ಮಂಗಳವಾರ, ಮೇ 24, 2022
27 °C

ಪಕ್ಷ ಸಂಘಟನೆಗೆ ಕಾರ್ಯಕರ್ತರೇ ಮುಖ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಕಾಂಗ್ರೆಸ್ ಬಹಳ ಕೆಳಸ್ತರಕ್ಕೆ ಹೋಗಿದೆ ಎಂಬ ಮಾತುಗಳಿವೆ; ಪದೇ, ಪದೇ ಈ ಮಾತುಗಳು ಕೇಳಿಬರುತ್ತಿದೆ. ಆದರೆ, ಇದಕ್ಕೆ ಪಕ್ಷ ಕೆಳಹಂತದ ಕಾರ್ಯಕರ್ತರನ್ನು ನಿರ್ಲಕ್ಷ್ಯ ಮಾಡಿದ್ದೇ ಕಾರಣ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ ಕಾಂಗ್ರೆಸ್ಸಿನ ಹಿನ್ನಡೆಯನ್ನು ವಿಶ್ಲೇಷಿಸಿದರು.ನಗರದ ಲಗಾನ್ ಕಲ್ಯಾಣಮಂದಿರದ ಆವರಣದಲ್ಲಿ ಶನಿವಾರ ಕಾಂಗ್ರೆಸ್ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ `ಚಿಂತನ- ಮಂಥನ ಸಮಾವೇಶ~ ಉದ್ಘಾಟಿಸಿ ಅವರು ಮಾತನಾಡಿದರು.ಪಕ್ಷ ಇದುವರೆಗೂ ಕೆಳಹಂತದ ಕಾರ್ಯಕರ್ತರ ಸಲಹೆಗಳನ್ನು ಆಲಿಸಲು ಹೋಗಿಲ್ಲ. ಅವರ ಸಲಹೆಗಳನ್ನು ನಾವ್ಯಾಕೆ ಕೇಳಬೇಕು ಎಂಬಂತೆ ನಾಯಕರು ನಡೆದು ಕೊಂಡಿದ್ದೇವೆ. ಪಕ್ಷಕ್ಕೆ ಈಗ ಅರಿವಾಗಿದೆ. ಹಾಗಾಗಿ, ಕಾಂಗ್ರೆಸ್, ಜನರ ಬಳಿಗೆ ಹೋಗುವ ಹಲವಾರು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಹೇಳಿದರು.`ಕಾಂಗ್ರೆಸ್ ನಡಿಗೆ ಜನರ ಬಳಿಗೆ~ ಕಾರ್ಯಕ್ರಮ ಅಭೂತ ಪೂರ್ವ ಯಶಸ್ಸು ಕಂಡಿದೆ. ಈಗ ಹಮ್ಮಿಕೊಂಡ `ಚಿಂತನ- ಮಂಥನ~ ಹಾಗೂ `ಮತದಾರರೊಂದಿಗೆ ಮುಖಾಮುಖಿ~ ಕಾರ್ಯಕ್ರಮಗಳಿಗೂ ಅಷ್ಟೇ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಇದಕ್ಕೂ ಟೀಕೆಗಳು ಕೇಳಿಬರುತ್ತಿವೆ. ಆದರೆ, ಕಾಂಗ್ರೆಸ್, ಜನರ ಮನಸ್ಸಿನ ಹತ್ತಿರಕ್ಕೆ ಹೋಗುತ್ತಿದೆ ಎಂದರು.  