ಭಾನುವಾರ, ಮೇ 16, 2021
22 °C

ಪರ್ಯಾಯ ಇಂಧನ ಯಾಕಿನ್ನೂ ನಿಧಾನ?

- ಇ.ಎಸ್. ಸುಧೀಂದ್ರ ಪ್ರಸಾದ್ Updated:

ಅಕ್ಷರ ಗಾತ್ರ : | |

ಪೆಟ್ರೋಲ್ ಬೆಲೆ ದಿನೇದಿನೇ ಏರಿಕೆಯಾಗುತ್ತಲೇ ಇರುವ ಸುದ್ದಿ ವಾಹನ ಸವಾರರಲ್ಲಿ ದಿಗಿಲು ಹುಟ್ಟಿಸಿದೆ. ಅತಿಯಾದ ಇಂಧನದ ಮೇಲಿನ ಅವಲಂಬನೆಯಿಂದಾಗಿ ಪೆಟ್ರೋಲ್ ಹಾಗೂ ಡೀಸೆಲ್ ಇಲ್ಲದ ಭಾರತದ ವಾಹನ ಪ್ರಪಂಚವನ್ನು ಊಹಿಸುವುದೂ ಅಸಾಧ್ಯ.ಜಗತ್ತಿನಲ್ಲೇ ಅತಿ ಹೆಚ್ಚು ವಾಹನ ಮಾರಾಟವಾಗುತ್ತಿರುವ ಇಲ್ಲಿ ನಿತ್ಯವೂ ಇಂಧನ ಬೆಲೆ ಏರಿಳಿತದ ಸುದ್ದಿಗಳತ್ತಲೇ ವಾಹನ ಸವಾರರ ಕಣ್ಣು ನೆಟ್ಟಿರುತ್ತದೆ. ಅದರ ಮೇಲೆಯೇ ಭಾರತದ ಜಿಡಿಪಿ ಅವಲಂಬಿಸಿರುವುದೂ ಅಷ್ಟೇ ಸತ್ಯ.ಜಗತ್ತಿನ ಬೇರೆ ಬೇರೆ ರಾಷ್ಟ್ರಗಳಲ್ಲಿ ಪರ್ಯಾಯ ಇಂಧನ ಕುರಿತು ಗಂಭೀರ ಚಿಂತನೆ ನಡೆಸಿದ್ದರೂ ಭಾರತದಲ್ಲಿ ಎಷ್ಟೇ ಬೆಲೆ ಏರಿಕೆಯಾದರೂ ಇರುವ ಇಂಧನಕ್ಕೆ ಜೋತು ಬೀಳುವ ಪರಿಸ್ಥಿತಿ. ಈ ಸಂದರ್ಭದಲ್ಲಿ ವಿದೇಶಿ ನೆಲದಲ್ಲಿ ಕಂಡುಕೊಂಡಿರುವ ಏಳು ಪರ್ಯಾಯ ಇಂಧನಗಳ ಕುರಿತು ಒಂದು ಪಕ್ಷಿ ನೋಟ.ನೈಸರ್ಗಿಕ ಇಂಧನ ರಹಿತ ವಾಹನ ಚಾಲನೆಯತ್ತ ಪ್ರತಿಯೊಂದು ರಾಷ್ಟ್ರ ತನ್ನ ಗಮನ ನೆಟ್ಟಿದೆ. ಮುಂದಿನ ತಲೆಮಾರಿಗೆ ಪರ್ಯಾಯ ಇಂಧನ ಸೃಷ್ಟಿಸುವ ಜವಾಬ್ದಾರಿಯನ್ನು ವಿಜ್ಞಾನಿಗಳು ಹೊತ್ತುಕೊಂಡಿದ್ದಾರೆ.ಜಲಜನಕ ಇಂಧನ ಕೋಶ, ವಿದ್ಯುತ್, ಒತ್ತು ಗಾಳಿ ಇತ್ಯಾದಿ ಮೂಲಕ ವಾಹನ ಚಲಿಸುವ ಕುರಿತು ಪ್ರಯೋಗಗಳು ನಡೆಯುತ್ತಲೇ ಇವೆ. ಹೀಗೆ ಪ್ರಯೋಗಿಸಿ ಯಶಸ್ವಿಯಾಗಿರುವ ಕೆಲವೊಂದು ಪರ್ಯಾಯ ಇಂಧನದಿಂದ ಚಲಿಸುವ ಕಾರುಗಳ ಕುರಿತು ಟಿಪ್ಪಣಿಗಳು ಇಲ್ಲಿವೆ.

