ಭಾನುವಾರ, ಜನವರಿ 19, 2020
20 °C

ಪಂಚಭೂತಗಳಲ್ಲಿ ಲೀನರಾದ ಒಡೆಯರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಅತ್ತ ಪಶ್ಚಿಮ ದಿಕ್ಕಿನಲ್ಲಿ ಸೂರ್ಯ ಮುಳುಗುವ ಸಿದ್ಧತೆ­ಯಲ್ಲಿ­ದ್ದಾಗ ಮೈಸೂರಿನ ಘನತೆ­ಯಾಗಿದ್ದ ಶ್ರೀಕಂಠ­ದತ್ತ ನರಸಿಂಹರಾಜ ಒಡೆಯರ್ ಅವರ ಪಾರ್ಥಿವ ಶರೀರಕ್ಕೆ, ಅವರ ಹಿರಿಯ ಸೋದರಿ ಗಾಯತ್ರಿದೇವಿ ಅವರ ಪುತ್ರ ಚದುರಂಗ ಕಾಂತರಾಜೇ ಅರಸ್‌ ಅಗ್ನಿಸ್ಪರ್ಶ ಮಾಡಿದರು. ಸೇರಿದ್ದ ಅಪಾರ ಜನಸಾಗರದ  ‘ಮಹಾ­ರಾಜರಿಗೆ ಜಯವಾಗಲಿ, ಶ್ರೀಕಂಠ­ದತ್ತ ನರಸಿಂಹರಾಜ ಒಡೆಯರ್‌ ಅವರಿಗೆ ಜಯವಾಗಲಿ’ ಎಂಬ ಒಕ್ಕೊರಲಿನ ಜಯಘೋಷಗಳ ಮಧ್ಯೆ ಯದುವಂಶದ ಕುಡಿ ಅಗ್ನಿಯಲ್ಲಿ ಲೀನವಾಯಿತು.ಇದಕ್ಕೂ ಮೊದಲು ಅರಮನೆಯ ಗಿರ್ಲೆಮೀಸೆಯ (ಮಹಾರಾಜರು ಸಿಂಹಾಸನ ಮೇಲೆ ಕುಳಿತುಕೊಳ್ಳುವಾಗ ಅವರ ಹಿಂದೆ ನಿಂತುಕೊಳ್ಳುವ ಸಿಬ್ಬಂದಿ) ಮಂಜುನಾಥ್, ಬಂಗಾರಿ, ನಾಗರಾಜು ಹಾಗೂ ಕುಮಾರ್‌ ಅಲ್ಲದೆ ಹೊಗಳು­ಭಟ್ಟರಾದ ಬಾಲಕೃಷ್ಣ ಹಾಗೂ ಜಯರಾಮ್ ಅವರು ಕೊನೆಯದಾಗಿ ತಮ್ಮ ಮಹಾರಾಜರಿಗೆ ದೀವಟಿಗೆಯ ಸಲಾಂ ಹೇಳಿದರು.

