ಸೋಮವಾರ, ಜನವರಿ 20, 2020
19 °C
ಕಾಯ್ದೆ: ಅರಿವು ಮೂಡಿಸುವ ಕಾರ್ಯಕ್ರಮಗಳೇ ನಡೆದಿಲ್ಲ!

ಪರಿಶಿಷ್ಟರ ಮೇಲಿನ ದೌರ್ಜನ್ಯ ಪ್ರಕರಣ ಹೆಚ್ಚಳ

ಭೀಮಸೇನ ಚಳಗೇರಿ/ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳ: ಜಿಲ್ಲೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿ­ದರೆ ಈ ವರ್ಷದ ನವೆಂಬರ್‌ ಅಂತ್ಯದ ವರೆಗಿನ ಅವಧಿಯಲ್ಲಿ ಪರಿಶಿಷ್ಟರ ಮೇಲೆ ನಡೆದ ದೌರ್ಜನ್ಯ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದೆ. ಅಲ್ಲದೇ, ದೌರ್ಜನ್ಯಕ್ಕೆ ಒಳಗಾಗಿರುವ ಪರಿಶಿಷ್ಟ ವ್ಯಕ್ತಿಗಳ ಸಂಖ್ಯೆಯಲ್ಲಿ ಸಹ ಹೆಚ್ಚಳವಾಗಿರುವುದು ಸಮಾಜ ಕಲ್ಯಾಣ ಇಲಾಖೆ ಒದಗಿಸಿರುವ ಅಂಕಿ–ಅಂಶಗಳಿಂದ ಸ್ಪಷ್ಟವಾಗುತ್ತದೆ.2012ರ ಜನವರಿಯಿಂದ ಡಿಸೆಂಬರ್‌ ವರೆಗಿನ ಅವಧಿಯಲ್ಲಿ ಒಟ್ಟು 14 ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳಲ್ಲಿ ಒಟ್ಟು 22 ಜನರು ದೌರ್ಜನ್ಯಕ್ಕೆ ಒಳಗಾಗಿದ್ದು, ₨ 6.35 ಲಕ್ಷ ಪರಿಹಾರ ಧನವನ್ನು ಮಂಜೂರು ಮಾಡಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಒದಗಿಸಿರುವ ದಾಖಲೆಗಳು ಹೇಳುತ್ತವೆ.ಇನ್ನು, ಪ್ರಸಕ್ತ ಸಾಲಿನಲ್ಲಿ ನವೆಂಬರ್‌ ಅಂತ್ಯದ ವರೆಗಿನ ಅವಧಿಯಲ್ಲಿ ಒಟ್ಟು 27 ಇಂತಹ ಪ್ರಕರಣಗಳು ದಾಖಲಾಗಿವೆ. ಒಟ್ಟು 92 ಜನರು ದೌರ್ಜನ್ಯಕ್ಕೆ ಒಳಗಾಗಿದ್ದು, ಒಟ್ಟು ₨ 15.25 ಲಕ್ಷ ಪರಿಹಾರ ಧನ ಮಂಜೂರು ಮಾಡಿರುವುದಾಗಿ ಇವೇ ದಾಖಲೆಗಳು ಸ್ಪಷ್ಟಪಡಿಸುತ್ತವೆ.2012ರಲ್ಲಿ 4 ಜಾತಿ ನಿಂದನೆ ಪ್ರಕರಣಗಳು ದಾಖಲಾಗಿದ್ದರೆ, ಜಾತಿ ನಿಂದನೆ ಮತ್ತು ಹೊಡೆದಾಟಕ್ಕೆ ಸಂಬಂಧಿಸಿದಂತೆ 8 ಪ್ರಕರಣಗಳು ದಾಖಲಾಗಿವೆ. ಹೊಡೆದಾಟ ಹಾಗೂ ಕೊಲೆಗೆ ಸಂಬಂಧಿಸಿದಂತೆ ತಲಾ ಒಂದು ಪ್ರಕರಣ ದಾಖಲಾಗಿವೆ. ಆದರೆ, ಈ ವರ್ಷ ಜಾತಿ ನಿಂದನೆ ಮತ್ತು ಹೊಡೆದಾಟಕ್ಕೆ ಸಂಬಂಧಿಸಿದಂತೆ 20 ಪ್ರಕರಣಗಳು ದಾಖಲಾಗಿದ್ದರೆ, ಜಾತಿ ನಿಂದನೆ ಮತ್ತು ಮಾನಭಂಗಕ್ಕೆ ಸಂಬಂಧಿಸಿದಂತೆ 6 ಹಾಗೂ ಮರಣಕ್ಕೆ ಸಂಬಂಧಪಟ್ಟಂತೆ ಒಂದು ಪ್ರಕರಣ ದಾಖಲಾಗಿದೆ ಎಂದು ಇವೇ ದಾಖಲೆಗಳಿಂದ ಸ್ಪಷ್ಟವಾಗುತ್ತದೆ.