ಒತ್ತುಗಾಳಿ

ವಾತಾವರಣದಲ್ಲಿ ಇಂಚಿಂಚೂ ಬಿಡದೆ ತುಂಬಿರುವ ಗಾಳಿ, ಹಿಡಿದಿಟ್ಟುಕೊಳ್ಳಲಾಗದಷ್ಟು ಚಂಚಲ. ಇದೇ ಗಾಳಿಯನ್ನು ಒತ್ತಡದಲ್ಲಿ ತುಂಬಿ ಆ ಮೂಲಕ ಕಾರು ಚಲಿಸುವ ಫ್ರೆಂಚ್ ಎಂಜಿನಿಯರ್‌ಗಳ ಸಾಹಸಕ್ಕೆ ಕಡೆಗೂ ಜಯ ಸಿಕ್ಕಿತ್ತು. ಫ್ರೆಂಚ್ ಎಂಜಿನಿಯರ್‌ಗಳ ಈ ಪ್ರಯೋಗ ಯಶಸ್ವಿಯಾಗಿದ್ದು ಅಮೆರಿಕದಲ್ಲಿ.ಸಾಮಾನ್ಯವಾಗಿ ತೈಲ ಬಳಸಿದಾಗಲೂ ಅದು ಉರಿದು ಶಾಖ ಉತ್ಪತ್ತಿಯಾಗಿ ಒತ್ತುಗಾಳಿ ಸಿದ್ಧವಾಗುತ್ತದೆ. ಆ ಮೂಲಕ ಕಾರು ಪ್ರತಿ ಗಂಟೆಗೆ 90 ಮೈಲು ವೇಗದಲ್ಲಿ ಚಲಿಸುತ್ತದೆ. 2010ರಲ್ಲಿ ಪ್ರಾಯೋಗಿಕವಾಗಿ ಸಂಚರಿಸಿದ ಈ ಪುಟ್ಟ ಕಾರು ಪ್ರತಿ ಗಂಟೆಗೆ 35 ಮೈಲು ವೇಗದಲ್ಲಿ ಇಡೀ ನಗರವನ್ನು ಸುತ್ತುವ ಮೂಲಕ ಹುಬ್ಬೇರಿಸುವಂತೆ ಮಾಡಿತು. ಅಮೆರಿಕದಲ್ಲಿ ಲಭ್ಯವಿರುವ ಈ ಕಾರಿನ ಬೆಲೆ ಭಾರತದ ರೂಪಾಯಿಯಲ್ಲಿ 12 ಲಕ್ಷ.

ಜೈವಿಕ ಇಂಧನ

ಜಗತ್ತಿನ ಬಹುತೇಕ ರಾಷ್ಟ್ರಗಳ ಪರಿಸರವಾದಿಗಳು ಅಪೇಕ್ಷೆಯಂತೆ ನೈಸರ್ಗಿಕ ಅನಿಲದ ಬದಲಾಗಿ ಜೈವಿಕ ಇಂಧನದಿಂದ ಕಾರು ಓಡಿಸುವ ಪ್ರಸ್ತಾವನೆ ಇದೀಗ ಸತ್ಯವಾಗಿದೆ. ಕರ್ನಾಟಕದಲ್ಲಿ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಹೊರತುಪಡಿಸಿದರೆ ಕಾರುಗಳಿಗೆ ಇನ್ನೂ ಕಾರ್ಯರೂಪಕ್ಕೆ ಬಾರದ ಜೈವಿಕ ಇಂಧನದ ಬಳಕೆಯನ್ನು ಫೋಕ್ಸ್‌ವ್ಯಾಗನ್ ಅಫಿಸಿಯೊನಾಡೊಸ್ ಕಾರಿನಲ್ಲಿ ಅಳವಡಿಸಿದೆ. ಬೀಟೆಲ್ ಎಂಜಿನ್ ಹೊಂದಿರುವ ಈ ಕಾರು ಶೇ 100ರಷ್ಟು ಜೈವಿಕ ಇಂಧನ ಅಳವಡಿಸಿಕೊಂಡ  ಮೊದಲ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದರ ಕೇಂದ್ರ ಕಚೇರಿ ಹವಾಯಿ ದ್ವೀಪದ ಮಯೂಯಿಯಲ್ಲಿದೆ.ಜಲಜನಕ ಇಂಧನ ಕೋಶ

