ಗುರುವಾರ , ಫೆಬ್ರವರಿ 25, 2021
23 °C

ಪತ್ತೆಗೆ ವಿಶೇಷ ಜಾಗೃತ ದಳ

ಸಂದರ್ಶನ: ಎ.ಎಂ. ಸುರೇಶ Updated:

ಅಕ್ಷರ ಗಾತ್ರ : | |

ಪತ್ತೆಗೆ ವಿಶೇಷ ಜಾಗೃತ ದಳಪ್ರಾಥಮಿಕ ಶಾಲೆಯಿಂದ ಹಿಡಿದು ವೃತ್ತಿಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸುವ ಸಿಇಟಿವರೆಗೆ ಟ್ಯೂಷನ್ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ. ಅಗತ್ಯವಿರಲಿ, ಇಲ್ಲದಿರಲಿ ಮಕ್ಕಳನ್ನು ಟ್ಯೂಷನ್‌ಗೆ ಕಳುಹಿಸುವ ಪೋಷಕರ ಸಂಖ್ಯೆ ಈಗ ಹೆಚ್ಚಾಗುತ್ತಿದೆ. ಟ್ಯೂಷನ್‌ಗೆ ಕಳುಹಿಸುವುದು ಪ್ರತಿಷ್ಠೆಯ ಪ್ರಶ್ನೆ ಎಂಬ ಭಾವನೆಯೂ ಕೆಲವರಲ್ಲಿ ಇದೆ.ಹಿಂದೆಲ್ಲ ನಗರ ಪ್ರದೇಶಗಳಲ್ಲಿ ಮಾತ್ರ ಹೆಚ್ಚಾಗಿ ಕಂಡು ಬರುತ್ತಿದ್ದ ಟ್ಯೂಷನ್ ಹಾವಳಿ ಈಗ ಸಮೂಹ ಸನ್ನಿಯಂತೆ ಗ್ರಾಮಾಂತರ ಪ್ರದೇಶಗಳಿಗೂ ವ್ಯಾಪಿಸಿದೆ. ಖಾಸಗಿ ಟ್ಯೂಟೋರಿಯಲ್ ಸಂಸ್ಥೆಗಳು ಇದನ್ನೇ ದೊಡ್ಡ ದಂಧೆಯನ್ನಾಗಿ ಮಾಡಿಕೊಂಡಿದ್ದು, ಬೆಳಿಗ್ಗೆ 5 ಗಂಟೆಯಿಂದ ರಾತ್ರಿ 9 ಗಂಟೆವರೆಗೂ ಬ್ಯಾಚ್‌ಗಳಲ್ಲಿ ಟ್ಯೂಷನ್ ನಡೆಸುವ ಹಲವು ಸಂಸ್ಥೆಗಳಿವೆ.ಇಂತಹ ಸಂಸ್ಥೆಗಳೊಂದಿಗೆ ಕೆಲ ಉಪನ್ಯಾಸಕರೂ ಕೈಜೋಡಿಸಿದ್ದು, ಇಂತಹ ಕಡೆಯೇ ಟ್ಯೂಷನ್‌ಗೆ ಸೇರಿ ಎಂದು ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ. `ನಿಮಗೆ ಕಾಲೇಜಿನಲ್ಲಿ ಪಾಠ ಹೇಳಿದರೆ ಅರ್ಥವಾಗುವುದಿಲ್ಲ, ಟ್ಯೂಷನ್‌ಗೆ ಬನ್ನಿ~ ಎಂದು ಬಹಿರಂಗವಾಗಿ ಮನೆ ಪಾಠಕ್ಕೆ ಆಹ್ವಾನ ನೀಡುವ ಉಪನ್ಯಾಸಕರ ಸಂಖ್ಯೆಗೇನೂ ಕಮ್ಮಿಯಿಲ್ಲ.ಈಗಷ್ಟೇ ಶೈಕ್ಷಣಿಕ ವರ್ಷ ಆರಂಭವಾಗುತ್ತಿದ್ದರೂ, ಬೇಸಿಗೆ ರಜೆಯಲ್ಲಿಯೇ ಎಸ್ಸೆಸ್ಸೆಲ್ಸಿ, ಪಿಯುಸಿಗೆ ಟ್ಯೂಷನ್ ಶುರುವಾಗಿತ್ತು. ಕಾಯ್ದೆ ಪ್ರಕಾರ ಸರ್ಕಾರಿ ನೌಕರರಾದ ಶಿಕ್ಷಕರು ಟ್ಯೂಷನ್ ನಡೆಸುವುದು ಶಿಕ್ಷಾರ್ಹ ಅಪರಾಧ.

