ಮಂಗಳವಾರ, ಮೇ 18, 2021
24 °C
ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್: ಆಸ್ಟ್ರೇಲಿಯಾ- ನ್ಯೂಜಿಲೆಂಡ್ ಪೈಪೋಟಿಗೆ ಮಳೆ ಅಡ್ಡಿ

ಪಂದ್ಯ ರದ್ದು; ಆಸೀಸ್ ಹಾದಿ ಕಠಿಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಂದ್ಯ ರದ್ದು; ಆಸೀಸ್ ಹಾದಿ ಕಠಿಣ

ಬರ್ಮಿಂಗ್‌ಹ್ಯಾಮ್ (ಪಿಟಿಐ): ಮಳೆ ಅಡ್ಡಿಪಡಿಸಿದ ಕಾರಣ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ನಡುವಿನ ಚಾಂಪಿಯನ್ಸ್ ಟ್ರೋಫಿ  ಏಕದಿನ ಕ್ರಿಕೆಟ್ ಟೂರ್ನಿಯ ಮಹತ್ವದ ಪಂದ್ಯ ರದ್ದುಗೊಂಡಿದೆ. ಈ ಕಾರಣ ಉಭಯ ತಂಡಗಳು ತಲಾ ಒಂದು ಪಾಯಿಂಟ್ ಪಡೆದವು.ಸೆಮಿಫೈನಲ್ ಪ್ರವೇಶದ ಸ್ಪರ್ಧೆಯಲ್ಲಿ ಉಳಿಯಲು ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದ್ದ ಕಾಂಗರೂ ಪಡೆ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ. ಏಕೆಂದರೆ ಈ ತಂಡದವರು ತಮ್ಮ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಎದುರು ಸೋಲು ಕಂಡಿದ್ದರು.ಎಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ `ಎ' ಗುಂಪಿನ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 243 ರನ್ ಪೇರಿಸಿತ್ತು. 244 ರನ್‌ಗಳ ಸಾಧಾರಣ ಗುರಿ ಬೆನ್ನಟ್ಟಿದ್ದ ಕಿವೀಸ್ ಬಳಗ 15 ಓವರ್‌ಗಳಲ್ಲಿ 2 ವಿಕೆಟ್‌ಗೆ 51 ರನ್ ಗಳಿಸಿ ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಮಳೆ ಬಂದ ಕಾರಣ ಪಂದ್ಯ ಸ್ಥಗಿತಗೊಳಿಸಲಾಯಿತು. ಆದರೆ ಮಳೆ ನಿಲ್ಲದ ಕಾರಣ ಅಂಪೈರ್‌ಗಳು ಪಂದ್ಯವನ್ನೇ ರದ್ದುಮಾಡಲು ತೀರ್ಮಾನಿಸಿದರು.