ಕೂಡಲೇ ಚದುರಂಗ ಕಾಂತರಾಜೇ ಅರಸ್‌ ಅವರು 250 ಕಿಲೋ ಗ್ರಾಂ ಶ್ರೀಗಂಧದ ಕಟ್ಟಿಗೆಯ ಜತೆಗೆ 10 ಕಿಲೋ ತುಪ್ಪ ಸುರಿದಿದ್ದ ಚಿತೆಗೆ ಅಗ್ನಿ ಸ್ಪರ್ಶಿಸಿದರು. ಅವರಿಗೆ ಒಡೆಯರ ಸಂಬಂಧಿಕರಾದ ರಾಜಾಚಂದ್ರ, ಸಿದ್ದಲಿಂಗಸ್ವಾಮಿ ಅರಸ್‌ ಮೊದಲಾದ­ವರು ಸಹಕರಿಸಿದರು.ಹೀಗೆ ಬುಧವಾರ ಶ್ರೀಕಂಠದತ್ತ ಅವರು ತಮ್ಮ ತಾತ ಮುಮ್ಮಡಿ ಕೃಷ್ಣರಾಜೇಂದ್ರ ಒಡೆಯರ್ ಬೃಂದಾವನದ (ಸಮಾಧಿ) ಹಿಂದೆ ಹಾಗೂ ತಮ್ಮ ತಂದೆ ಜಯಚಾಮರಾಜೇಂದ್ರ ಒಡೆಯರ್ ಬೃಂದಾವನ ಪಕ್ಕ ಶಾಶ್ವತವಾಗಿ ಮಲಗಿದರು.ಶೇಷವಸ್ತ್ರ ಪ್ರಸಾದ: ಮಧ್ಯಾಹ್ನ 3.15 ಗಂಟೆಗೆ ಚಿನ್ನದ ಪಲ್ಲಕ್ಕಿಯಲ್ಲಿ ಮನುವನಕ್ಕೆ ಬಂದ ಒಡೆಯರ ಪ್ರಾರ್ಥಿವ ಶರೀರವನ್ನು ಅರಮನೆಯ ಸಿಬ್ಬಂದಿ ಕೊಂಬು ಊದಿ, ತಮಟೆ ಬಾರಿಸುವ ಮೂಲಕ ಸ್ವಾಗತಿಸಿದರು. ನಿಗದಿಪಡಿಸಿದ್ದ ಸ್ಥಳದಲ್ಲಿ ಪ್ರಾರ್ಥಿವ ಶರೀರವನ್ನು ಇರಿಸಿದಾಗ ವೇದಘೋಷದೊಡನೆ ಪಂಚಗವ್ಯದಿಂದ ಶುದ್ಧೀ­ಕರಿಸಿ ಕರ್ಣಮಂತ್ರ ಪಠಿಸಲಾಯಿತು.ಆಮೇಲೆ ತುಳಸಿದಳ ಹಾಗೂ ದರ್ಬೆಯ ಮೂಲಕ ಪ್ರೋಕ್ಷಣೆ ಮಾಡಿ ಪುಣ್ಯಾರ್ಚನೆ ಮಾಡ­ಲಾಯಿತು. ಇದಾದ ಮೇಲೆ ಚಾಮುಂಡೇ­ಶ್ವರಿ ದೇವ­ಸ್ಥಾನದ ಶೇಷವಸ್ತ್ರ ಪ್ರಸಾದ, ನಂಜನ­ಗೂಡಿನ ನಂಜುಂಡೇಶ್ವರನ ಶೇಷವಸ್ತ್ರ ಪ್ರಸಾದ, ಶ್ರೀರಂಗಪಟ್ಟಣದ ರಂಗನಾಥ ಸ್ವಾಮಿಯ ಶೇಷವಸ್ತ್ರ ಪ್ರಸಾದ ಹಾಗೂ ಮೇಲುಕೋಟೆಯ ಚೆಲುವನಾರಾ­ಯಣಸ್ವಾಮಿಯ ಶೇಷವಸ್ತ್ರ ಪ್ರಸಾದವನ್ನು ಮಹಾರಾಜರಿಗೆ ಅರ್ಪಿಸಲಾ­ಯಿತು. ಜತೆಗೆ, ರಾಜಗುರುಗಳಾದ ಪರಕಾಲ ಮಠದಿಂದ ತಂದ ಶ್ರೀಚೂರ್ಣವನ್ನು ಸಮರ್ಪಿಸ­ಲಾಯಿತು. ಹೀಗೆ ಶೈವ ಹಾಗೂ ಶ್ರೀವೈಷ್ಣವ ಸಂಪ್ರದಾಯಗಳ ಮೂಲಕ ವಿಧಿ–ವಿಧಾನಗಳು ಅರಮನೆಯ ಆಗಮಿಕ ಚಂದ್ರಶೇಖರ ಶಾಸ್ತ್ರಿಗಳ ನೇತೃತ್ವದಲ್ಲಿ ನಡೆದವು.ಸರ್ಕಾರಿ ಗೌರವ: ಧಾರ್ಮಿಕ ಆಚರಣೆಗಳಿಗೆ ಮುನ್ನ ಮೈಸೂರಿನ ಲಾಂಛನವಾದ ಗಂಡಭೇರುಂಡ ಧ್ವಜ ಹಾಗೂ ರಾಷ್ಟ್ರಧ್ವಜವನ್ನು ಒಡೆಯರ್ ಶರೀರದ ಮೇಲೆ ಹೊದಿಸ­ಲಾಯಿತು. ಮಾಜಿ ಪ್ರಧಾನಿ ದೇವೇಗೌಡ, ಮುಖ್ಯಮಂತ್ರಿ ಸಿದ್ದರಾಮಯ್ಯ ಇತರ ಗಣ್ಯರು ಪುಷ್ಪಗುಚ್ಛ ಮೂಲಕ ನಮನ ಸಲ್ಲಿಸಿದರು.