ಇತ್ತೀಚಿನ ವರ್ಷಗಳಲ್ಲಿ ಪರಿಸರ ಸ್ನೇಹಿ ಸವಾರರ ಪಾಲಿಗೆ ಜಲಜನಕ ಜಾಲಿತ ಕಾರು ಹೆಚ್ಚು ಪ್ರಚಲಿತ. ಆದರೆ ಇದರ ತಂತ್ರಜ್ಞಾನ ಹಾಗೂ ಅಭಿವೃದ್ಧಿ ಕುರಿತು ಕಾರು ತಯಾರಕರಲ್ಲೇ ಬಗೆಹರಿಯದ ಇನ್ನೂ ಹಲವಾರು ಗೊಂದಲಗಳಿವೆ. ಅವುಗಳಲ್ಲಿ ಮುಖ್ಯವಾಗಿ ಜಲಜನಕವನ್ನು ಅಗ್ಗದ ಬೆಲೆಗೆ ಶೇಖರಿಸಿಡುವುದಾದರೂ ಹೇಗೆ ಅದು ಗಟ್ಟಿಯಾಗದಂತೆ ಅಥವಾ ಬೆಂಕಿ ಹೊತ್ತಿಕೊಳ್ಳದಂತೆ ಕಾಪಾಡುವುದು ಹೇಗೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಹುಡುಕಲು ಎಂಜಿನಿಯರ್‌ಗಳು ತಲೆ ಕೆಡಿಸಿಕೊಂಡಿದ್ದಾರೆ.ಜಲಜನಕ ಇಂಧನ ಕೋಶಗಳನ್ನು ಅಳವಡಿಸಿಕೊಂಡ ಹಲವಾರು ಕಾಲ್ಪನಿಕ ಕಾರುಗಳ ಸಿದ್ಧತೆಯನ್ನು ಬಹುತೇಕ ಕಾರು ತಯಾರಿಕಾ ಕಂಪೆನಿಗಳು ನಡೆಸಿವೆ. ಅವುಗಳಲ್ಲಿ ವಿಲಾಸಿ ಕಾರುಗಳ ತಯಾರಕ ಮರ್ಸಿಡಿಸ್ ಬೆಂಜ್ ಕೂಡಾ ಒಂದು. ಇದು ಸಾಮಾನ್ಯರ ಕೈಗೆಟುಕುವುದೇ ಎಂಬ ಪ್ರಶ್ನೆಯನ್ನು ಮುಂದಿಡುತ್ತಲೇ ಇದರ ಮೇಲಿನ ನಿರೀಕ್ಷೆಯ ಭಾರ ಹೆಚ್ಚಾಗಿದೆ.

ಎಥನಾಲ್

ಬ್ರೆಜಿಲ್ ರಾಷ್ಟ್ರ ಸೇರಿದಂತೆ ಇತ್ತೀಚೆಗೆ ಭಾರತದಲ್ಲೂ ಎಥನಾಲ್ ಅನ್ನು ಪೆಟ್ರೋಲ್‌ನೊಂದಿಗೆ ಬಳಸುವ ಪ್ರಯತ್ನ ನಡೆಯುತ್ತಿದೆ. ನಾವು ಖರೀದಿಸುವ ಪೆಟ್ರೋಲ್‌ನಲ್ಲಿ ಇಂತಿಷ್ಟು ಪ್ರಮಾಣ ಎಥನಾಲ್ ಇರಬೇಕೆಂಬ ನಿಯಮವನ್ನು ಈಗಾಗಲೇ ಕೆಲವು ಸರ್ಕಾರಗಳು ರೂಪಿಸಿವೆ.ಸುಜುಕಿ ಕಂಪೆನಿ ಶೇ 100ರಷ್ಟು ಎಥನಾಲ್‌ನಿಂದ ಚಲಿಸುವ ಕಾರುಗಳನ್ನು ಮಾರಾಟ ಮಾಡಿದ ಮೊದಲ ಕಾರು ತಯಾರಿಕಾ ಕಂಪೆನಿ. ಈ ರೀತಿ ಎಥನಾಲ್‌ನಿಂದ ತಯಾರಾದ ಕಾರು ಇ25 ಸೆಡಾನ್ ಕಾರು ಬ್ರೆಜಿಲ್‌ನಲ್ಲಿ ಜನಪ್ರಿಯ. ಅಮೆರಿಕದಲ್ಲೂ ಎಥನಾಲ್ ಬಳಕೆಯ ಬೇರೆ ವಿನ್ಯಾಸ ಕಾರುಗಳ ತಯಾರಿಯಲ್ಲಿದೆ ಸುಜುಕಿ.