 

ಆದರೂ ಬಹಿರಂಗವಾಗಿಯೇ ಎಲ್ಲ ಕಡೆ ಟ್ಯೂಷನ್ ನಡೆಯುತ್ತಿದೆ. ಈ ಎಲ್ಲ ವಿಷಯಗಳ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರೊಂದಿಗೆ `ಪ್ರಜಾವಾಣಿ~ ನಡೆಸಿದ ಸಂದರ್ಶನದ ಸಾರಾಂಶ ಹೀಗಿದೆ.* ಟ್ಯೂಷನ್ ಅಗತ್ಯವಿದೆಯೇ? ಇದರ ಬಗ್ಗೆ ಸರ್ಕಾರದ ನಿಲುವೇನು?

- ಸರ್ಕಾರಿ ಮತ್ತು ಅನುದಾನಿತ ಶಾಲಾ -ಕಾಲೇಜುಗಳ ಮಕ್ಕಳಿಗೆ ಟ್ಯೂಷನ್ ಅಗತ್ಯವಿಲ್ಲ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಶಾಲೆಯಲ್ಲಿಯೇ ಪರಿಹಾರ ಬೋಧನೆ ಮೂಲಕ ಅವರಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ.ನಮ್ಮಲ್ಲಿ ಇನ್ನೂ ಮೊದಲ ಪೀಳಿಗೆಯ ಮಕ್ಕಳು ಶಾಲೆಗೆ ಬರುತ್ತಿರುವುದರಿಂದ ಎಲ್ಲರ ಕಲಿಕಾ ಮಟ್ಟವೂ ಒಂದೇ ರೀತಿ ಇರುವುದಿಲ್ಲ. ಇದನ್ನು ಗಮನಿಸಿಯೇ ಪರಿಹಾರ ಬೋಧನೆ ಕಾರ್ಯಕ್ರಮ ರೂಪಿಸಲಾಗಿದೆ.* ಟ್ಯೂಷನ್ ನಿಷೇಧಿಸಿದ್ದರೂ, ಅದನ್ನು ಯಾಕೆ ಕಟ್ಟುನಿಟ್ಟಾಗಿ ಜಾರಿಗೊಳಿಸಿಲ್ಲ?

- ಇದರಲ್ಲಿ ಕೊರತೆಗಳು ಆಗಿರುವುದು ನಿಜ. `ನಾವು ಹೇಳುವುದು ಒಂದು, ವಾಸ್ತವವಾಗಿ ಆಗುತ್ತಿರುವುದೇ ಬೇರೆ~ ಎನ್ನುವುದನ್ನು ಒಪ್ಪುತ್ತೇವೆ. ಆದರೆ ಇನ್ನು ಮುಂದೆ ಈ ರೀತಿ ಆಗಲು ಬಿಡುವುದಿಲ್ಲ. ಈಗಾಗಲೇ ಸುತ್ತೋಲೆ ಕಳುಹಿಸಲಾಗಿದೆ. ಈ ವರ್ಷ ಬಿಗಿಕ್ರಮಕೈಗೊಳ್ಳುತ್ತೇವೆ. ಕಾನೂನನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುತ್ತೇವೆ~.* ಉಪನ್ಯಾಸಕರು ಕಾಲೇಜಿಗಿಂತ ಮನೆಪಾಠಕ್ಕೆ ಹೆಚ್ಚು ಒತ್ತುನೀಡುತ್ತಿದ್ದಾರಲ್ಲಾ?

