ಶುಕ್ರವಾರ, ಮೇ 7, 2021
25 °C

ಪರೀಕ್ಷೆ ಮುಂದೂಡಿಕೆ ಸಮರ್ಥನೆ

ಎ.ಎಂ.ಸುರೇಶ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆರು ವರ್ಷಗಳ ನಂತರ ನಡೆಯುತ್ತಿರುವ ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆಗೆ (ಕೆ-ಸೆಟ್) 54 ಸಾವಿರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು ಅವುಗಳನ್ನು ಪರಿಶೀಲಿಸಿ ಸಕಾಲದಲ್ಲಿ ಅಭ್ಯರ್ಥಿಗಳಿಗೆ ಪ್ರವೇಶ ಪತ್ರ ತಲುಪಿಸಲು ಸಾಧ್ಯವಾಗದ ಕಾರಣ ಎರಡು ಬಾರಿ ಪರೀಕ್ಷೆ ಮುಂದೂಡುವುದು ಅನಿವಾರ್ಯವಾಯಿತು ಎಂದು ಅರ್ಹತಾ ಪರೀಕ್ಷೆ ಆಯೋಜಿಸಿರುವ ಮೈಸೂರು ವಿಶ್ವವಿದ್ಯಾಲಯ ಸಮರ್ಥಿಸಿಕೊಂಡಿದೆ.ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ವರ್ಷಕ್ಕೆ ಎರಡು ಬಾರಿ ನಡೆಸುವ ರಾಷ್ಟ್ರ ಮಟ್ಟದ ಅರ್ಹತಾ ಪರೀಕ್ಷೆಯನ್ನು (ಎನ್‌ಇಟಿ) ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರ ಬರೆಯಬೇಕು. ಆದರೆ ರಾಜ್ಯಮಟ್ಟದ ಅರ್ಹತಾ ಪರೀಕ್ಷೆಯನ್ನು ಕನ್ನಡದಲ್ಲೂ ಬರೆಯಲು ಅವಕಾಶ ಇರುವುದರಿಂದ ಸಹಜವಾಗಿಯೇ ನಿರೀಕ್ಷೆಗೂ ಮೀರಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ ಎಂದು ಪರೀಕ್ಷೆಯ ಸಂಯೋಜಕ ಪ್ರೊ.ಸಿ.ಶ್ರೀಕಂಠಪ್ಪ  `ಪ್ರಜಾವಾಣಿ~ಗೆ ತಿಳಿಸಿದರು.ಬೆಂಗಳೂರು, ಬೆಳಗಾವಿ, ಬಳ್ಳಾರಿ, ವಿಜಾಪುರ, ದಾವಣಗೆರೆ, ಧಾರವಾಡ, ಗುಲ್ಬರ್ಗ, ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ತುಮಕೂರಿನಲ್ಲಿ ಅರ್ಹತಾ ಪರೀಕ್ಷೆ ನಡೆಯಲಿದ್ದು, ಬೆಂಗಳೂರು ಕೇಂದ್ರದಲ್ಲಿ ಹನ್ನೊಂದು ಸಾವಿರ, ಮೈಸೂರು ಕೇಂದ್ರದಲ್ಲಿ ಸುಮಾರು ಒಂಬತ್ತು ಸಾವಿರ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.