ದೇಶ ಮತ್ತು ರಾಜ್ಯದ ಬೆಳವಣಿಗೆಗೆ ಕಾಂಗ್ರೆಸ್ ಸಾಕಷ್ಟು ಕೊಡುಗೆ ನೀಡಿದೆ. ಕೃಷಿ ಮತ್ತು ಆರ್ಥಿಕ ಉದಾರೀಕರಣ ನೀತಿಗಳನ್ನು ಜಾರಿಗೆ ತಂದು ಆಹಾರ ಉತ್ಪಾದನೆ ಜತೆಗೆ ಹಲವು ರಂಗಗಳಲ್ಲಿನ ಸಾಧನೆಗೆ ಕಾಂಗ್ರೆಸ್ ಕಾರಣವಾಗಿದೆ ಎಂದು ಹೇಳಿದರು.ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಎಂದೋ ಜೈಲಿಗೆ ಹೋಗಬೇಕಿತ್ತು. ಕೊನೆಗೂ ನೆಲದ ನ್ಯಾಯಕ್ಕೆ ಜಯ ದೊರತಿದೆ. ಇದನ್ನು ಸಂಭ್ರಮಿಸಬೇಕಿಲ್ಲ; ಯಾವುದೇ ವ್ಯಕ್ತಿ, ಯಾವುದೇ ಪಕ್ಷದಲ್ಲಿರಲಿ ಆತ ಕಾನೂನು ಉಲ್ಲಂಘಿಸಿದರೆ ಅವನಿಗೂ ಇದೇ ಶಿಕ್ಷೆಯಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದರು.ಮುಖ್ಯಮಂತ್ರಿಯಾಗಿ ಡಿ.ವಿ. ಸದಾನಂದಗೌಡ ಅಧಿಕಾರ ವಹಿಸಿಕೊಂಡು 3 ತಿಂಗಳು ಸಮೀಪಿಸಿದೆ. ಆದರೆ, ಇದುವರೆಗೂ ಅವರು ಸ್ವತಂತ್ರ ನಿರ್ಧಾರ ಕೈಗೊಂಡಿಲ್ಲ. ಯಡಿಯೂರಪ್ಪ ಈಗ ಜೈಲಿಗೆ ಹೋದ ಮೇಲಾದರೂ ಸದಾನಂದಗೌಡ ಅವರು ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳುತ್ತಾರೋ ನೋಡಬೇಕು ಎಂದು ಹೇಳಿದರು.ದ್ರೋಹ ಬಗೆಯಬೇಡಿ: ಪ್ರಾಸ್ತಾವಿಕ ಮಾತನಾಡಿದ ಮಾಜಿ ಸಚಿವ  ಕಾಗೋಡು ತಿಮ್ಮಪ್ಪ, ಕಾಂಗ್ರೆಸ್ ಪಕ್ಷ ತಾಯಿ ಇದ್ದಂತೆ; ಅದಕ್ಕೆ ದ್ರೋಹ ಬಗೆಯಬೇಡಿ. ಪಕ್ಷ ನಿಮ್ಮ ಮೇಲಿಟ್ಟ ವಿಶ್ವಾಸಕ್ಕೆ ಚ್ಯುತಿ ತಂದುಕೊಳ್ಳಬೇಡಿ; ಬದ್ಧತೆಯಿಂದ ಕೆಲಸ ಮಾಡಿ ಎಂದು ಬೂತ್ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಸಲಹೆ ಮಾಡಿದ ಅವರು, ಪಕ್ಷ ಸಂಘಟನೆಗೆ ನೆಲಮಟ್ಟದ ಕಾರ್ಯಕರ್ತರೇ ಮುಖ್ಯ. ಅವರ ಅಭಿಪ್ರಾಯ, ಸಲಹೆಗಳನ್ನು ಪಡೆದುಕೊಂಡೇ ಪಕ್ಷವನ್ನು ಬಲಪಡಿಸಬೇಕಾಗಿದೆ ಎಂದರು.ಸಮಾವೇಶದ ಸಂಚಾಲಕ ಮಹಿಮ ಜೆ. ಪಟೇಲ್ ಮಾತನಾಡಿದರು. ವಿವಿಧ ವಿಷಯಗಳ ಕುರಿತು ಮಾಜಿ ಶಾಸಕ ಡಿ.