ಸೋಮವಾರ, ಏಪ್ರಿಲ್ 19, 2021
23 °C

ಪತ್ತೆಯಾಯ್ತು ಪಾಲಿಕೆಯ ಗುತ್ತಿಗೆ ಆಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಬಿಎಂಪಿ ವತಿಯಿಂದ ಗುತ್ತಿಗೆಗೆ ನೀಡಲಾಗಿದ್ದ ಸುಮಾರು 140 ಆಸ್ತಿಗಳ ದಾಖಲೆಗಳನ್ನು ಪತ್ತೆ ಹಚ್ಚುವಲ್ಲಿ ಆಸ್ತಿ ಸಂರಕ್ಷಣಾ ಸಮಿತಿ ಯಶಸ್ವಿಯಾಗಿದೆ. ಹಾಗೆಯೇ ಪೂರ್ವ, ಪಶ್ಚಿಮ ಹಾಗೂ ದಕ್ಷಿಣ ವಲಯಗಳಲ್ಲಿ ಗುತ್ತಿಗೆ ನೀಡಲಾಗಿದ್ದ ಸುಮಾರು 51 ಕೋಟಿ ರೂಪಾಯಿ ಬೆಳೆಬಾಳುವ 14 ಆಸ್ತಿಗಳನ್ನು ವಶಪಡಿಸಿಕೊಂಡಿದೆ. ಆಸ್ತಿ ಸಂರಕ್ಷಣಾ ಸಮಿತಿ ಅಧ್ಯಕ್ಷ ಎನ್. ನಾಗರಾಜ್ ಅವರು ಶುಕ್ರವಾರ ಮೇಯರ್ ಎಸ್.ಕೆ.ನಟರಾಜ್ ಅವರಿಗೆ ಸಮಿತಿಯ ವರದಿ ಸಲ್ಲಿಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಪಾಲಿಕೆಯ ಮೂರೂ ವಲಯಗಳಲ್ಲಿ ಒಟ್ಟು 394 ಆಸ್ತಿಗಳನ್ನು ಗುತ್ತಿಗೆಗೆ ನೀಡಲಾಗಿತ್ತು. ಅವುಗಳಲ್ಲಿ 208 ಆಸ್ತಿಗಳ ಗುತ್ತಿಗೆ ಅವಧಿ ಪೂರ್ಣಗೊಂಡಿದೆ. 186 ಆಸ್ತಿಗಳ ಗುತ್ತಿಗೆ ಅವಧಿ ಚಾಲ್ತಿಯಲ್ಲಿದೆ’ ಎಂದರು.ದಾಖಲೆಗಳು ಪತ್ತೆ: ‘ಗುತ್ತಿಗೆ ಅವಧಿ ಪೂರ್ಣಗೊಂಡ ಆಸ್ತಿಗಳನ್ನು ಪರಿಶೀಲಿಸಲು ಮುಂದಾದಾಗ ಸುಮಾರು 140 ಆಸ್ತಿಗಳಿಗೆ ಸಂಬಂಧಪಟ್ಟ ದಾಖಲೆಗಳೇ ಇರಲಿಲ್ಲ. ಇದರಲ್ಲಿ ಅಧಿಕಾರಿಗಳ ನಿರ್ಲಕ್ಷ್ಯವಿರುವುದು ಸ್ಪಷ್ಟವಾಗಿತ್ತು. ಹಾಗಾಗಿ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಲಾಯಿತು. ಬಳಿಕ ಅಧಿಕಾರಿಗಳು ಅಗತ್ಯ ದಾಖಲೆಗಳನ್ನು ಒದಗಿಸಿದರು. ಆ ನಂತರ ಅವುಗಳನ್ನು ಪರಿಶೀಲಿಸಲಾಯಿತು’ ಎಂದು ಹೇಳಿದರು.‘13 ಆಸ್ತಿಗಳ ಗುತ್ತಿಗೆ ಅವಧಿಯನ್ನು ನವೀಕರಿಸಲಾಗಿದೆ. 14 ಆಸ್ತಿಗಳನ್ನು ವಶಕ್ಕೆ ಪಡೆಯಲಾಗಿದೆ. ಗುತ್ತಿಗೆ ಅವಧಿ ಮುಗಿದ 138 ಆಸ್ತಿಗಳಿಗೆ ಸಂಬಂಧಪಟ್ಟಂತೆ ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಉಳಿದಿದೆ. ಗುತ್ತಿಗೆ ಅವಧಿ ಚಾಲ್ತಿಯಲ್ಲಿರುವ 181 ಆಸ್ತಿಗಳ ಪ್ರಕರಣ ಕೂಡ ಬಾಕಿ ಇದೆ. ಈ ಆಸ್ತಿಗಳನ್ನು ವಶಕ್ಕೆ ಪಡೆಯಲು ಸಮರ್ಥವಾಗಿ ಕಾನೂನು ಹೋರಾಟ ನಡೆಸಲು ಕ್ರಮ ಕೈಗೊಳ್ಳಲಾಗಿದೆ’ ಎಂದರು.