- ಬರುವ ದಿನಗಳಲ್ಲಿ ಇದಕ್ಕೆ ಕಡಿವಾಣ ಹಾಕುತ್ತೇವೆ. ಟ್ಯೂಷನ್ ನಿಷೇಧ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುತ್ತೇವೆ. ವಿಶೇಷ ಜಾಗೃತ ದಳ ರಚನೆ ಮಾಡಿ ಮನೆ ಪಾಠ ಮಾಡುವ ಉಪನ್ಯಾಸಕರನ್ನು ಪತ್ತೆಹಚ್ಚಿ ಕ್ರಮಕೈಗೊಳ್ಳುತ್ತೇವೆ.* ಶಾಲಾ-ಕಾಲೇಜುಗಳಲ್ಲಿ ಸರಿಯಾಗಿ ಪಾಠ ಮಾಡದೆ ಇರುವುದೇ ಟ್ಯೂಷನ್ ಹಾವಳಿ ಹೆಚ್ಚಾಗಲು ಕಾರಣ ಎಂಬುದನ್ನು ಒಪ್ಪುತ್ತೀರಾ?

- ಶಿಕ್ಷಕರು ಚೆನ್ನಾಗಿ ಪಾಠ ಮಾಡುವ ಕಡೆ ದಾಖಲಾತಿ ಚೆನ್ನಾಗಿದೆ. ಶಿಕ್ಷಕರಿಗೂ ತರಬೇತಿ ಅಗತ್ಯವಿದೆ. ಈಗಿನ ವ್ಯವಸ್ಥೆಗೆ ತಕ್ಕಂತೆ ವೈಜ್ಞಾನಿಕವಾಗಿ ಕಲಿಸುವ ವಿಧಾನದ ಬಗ್ಗೆ ಕಾಲ ಕಾಲಕ್ಕೆ ತರಬೇತಿ ನೀಡುವ ಕೆಲಸವನ್ನು ಇಲಾಖೆ ಮಾಡುತ್ತಿದೆ. ಶಿಕ್ಷಕರಿಗೂ ಹಿತಿಮಿತಿಗಳಿವೆ.

 

15-20 ವರ್ಷಗಳ ಹಿಂದೆ ನೇಮಕವಾಗಿರುವ ಶಿಕ್ಷಕರಿಗೆ ಈಗಿನ ಕಾಲಮಾನಕ್ಕೆ ತಕ್ಕಂತೆ ಬೋಧಿಸಲು ಕಷ್ಟವಾಗಬಹುದು. ತರಬೇತಿ ಮೂಲಕ ಅವರಲ್ಲಿನ ನ್ಯೂನತೆಗಳನ್ನು ಹೋಗಲಾಡಿಸುವ ಕೆಲಸ ಮಾಡುತ್ತೇವೆ.ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆ ಈಗ ಪ್ರೌಢಶಾಲೆಗಳಲ್ಲಿ ಜಾರಿಯಾಗಿದೆ. ಮುಂದಿನ ವರ್ಷ ಪಿಯುಸಿಗೂ ಇದು ವಿಸ್ತರಣೆಯಾಗಲಿದೆ. ಆಗ 30 ವಿದ್ಯಾರ್ಥಿಗಳಿಗೆ ಒಬ್ಬ ಉಪನ್ಯಾಸಕರು ಇರಲಿದ್ದಾರೆ. ಇದರಿಂದಾಗಿ ಒತ್ತಡ ಕಡಿಮೆಯಾಗಲಿದ್ದು, ಉಪನ್ಯಾಸಕರು ಪ್ರತಿಯೊಬ್ಬ ವಿದ್ಯಾರ್ಥಿಯ ಕಲಿಕಾ ಮಟ್ಟದತ್ತ ಗಮನಹರಿಸಲು ಸಾಧ್ಯವಾಗಲಿದೆ.* ಪ್ರವೇಶ ಸಂದರ್ಭದಲ್ಲಿಯೇ ಖಾಸಗಿ ಕಾಲೇಜುಗಳು ಕಡ್ಡಾಯವಾಗಿ ಟ್ಯೂಷನ್ ಶುಲ್ಕವನ್ನು ಕಟ್ಟಬೇಕು ಎಂದು ಒತ್ತಡ ಹೇರುತ್ತಿವೆಯಲ್ಲಾ?