ಪ್ರಕರಣಗಳ ಸಂಖ್ಯೆ ಹೆಚ್ಚಾಗಿಲ್ಲ?: ಆದರೆ, ಜಿಲ್ಲೆಯಲ್ಲಿ ಪರಿಶಿಷ್ಟರ ಮೇಲೆ ದೌರ್ಜನ್ಯ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಶುಭ ಅವರು ಸಮರ್ಥನೆ ಮಾಡುತ್ತಾರೆ.‘2012 ಹಾಗೂ 2013ರಲ್ಲಿ ಅಷ್ಟೇ ಪ್ರಮಾಣದ ಪ್ರಕರಣಗಳು ದಾಖಲಾಗಿವೆ. ಆದರೆ, ಈ ವರ್ಷ ದೌರ್ಜನ್ಯಕ್ಕೆ ಒಳಗಾಗಿರುವ ಜನರ ಸಂಖ್ಯೆ ಹೆಚ್ಚಾಗಿದೆ ಅಷ್ಟೇ’ ಎಂದೂ ಹೇಳಿದರು.ಹಾಗೆ ನೋಡಿದರೆ, ಕಳೆದ ವರ್ಷ 14 ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದರೆ, ಈ ವರ್ಷ ದಾಖಲಾದ ಪ್ರಕರಣಗಳ ಸಂಖ್ಯೆ 27. ಅಲ್ಲದೇ, ದೌರ್ಜನ್ಯಕ್ಕೆ ಒಳಗಾದವರ ಸಂಖ್ಯೆ ಹೆಚ್ಚಾಗಿದೆ ಎಂದರೆ, ಪರಿಶಿಷ್ಟರ ಮೇಲಿನ ದೌರ್ಜನ್ಯವೂ ಹೆಚ್ಚಾದಂತೆ ಅಲ್ಲವೇ ಎಂಬ ‘ಪ್ರಜಾವಾಣಿ’ಯ ಪ್ರಶ್ನೆಗೆ ಅವರು ಸಮರ್ಪಕ ಉತ್ತರ ನೀಡದೇ ಜಾರಿಕೊಂಡರು.ಕಾರ್ಯಕ್ರಮವೇ ನಡೆದಿಲ್ಲ!: ವಿಚಿತ್ರ ಎಂದರೆ, ಜಿಲ್ಲೆಯಲ್ಲಿ ಪರಿಶಿಷ್ಟರ ವಿರುದ್ಧ ದೌರ್ಜನ್ಯ ತಡೆ ಕಾಯ್ದೆ ಕುರಿತಂತೆ ಈ ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಅರಿವು ಮೂಡಿ-­ಸುವ ಕಾರ್ಯ­ಕ್ರಮ­ಗಳೇ ನಡೆದಿಲ್ಲ!‘ದೌರ್ಜನ್ಯ ಪ್ರಕರಣಗಳು ನಡೆದ ಸಂದರ್ಭದಲ್ಲಿ ಹಾಗೂ ಇತರ ದಿನಗಳಲ್ಲಿ ಈ ಕಾಯ್ದೆ ಕುರಿತಂತೆ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಆದರೆ, ಈ ವರ್ಷ ಇಂತಹ ಕಾರ್ಯಕ್ರಮಗಳು ನಡೆದಿಲ್ಲ. 15 ದಿನಗಳ ಒಳಗಾಗಿ ಇಂತಹ ಕಾರ್ಯಕ್ರಮ ಆಯೋಜಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಶುಭ ಹೇಳುತ್ತಾರೆ.‘ಈ ಕಾರ್ಯಕ್ರಮಗಳಿಗೆ ಇಂತಿಷ್ಟೇ ಬಜೆಟ್‌ ಎಂಬುದು ಇರುವುದಿಲ್ಲ. ಉನ್ನತ ಕಚೇರಿಯಿಂದ ಬಿಡುಗ­ಡೆಯಾಗುವ ಅನುದಾನದಲ್ಲಿಯೇ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾ­ಗುತ್ತದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರತಿಕ್ರಿಯಿಸಿ (+)