ಕೂಡಲೇ ಬ್ಯಾಂಡ್‌ ಮಾಸ್ಟರ್ ಎಸ್‌. ನಾಗೇಂದ್ರ ನೇತೃತ್ವದಲ್ಲಿ ಮೈಸೂರಿನ 5ನೇ ಕೆಎಸ್‌ಆರ್‌ಪಿಯ 25 ಸಿಬ್ಬಂದಿ ಜನರಲ್‌ ಸೆಲ್ಯೂಟ್‌ ಸಲ್ಲಿಸಿತು. ನಂತರ ಕೆಎಸ್‌ಆರ್‌ಪಿಯ 24 ಸಿಬ್ಬಂದಿ ಗೌರವಾರ್ಥವಾಗಿ 3 ಬಾರಿ ಗುಂಡು ಹಾರಿಸಿದರು. ಅದರ ಹಿಂದೆಯೇ ರಾಷ್ಟ್ರಗೀತೆ ಮೊಳಗಿತು.ನಂತರ ‘ಅಬೈಡ್‌ ವಿತ್‌ ಮಿ’, ‘ಲೀಡ್‌ ಕೈಂಡ್‌ ದಿ ಲೈಟ್‌’ ಹಾಗೂ ‘ಓ ಗಾಡ್‌ ಅವರ್ ಹೆಲ್ಪ್’ ಎಂಬ ಹಾಡುಗಳನ್ನು ಬ್ಯಾಂಡ್ ತಂಡ ನುಡಿಸಿತು. ಹೀಗೆ ಸಕಲ ಸರ್ಕಾರಿ ಗೌರವ ಸಲ್ಲಿಸಲಾಯಿತು. ಇದಾದ ಕೂಡಲೇ ಅರಮನೆಯ ಹೊಗಳು­ಭಟ್ಟರು ‘ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ ಶ್ರೀ ಶ್ರೀ ಶ್ರೀ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಬಹಾದ್ದೂರ್, ಬಹು ಪರಾಕ್’ ಎಂದು ಹೇಳಿದ ಕೂಡಲೇ ಮೌನ ನೆಲೆಸಿತು. ಹೀಗೆ ಒಡೆಯರ್‌ ಅವರನ್ನು ಮನುವನ ತನ್ನ ಒಡಲಲ್ಲಿ ಇರಿಸಿಕೊಂಡಿತು.ಸಾಕ್ಷಿಯಾದ ಗಣ್ಯರು

ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ವಿ. ಶ್ರೀನಿವಾಸ ಪ್ರಸಾದ್,  ಎಚ್‌.ಎಸ್‌. ಮಹದೇವಪ್ರಸಾದ್‌, ಎಚ್‌.ಸಿ. ಮಹದೇವಪ್ಪ, ಅಂಬರೀಷ್‌, ಉಮಾಶ್ರೀ, ಕೆ.ಜೆ. ಜಾರ್ಜ್, ಸಂಸದ ಎಚ್‌. ವಿಶ್ವನಾಥ್‌, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌. ಯಡಿಯೂರಪ್ಪ, ಎಚ್‌.ಡಿ. ಕುಮಾರಸ್ವಾಮಿ, ಮಾಜಿ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಸಂಸದ ಪ್ರೊ.ಐ.ಜಿ. ಸನದಿ, ಶಾಸಕರಾದ ಡಿ.ಕೆ. ಶಿವಕುಮಾರ್‌, ಎಂ.ಕೆ. ಸೋಮಶೇಖರ್ ಮೊದಲಾದ ಗಣ್ಯರು ಅಂತ್ಯಕ್ರಿಯೆಗೆ ಸಾಕ್ಷಿಯಾದರು. ಪ್ಯಾರಿಸ್‌ನಿಂದ ಬಂದ ಪ್ರವಾಸಿ ದಂಪತಿ ಆಲ್ವಿನ್‌ ಪಿಟಿಟ್ ಹಾಗೂ ಬ್ರಿಗಿಟ್ಟೆ ನಿಂತುಕೊಂಡೇ ಅಂತ್ಯಸಂಸ್ಕಾರ ನೋಡಿದರು.ಚದುರಂಗ ಕಾಂತರಾಜೇ ಅರಸ್‌ ಉತ್ತರಾಧಿಕಾರಿ?