ಕಳೆದ ಮಾರ್ಚ್‌ನಲ್ಲಿ ಪರೀಕ್ಷೆಗೆ ಅರ್ಜಿ ಆಹ್ವಾನಿಸಿದಾಗ 25-30 ಸಾವಿರ ಅರ್ಜಿಗಳು ಬರಬಹುದು ಎಂದು ಅಂದಾಜಿಸಿ ಜುಲೈ 17ರಂದು ಪರೀಕ್ಷೆ ನಡೆಸಲಾಗುವುದು ಎಂದು ದಿನಾಂಕ ಪ್ರಕಟಿಸಲಾಗಿತ್ತು. ಆದರೆ ಎಲ್ಲ ಲೆಕ್ಕಾಚಾರಗಳನ್ನು ಮೀರಿ 54 ಸಾವಿರ ಅರ್ಜಿಗಳು ಬಂದಿವೆ. ಅವುಗಳನ್ನು ಪರಿಶೀಲಿಸಲು ಸಮಯಾವಕಾಶ ಬೇಕಾದ ಕಾರಣ ಆಗಸ್ಟ್ 28ಕ್ಕೆ ಮುಂದೂಡಲಾಯಿತು. ಆದರೆ ಬೆಂಗಳೂರು ಮತ್ತು ವಿಜಾಪುರ ಕೇಂದ್ರಗಳಲ್ಲಿ ಎಲ್ಲರಿಗೂ ಪ್ರವೇಶ ಪತ್ರ ತಲುಪಿಸಲು ಸಾಧ್ಯವಾಗದ ಕಾರಣ ಮತ್ತೆ ಅಕ್ಟೋಬರ್ 23ಕ್ಕೆ ಮುಂದೂಡಲಾಗಿದೆ.ಅ.23ಕ್ಕೂ ಮೊದಲೇ ಪರೀಕ್ಷೆ ಮಾಡಬೇಕು ಎಂಬ ಉದ್ದೇಶವಿತ್ತು. ಆದರೆ ಮೈಸೂರು ವಿಶ್ವವಿದ್ಯಾಲಯದ ಪಿಎಚ್.ಡಿ ಪರೀಕ್ಷೆ, ಯುಪಿಎಸ್‌ಸಿ, ಕೆಪಿಎಸ್‌ಸಿ ಪರೀಕ್ಷೆಗಳು ಇರುವ ಕಾರಣ ಸಾಧ್ಯವಾಗುತ್ತಿಲ್ಲ. ಪರೀಕ್ಷೆ ನಡೆಸಲು ಶಾಲಾ-ಕಾಲೇಜುಗಳಲ್ಲಿ ಕೊಠಡಿಗಳು ಲಭ್ಯವಾಗಬೇಕು. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಅ.23ರಂದು ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಕೆಲವರಿಗೆ ಪ್ರವೇಶ ಪತ್ರಗಳೂ ತಲುಪಿವೆ. ಯಾವುದೇ ಕಾರಣಕ್ಕೂ ಈ ಬಾರಿ ಪರೀಕ್ಷೆ ಮುಂದೂಡುವುದಿಲ್ಲ ಎಂದು ಹೇಳಿದರು.ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ ನಂತರ ಹಾರ್ಡ್‌ಕಾಪಿಯನ್ನು ಸಂಬಂಧಪಟ್ಟ ಪರೀಕ್ಷಾ ಕೇಂದ್ರಕ್ಕೆ ತಲುಪಿಸಬೇಕು. ಆದರೆ ಕೆಲವರು ಆ ರೀತಿ ಮಾಡಿಲ್ಲ. ಅಲ್ಲದೆ ಜಾತಿ ಪ್ರಮಾಣ ಪತ್ರವನ್ನೂ ಸಲ್ಲಿಸಿಲ್ಲ. ಅಂತಹವರಿಗೆ ಕಾಲಾವಕಾಶ ನೀಡಲಾಯಿತು. ತಡವಾಗಲು ಇದು ಸಹ ಕಾರಣ ಎಂದು ವಿಜಾಪುರ ಕೇಂದ್ರದ ನೋಡಲ್ ಅಧಿಕಾರಿ ಡಾ.ವಿ.ವಿ.ಮಳಗಿ ತಿಳಿಸಿದರು.ಇತಿಹಾಸ, ಅರ್ಥಶಾಸ್ತ್ರ, ಕನ್ನಡ, ಇಂಗ್ಲಿಷ್, ಹಿಂದಿ, ಗಣಿತ ಸೇರಿದಂತೆ ಒಟ್ಟು 26 ವಿಷಯಗಳಿಗೆ ಪರೀಕ್ಷೆ ನಡೆಸಲಾಗುತ್ತಿದೆ. ಕಾನೂನು, ಪತ್ರಿಕೋದ್ಯಮ ಸೇರಿದಂತೆ ಕೆಲ ವಿಷಯಗಳನ್ನು ಕೈಬಿಟ್ಟಿರುವುದು ಸರಿಯಲ್ಲ ಎಂದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೂ ಈ ಬಾರಿ ಆ ವಿಷಯಗಳನ್ನು ಸೇರಿಸಿಲ್ಲ. ಈ ಬಗ್ಗೆ ಸಂಯೋಜಕರನ್ನು ಪ್ರಶ್ನಿಸಿದಾಗ ಮುಂದಿನ ವರ್ಷ ನಡೆಯುವ ಪರೀಕ್ಷೆಗೆ ಆ ವಿಷಯಗಳನ್ನೂ ಸೇರ್ಪಡೆ ಮಾಡಲಾಗುವುದು ಎಂದು ಹೇಳಿದರು.ಸಂಖ್ಯೆ ಹೆಚ್ಚಳಕ್ಕೆ ಏನು ಕಾರಣ?

