ಭಾನುವಾರ, ಜೂನ್ 13, 2021
26 °C

ಪಂಚಕೂಟ ಮಹಾಬಸದಿಯಲ್ಲಿ ವಾರ್ಷಿಕ ಪೂಜಾ ಮಹೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮರಿ: ವ್ಯಕ್ತಿಯ ಒಳಗಿನ ಪ್ರಪಂಚದ ಭಾವನೆಗಳನ್ನು ಶುದ್ಧ ಆಗಿಸಿಕೊಳ್ಳುವುದೇ ಧರ್ಮ ಸಂಸ್ಕಾರವಾಗಿದ್ದು, ದುಃಖದ ಕತ್ತಲಿನ ವಿರುದ್ಧ ನಿರಂತರ ಹೋರಾಟಕ್ಕೆ ಜೈನಧರ್ಮವೇ ದಾರಿದೀಪ ಎಂದು ಹೊಂಬುಜ ಜೈನಮಠದ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ನುಡಿದರು.ಸಮೀಪದ ವಳಗೆರೆ ಪಂಚಕೂಟ ಮಹಾಬಸದಿಯಲ್ಲಿ ಗುರುವಾರ ಆಯೋಜಿಸಿದ್ದ ವಾರ್ಷಿಕ ಪೂಜಾ ಮಹೋತ್ಸವದಲ್ಲಿ ಅವರು ಮಾತನಾಡಿದರು.ಜಗತ್ತು ನಿಂತಿರುವುದೇ ಭಾವನೆಗಳ ಮೇಲೆ ಎಂಬುದು ಮೂಲಸತ್ಯವಾದ ಕಾರಣ ಭಾವಶುದ್ಧಿಯ ಹೊರತಾಗಿ ಜಿನಮಾರ್ಗಗಳು ವ್ಯಕ್ತಿಗೆ ಲಭ್ಯವಾಗದು. ಮನಸ್ಸಿನ ವಿಕಲ್ಪಗಳ ವಿರುದ್ಧ ಎಚ್ಚರವಾಗಿರಲು ಬಸದಿ, ಧ್ಯಾನ, ಅಧ್ಯಯನವೇ ಮಾರ್ಗ ಎಂದರು.ಭಾವನೆಗಳು ಋಜುಮಾರ್ಗದಲ್ಲಿ ಪರಿವರ್ತನೆಯಾದರೆ ಭವಗಳು ತನ್ನಿಂತಾನೆ ದೂರವಾಗುತ್ತವೆ ಎಂದು ಸೂಚ್ಯವಾಗಿ ನುಡಿದ ಅವರು, ಹಿಂಸೆಯು ಪ್ರಪಂಚದ ಅತಿದೊಡ್ಡ ರೋಗವಾಗಿದ್ದು, ಮಹಾವೀರರ ಬೋಧನೆಗಳು ಪ್ರಪಂಚದ ಕ್ಷೋಭೆಗೆ ಪರಿಹಾರ ಮಾರ್ಗ ನೀಡುತ್ತವೆ ಎಂದು ವಿಶ್ಲೇಷಿಸಿದರು.ಬದುಕಿನ ಪ್ರತಿ ಹಂತಗಳಲ್ಲೂ ಅಹಿಂಸೆಯ ಶ್ರೇಷ್ಠ ವಿಧಾನವನ್ನು ಅನುಸರಿಸುವ ಜತೆ ಪ್ರಸ್ತುತತೆಗೆ ಬೆನ್ನು ಮಾಡದೇ ಮಹಿಳಾ ಶೈಕ್ಷಣಿಕ ಪ್ರಗತಿಯ ಕಡೆ ಹೆಚ್ಚಿನ ಗಮನಕೊಡಬೇಕು ಎಂದು ವಿನಂತಿಸಿದರು.ಬಡವರ ಮಕ್ಕಳು ಕೂಡಾ ಶಿಕ್ಷಣದಿಂದ ವಂಚಿತವಾಗಬಾರದು ಎಂಬ ಕಾರಣದಿಂದ ಮಲೆನಾಡಿನ ಜೈನ ಸಮುದಾಯದ ವಿದ್ಯಾರ್ಥಿನಿಯರಿಗೆ ಅನುಕೂಲವಾಗುವ ಮಹಿಳಾ ವಸತಿನಿಲಯವನ್ನು ತುಮರಿಯಲ್ಲಿ ಸ್ಥಾಪಿಸಲು ಮಠವು ತೀರ್ಮಾನಿಸಿದೆ ಎಂದರು.ಸಾಗರ ಮತ್ತು ಶಿವಮೊಗ್ಗದಲ್ಲಿನ ಮಠದ ಹಾಸ್ಟೆಲ್‌ಗಳನ್ನು ಮೇಲ್ದರ್ಜೆಗೇರಿಸುವ ಸಂಕಲ್ಪ ಮಾಡಿದ್ದು, ಸಮುದಾಯದ ಜನ ಸಾಮಾನ್ಯರ ಹಿತಕಾಪಾಡಲು ಹೊಂಬುಜ ಕ್ಷೇತ್ರ ಸಿದ್ಧವಿದೆ ಎಂದು ಭರವಸೆ ನೀಡಿದರು.ಪೀಠಾಧ್ಯಕ್ಷರಾದ ನಂತರ ಮೊದಲ ಬಾರಿಗೆ ತುಮರಿಗೆ ಆಗಮಿಸಿದ ಸ್ವಾಮೀಜಿಯನ್ನು ಬುಧವಾರ ಸಂಜೆ ಹಾರಿಗೆ ಬಸದಿಯಿಂದ ಹತ್ತು ಕಿ.ಮಿ. ದೂರ ತೆರೆದ ವಾಹನದಲ್ಲಿ ಯಕ್ಷಗಾನ ವೇಷ, ಕೋಲಾಟ, ಡೊಳ್ಳು ಕುಣಿತ ಒಳಗೊಂಡ ಮೆರವಣಿಗೆ ಮೂಲಕ ವಳಗೆರೆ ಪಂಚಕೂಟ ಬಸದಿಗೆ ಕರೆ ತರಲಾಯಿತು.

ಸಾವಿರಾರು ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.