ಶನಿವಾರ, ಜೂನ್ 19, 2021
24 °C

ಪತ್ರಕರ್ತರ ಮೇಲೆ ಹಲ್ಲೆ: ಎಲ್ಲೆಡೆ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ಮಾಧ್ಯಮ ಪ್ರತಿನಿಧಿಗಳ ಮೇಲೆ ವಕೀಲರ ಸಮೂಹ ಬೆಂಗಳೂರಿನಲ್ಲಿ ಕೋರ್ಟ್ ಆವರಣದಲ್ಲಿಯೇ ಹಲ್ಲೆ ನಡೆಸಿದ ಘಟನೆಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿರುವ ಹಿಂದೆಯೇ, ಮಂಡ್ಯದಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರತಿಭಟನೆಗೆ ವಕೀಲರು ಅಡ್ಡಿಪಡಿಸಿದ್ದಾರೆ.ಬೆಳಿಗ್ಗೆ ಸ್ಥಳೀಯ ಪತ್ರಿಕೆಗಳ ಸಂಪಾದಕರು ಸೇರಿದಂತೆ  ಜಿಲ್ಲಾ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆದ ಹಂತದಲ್ಲಿ ಈ ಬೆಳವಣಿಗೆ ಸಂಭವಿಸಿದೆ.ವಕೀಲರಿಗೆ ಧಿಕ್ಕಾರ ಎಂದು ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸುವಾಗ ಅಲ್ಲಿಗೆ ಬಂದ ವಕೀಲರ ಗುಂಪು  ಪತ್ರಕರ್ತರು ಹಿಡಿದಿದ್ದ ಬ್ಯಾನರ್ ಮತ್ತು ಘೋಷಣೆಗಳಿದ್ದ ಭಿತ್ತಿಪತ್ರಗಳನ್ನು ಕಸಿದು ಪ್ರತಿಭಟನೆಗೆ ಅಡ್ಡಿಪಡಿಸಿತು.

ಇದು, ಕೆಲ ಹೊತ್ತು ಮಾತಿನ ಚಕಮಕಿಗೂ ಕಾರಣ ವಾಗಿದೆ.ಈ ಘಟನೆಯನ್ನು ಜಿಲ್ಲಾ ಪತ್ರಕರ್ತರ ಸಂಘ ಖಂಡಿ ಸಿದೆ. ಬೆಂಗಳೂರಿನ ಘಟನೆಗೆ ಸಂಬಂಧಿಸಿ ವಕೀಲರು ಮತ್ತು ಪತ್ರಕರ್ತರ ಸಂಘದ ಪರವಾಗಿ ಪ್ರತ್ಯೇಕ ಮನವಿಗಳನ್ನು ಸಲ್ಲಿಸಲಾಯಿತು. ಜಿಲ್ಲಾಧಿಕಾರಿಗಳ ಕಚೇರಿ ಪ್ರವೇಶ ದ್ವಾರದ ಬಳಿ ಭಿತ್ತಿಪತ್ರಗಳು ಹರಿದು ಚೆಲ್ಲಾಡಿದ್ದು ಕಂಡುಬಂದಿತು.ರೈತ ಸಂಘ, ಯುವ ಕಾಂಗ್ರೆಸ್ ಪ್ರತಿಭಟನೆ: ವಕೀಲರ ವರ್ತನೆಗೆ ಉಳಿದಂತೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಜಿಲ್ಲಾ ರೈತ ಸಂಘ ಮತ್ತು ಜಿಲ್ಲಾಯುವ ಕಾಂಗ್ರೆಸ್ ಘಟಕಗಳು ಖಂಡಿಸಿವೆ.ಪಡಿತರ ವಿತರಣೆ ಲೋಪ ಖಂಡಿಸಿ ರೈತ ಸಂಘ ಮತ್ತು ಪಠ್ಯದಲ್ಲಿ ಕೇಸರಿಕರಣ ಖಂಡಿಸಿ ಯುವ ಕಾಂಗ್ರೆಸ್ ಹಮ್ಮಿಕೊಂಡಿದ ಪ್ರತ್ಯೇಕ ಪ್ರತಿಭಟನೆಯ ಸಂದರ್ಭದಲ್ಲಿಯೇ, ಉಭಯ ಸಂಘಟನೆಗಳು ಮಾಧ್ಯಮ ಪ್ರತಿನಿಧಿಗಳ ಮೇಲೆ ನಡೆದ ಘಟನೆಯನ್ನು ಖಂಡಿಸಿ ಪ್ರತಿಭಟಿಸಿದವು.