ಶನಿವಾರ, ಏಪ್ರಿಲ್ 17, 2021
31 °C

ಪತ್ತೆಯಾದ ಕಾರ್ಮಿಕನ ಶವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಹದೇವಪುರ ಬಳಿಯ ಗರುಡಾಚಾರ್ ಪಾಳ್ಯದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು ಅವಶೇಷಗಳಡಿ ಸಿಲುಕಿದ್ದ ಕೂಲಿ ಕಾರ್ಮಿಕ ಸಾಬಣ್ಣ (24) ಅವರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಘಟನೆಯಲ್ಲಿ ಮೃತರ ಸಂಖ್ಯೆ ಎರಡಕ್ಕೇರಿದೆ.ಗರುಡಾಚಾರ್ ಪಾಳ್ಯದ ಎಂ.ಕೆ.ಲೇಔಟ್‌ನ ನಾಲ್ಕನೇ ಮುಖ್ಯರಸ್ತೆಯಲ್ಲಿ ಮಂಜುನಾಥ್ ನಾಯಕ್ ಎಂಬುವರು ನಿರ್ಮಿಸುತ್ತಿದ್ದ ಮೂರು ಅಂತಸ್ತಿನ ಮನೆಯ ಕಟ್ಟಡ ಬುಧವಾರ ಕುಸಿದಿತ್ತು. ಈ ವೇಳೆ ಕಟ್ಟಡದ ನೆಲ ಅಂತಸ್ತಿನಲ್ಲಿದ್ದ ಕಟ್ಟಡದ ಗುತ್ತಿಗೆದಾರ ಮೋಹನ್ ನಾಯರ್ (55), ಸಾಬಣ್ಣ ಮತ್ತು ಮಹಾಲಕ್ಷ್ಮಿ ಎಂಬ 11 ತಿಂಗಳ ಹೆಣ್ಣು ಮಗು, ಭಾಗಮ್ಮ (13) ಹಾಗೂ ಮಾಳಮ್ಮ (7) ಎಂಬ ಮಕ್ಕಳು ಅವಶೇಷಗಳಡಿ ಸಿಕ್ಕಿ ಹಾಕಿಕೊಂಡಿದ್ದರು.ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಮತ್ತು ವಿಪತ್ತು ನಿರ್ವಹಣೆ ತಂಡದ ಅಧಿಕಾರಿಗಳು ಕೂಡಲೇ ರಕ್ಷಣಾ ಕಾರ್ಯಾಚರಣೆ ನಡೆಸಿ ಮೂರೂ ಮಕ್ಕಳನ್ನು ರಕ್ಷಿಸಿದ್ದರು. ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದಾಗ ರಾತ್ರಿ ವೇಳೆಗೆ ಕಟ್ಟಡದ ಮತ್ತೊಂದು ಭಾಗದಲ್ಲಿ ಮೋಹನ್ ಅವರ ಶವ ಪತ್ತೆಯಾಗಿತ್ತು. ಬಳಿಕ ರಾತ್ರಿ ಒಂದು ಗಂಟೆ ಸುಮಾರಿಗೆ ಅವರ ಶವವನ್ನು ಅವಶೇಷಗಳಡಿಯಿಂದ ಹೊರ ತೆಗೆದು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು.ಗುರುವಾರ ಬೆಳಗಿನ ಜಾವ ಪುನಃ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ ಸಿಬ್ಬಂದಿ ಮಧ್ಯಾಹ್ನ ಒಂದು ಗಂಟೆ ವೇಳೆಗೆ ಇಡೀ ಕಟ್ಟಡವನ್ನು ನೆಲಸಮಗೊಳಿಸಿದರು. ಯಂತ್ರೋಪಕರಣಗಳ ನೆರವಿನಿಂದ ಕಟ್ಟಡದ ಅವಶೇಷಗಳನ್ನು ತೆರವುಗೊಳಿಸುತ್ತಿದ್ದಾಗ 1.45ರ ಸುಮಾರಿಗೆ ಸಾಬಣ್ಣ ಅವರ ಶವ ಪತ್ತೆಯಾಯಿತು.ಮೋಹನ್ ನಾಯರ್ ಅವರು ನಗರದ ಹೊರಮಾವು ನಿವಾಸಿ. ಬೌರಿಂಗ್ ಆಸ್ಪತ್ರೆಯಲ್ಲಿ ಮೋಹನ್ ಮತ್ತು ಸಾಬಣ್ಣ ಅವರ ಮರಣೋತ್ತರ ಪರೀಕ್ಷೆ ನಡೆಸಿ ಶವಗಳನ್ನು ಕುಟುಂಬ ಸದಸ್ಯರಿಗೆ ಒಪ್ಪಿಸಲಾಯಿತು. ಸಾಬಣ್ಣ ಕುಟುಂಬ ಸದಸ್ಯರು ಶವವನ್ನು ಹುಟ್ಟೂರಾದ ಯಾದಗಿರಿ ಜಿಲ್ಲೆಯ ರಾಮಸಮುದ್ರ ಗ್ರಾಮಕ್ಕೆ ಕೊಂಡೊಯ್ದರು ಎಂದು ಮಹದೇವಪುರ ಪೊಲೀಸರು ತಿಳಿಸಿದ್ದಾರೆ.ಘಟನೆಯಲ್ಲಿ ಗಾಯಗೊಂಡಿದ್ದ ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. ಕಟ್ಟಡದ ಮಾಲೀಕ ಮಂಜುನಾಥ್ ನಾಯಕ್, ಮೇಸ್ತ್ರಿಗಳಾದ ಸುಬ್ಬರಾವ್ ಮತ್ತು ತಾಯಪ್ಪ ಅವರು ತಲೆಮರೆಸಿಕೊಂಡಿದ್ದು, ಪತ್ತೆ ಕಾರ್ಯ ಮುಂದುವರಿದಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.