ಸಾಧಾರಣ ಮೊತ್ತ: ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ ಆರಂಭಿಕ ಆಘಾತ ಅನುಭವಿಸಿತು. 10 ರನ್ ಆಗುವಷ್ಟರಲ್ಲಿ ಈ ತಂಡ ಶೇನ್ ವಾಟ್ಸನ್ ಹಾಗೂ ಫಿಲ್ ಹ್ಯೂಸ್ ಅವರ ವಿಕೆಟ್ ಕಳೆದುಕೊಂಡಿತು. ಹ್ಯೂಸ್ ರನ್‌ಔಟ್ ಆದರು.ಆದರೆ ಮೂರನೇ ವಿಕೆಟ್ ಜೊತೆಯಾಟದಲ್ಲಿ 64 ರನ್ ಸೇರಿಸಿದ ಮ್ಯಾಥ್ಯು ವೇಡ್ ಹಾಗೂ ನಾಯಕ ಬೇಲಿ ತಂಡಕ್ಕೆ ಆಸರೆಯಾದರು. ಈ ಹಂತದಲ್ಲಿ ವೇಡ್ ವಿಕೆಟ್ ಪಡೆದ ನೇಥನ್ ಮೆಕ್ಲಮ್ ಕಿವೀಸ್ ಬಳಗ ಮೇಲುಗೈ ಸಾಧಿಸಲು ಕಾರಣರಾದರು. ಈ ಸಂದರ್ಭದಲ್ಲಿ ಜೊತೆಗೂಡಿದ ಬೇಲಿ ಹಾಗೂ ಆ್ಯಡಮ್ ವೋಗ್ಸ್ ಆತಂಕದಲ್ಲಿದ್ದ ಕಾಂಗರೂ ಪಡೆಯನ್ನು ಮೇಲೆತ್ತಿದರು. ವೋಗ್ಸ್ (71; 76 ಎ, 7 ಬೌಂ.) ಆಕ್ರಮಣಕಾರಿಯಾಗಿದ್ದರು. ಬೇಲಿ (55; 91ಎ, 5 ಬೌಂ.) ನಿಧಾನ ಆಟಕ್ಕೆ ಮೊರೆ ಹೋದರು.ಬೇಲಿ ಹಾಗೂ ವೋಗ್ಸ್ ನಾಲ್ಕನೇ ವಿಕೆಟ್‌ಗೆ 77 ರನ್ ಸೇರಿಸಿದರು. ಬೇಲಿ ವಿಕೆಟ್ ಪತನದ ನಂತರ ಕ್ರೀಸ್‌ಗೆ ಬಂದ ಮಿಷೆಲ್ ಮಾರ್ಷ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ (ಅಜೇಯ 29) ಕೂಡ ಬಿರುಸಿನ ಆಟಕ್ಕಿಳಿದರು. ಈ ಪರಿಣಾಮ ಆಸ್ಟ್ರೇಲಿಯಾದ ಸ್ಕೋರ್ 200ರ ಗಡಿ ದಾಟಿತು. 22 ಎಸೆತಗಳನ್ನು ಎದುರಿಸಿದ ಮ್ಯಾಕ್ಸ್‌ವೆಲ್ ಎರಡು ಸಿಕ್ಸರ್ ಕೂಡ ಎತ್ತಿದರು.