ಪತಿ ಪರಾರಿ: ಪತ್ನಿ ದೂರು
ಸಂತೇಮರಹಳ್ಳಿ: ಪ್ರೀತಿಸಿ ಮದುವೆಯಾದ ಗಂಡ ಪರಾರಿಯಾಗಿದ್ದಾನೆ ಎಂದು ಮಹಿಳೆಯೊಬ್ಬರು ಇಲ್ಲಿನ ಪೊಲೀಸ್ ಠಾಣೆಗೆ ಬುಧವಾರ ದೂರು ನೀಡಿದ್ದಾರೆ.
ಗ್ರಾಮದ ಜ್ಯೋತಿ ಎಂಬವರೇ ದೂರು ನೀಡಿದವರು. ಜ್ಯೋತಿ ಹಾಗೂ ರವಿಕುಮಾರ್ ಒಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು.
ರವಿಕುಮಾರ್ ನಂಜನಗೂಡು ಘಟಕದ ರಾಜ್ಯ ರಸ್ತೆಸಾರಿಗೆಯ ಸಂಸ್ಥೆಯಲ್ಲಿ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾನೆ. ಮೂರು ತಿಂಗಳ ಹಿಂದೆ ತಿ.ನರಸೀಪುರದ ದೇವಸ್ಥಾನದಲ್ಲಿ ವಿವಾಹವಾಗಿದ್ದರು. ಅದೇ ಪಟ್ಟಣದಲ್ಲಿ ಮನೆಮಾಡಿಕೊಂಡು ವಾಸವಾಗಿದ್ದರು.
`ಐದು ದಿನಗಳ ಹಿಂದೆ ರವಿಕುಮಾರ್ ಮೊಬೈಲ್ಗೆ ಕರೆನ್ಸಿ ಹಾಕಿಸಿಕೊಂಡು ಬರುವುದಾಗಿ ಹೇಳಿ ಹೋದವ ಮತ್ತೆ ಮನೆಗೆ ಮರಳಿಲ್ಲ. ದೂರವಾಣಿ ಕರೆಗೂ ಸಿಗುತ್ತಿಲ್ಲ. ಗ್ರಾಮಕ್ಕೆ ಹೋದರೆ ರವಿಕುಮಾರ್ ಮನೆಯವರು ಹಣ ಕೊಡುತ್ತೇವೆ ಎಲ್ಲಿಗಾದರೂ ಹೋಗು ಎಂದು ಬೆದರಿಕೆ ಹಾಕುತ್ತಿದ್ದಾರೆ' ಎಂದು ಜ್ಯೋತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
`ತಂದೆ, ತಾಯಿ ಅನುಪಸ್ಥಿತಿಯಲ್ಲಿ ಪ್ರೀತಿಸಿ ಮದುವೆಯಾದೆ. ಈಗ ಗಂಡ ಕೈಕೊಟ್ಟಿದ್ದಾನೆ. ಆತನನ್ನು ಹುಡುಕಿ ಸಹಬಾಳ್ವೆಗೆ ಅನುವು ಮಾಡಿಕೊಡಬೇಕು' ಎಂದು ಜ್ಯೋತಿ ಸಂತೇಮರಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.