ಸೋಮವಾರ, ಜನವರಿ 20, 2020
19 °C

ಪಠ್ಯದಲ್ಲಿ ಭಗವದ್ಗೀತೆ: ವಿಧಾನಸೌಧ ಬಳಿ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಶಾಲಾ ಪಠ್ಯದಲ್ಲಿ ಭಗವದ್ಗೀತೆಯನ್ನು ಅಳವಡಿಸುವ ರಾಜ್ಯ ಸರ್ಕಾರದ ಚಿಂತನೆಯನ್ನು ಖಂಡಿಸಿ ರಾಜ್ಯ ದಲಿತ ಸಂಘರ್ಷ ಸಮಿತಿ ಸದಸ್ಯರು ವಿಧಾನಸೌಧದ ಬಳಿ ಶುಕ್ರವಾರ ಪ್ರತಿಭಟನೆ ನಡೆಸಿದರು.ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಎನ್.ಮೂರ್ತಿ ಮಾತನಾಡಿ, `ಶಾಲಾ ಮಕ್ಕಳಿಗೆ ಭಗವದ್ಗೀತೆಯನ್ನು ಬೋಧಿಸಲು ಹೊರಟಿರುವ ಸರ್ಕಾರ ಮುಂದಿನ ಪರಿಣಾಮಗಳ ಬಗ್ಗೆ ಚಿಂತಿಸುತ್ತಿಲ್ಲ. ವಿಜ್ಞಾನ, ತಂತ್ರಜ್ಞಾನ ಹಾಗೂ ಹೊರ ಜಗತ್ತಿನ ಆವಿಷ್ಕಾರಗಳ ಬಗ್ಗೆ ಶಿಕ್ಷಣ ನೀಡಿ ಮಕ್ಕಳ ಜ್ಞಾನವನ್ನು ವೃದ್ಧಿಸಬೇಕಾದ ಸರ್ಕಾರ, ಧಾರ್ಮಿಕ ಶಿಕ್ಷಣ ನೀಡುವ ಮೂಲಕ ಮಕ್ಕಳಲ್ಲಿ ಈಗಿನಿಂದಲೇ ತಾರತಮ್ಯದ ಭಾವನೆಯನ್ನು ಹುಟ್ಟುಹಾಕುವ ಪ್ರಯತ್ನ ಮಾಡುತ್ತಿದೆ~ ಎಂದು ಆಕ್ರೋಶ ವ್ಯಕ್ತಪಡಿಸಿದರು.`ಮಡೇಸ್ನಾನದಂತಹ ಅನಿಷ್ಟ ಪದ್ಧತಿಯನ್ನು ತೆಗದು ಹಾಕುವ ಬಗ್ಗೆ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಅನಕ್ಷರಸ್ಥ ಜನರಲ್ಲಿ ಮೂಢನಂಬಿಕೆಯ ಬೀಜ ಬಿತ್ತಿ, ಅವರನ್ನು ಎಂಜಲು ಎಲೆಯ ಮೇಲೆ ಉರುಳಿಸಲಾಗುತ್ತಿದೆ. ಹಲವು ದೇವಸ್ಥಾನಗಳಲ್ಲಿ, ಮಠಗಳಲ್ಲಿ ಪಂಕ್ತಿಬೇಧ ಹಾಗೂ ಜಾತಿಬೇಧ  ಮಾಡುವ ಮೂಲಕ ಅಸ್ಪೃಶ್ಯತೆಯನ್ನು ಹುಟ್ಟುಹಾಕುತ್ತಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ~ ಎಂದು ಅವರು ದೂರಿದರು. `ಸಿಂದಗಿಯಕಲ್ಲಿ ಪಾಕ್ ಧ್ವಜ ಹಾರಿಸಿ ರಾಜ್ಯದ ಅಶಾಂತಿಗೆ ಕಾರಣವಾದ ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್‌ನನ್ನು ಕೂಡಲೇ ಬಂಧಿಸಿ ಗಡಿಪಾರು ಮಾಡಬೇಕು~ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

 

ಸಮಿತಿಯ ಬೇಡಿಕೆಗಳಿಗೆ ಶೀಘ್ರವೇ ಪರಿಹಾರ ದೊರೆಯದಿದ್ದಲ್ಲಿ ರಾಜ್ಯಾದ್ಯಂತ ಧರಣಿ ಮಾಡುವುದಾಗಿ ಪ್ರತಿಭಟನಾಕಾರರು ಸರ್ಕಾರವನ್ನು ಎಚ್ಚರಿಸಿದರು. 

ಪ್ರತಿಕ್ರಿಯಿಸಿ (+)