ಮಂಗಳವಾರ, ಮೇ 18, 2021
22 °C
9,725 ನಕಲಿ ಚೀಟಿ ಪತ್ತೆ, ಸಿಒಡಿಗೆ ಪ್ರಕರಣ ವರ್ಗಾವಣೆ

ಪಡಿತರ ಚೀಟಿಗಾಗಿ ಆನ್‌ಲೈನ್‌ಗೇ ಕನ್ನ!

ಚಂದ್ರಹಾಸ ಹಿರೇಮಳಲಿ ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಅಕ್ರಮ ತಡೆಯಲು ಆಹಾರ ಇಲಾಖೆ ಜಾರಿಗೆ ತಂದ `ಆನ್‌ಲೈನ್ ನೋಂದಣಿ'ಗೇ ಕನ್ನ ಹಾಕಿರುವ ಪಟ್ಟಭದ್ರರು ಸಾವಿರಾರು ನಕಲಿ ಪಡಿತರ ಚೀಟಿ ಪಡೆದಿರುವ ಅಂಶ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದ್ದು, ಇದರಿಂದ ಬೆಚ್ಚಿಬಿದ್ದಿರುವ ಸರ್ಕಾರ ಪ್ರಕರಣವನ್ನು ಸಿಒಡಿಗೆ ವರ್ಗಾಯಿಸಿದೆ.ಆಹಾರ, ನಾಗರಿಕ ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಆಯುಕ್ತರ ಆದೇಶದಂತೆ ಹೊಸ ಪಡಿತರ ಚೀಟಿಗಾಗಿ ಆನ್‌ಲೈನ್ ಮೂಲಕ ಅರ್ಜಿ ನೀಡುವ ಹಾಗೂ ತಾತ್ಕಾಲಿಕ ಪಡಿತರ ಚೀಟಿ ಕೋರುವ ಕುಟುಂಬಗಳ ಭಾವಚಿತ್ರ ಹಾಗೂ ಜೀವಮಾಪಕ (ಬಯೋಮೆಟ್ರಿಕ್) ಸಂಗ್ರಹಿಸಲು 2012ರ ಜನವರಿಯಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಹಲವು ಪ್ರಾಂಚೈಸಿಗಳನ್ನು ನೇಮಿಸಲಾಗಿತ್ತು.ಪಡಿತರ ಕೋರಿ ಅರ್ಜಿ ಸಲ್ಲಿಸಿದ 75 ಸಾವಿರ ಕುಟುಂಬಗಳ ಮಾಹಿತಿಗಳನ್ನು ನವೆಂಬರ್‌ನಲ್ಲಿ ಪಡೆದ ಆಹಾರ ಇಲಾಖೆ ಶಾಶ್ವತ ಪಡಿತರ ಚೀಟಿ ವಿತರಣೆಗೆ ಕ್ರಮ ಕೈಗೊಂಡಿತ್ತು. ಈ ಸಂದರ್ಭದಲ್ಲಿ ಒಂದೇ ಪ್ರಾಂಚೈಸಿಯಿಂದ 10 ಸಾವಿರಕ್ಕೂ ಹೆಚ್ಚು ಪಡಿತರ ಚೀಟಿಗಳನ್ನು ದಾವಣಗೆರೆ ನಗರದ ವಿವಿಧ ನ್ಯಾಯಬೆಲೆ ಅಂಗಡಿಗಳ ಹೆಸರಿಗೆ ಅಪ್‌ಲೋಡ್ ಮಾಡಿ, ಪಡಿತರ ಚೀಟಿ ಪಡೆದಿರುವುದು ಇಲಾಖೆಯ ಅಧಿಕಾರಿಗಳಲ್ಲಿ ಅನುಮಾನ ಹುಟ್ಟಿಸಿತ್ತು.ದಾಖಲೆಗಳನ್ನು ಪರಿಶೀಲಿಸಿದಾಗ ಲೋಕಿಕೆರೆ ರಸ್ತೆಯ ಕೈಗಾರಿಕಾ ಪ್ರದೇಶದಲ್ಲಿರುವ `ಮೆ.ಕೇಸರಿ ಟೆಕ್ನಾಲಜೀಸ್' ಹೆಸರಿನ ಪ್ರಾಂಚೈಸಿಯಿಂದ ನೀಡಿದ ದಾಖಲೆಗಳಿಗಿಂತ 9,725 ಪಡಿತರ ಚೀಟಿಯ ಅರ್ಜಿಗಳು ಅಪ್‌ಲೋಡ್ ಆಗಿರುವುದು ಬೆಳಕಿಗೆ ಬಂದಿತ್ತು.ಇಲಾಖೆಯ ಅಧಿಕಾರಿಗಳು ನೀಡಿದ ನೋಟಿಸ್‌ನಿಂದ ಎಚ್ಚೆತ್ತುಕೊಂಡ `ಮೆ.