ಗುರುವಾರ , ಮೇ 13, 2021
18 °C

ಪಡಿತರ ಚೀಟಿ ವಿತರಣೆ ಕುರಿತು ಆಕ್ಷೇಪ: ಒಪ್ಪಂದವೇ ಅವ್ಯವಸ್ಥೆಗೆ ಕಾರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ಸರ್ಕಾರ- ಖಾಸಗಿ ಸಹಭಾಗಿತ್ವದಲ್ಲಿ ಡಿಜಿಟಲ್ ಪಡಿತರ ಚೀಟಿಗಳ ವಿತರಣೆ ಮಾಡುವ ಸಂಬಂಧ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಹಾಗೂ ಖಾಸಗಿ ಕಂಪೆನಿಯೊಂದರ ನಡುವೆ 2006ರಲ್ಲಿ ನಡೆದ ಒಪ್ಪಂದದಲ್ಲಿ ಹಲವು ಲೋಪಗಳಿದ್ದವು. ಇದು ರಾಜ್ಯದಾದ್ಯಂತ ಪಡಿತರ ಚೀಟಿ ವಿತರಣೆ ಸ್ಥಗಿತಗೊಳ್ಳಲು ಕಾರಣವಾಯಿತು ಎಂದು ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕ ಪರಿಶೋಧಕರ (ಸಿಎಜಿ) ವರದಿ ಹೇಳಿದೆ.

ಗುತ್ತಿಗೆದಾರ ಖಾಸಗಿ ಕಂಪೆನಿಯ ಅರ್ಹತೆಯನ್ನು ಪರೀಕ್ಷಿಸದೇ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಈ ವ್ಯವಸ್ಥೆ ಕಾರ್ಯಸಾಧುವೇ ಎಂಬುದನ್ನು ಪರಿಶೀಲಿಸದೇ ಖಾಸಗಿ ಕಂಪೆನಿ ಅನುಷ್ಠಾನಕ್ಕೆ ಕೈ ಹಾಕಿತ್ತು. 54.23 ಕೋಟಿ ರೂಪಾಯಿ ಸಂಭಾವನೆ ಪಡೆದ ಕಂಪೆನಿ ನಿಗದಿತ ಅವಧಿಗೂ ಮುನ್ನವೇ 2010ರ ನವೆಂಬರ್‌ನಲ್ಲಿ ಪಡಿತರ ಚೀಟಿ ವಿತರಣೆ ಸ್ಥಗಿತಗೊಳಿಸಿತು ಎಂಬ ಅಂಶ ವರದಿಯಲ್ಲಿದೆ.

ಸಿಎಜಿ ವರದಿಯಲ್ಲಿ ಖಾಸಗಿ ಕಂಪೆನಿಯ ಹೆಸರನ್ನು ಉಲ್ಲೇಖಿಸಿಲ್ಲ. ಸರ್ಕಾರದ ಮೂಲಗಳ ಪ್ರಕಾರ ಇದು ಬೆಂಗಳೂರು ಮೂಲದ `ಕೊಮ್ಯಾಟ್ ಟೆಕ್ನಾಲಜೀಸ್~ ಎಂಬ ಕಂಪೆನಿ.

ಸಂಸ್ಥೆಯ ಆಗಿನ ಉಪಾಧ್ಯಕ್ಷ ರವಿ ರಂಗನ್ ಮತ್ತು ಸಹಸಂಸ್ಥಾಪಕ ಶ್ರೀರಾಂ ರಾಘವನ್ ಒಪ್ಪಂದ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು. ಇದೇ ಕಂಪೆನಿ ಕಂದಾಯ ಇಲಾಖೆಯ `ಭೂಮಿ~ ಯೋಜನೆ ಮತ್ತು ಮತದಾರರ ಭಾವಚಿತ್ರ ಸಹಿತ ಗುರುತು ಚೀಟಿಗಳ ವಿತರಣೆಯ ಗುತ್ತಿಗೆಯನ್ನೂ ಪಡೆದಿತ್ತು.