‘ಗುತ್ತಿಗೆ ಅವಧಿ ಪೂರ್ಣಗೊಂಡ ಎಲ್ಲ ಆಸ್ತಿಗಳಿಗೆ ಕೆ.ಪಿ.ಪಿ. ಕಾಯ್ದೆ ಅನ್ವಯ ನೋಟಿಸ್ ನೀಡಲಾಗಿದೆ. ಪ್ರಮುಖ ಪ್ರಕರಣಗಳಿಗೆ  ಸಂಬಂಧಪಟ್ಟಂತೆ ನ್ಯಾಯಾಲಯದಲ್ಲಿ ಕೇವಿಯಟ್ ಅರ್ಜಿ ದಾಖಲಿಸಲು ಕ್ರಮ ಕೈಗೊಳ್ಳಲಾಗಿದೆ. ಗುತ್ತಿಗೆ ಶುಲ್ಕ ವಸೂಲಿಗೆ ಆದ್ಯತೆ  ನೀಡಲಾಗಿದೆ. ಗುತ್ತಿಗೆಗೆ  ನೀಡಲಾದ ಎಲ್ಲ ಆಸ್ತಿಗಳಲ್ಲಿ ಪಾಲಿಕೆಯ ಸ್ವತ್ತು ಎಂಬುದಾಗಿ ನಾಮಫಲಕ ಅಳವಡಿಸಿ ಇತರೆ ಮಾಹಿತಿಯನ್ನು  ದಾಖಲಿಸಲಾಗಿದೆ’ ಎಂದರು.‘ಪಾಲಿಕೆಯ ಎಂಟೂ ವಲಯಗಳಲ್ಲಿ ಸುಮಾರು 10,400 ಕೋಟಿ ರೂಪಾಯಿ ಮೌಲ್ಯದ 5,000ಕ್ಕೂ ಹೆಚ್ಚು ಆಸ್ತಿಗಳಿವೆ. ಈ ಆಸ್ತಿಗಳನ್ನು ಗುರುತಿಸಿ ನಕ್ಷೆ ಸಿದ್ಧಪಡಿಸಿ, ಚಕ್ಕುಬಂದಿ ಇತರೆ ಮಾಹಿತಿಯನ್ನು ವಲಯವಾರು ಸಿದ್ಧಪಡಿಸುವಂತೆ ಸೂಚಿಸಲಾಗಿದೆ’ ಎಂದು ವಿವರ ನೀಡಿದರು. ಮೇಯರ್ ಎಸ್.ಕೆ. ನಟರಾಜ್ ಮಾತನಾಡಿ, ‘ಆಡಳಿತಾಧಿಕಾರಿಗಳ ಅವಧಿಯಲ್ಲಿ ಸಾಕಷ್ಟು ಆಸ್ತಿಗಳನ್ನು ಮನಬಂದಂತೆ ಗುತ್ತಿಗೆಗೆ ನೀಡಲಾಗಿದೆ. ಅವುಗಳನ್ನು ಪತ್ತೆ ಹಚ್ಚಿ ವಶಕ್ಕೆ ಪಡೆಯುವ ಉದ್ದೇಶದಿಂದ ರಚಿಸಲಾದ ಆಸ್ತಿ ಸಂರಕ್ಷಣಾ ಸಮಿತಿಯು ನೀಡಿರುವ ವರದಿ ಹಾಗೂ ಶಿಫಾರಸುಗಳನ್ನು ಪಾಲಿಕೆ ಸಭೆಯಲ್ಲಿ ಮಂಡಿಸಲಾಗುವುದು. ಬಳಿಕ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದರು.ವಿರೋಧ ಪಕ್ಷದ ನಾಯಕ ಎಂ.ನಾಗರಾಜ್ ಮಾತನಾಡಿ, ‘ಸಮಿತಿಯು ಗುತ್ತಿಗೆ ನೀಡಿರುವ ಕೇವಲ 394 ಆಸ್ತಿಗಳನ್ನಷ್ಟೇ ಪತ್ತೆ ಹಚ್ಚಿದೆ. ಆದರೆ ಸಾವಿರಾರು ಆಸ್ತಿಗಳನ್ನು ಗುತ್ತಿಗೆಗೆ ನೀಡಲಾಗಿದ್ದು, ಈ ಆಸ್ತಿಗಳಿಗೆ ಸಂಬಂಧಪಟ್ಟ ದಾಖಲೆಗಳು ನಾಶವಾಗಿವೆ. ಈ ಆಸ್ತಿಗಳನ್ನು ವಶಕ್ಕೆ ಪಡೆಯಲು ಕ್ರಮ ಕೈಗೊಳ್ಳಬೇಕಿತ್ತು’ ಎಂದು ಹೇಳಿದರು. ಜೆಡಿಎಸ್ ನಾಯಕ ಪದ್ಮನಾಭರೆಡ್ಡಿ, ‘ಪಾಲಿಕೆ ಆಸ್ತಿಯನ್ನು ಹರಾಜು ಮೂಲಕ ಗುತ್ತಿಗೆ ನೀಡಬೇಕೆ ಹೊರತು ನೇರವಾಗಿ ಗುತ್ತಿಗೆ ನೀಡಬಾರದು ಎಂಬ ಆದೇಶವಿದೆ.