- ನ್ಯಾಯೋಚಿತ ಮಾರ್ಗವನ್ನು ಅನುಸರಿಸದ ಶಾಲಾ- ಕಾಲೇಜುಗಳ ವಿರುದ್ಧ ಸಮಾಜ, ಸಂಘ ಸಂಸ್ಥೆಗಳು ಧ್ವನಿ ಎತ್ತಬೇಕು. ಕೆಲವೊಂದು ವಿಷಯಗಳು ಸರ್ಕಾರದ ಗಮನಕ್ಕೆ ಬರುವುದಿಲ್ಲ. ಅಂತಹ ವಿಷಯಗಳನ್ನು ನಮ್ಮ ಗಮನಕ್ಕೆ ತಂದರೆ ಕ್ರಮಕೈಗೊಳ್ಳುತ್ತೇವೆ. ಸಮಾಜ, ಸಂಘ ಸಂಸ್ಥೆಗಳ ಪಾತ್ರ ಮಹತ್ವದ್ದಾಗಿದೆ.* ಪೋಷಕರು, ವಿದ್ಯಾರ್ಥಿಗಳ ಮನವೊಲಿಸುವ ಕೆಲಸವನ್ನು ಸರ್ಕಾರ ಯಾಕೆ ಮಾಡಬಾರದು?

- `ಅಂಕ ಗಳಿಸುವುದೇ ಜೀವನದ ಸರ್ವಸ್ವ ಅಲ್ಲ ಎಂಬುದನ್ನು ಪೋಷಕರು, ವಿದ್ಯಾರ್ಥಿಗಳು ಅರ್ಥ ಮಾಡಿಕೊಳ್ಳಬೇಕು ಎಂದು ಪದೇ ಪದೇ ನಾವು ಹೇಳುತ್ತಿದ್ದೇವೆ. ಟ್ಯೂಷನ್‌ಗೆ ಹೋದರಷ್ಟೇ ನಮ್ಮ ಮಗ ಅಥವಾ ಮಗಳು ಉದ್ಧಾರ ಸಾಧ್ಯ ಎಂಬ ತಪ್ಪುಕಲ್ಪನೆಯಿಂದ ಹೊರ ಬರಬೇಕು.

 

ಅಂಕಗಳೇ ಜೀವನದಲ್ಲಿ ಎಲ್ಲವನ್ನೂ ನಿರ್ಧರಿಸುವುದಿಲ್ಲ. ಮುಂದಿನ ವ್ಯಾಸಂಗಕ್ಕೆ ಅಂಕಗಳು ಮಾನದಂಡ ಅಷ್ಟೇ. ಪೋಷಕರು ಅನಗತ್ಯವಾಗಿ ಮಕ್ಕಳ ಮೇಲೆ ಒತ್ತಡ ಹೇರುವುದು~ ಸರಿಯಲ್ಲ.ಶೈಕ್ಷಣಿಕ ಪಠ್ಯಕ್ರಮಕ್ಕೆ ಸೀಮಿತವಾಗಿ ಹೇಳುವುದಾದರೆ ಟ್ಯೂಷನ್ ಅಗತ್ಯವಿಲ್ಲ, ಆದರೆ ಕೆಲ ಪೋಷಕರು ಶಾಲಾ ಹಂತದಲ್ಲೇ ಬೇರೆ ಬೇರೆ ಕೋರ್ಸ್‌ಗಳನ್ನು ಕಲಿಯಬೇಕು ಎಂದು ಬಯಸುತ್ತಾರೆ. ಅಂತಹವರು ಬೇಕಾದರೆ ಟ್ಯೂಷನ್‌ಗೆ ಕಳುಹಿಸಲಿ, ಆದರೆ ಪಠ್ಯಕ್ರಮಕ್ಕೆ ಟ್ಯೂಷನ್‌ಗೆ ಹೋಗುವ ಅಗತ್ಯವಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.