ನ್ಯೂಜಿಲೆಂಡ್ ತಂಡದ ಮಿಷೆಲ್ ಮೆಕ್ಲೆನಗಾನ್ ದುಬಾರಿಯಾದರೂ ನಾಲ್ಕು ವಿಕೆಟ್ ಪಡೆದು ಮಿಂಚಿದರು. ಆದರೆ ಲೆಗ್ ಸ್ಪಿನ್ನರ್ ಡೇನಿಯಲ್ ವೆಟೋರಿ ಎದುರಾಳಿ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾದರು. ಅವರು ತಮ್ಮ 10 ಓವರ್‌ಗಳಲ್ಲಿ ಕೇವಲ 23 ರನ್ ನೀಡಿದರು.ಬಾರಿನಲ್ಲಿ ಇಂಗ್ಲೆಂಡ್ ಆಟಗಾರ ಜೋ ರೂಟ್ ಮೇಲೆ ಹಲ್ಲೆ ಮಾಡಿದ ಆರೋಪಕ್ಕೆ ಗುರಿಯಾಗಿರುವ ವಾರ್ನರ್ ಅವರನ್ನು ಈ ಪಂದ್ಯದಿಂದ ಕೈಬಿಡಲಾಗಿತ್ತು. ಅವರ ಬದಲಿಗೆ ಮ್ಯಾಥ್ಯೂ ವೇಡ್ ಇನಿಂಗ್ಸ್ ಆರಂಭಿಸಿದ್ದರು.ಆರಂಭಿಕ ಆಘಾತ: ಸಾಧಾರಣ ಗುರಿ ಎದುರು ನ್ಯೂಜಿಲೆಂಡ್ ಕೂಡ ಆರಂಭಿಕ ಆಘಾತ ಅನುಭವಿಸಿತು. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಲ್ಯೂಕ್ ರೋಂಚಿ ಹಾಗೂ ಮಾರ್ಟಿನ್ ಗುಪ್ಟಿಲ್ ಬೇಗನೇ ಔಟ್ ಆಗಿದ್ದರು. ಇವೆರಡೂ ವಿಕೆಟ್‌ಗಳನ್ನು ಕ್ಲಿಂಟ್ ಮೆಕೇ ಕಬಳಿಸಿದ್ದರು. ಆದರೆ ಈ ಹಂತದಲ್ಲಿ ಮಳೆ ಸುರಿದ ಕಾರಣ ಪಂದ್ಯ ಮುಂದುವರಿಸಲು ಸಾಧ್ಯವಾಗಲಿಲ್ಲ.ಆಡಿದ ಎರಡು ಪಂದ್ಯಗಳಿಂದ ಆಸ್ಟ್ರೇಲಿಯಾ ತಂಡದವರು ಕೇವಲ ಒಂದು ಪಾಯಿಂಟ್ ಹೊಂದಿದ್ದಾರೆ. ಆದರೆ ಮೊದಲ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಗೆದ್ದಿದ್ದ ನ್ಯೂಜಿಲೆಂಡ್ ತಂಡದವರು ಈಗ ಒಟ್ಟು ಮೂರು ಪಾಯಿಂಟ್ ಹೊಂದಿದ್ದಾರೆ. ಇದೇ ಗುಂಪಿನಲ್ಲಿರುವ ಇಂಗ್ಲೆಂಡ್ ತಂಡದವರು ಆಡಿದ ಒಂದು ಪಂದ್ಯದಿಂದ ಎರಡು ಪಾಯಿಂಟ್ ಹೊಂದಿದ್ದಾರೆ. ಶ್ರೀಲಂಕಾ ತಂಡ ತನ್ನ ಮೊದಲ ಪಂದ್ಯದಲ್ಲಿ ಸೋಲು ಕಂಡಿತ್ತು.ಸ್ಕೋರ್ ವಿವರ :