ವಕೀಲರ ವಿರುದ್ಧ ಕ್ರಮಕ್ಕೆ ಎಸ್‌ಎಫ್‌ಐ ಆಗ್ರಹಮಂಡ್ಯ: ಬೆಂಗಳೂರು ಸಿವಿಲ್ ಕೋರ್ಟ್‌ನ ಆವರಣದಲ್ಲಿ ವಕೀಲರು ಮಾಧ್ಯಮ ಪ್ರತಿನಿಧಿಗಳ ಮೇಲೆ  ಮತ್ತು ಪಕ್ಕದಲ್ಲೇ ಇರುವ ಕಲಾ ಕಾಲೇಜು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿರುವುದನ್ನು ಭಾರತ ವಿದ್ಯಾರ್ಥಿ ಫೆಡರೇಷನ್‌ನ ಜಿಲ್ಲಾ ಸಮಿತಿಯು ಖಂಡಿಸಿದೆ.ಇಷ್ಟು ಬೆಳವಣಿಗೆ ನಡೆದರು ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರು ಘಟನೆಯನ್ನು ಗಂಭೀರವಾಗಿ ಪರಿಗಣಿಸದೇ ಇರುವುದು ಅವರ ಬೇಜವಾಬ್ದಾರಿಯನ್ನು ತೋರಿಸಲಿದೆ. ಕೂಡಲೇ  ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥ ವಿರುದ್ಧ ಕ್ರಮ ಜರುಗಿಸಲಿ ಎಂದು ಎಸ್‌ಎಫ್‌ಐನ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಶಿವರಾಜ್, ಉಪಾಧ್ಯಕ್ಷ ನಂದೀಶ್, ಕಾರ್ಯದರ್ಶಿ ರಾಜೇಂದ್ರಸಿಂಗ್ ಬಾಬು ಅವರು ಹೇಳೀಕೆಯಲ್ಲಿ ಒತ್ತಾಯಿಸಿದ್ದಾರೆ.ವಕೀಲರ ವಿರುದ್ಧ ಜನಸಂಘಟನೆ: ಕರವೇಮಂಡ್ಯ: ಮಾಧ್ಯಮ ಪ್ರತಿನಿಧಿಗಳ ಮೇಲೆ ನಡೆದ ಹಲ್ಲೆಗೆ  ಸಂಬಂಧಿಸಿದಂತೆ ಆರೋಪಿ ವಕೀಲರನ್ನು ಬಂಧಿಸಿ ಕ್ರಮ ಜರುಗಿಸಬೇಕು ಎಂದು ಕರವೇ ಜಿಲ್ಲಾ ಸಮಿತಿಯು ಆಗ್ರಹಪಡಿಸಿದೆ. ಪತ್ರಕರ್ತರು ಮತ್ತುಪೊಲೀಸರ ಮೇಲೆ ಹಲ್ಲೆನಡೆಸಿರುವ ವಕೀಲರನ್ನು ಕೂಡಲೇ ಬಂಧಿಸಿ ಕ್ರಮ ಜರುಗಿಸಬೇಕು. ಇಂಥ ಘಟನೆಗಳು ಮರುಕಳಿಸಿದಲ್ಲಿ ವಕೀಲರ ವಿರುದ್ಧ ಜನ ಸಂಘಟನೆ ನಡೆಯಲಿದೆ ಎಂದು ಅಧ್ಯಕ್ಷ ಎಚ್.ಡಿ.ಜಯರಾಂ ಹೇಳಿಕೆಯಲ್ಲಿ ತಿಳಿಸಿದ್ದಾರೆ.`ರಾಜಭವನ್ ಚಲೋ~ ನಾಳೆಮಂಡ್ಯ: ಮಾಧ್ಯಮ ಪ್ರತಿನಿಧಿಗಳ ಮೇಲೆ ವಕೀಲರು ನಡೆಸಿದ ಹಲ್ಲೆ ಖಂಡಿಸಿ ಸೋಮವಾರ (ಮಾರ್ಚ್ 5) ರಾಜಭವನ್ ಚಲೋ ಪ್ರತಿಭಟನೆ ಹಮ್ಮಿಕೊಳ್ಳಲು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನಿರ್ಧರಿಸಿದೆ.