ಇತರೆ ಪರ್ಯಾಯ ಮಾರ್ಗಗಳ ಬಗ್ಗೆ ಪರಿಶೀಲನೆ ನಡೆಸದೇ ರಾಜ್ಯ ಸರ್ಕಾರವು ಸರ್ಕಾರಿ- ಖಾಸಗಿ ಸಹಭಾಗಿತ್ವದಲ್ಲಿ ಕಂಪ್ಯೂಟರೀಕೃತ ಪಡಿತರ ಚೀಟಿಗಳ ವಿತರಣೆಗೆ ನಿರ್ಧರಿಸಿತ್ತು. ಇದಕ್ಕಾಗಿ ಐದೂವರೆ ವರ್ಷಗಳ ಅವಧಿಯ ಒಪ್ಪಂದ ಮಾಡಿಕೊಂಡಿತ್ತು.

ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಗುತ್ತಿಗೆ ನೀಡಲಾಗಿತ್ತು. ಯಾವುದೇ ನಿಯಂತ್ರಣಗಳಿಲ್ಲದೇ ನಿರ್ಧಾರ ಕೈಗೊಳ್ಳಲಾಗಿತ್ತು. ಇದರ ಪರಿಣಾಮವಾಗಿಯೇ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ವಿತರಿಸಿದ ಪಡಿತರ ಚೀಟಿಗಳ ಸಂಖ್ಯೆಯಲ್ಲಿ ದೊಡ್ಡ ಪ್ರಮಾಣದ ಏರಿಕೆ ಆಯಿತು ಎಂದು ಸಿಎಜಿ ಅಭಿಪ್ರಾಯಪಟ್ಟಿದೆ.

ರೂ 54.23 ಕೋಟಿ ಪಾವತಿ ಆದ ಬಳಿಕ ಖಾಸಗಿ ಕಂಪೆನಿಯು ಕಾರ್ಯನಿರ್ವಹಣೆಯನು ಸ್ಥಗಿತಗೊಳಿಸಿತು. ಪಡಿತರ ಚೀಟಿಗಳ ಅಂಕಿಅಂಶಗಳ ವಿವರದ ಹೊರತಾಗಿ ಯಾವುದೇ ಆಸ್ತಿಯನ್ನೂ ಸರ್ಕಾರಕ್ಕೆ ಹಸ್ತಾಂತರ ಮಾಡಲಿಲ್ಲ.

ಖಾಸಗಿ ಕಂಪೆನಿ ಸಿದ್ಧಪಡಿಸಿದ ಅಂಕಿಅಂಶ, ಮಾಹಿತಿಗಳಲ್ಲಿ ಇದ್ದ ಲೋಪವನ್ನು ಸರಿಪಡಿಸುವ ಹೊಣೆಯನ್ನು ಆಹಾರ ಮತ್ತು  ನಾಗರಿಕ ಪೂರೈಕೆ ಇಲಾಖೆ ತನ್ನ ಮೇಲೆ ಎಳೆದುಕೊಂಡಿತು.

ಲೋಪ ಸರಿಪಡಿಸುವ ಕೆಲಸ ಇನ್ನೂ ಪ್ರಗತಿಯಲ್ಲಿದೆ. ರಾಜ್ಯದ ಬೊಕ್ಕಸಕ್ಕೆ ರೂ 54.53 ಕೋಟಿಯಷ್ಟು ನಷ್ಟಕ್ಕೆ ಕಾರಣವಾದ ಒಪ್ಪಂದ ತಯಾರಿ ಮತ್ತು ಗುತ್ತಿಗೆ ವಹಿಸುವಿಕೆಯ ಜವಾಬ್ದಾರಿಯನ್ನು ನಿರ್ಧರಿಸಬೇಕು. ಪಡಿತರ ಚೀಟಿಗಳ ಸಮಗ್ರ ಮಾಹಿತಿ, ಅಂಕಿಅಂಶಗಳಲ್ಲಿ ಇರುವ ತಪ್ಪುಗಳನ್ನು ತ್ವರಿತವಾಗಿ ಸರಿಪಡಿಸಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.