 ಎರಡು ವರ್ಷಗಳ ಹಿಂದೆ ಸರ್ಕಾರಿ ಪದವಿ ಕಾಲೇಜುಗಳಿಗೆ 2,500 ಉಪನ್ಯಾಸಕರನ್ನು ನೇಮಕ ಮಾಡಿಕೊಂಡಾಗ ಅವರಲ್ಲಿ ಬಹುತೇಕ ಮಂದಿ ಎಂ.ಫಿಲ್ ಪಾಸಾದವರಾಗಿದ್ದರು. ಆದರೆ ಈಗ ಎಂ.ಫಿಲ್ ಮಾನದಂಡವನ್ನು ರದ್ದುಪಡಿಸಲಾಗಿದ್ದು, ಪಿಎಚ್‌ಡಿ, ಎನ್‌ಇಟಿ/ಎಸ್‌ಎಲ್‌ಇಟಿ ಪಾಸಾದವರು ಮಾತ್ರ ಪದವಿ ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸಕರಾಗಲು ಅರ್ಹರು.ಆದರೆ ಎಲ್ಲರಿಗೂ ಪಿಎಚ್‌ಡಿ, ಎನ್‌ಇಟಿ ಮಾಡಲು ಸಾಧ್ಯವಾಗದ ಕಾರಣ, ಬಹುತೇಕ ಸ್ನಾತಕೋತ್ತರ ಪದವೀಧರರು ರಾಜ್ಯಮಟ್ಟದ ಅರ್ಹತಾ ಪರೀಕ್ಷೆ ಬರೆಯಲು ಮುಗಿಬಿದ್ದಿದ್ದಾರೆ. ಅನುದಾನಿತ ಕಾಲೇಜುಗಳು, ವಿಶ್ವವಿದ್ಯಾಲಯಗಳಲ್ಲಿ ಬಹಳಷ್ಟು ಹುದ್ದೆಗಳು ಖಾಲಿ ಇವೆ. ಬ್ಯಾಕ್‌ಲಾಗ್ ಹುದ್ದೆಗಳೂ ಭರ್ತಿಯಾಗಿಲ್ಲ.ಅರ್ಹತಾ ಪರೀಕ್ಷೆ ಪಾಸಾದರೆ ಯಾವುದಾದರೂ ಕಾಲೇಜಿನಲ್ಲಿ ಉದ್ಯೋಗ ಗಿಟ್ಟಿಸಿ ಕೈತುಂಬಾ ಸಂಬಳ ಪಡೆಯಬಹುದು ಎಂಬ ಆಸೆಯಿಂದ ಅಧಿಕ ಮಂದಿ ಅರ್ಜಿ ಸಲ್ಲಿಸಿದ್ದಾರೆ.ಪ್ರತಿ ವರ್ಷ ಪರೀಕ್ಷೆ

 ಉಪನ್ಯಾಸಕರಿಗೆ ಯುಜಿಸಿ ವೇತನ ಶ್ರೇಣಿ ಜಾರಿಗೆ ಬಂದ ನಂತರ ಪಿಎಚ್‌ಡಿ, ಎನ್‌ಇಟಿ, ಎಸ್‌ಎಲ್‌ಇಟಿ ಕಡ್ಡಾಯ ಮಾಡಲಾಯಿತು. ಎನ್‌ಇಟಿ ಪರೀಕ್ಷೆ ವರ್ಷಕ್ಕೆ ಎರಡು ಬಾರಿ ತಪ್ಪದೇ ನಡೆಯುತ್ತಿದೆ. ಆದರೆ ರಾಜ್ಯಮಟ್ಟದ ಅರ್ಹತಾ ಪರೀಕ್ಷೆಯನ್ನು ಮಾತ್ರ ಬೇಕಾಬಿಟ್ಟಿಯಾಗಿ ಮನಸ್ಸಿಗೆ ಬಂದಾಗ ನಡೆಸಲಾಗುತ್ತಿದೆ. 2005ರಿಂದ ಪರೀಕ್ಷೆಯೇ ನಡೆದಿಲ್ಲ. ಸರ್ಕಾರ ಮತ್ತು ವಿಶ್ವವಿದ್ಯಾಲಯಗಳ ನಿರಾಸಕ್ತಿಯೇ ಇದಕ್ಕೆ ಕಾರಣ ಎನ್ನಲಾಗಿದೆ.ಯುಜಿಸಿ ಅನುಮತಿ ಪಡೆದು ಪ್ರತಿ ವರ್ಷ ಪರೀಕ್ಷೆ ನಡೆಸಲು ಅವಕಾಶ ಇದೆ. ಆದರೆ ಪರೀಕ್ಷೆ ಆಯೋಜಿಸಲು ವಿಶ್ವವಿದ್ಯಾಲಯಗಳು ಮುಂದೆ ಬರುತ್ತಿಲ್ಲ. ಹೀಗಾಗಿ ಕಾಲಕಾಲಕ್ಕೆ ಪರೀಕ್ಷೆಗಳು ನಡೆಯುತ್ತಿರಲಿಲ್ಲ. ಆದರೆ ಇನ್ನು ಮುಂದೆ ಆ ರೀತಿ ಆಗುವುದಿಲ್ಲ. ಪ್ರತಿ ವರ್ಷ ಪರೀಕ್ಷೆ ನಡೆಸಲು ಮೈಸೂರು ವಿಶ್ವವಿದ್ಯಾಲಯ ಮುಂದೆ ಬಂದಿದೆ. ಬರುವ ಜೂನ್‌ನಲ್ಲಿ ಮತ್ತೆ ಪರೀಕ್ಷೆ ನಡೆಯಲಿದ್ದು ಈಗಿನಿಂದಲೇ ಅಭ್ಯರ್ಥಿಗಳು ಸಿದ್ಧತೆ ನಡೆಸಬಹುದು ಎಂದು ಶ್ರೀಕಂಠಪ್ಪ ತಿಳಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.