ಮೈಸೂರು: ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅವರ ಹಿರಿಯ ಸಹೋದರಿ ಗಾಯತ್ರಿದೇವಿ ಪುತ್ರ ಚದುರಂಗ ಕಾಂತರಾಜೇ ಅರಸ್‌ ಅವರೇ ಯದು­ವಂಶದ ಮುಂದಿನ ಉತ್ತರಾಧಿಕಾರಿ ಎಂದು ಬಿಂಬಿತರಾಗಿದ್ದಾರೆ.

ಶ್ರೀಕಂಠದತ್ತ ಒಡೆಯರ್‌ ಅವರ ಉತ್ತರಾದಿ ಕ್ರಿಯೆಗಳನ್ನು ಚದುರಂಗ ಕಾಂತರಾಜೇ ಅರಸ್‌ ಅವರೇ ಬುಧ­ವಾರ ನೆರವೇರಿಸಿದ್ದರಿಂದ ಮುಂದಿನ ಉತ್ತರಾಧಿಕಾರಿ ಎಂಬ ಸುದ್ದಿಗೆ ಪುಷ್ಟಿ ಒದಗಿದೆ. ಸರ್ದಾರ್‌ ಕೆ.ಬಿ. ರಾಮಚಂದ್ರ ಅರಸ್‌ ಮತ್ತು ಗಾಯತ್ರಿದೇವಿ ಪುತ್ರನಾದ ಚದುರಂಗ ಕಾಂತರಾಜೇ ಅರಸ್‌ ಅವರು 26 ಅಕ್ಟೋಬರ್‌ 1972ರಲ್ಲಿ ಜನಿಸಿದರು. ಇವರಿಗೆ ತ್ರಿಪುರ ಸುಂದರಿದೇವಿ, ದೀಪಮಾಲಿನಿ, ಕೀರ್ತಿಮಾಲಿನಿ ದೇವಿ ಎಂಬ ಮೂವರು ಅಕ್ಕಂದಿರು ಇದ್ದಾರೆ. ಇವರ ಮುತ್ತಾತ ಕಾಂತರಾಜೇ ಅರಸ್‌ ಅವರು ಮೈಸೂರು ಸಂಸ್ಥಾನದಲ್ಲಿ 1918ರಿಂದ 22ರವರೆಗೆ ದಿವಾನರಾಗಿದ್ದರು.ಗಾಯತ್ರಿದೇವಿ ಅವರು 28ನೇ ವಯಸ್ಸಿನಲ್ಲಿ 1974ರಲ್ಲಿ ನಿಧನರಾದರು. ಆಗ ಚದುರಂಗ ಎರಡು ವರ್ಷದ ಮಗುವಾಗಿದ್ದರು. ಹೀಗಾಗಿ, ಚದುರಂಗ ಅವರ ಮೇಲೆ ಒಡೆಯರ್‌ ಅವರಿಗೆ ಹೆಚ್ಚು ಅಕ್ಕರೆ ಇತ್ತು. ರಾಮಚಂದ್ರ ಅರಸ್‌ ಅವರು 2011ರಲ್ಲಿ ಮೃತಪಟ್ಟಿದ್ದರು.ಚದುರಂಗ ಅವರು ಮಹಾರಾಜ ಕಾಲೇಜಿನಲ್ಲಿ ಬಿ.