ಆರ್. ಪಾಟೀಲ್, ಕೆಪಿಸಿಸಿ ಉಪಾಧ್ಯಕ್ಷರಾದ ರಾಣಿ ಸತೀಶ್, ಡಾ.ಬಿ.ಎಲ್. ಶಂಕರ್ ಮಾತನಾಡಿದರು.ವಿರೋಧಪಕ್ಷದ ನಾಯಕರಾದ ಸಿದ್ದರಾಮಯ್ಯ, ಮೋಟಮ್ಮ, ಮಾಜಿ ಸಚಿವರಾದ ಕುಮಾರ ಬಂಗಾರಪ್ಪ, ಎ. ಕೃಷ್ಣಪ್ಪ, ಶಿವಮೂರ್ತಿ ನಾಯ್ಕ,  ಶಾಸಕರಾದ ಕಿಮ್ಮನೆ ರತ್ನಾಕರ, ಬಿ.ಕೆ. ಸಂಗಮೇಶ್ವರ, ಮಾಜಿ ಶಾಸಕರಾದ ಡಾ.ಜಿ.ಡಿ. ನಾರಾಯಣಪ್ಪ, ಬಿ. ಸ್ವಾಮಿರಾವ್, ಮಹಾಲಿಂಗಪ್ಪ, ಪಟ್ಟಮಕ್ಕಿ ರತ್ನಾಕರ, ಎಚ್.ಎಂ. ಚಂದ್ರಶೇಖರಪ್ಪ, ಮಾಜಿ ಶಾಸಕರಾದ ಪ್ರಫುಲ್ಲ ಮಧುಕರ್, ಶಾಂತವೀರಪ್ಪಗೌಡ, ಮೀರ್ ಅಜೀಜ್ ಅಹಮದ್, ಲೋಕಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಎಚ್.ಸಿ. ಯೋಗೀಶ್, ಕರಿಯಣ್ಣ, ಎಸ್.ಪಿ. ದಿನೇಶ್, ಬಲ್ಕೀಷ್‌ಬಾನು, ರುದ್ರೇಶ್, ಇಸ್ಮಾಯಿಲ್‌ಖಾನ್ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಆರ್. ಪ್ರಸನ್ನಕುಮಾರ್ ಅಧ್ಯಕ್ಷತೆ ವಹಿಸಿದ್ದರು.

`ಕಾಂಗ್ರೆಸ್ ನಿಮ್ಮ ಮನೆ ಸ್ವತ್ತಲ್ಲ~

ಶಿವಮೊಗ್ಗ:
`ಕಾಂಗ್ರೆಸ್ ನಿಮ್ಮ ಸ್ವತ್ತಲ್ಲ; ಮನೆಯ ಆಸ್ತಿಯಲ್ಲ. ಕಾಂಗ್ರೆಸ್ ಹಾಳು ಮಾಡಲು ಯಾರಿಗೂ ಹಕ್ಕೂ ಇಲ್ಲ~

-ಇದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ, ಜಿಲ್ಲಾ ಕಾಂಗ್ರೆಸ್‌ನ ಗುಂಪುಗಾರಿಕೆಗೆ ಪರೋಕ್ಷವಾಗಿ ಚಾಟಿ ಏಟು ಬೀಸಿದ ರೀತಿ.ಗುಂಪುಗಳಿಂದ ಪ್ರಯೋಜನವಿಲ್ಲ. ನಾಯಕತ್ವ ತೆಗೆದುಕೊಂಡವರಿಗೆ ಬೆಂಬಲಿಸಿ; ವೈಮನಸ್ಸುಗಳಿದ್ದರೆ ಕುಳಿತು ಬಗೆಹರಿಸಿಕೊಳ್ಳಿ. ಇಲ್ಲದಿದ್ದರೆ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಅವರು ತೀಕ್ಷ್ಣವಾಗಿ ನುಡಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.