್ಲಾ ಆಕೆಯೊಳಗೆ ಅಂತರ್ಗತವಾಗಿರುವ ಸರಹದ್ದುಗಳಿಂದ ಆಕೆಯನ್ನು ವಿಮೋಚನೆಗೊಳಿಸುತ್ತಿವೆ. ಕೆಲವು ಮಹಿಳೆಯರು ಈಗಾಗಲೇ ಈ ಸರಹದ್ದುಗಳನ್ನು ದಾಟಿ ಹೊರ ಬಂದಿದ್ದಾರೆ. ಇನ್ನು ಕೆಲವರು ಇನ್ನೂ ಹೋರಾಡುತ್ತಲೇ ಇದ್ದಾರೆ’ ಎನ್ನುತ್ತಾರೆ ನ್ಯೂ ಏಜ್ ಉದ್ಯೋಗಗಳಲ್ಲಿರುವ ಮಹಿಳೆಯರ ಲೋಕದಲ್ಲಿ ಸಂಚರಿಸಿದ ಈ  ಲೇಖಕಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.