ಎ ಮತ್ತು ಜೆಎಸ್‌ಎಸ್‌ ಕಾನೂನು ಕಾಲೇಜಿನಿಂದ ಎಲ್‌ಎಲ್‌ಬಿ ಪದವಿ ಪಡೆ­ದಿ­ದ್ದಾರೆ. ವನ್ಯಜೀವಿ ಛಾಯಾಗ್ರಹಣ, ಕ್ರಿಕೆಟ್‌, ಗಾಲ್ಫ್‌, ಕುದುರೆ, ಕಾರು­ಗಳು ಇವರಿಗೆ ಇಷ್ಟ. ಪುಣೆಯ ಪ್ರಿಯಾಂಕಾ ಎಂಬುವವರನ್ನು ವಿವಾಹ­ವಾಗಿರುವ ಇವರಿಗೆ ಪುತ್ರ ದೇವರಥ್, ಪುತ್ರಿ ಜಯಲಕ್ಷೀ ಇದ್ದಾರೆ.ಪ್ರಸ್ತುತ ಇವರು ಬೆಂಗಳೂರಿನಲ್ಲಿ ನೆಲೆಸಿದ್ದು, ಇವರು ಎರಡು ಅವಧಿಗೆ ಮೈಸೂರಿನ ರೇಸ್‌ ಕ್ಲಬ್‌ ಅಧ್ಯಕ್ಷರಾಗಿದ್ದರು. ಪ್ರಸ್ತುತ ಕಂಠೀರವ ನರಸಿಂಹರಾಜ ಒಡೆಯರ್‌ ಸ್ಪೋರ್ಟ್ಸ್‌ ಕ್ಲಬ್‌ ಉಪಾಧ್ಯಕ್ಷ ಮತ್ತು ಜಯ­ಚಾಮರಾಜ ಒಡೆಯರ್‌ ಗಾಲ್ಫ್‌ ಕ್ಲಬ್‌ ಸದಸ್ಯರಾಗಿದ್ದಾರೆ. ಬೆಂಗಳೂರು ಅರ­ಮನೆಯ ಗಾಯತ್ರಿ ವಿಹಾರ್‌ ಎಸ್ಟೇಟ್‌ ನಿರ್ವಹಣೆ­ಯನ್ನು ಇವರು ನೋಡಿಕೊಳ್ಳುತ್ತಿದ್ದಾರೆ.ಶ್ರೀಕಂಠದತ್ತ ಒಡೆಯರ್‌ ಅವರ ಸಹೋದರಿ ಮೀನಾಕ್ಷಿ ಅವರಿಗೆ ವರ್ಚಸ್ವಿ ಅರಸ್‌ ಎಂಬ ಮಗ ಇದ್ದಾರೆ. ರಾಜಮನೆತನದ ಮುಂದಿನ ಉತ್ತರಾಧಿಕಾರಿ ಯಾರು ಎಂಬ ಕುರಿತು ಹಲವಾರು ಊಹಾಪೋಹಗಳು ಎದ್ದಿರುವುದಂತೂ ನಿಜ. ಈ ಮೊದಲೇ ಶ್ರೀಕಂಠದತ್ತ ಒಡೆಯರ್‌ ದಂಪತಿ ಮುಂದಿನ ಉತ್ತರಾಧಿಕಾರಿ ಯಾರೆಂಬುದನ್ನು ನಿರ್ಧರಿಸಿದ್ದರು. ಕೆಲವೇ ದಿನಗಳಲ್ಲಿ ಪ್ರಮೋದಾದೇವಿ ಅವರು ಉತ್ತರಾಧಿಕಾರಿಯ ಹೆಸ­ರನ್ನು ಪ್ರಕಟಿಸುವರು ಎಂದು ಕುಟುಂಬದ ನಿಕಟವರ್ತಿಯೊಬ್ಬರು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)