ಕೇಸರಿ ಟೆಕ್ನಾಲಜೀಸ್' ಮಾಲೀಕ ಕೃಷ್ಣ ಗುಂಡಾಲ್ ತಮ್ಮ ಕಂಪ್ಯೂಟರ್ ಮಾಹಿತಿ ಪರಿಶೀಲಿಸಿ, `ಬೇರೊಂದು ಪ್ರಾಂಚೈಸಿ ನಮ್ಮ ಕಂಪ್ಯೂಟರ್‌ನ ಯೂಸರ್ ನೇಮ್ ಹಾಗೂ ಪಾಸ್‌ವರ್ಡ್ ಹ್ಯಾಕ್ ಮಾಡಿ ಕೆಲವೇ ಮೊಬೈಲ್‌ಗಳಿಂದ ವಿವಿಧ ನ್ಯಾಯಬೆಲೆ ಅಂಗಡಿಗಳ ಹೆಸರಿಗೆ ಅಪ್‌ಲೋಡ್ ಮಾಡಿದ್ದಾರೆ. `ಮೆ.ಚೆನ್ನಪ್ಪ ಬಯೋಮೆಟ್ರಿಕ್ ಸೆಂಟರ್' ಈ ಕೃತ್ಯ ಎಸಗಿರಬಹುದು. ಅವರ ಬಳಿ ಇತರೆ ಸೆಂಟರ್‌ಗಳ ಯೂಸರ್‌ನೇಮ್ ಹಾಗೂ ಪಾಸ್‌ವರ್ಡ್ ಸಹ ಇದೆ' ಎಂದು ಇಲಾಖೆಯ ಅಧಿಕಾರಿಗಳಿಗೆ ಲಿಖಿತ ಮಾಹಿತಿ ನೀಡಿದ್ದರು.ಕಂಪ್ಯೂಟರ್‌ಗಳಿಗೇ ಕನ್ನಹಾಕಿ ನಕಲಿ ಪಡಿತರ ಚೀಟಿ ಪಡೆಯುವ ಇಂತಹ ಜಾಲ ಪತ್ತೆಯಾಗುತ್ತಿದಂತೆ ಎಚ್ಚೆತ್ತುಕೊಂಡ ಜಿಲ್ಲಾಧಿಕಾರಿ ಪ್ರಕರಣದ ತನಿಖೆ ನಡೆಸಿ ವರದಿ ನೀಡುವಂತೆ ತಹಶೀಲ್ದಾರ್ ಹಾಗೂ ಆಹಾರ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಆದೇಶಿಸಿದ್ದರು. ಆಹಾರ ಇಲಾಖೆ ಅಧಿಕಾರಿಗಳು ಈ ಸಂಬಂಧ ವಿದ್ಯಾನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.ತಹಶೀಲ್ದಾರ್ ಹಾಗೂ ಆಹಾರ ಇಲಾಖೆಯ ನಿರ್ದೇಶಕರು ಪ್ರಕರಣದ ತನಿಖೆ ಕೈಗೆತ್ತಿಕೊಂಡಾಗ ಕೇವಲ 9,725 ಪಡಿತರ ಮಾತ್ರವಲ್ಲದೇ ವಂಚನೆಯ ಜಾಲ ರಾಜ್ಯದ ಇತರ ಕಡೆಗಳಲ್ಲೂ ಹರಡಿರುವ ಶಂಕೆ ವ್ಯಕ್ತವಾಗಿದೆ. ಇದರಿಂದ ಎಚ್ಚೆತ್ತುಕೊಂಡ ಸರ್ಕಾರ ಪ್ರಕರಣದ ತನಿಖೆಯನ್ನು ಸಿಒಡಿಗೆ ವಹಿಸಿದೆ.`ಪ್ರಕರಣದ ಸಮಗ್ರ ತನಿಖೆಗೆ ಪರಿಣತ ತಂತ್ರಜ್ಞರ ಆವಶ್ಯಕತೆ ಇತ್ತು. ಸಿಒಡಿಯ ಸೈಬರ್ ಅಪರಾಧ ವಿಭಾಗದಲ್ಲಿ ನುರಿತ ಅಧಿಕಾರಿಗಳು ಇರುವ ಹಿನ್ನೆಲೆಯಲ್ಲಿ ಇಡೀ ಪ್ರಕರಣವನ್ನು ವರ್ಗಾಯಿಸಲು ಕೋರಲಾಗಿತ್ತು. ಅದರಂತೆ ಸರ್ಕಾರ ಕ್ರಮ ತೆಗೆದುಕೊಂಡಿದೆ' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಾಭೂರಾಂ ಮಾಹಿತಿ ನೀಡಿದ್ದಾರೆ.ಜಿಲ್ಲೆಯಲ್ಲಿ ನಕಲಿ ಪಡಿತರ ಚೀಟಿಗಳ ಹಾವಳಿ ಈ ಹಿಂದೆಯೂ ಕಂಡುಬಂದಿತ್ತು. ಆಹಾರ ಇಲಾಖೆಯ ಅಧಿಕಾರಿಗಳು 2011ರಲ್ಲಿ 1.29 ಲಕ್ಷ ಹಾಗೂ 2012ರಲ್ಲಿ 48 ಸಾವಿರ ನಕಲಿ ಪಡಿತರ ಚೀಟಿ ಪತ್ತೆಹಚ್ಚಿ ರದ್ದು ಮಾಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.