ಆದರೂ ಸಾಕಷ್ಟು ಆಸ್ತಿಗಳನ್ನು ಕಡಿಮೆ ಮೊತ್ತಕ್ಕೆ ಗುತ್ತಿಗೆ ನೀಡಲಾಗಿದೆ. ಈ ನಿಟ್ಟಿನಲ್ಲಿ ಸಮಿತಿ ಕ್ರಮ ಕೈಗೊಳ್ಳಬೇಕಿತ್ತು. ಪಾಲಿಕೆ ಆಡಳಿತ ಈಗಲಾದರು ಕಂದಾಯ ಇಲಾಖೆಯಿಂದ ದಾಖಲೆ ಪಡೆದು 198 ವಾರ್ಡ್‌ಗಳಲ್ಲಿರುವ ಪಾಲಿಕೆ ಆಸ್ತಿಗಳನ್ನು ಪತ್ತೆ ಹಚ್ಚಬೇಕು. ಒಂದೊಮ್ಮೆ ಒತ್ತುವರಿ ಇದ್ದಲ್ಲಿ ತೆರವುಗೊಳಿಸಿ ಬೇಲಿ ಅಳವಡಿಸಬೇಕು’ ಎಂದು ಒತ್ತಾಯಿಸಿದರು. ಶಿಫಾರಸುಗಳು: ಗುತ್ತಿಗೆ ನೀಡಲಾಗಿರುವ ಎಲ್ಲ ಆಸ್ತಿಗಳ ಸ್ಥಳ ಪರಿಶೀಲನೆ ನಡೆಸಿ ಷರತ್ತು ಉಲ್ಲಂಘಿಸಿರುವ ಗುತ್ತಿಗೆಗಳನ್ನು ರದ್ದುಪಡಿಸಬೇಕು. ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಹಾಗೂ ಕ್ರೀಡಾ ಚಟುವಟಿಕೆ ನಡೆಸಲು ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ರಿಯಾಯ್ತಿ ಶುಲ್ಕದಲ್ಲಿ ಆಸ್ತಿಯನ್ನು ಗುತ್ತಿಗೆ ನೀಡಬಹುದು ಎಂದು ಸಮಿತಿ ಶಿಫಾರಸು ಮಾಡಿದೆ.ಗುತ್ತಿಗೆ ನೀಡುವುದು ಅಗತ್ಯವೆನಿಸಿದರೆ ಹರಾಜು ಮೂಲಕವೇ ಗುತ್ತಿಗೆ ನೀಡಬೇಕು. ಹಸಿರು ವಲಯ, ಉದ್ಯಾನವನ, ಆಟದ ಮೈದಾನ ಹಾಗೂ ಪಾದಚಾರಿ ಮಾರ್ಗವನ್ನು ವಾಣಿಜ್ಯ ಉದ್ದೇಶಕ್ಕೆ ಗುತ್ತಿಗೆ ನೀಡಬಾರದು. ಪಾಲಿಕೆಯ ಎಲ್ಲ ಸಹಾಯಕ ಕಂದಾಯ ಅಧಿಕಾರಿಗಳ ಕಚೇರಿಯಲ್ಲಿ ಪಾಲಿಕೆಗೆ ಸೇರಿದ ಆಸ್ತಿಗಳು ಹಾಗೂ ಗುತ್ತಿಗೆಗೆ ನೀಡಲಾದ ಆಸ್ತಿಗಳ ಸಂಪೂರ್ಣ ವಿವರವನ್ನು ನಾಮಫಲಕದಲ್ಲಿ ಪ್ರಕಟಿಸಬೇಕು ಎಂದು ಸಲಹೆ ನೀಡಿದೆ.ಪಾಲಿಕೆ ಆಸ್ತಿಗಳ ಸಂರಕ್ಷಣೆಗೆ ಸಂಬಂಧಪಟ್ಟಂತೆ ಸ್ಥಳೀಯ ಎಂಜಿನಿಯರ್, ಸಹ ಕಂದಾಯಾಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಬೇಕು. ಆಸ್ತಿಯ ಒತ್ತುವರಿ ಇಲ್ಲವೇ ಹಾನಿಯಾದರೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿ ವಿರುದ್ಧ ಕರ್ತವ್ಯ ಲೋಪ ಆರೋಪದ ಮೇಲೆ ಕ್ರಮ ಜರುಗಿಸಬೇಕು ಎಂದು ಶಿಫಾರಸು ಮಾಡಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.