ಆಸ್ಟ್ರೇಲಿಯಾ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 243

ಶೇನ್ ವಾಟ್ಸನ್ ಸಿ ಲ್ಯೂಕ್ ರೋಂಚಿ ಬಿ ಮಿಷೆಲ್ ಮೆಕ್ಲೆನಗಾನ್  05

ಮ್ಯಾಥ್ಯು ವೇಡ್ ಎಲ್‌ಬಿಡಬ್ಲ್ಯು ಬಿ ನೇಥನ್ ಮೆಕ್ಲಮ್  29

ಫಿಲ್ ಹ್ಯೂಸ್ ರನ್‌ಔಟ್ (ಮಾರ್ಟಿನ್ ಗುಪ್ಟಿಲ್)  00

ಜಾರ್ಜ್ ಬೇಲಿ ಬಿ ನೇಥನ್ ಮೆಕ್ಲಮ್  55

ಆ್ಯಡಮ್ ವೋಗ್ಸ್ ಸಿ ಬ್ರೆಂಡನ್ ಮೆಕ್ಲಮ್ ಬಿ ಮಿಷೆಲ್ ಮೆಕ್ಲೆನಗಾನ್  71

ಮಿಷೆಲ್ ಮಾರ್ಷ್ ಔಟಾಗದೆ ಸಿ ಲ್ಯೂಕ್ ರೋಂಚಿ ಬಿ ಮಿಷೆಲ್ ಮೆಕ್ಲೆನಗಾನ್  22

ಗ್ಲೆನ್ ಮ್ಯಾಕ್ಸ್‌ವೆಲ್ ಔಟಾಗದೆ 29

ಜೇಮ್ಸ ಫಾಕ್ನರ್ ಸಿ ಮಿಷೆಲ್ ಮೆಕ್ಲೆನಗಾನ್ ಬಿ ಕೇನ್ ವಿಲಿಯಮ್ಸನ್  06

ಮಿಷೆಲ್ ಜಾನ್ಸನ್ ಸಿ ಬ್ರೆಂಡನ್ ಮೆಕ್ಲಮ್ ಬಿ ಮಿಷೆಲ್ ಮೆಕ್ಲೆನಗಾನ್  08

ಕ್ಲಿಂಟ್ ಮೆಕೇ ಔಟಾಗದೆ  02

ಇತರೆ (ಬೈ-1, ಲೆಗ್‌ಬೈ-7, ವೈಡ್-4, ನೋಬಾಲ್-4)  16ವಿಕೆಟ್ ಪತನ: 1-5 (ವಾಟ್ಸನ್; 1.3); 2-10 (ಹ್ಯೂಸ್; 3.1); 3-74 (ವೇಡ್; 18.6); 4-151 (ಬೇಲಿ; 34.6); 5-193 (ಮಾರ್ಷ್; 41.6); 6-196 (ವೋಗ್ಸ್; 43.1); 7-210 (ಫಾಕ್ನರ್; 46.3); 8-219 (ಜಾನ್ಸನ್; 47.4)

ಬೌಲಿಂಗ್: ಕೈಲ್ ಮಿಲ್ಸ್ 6-1-19-0, ಮಿಷೆಲ್ ಮೆಕ್ಲೆನಗಾನ್ 10-0-65-4 (ನೋಬಾಲ್-3, ವೈಡ್-3), ಡೇನಿಯಲ್ ವೆಟೋರಿ 10-1-23-0, ಟಿಮ್ ಸೌಥಿ 4-1-26-0, ನೇಥನ್ ಮೆಕ್ಲಮ್ 10-0-46-2 (ವೈಡ್-1), ಕೇನ್ ವಿಲಿಯಮ್ಸನ್ 10-0-56-1ನ್ಯೂಜಿಲೆಂಡ್ 15 ಓವರ್‌ಗಳಲ್ಲಿ 2 ವಿಕೆಟ್‌ಗೆ 51

ಲ್ಯೂಕ್ ರೋಂಚಿ ವ್ಯಾಟ್ಸನ್ ಬಿ ಕ್ಲಿಂಟ್ ಮೆಕೇ  14

ಮಾರ್ಟಿನ್ ಗುಪ್ಟಿಲ್ ಸಿ ಮ್ಯಾಕ್ಸ್‌ವೆಲ್ ಬಿ ಕ್ಲಿಂಟ್ ಮೆಕೇ 08

ಕೇನ್ ವಿಲಿಯಮ್ಸನ್ ಔಟಾಗದೆ  18

ರಾಸ್ ಟೇಲರ್ ಔಟಾಗದೆ  09

ಇತರೆ (ಲೆಗ್ ಬೈ-1, ವೈಡ್-1)  02ವಿಕೆಟ್ ಪತನ: 1-18 (ಗುಪ್ಟಿಲ್; 3.6), 2-26 (ರೊಂಚಿ; 7.1).

ಬೌಲಿಂಗ್: ಮಿಷೆಲ್ ಜಾನ್ಸನ್ 4-0-18-0, ಕ್ಲಿಂಟ್ ಮೆಕೇ 4-0-10-2, ಶೇನ್ ವಾಟ್ಸನ್ 3-1-11-1, ಜೇಮ್ಸ ಫಾಕ್ನರ್ 3-0-7-0, ಕ್ಸೇವಿಯರ್ ಡೋಹರ್ಟಿ 1-0-4-0.

ಫಲಿತಾಂಶ: ಪಂದ್ಯ ರದ್ದು ಹಾಗೂ ಉಭಯ ತಂಡಗಳಿಗೆ ತಲಾ ಒಂದು ಪಾಯಿಂಟ್

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.