ಅಂದು ಬೆಳಿಗ್ಗೆ 7.30ಕ್ಕೆ ಬೆಂಗಳೂರಿಗೆ ತೆರಳಲಿದ್ದು, ಜಿಲ್ಲೆಯ ಮಾಧ್ಯಮ ಪ್ರತಿನಿಧಿಗಳು ಭಾಗವಹಿಸಬೇಕು.ಮಂಡ್ಯದಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರತಿಭಟನೆಗೆ ಅಡ್ಡಿಪಡಿಸಿದ ವಕೀಲರ ವಿರುದ್ಧ  ಸ್ವಪ್ರೇರಿತ  ಮೊಕದ್ದಮೆ ದಾಖಲಿಸಬೇಕು ಎಂದು ಅಧ್ಯಕ್ಷ ಎಂ.ಆರ್.ಜಯರಾಂ, ಪ್ರಧಾನ ಕಾರ್ಯದರ್ಶಿ ಬಿ.ಪಿ.ಪ್ರಕಾಶ್ ಆಗ್ರಹಪಡಿಸಿದ್ದಾರೆ.

ಆರೋಪಿ ವಕೀಲರ ವಿರುದ್ಧ ಕ್ರಮಜರುಗಿಸದ ಸರ್ಕಾರದ ನಿರ್ಲಕ್ಷ್ಯವನ್ನು ಖಂಡಿಸಿ ಭಾನುವಾರ (ಮಾ. 4) ಜಿಲ್ಲೆಯಲ್ಲಿ ಗೃಹ ಸಚಿವ ಅಶೋಕ್ ಅವರು ಭಾಗವಹಿಸುವ ಕಾರ್ಯಕ್ರಮಗಳನ್ನು ಬಹಿಷ್ಕರಿಸಲು ಸಂಘ ನಿರ್ಧರಿಸಿದೆ. ಈ ಪ್ರತಿಭಟನೆಯನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿಕೆಯಲ್ಲಿ ಕೋರಿದೆ.ಕೆ.ಆರ್.ಪೇಟೆಯಲ್ಲಿ ಪ್ರತಿಭಟನೆಕೃಷ್ಣರಾಜಪೇಟೆ: ಬೆಂಗಳೂರಿನ ಹೈಕೋರ್ಟ್ ಆವರಣದಲ್ಲಿ ಪತ್ರಕರ್ತರ ಮೇಲೆ ವಿನಾಕಾರಣ ಹಲ್ಲೆ ನಡೆಸಿದ ವಕೀಲರ ಕ್ರಮವನ್ನು ಖಂಡಿಸಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಮತ್ತು ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಶನಿವಾರ ಕಪ್ಪುಪಟ್ಟಿ ಧರಿಸಿ, ಬೀದಿಗಿಳಿದು ಪ್ರತಿಭಟನೆ ನಡೆಸಿದರು.ಪಟ್ಟಣದ ಎಂ.ಕೆ.ಬೊಮ್ಮೇಗೌಡ ವೃತ್ತದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು ಅಲ್ಲಿ ಕೆಲಕಾಲ ಮಾನವ ಸರಪಳಿ ನಡೆಸಿ, ವಕೀಲರ ದೌರ್ಜನ್ಯದ ವಿರುದ್ಧ ಘೋಷಣೆ ಕೂಗಿದರು. ಕಾರ್ಯನಿರತ ಪತ್ರಕರ್ತರಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಒತ್ತಾಯಿಸಿದರು. ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ತೆರಳಿ ತಹಶೀಲ್ದಾರ್ ಡಾ.ಎಚ್.ಎಲ್.ನಾಗರಾಜ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಆರ್.ನೀಲಕಂಠ, ಕಾರ್ಯದರ್ಶಿ ಅಬಾರಾಶೆ ಶ್ರೀನಿವಾಸ್, ಮಾಜಿ ಅಧ್ಯಕ್ಷ ಎಚ್.