ಬುಧವಾರ, ಜನವರಿ 29, 2020
27 °C

ಪರಿಹಾರ ವಿತರಣೆಯಲ್ಲಿ ತಾರತಮ್ಯ– ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಂಡ್ಲುಪೇಟೆ: ರಾಜ್ಯದ ರೈತರ ಆತ್ಮಹತ್ಯೆ ಪರಿಹಾರ ವಿತರಣೆಯಲ್ಲಿ  ಸರ್ಕಾರದ ಧೋರಣೆ ಬದಲಾಗ­ಬೇಕಿದೆ ಎಂದು ಕ್ಷೇತ್ರದ ಜೆಡಿಎಸ್‌ ಘಟಕದ ಅಧ್ಯಕ್ಷ ಬಿ.ಪಿ. ಮುದ್ದುಮಲ್ಲು ಟೀಕಿಸಿದರು.ತಾಲ್ಲೂಕಿನ ಶಿವಪುರ ಗ್ರಾಮದಲ್ಲಿ ಈಚೆಗೆ ನಡೆದ ಡಾ.ಬಿ.ಆರ್. ಅಂಬೇಡ್ಕರ್ ಅವರ ಪರಿನಿರ್ವಾಣ  ದಿನ ಹಾಗೂ ಜೆಡಿಎಸ್‌ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಬೆಳಗಾವಿಯಲ್ಲಿ ಕಬ್ಬು ಬೆಳೆಗಾರ ಆತ್ಮಹತ್ಯೆ ಮಾಡಿಕೊಂಡ ಕಾರಣಕ್ಕೆ ₨ 10 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ  ಹೆಚ್.ಡಿ. ಕೋಟೆ ತಾಲ್ಲೂಕಿನ ಚಿಕ್ಕಬರಗಿಯಲ್ಲಿ ಹುಲಿ ಬಾಯಿಗೆ ತುತ್ತಾಗಿ ಸತ್ತ ರೈತನಿಗೆ ಕೇವಲ ₨ 5 ಲಕ್ಷ ಮತ್ತು ಜಿಲ್ಲೆಯ ಹನೂರು ಬಳಿ ಸಾಲ ಬಾಧೆ ತಾಳಲಾರದೆ ಕ್ರಿಮಿನಾಶಕ ಸೇವಿಸಿ ಸತ್ತ ರೈತನಿಗೆ ಕೇವಲ ₨ 1 ಲಕ್ಷ ಪರಿಹಾರ ನೀಡಿ ತಾರತಮ್ಯವೆಸಗಿದೆ ಎಂದು ಆಪಾದಿಸಿದರು.ಬೆಳಗಾವಿಯ ವಿಧಾನಸಭೆಯ ಅಧಿವೇಶನ ನಡೆವಾಗ ಸತ್ತ ರೈತ,  ಹುಲಿ ದಾಳಿಗೆ ಸಿಕ್ಕ ರೈತ, ವಿಷ ಸೇವಿಸಿ ಸತ್ತ ರೈತ ಎಲ್ಲರೂ ರೈತರೇ ಎಂಬ ಅರ್ಥದಲ್ಲಿ ನೋಡಬೇಕಿದೆ ಎಂದರು. ತಾಲ್ಲೂಕಿನ ಹಿರೀಕಾಟಿ ಬಳಿ ಬಿಳಿ ಕಲ್ಲು ಕ್ವಾರಿಯಲ್ಲಿ ಕೆಲಸ ಸ್ಥಗಿತಗೊಂಡು ಕಾರ್ಮಿಕರು ಗುಳೆ ಹೋಗುತ್ತಿದ್ದು, ಸಾವಿರಾರು ಮಂದಿ ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ. ಕೂಡಲೇ ಸರ್ಕಾರ ಕಲ್ಲು ಗಣಿಗಾರಿಕೆಯನ್ನು  ಕಾನೂನು ಬದ್ಧಗೊಳಿಸಬೇಕು ಎಂದು  ಆಗ್ರಹಿಸಿದರು.ಕಲ್ಲು ಗಣಿಗಾರಿಕೆಯಲ್ಲಿ ಅಕ್ರಮ ನಡೆದಿದ್ದರೆ ಕಾನೂನು ಕ್ರಮ ಕೈಗೊಳ್ಳಬಹುದು. ಆದರೆ, ಗಣಿ ಗಾರಿಕೆ ಪರವಾನಗಿ ಲೈಸನ್ಸ್ ಸಿಗುವ ತನಕ ಕಾರ್ಮಿಕರ ಹಿತ ದೃಷ್ಟಿಯಿಂದ ಜಿಲ್ಲಾಡಳಿತ ಏಜೆನ್ಸಿ ಮೂಲಕ ಕಲ್ಲು ಒಡೆಯಲು ಅವಕಾಶ ಕಲ್ಪಿಸಬೇಕು ಎಂದರು. ಕೆಲಸ ನಿಂತಿರುವ ಕಾರಣ ರಾಜಧನ ಸೋರಿಕೆಯಾಗುತ್ತಿದ್ದು, ಜಿಲ್ಲಾಡಳಿತ ಕಾರ್ಮಿಕರಿಗೆ ಕಾರ್ಯ ನಿರ್ವಹಿಸಲು ಅವಕಾಶ ನೀಡಿ ಗುಳೆ ಹೋಗುವುದನ್ನು ತಪ್ಪಿಸಬೇಕು ಎಂದರು.ಜೆಡಿಎಸ್‌ ರೈತ ಘಟಕದ ಅಧ್ಯಕ್ಷ ಕೆ.ಪಿ. ಶಿವರಾಜು, ಎಸ್ಸಿ-– ಎಸ್ಟಿ ಘಟಕದ ಅಧ್ಯಕ್ಷ  ಪ್ರಸಾದ್, ಮುಖಂಡರಾದ ಎಸ್. ಮಲ್ಲಿಕಾರ್ಜುನ ಸ್ವಾಮಿ ಹಿರೇಮೆಠ್, ಮಹದೇವನಾಯಕ್ , ಕರುಣಾಮೂರ್ತಿ, ಶಂಕರ್, ಶಶಿ, ಗೋಪಾಲಯ್ಯ ಇದ್ದರು.

ಪ್ರತಿಕ್ರಿಯಿಸಿ (+)