ಆರ್.ಲೋಕೇಶ್, ವಿವಿಧ ಪತ್ರಿಕೆಗಳ ವರದಿಗಾರರಾದ ಕೆ.ಸಿ.ವೆಂಕಟರಾಮು, ಕೆ.ಎಸ್.ಸತೀಶ್, ಕಾಡುಮೆಣಸ ಚಂದ್ರು, ರಾಮಚಂದ್ರು, ಕಿಕ್ಕೇರಿ ಬಲರಾಂ, ಏಜೆಂಟರಾದ ಮಂಜುನಾಥ್, ಪ್ರಮೋದ್, ಅಕ್ಕಿಹೆಬ್ಬಾಳು ಮಹೇಶ್, ಸಿಂಧಘಟ್ಟ ಮಹೇಶ್, ಪಟ್ಟಣದ ಸರ್ಕಾರಿ ಪದವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಗಣ್ಯರ ಬೆಂಬಲ: ವಿಧಾನಸಭೆ ಮಾಜಿ ಅಧ್ಯಕ್ಷ ಕೃಷ್ಣ, ಮಾಜಿ ಕೇಂದ್ರ ಸಚಿವ ವಿ.ಶ್ರೀನಿವಾಸ ಪ್ರಸಾದ್, ಜಿ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಮಂಜೇಗೌಡ, ಮಾಜಿ ಸದಸ್ಯ ಅಘಲಯ ಮಂಜುನಾಥ್, ಕೆ.ಜೆ.ವಿಜಯಕುಮಾರ್ ಮತ್ತಿತರರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ವಕೀಲರ ದುರ್ವರ್ತನೆಯನ್ನು ಖಂಡಿಸಿ, ಪತ್ರಕರ್ತರಿಗೆ ಬೆಂಬಲ ವ್ಯಕ್ತಪಡಿಸಿದರು. 

 

ಹಲ್ಲೆ ಖಂಡಿಸಿ ಹೆದ್ದಾರಿ ತಡೆಮದ್ದೂರು: ಬೆಂಗಳೂರಿನ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಮೇಲೆ ವಕೀಲರು ಹಲ್ಲೆ ಮಾಡಿರುವುದನ್ನು ಖಂಡಿಸಿ ಪಟ್ಟಣದಲ್ಲಿ ತಾಲ್ಲೂಕು ಪತ್ರಕರ್ತರ ಸಂಘದ ಪದಾಧಿಕಾರಿಗಳು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಶನಿವಾರ ಪ್ರತಿಭಟನೆ ನಡೆಸಿದರು.ಪಟ್ಟಣದ ಪ್ರವಾಸಿ ಮಂದಿರ ವೃತ್ತದಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಅಲ್ಲಿ ಕೆಲ ಕಾಲ ಮಾನವ ಸರಪಳಿ ನಿರ್ಮಿಸಿ ಹೆದ್ದಾರಿ ತಡೆ ನಡೆಸಿದರು. ಹೀಗಾಗಿ ಬೆಂಗಳೂರು-ಮೈಸೂರು ಹೆದ್ದಾರಿ ಸಂಚಾರ ಕೆಲ ಕಾಲ ಅಸ್ತವ್ಯಸ್ತಗೊಂಡಿತು.ನಂತರ ಅಲ್ಲಿಂದ ದಾರಿಯುದ್ದಕೂ ವಕೀಲರು ಹಾಗೂ ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಘೋಷಣೆಗಳನ್ನು ಕೂಗಿದ ಅವರು, ಅಲ್ಲಿಂದ ತಾಲ್ಲೂಕು ಕಚೇರಿ ಆವರಣಕ್ಕೆ ತೆರಳಿ  ಒಂದು ಗಂಟೆಗೂ ಹೆಚ್ಚು ಕಾಲ ಧರಣಿ ನಡೆಸಿದರು.

ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಮತ್ತಿಕೆರೆ ಜಯರಾಂ, ಹಿರಿಯ ಪತ್ರಕರ್ತ ಸೋಮಶೇಖರ ಕೆರಗೋಡು, ತಾಲ್ಲೂಕು ಅಧ್ಯಕ್ಷ ಶಿವನಂಜಯ್ಯ ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ್, ಉಪಾಧ್ಯಕ್ಷ ಅಶೋಕ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಎಂ.ಆರ್.ಚಕ್ರಪಾಣಿ, ಜಿಲ್ಲಾ ಸಮಿತಿ ಸದಸ್ಯ ಎಂ.ಪಿ.ವೆಂಕಟೇಶ್, ಖಜಾಂಚಿ ಎಚ್.ಬಿ.ಕಾಂತರಾಜು, ಪತ್ರಕರ್ತರಾದ ಅಣ್ಣೂರು ಸತೀಶ್,  ರವಿ ಸಾವಂದಿಪುರ, ರವಿ ಲಾಲಿಪಾಳ್ಯ, ಗುರುರಾಜ್, ಯತೀಶ್, ಸೋಮಶೇಖರ್, ಪುರುಷೊತ್ತಮ್, ಮಧು, ಯೋಗೇಶ್, ಮಂಜುನಾಯಕ್, ಸುಂದರರಾಜ್, ಪುಟ್ಟಸ್ವಾಮಿ, ಪುರಸಭಾಧ್ಯಕ್ಷ ಚಂದ್ರು, ಮಾಜಿ ಅಧ್ಯಕ್ಷರಾದ ವೈ.ಬಿ.ಶಂಕರೇಗೌಡ, ಸಿಐಟಿಯು ಜಿಲ್ಲಾಧ್ಯಕ್ಷ ಜಿ.ರಾಮಕೃಷ್ಣ, ಕರ್ನಾಟಕ ರಕ್ಷಣಾವೇದಿಕೆ ಜಿಲ್ಲಾಧ್ಯಕ್ಷ ಉಮಾಶಂಕರ್, ಮಹಿಳಾಧ್ಯಕ್ಷೆ ಸೆಲ್ವಿಮುರು ಗೇಶನ್, ನಾಗಮ್ಮ, ವಿಶ್ವಒಕ್ಕಲಿಗರ ಜನಜಾಗೃತಿ ಸಂಘದ ಜಿಲ್ಲಾಧ್ಯಕ್ಷ ದಿಲೀಪ್‌ಕುಮಾರ್, ತಾಲ್ಲೂಕು ಅಧ್ಯಕ್ಷ ಮಹಾಲಿಂಗು, ಪ್ರಾಂತ ರೈತಸಂಘದ ಅಧ್ಯಕ್ಷ ಪ್ರದೀಪ್, ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಮಂಜುಳಾ ರಾಜ್, ಗ್ರಾಪಂ ನೌಕರರ ಸಂಘದ ಕಾರ್ಯದರ್ಶಿ ಜಿ.ಆರ್.ರಾಮು, ಸುವರ್ಣಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಎಂ.ವೆಂಕಟೇಶ್, ರಾಜ್ಯ ಸಂಚಾಲಕ ಮ.ನ.ಪ್ರಸನ್ನಕುಮಾರ್, ಎಂ.ಸಿ.ಲಿಂಗರಾಜು, ಜೀವ ವಿಮಾ ಪ್ರತಿನಿಧಿಗಳ ಸಂಘದ ಅಧ್ಯಕ್ಷ ಧನಪಾಲಶೆಟ್ಟಿ, ಗ್ರಾಪಂ ಸದಸ್ಯ ಹೊಸಗಾವಿ ಪುಟ್ಟಸ್ವಾಮಿ, ಲಾರಾ ಪ್ರಸನ್ನ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.