ನೀರು

ಹೌದು. ಭೂಮಿಯ ಬಹುಪಾಲು ತುಂಬಿರುವ ನೀರಿನಿಂದಲೂ ಕಾರು ಚಲಿಸುವ ಪ್ರಯೋಗ ಈಗ ಯಶಸ್ವಿಯಾಗಿದೆ. ಜಪಾನ್ ಎಂಜಿನಿಯರ್‌ಗಳು ಅಭಿವೃದ್ಧಿಪಡಿಸಿರುವ ಕಾರು ಒಂದು ಲೀಟರ್ ನೀರು ಬಳಸಿ ಪ್ರತಿ ಗಂಟೆಗೆ 80 ಕಿ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ.  ಈ ಕಾರು ನೀರಿನಲ್ಲಿರುವ ಜಲಜನಕ ಎಲೆಕ್ಟ್ರಾನ್‌ಗಳನ್ನು ಬಳಸಿಕೊಂಡು ವಿದ್ಯುತ್ ಉತ್ಪಾದಿಸಿಕೊಳ್ಳುತ್ತದೆ. ಹೀಗೆ ಉತ್ಪತ್ತಿಯಾದ ವಿದ್ಯುತ್‌ನಿಂದ ಕಾರಿನಲ್ಲಿರುವ ವಿದ್ಯುತ್ ಚಾಲಿತ ಮೋಟಾರು ಚಲಿಸಿ ಕಾರು ಮುಂದೆ ಹೋಗುತ್ತದೆ. ಜೆನಪಾಕ್ಸ್ ಎಂಬ ಈ ಕಾರು ಈಗ ವಾಹನ ಪ್ರಪಂಚದ ಕೇಂದ್ರ ಬಿಂದು.ವಿದ್ಯುತ್

ಯಾವುದೋ ಸಿನಿಮಾಕ್ಕಾಗಿ ಅನಿಮೇಷನ್‌ನಲ್ಲಿ ಸಿದ್ಧಗೊಂಡ ಕಾರಿನಂತಿದೆ ಈ ಕಾರಿನ ವಿನ್ಯಾಸ. ಆದರೆ ಅದರ ವಿನ್ಯಾಸಕಾರನೂ ರಕ್ತ ಮಾಂಸಗಳಿರುವ ಮನುಷ್ಯನೇ ಎಂಬುದೂ ಅಷ್ಟೇ ಸತ್ಯ. ಎಂಜಿನಿಯರ್‌ನ ಅದ್ಭುತ ಕಲ್ಪನೆಯಲ್ಲಿ ಸಿದ್ಧಗೊಂಡ ಎರಡು ಆಸನಗಳ ಈ ಕಾರನ್ನು ಫ್ರೆಂಚ್ ಕಾರು ತಯಾರಿಕಾ ಕಂಪೆನಿ ಪ್ಯೂಜೊ ಸಿದ್ಧಪಡಿಸಿದೆ.ಮುಂದಿನ ಎರಡು ಚಕ್ರಗಳು ಬಗೆಬಗೆಯ ವೇಗದಲ್ಲಿ 360 ಡಿಗ್ರಿ ಕೋನದಲ್ಲಿ ಸುತ್ತುವ ಸಾಮರ್ಥ್ಯ ಇದರದ್ದು. ಇದು ಮಾರುಕಟ್ಟೆಗೆ ಬರುತ್ತದೆಯೇ ಅಥವಾ ಬಂದರೆ ಎಂದು ಎಂಬ ಪ್ರಶ್ನೆಗಳು ಹುಟ್ಟುವುದು ಸಹಜ. ಆದರೆ ಅದಕ್ಕಿನ್ನೂ ಉತ್ತರ ಸಿಕ್ಕಿಲ್ಲ.ಭಾರತದ ರೇವಾ ಕೂಡಾ ವಿದ್ಯುತ್ ಚಾಲಿತ ಕಾರು. ಕಾರಿನೊಳಗೆ ಅಳವಡಿಸಿರುವ ಬ್ಯಾಟರಿಯನ್ನು ಚಾರ್ಜ್ ಮಾಡುವ ಮೂಲಕ ಕಾರನ್ನು ಚಲಿಸಬಹುದು. ಮಹೀಂದ್ರಾ ಕಂಪೆನಿಯು ಇ2ಒ ಎಂಬ ಹೆಸರಿನಲ್ಲಿ ಮಾರುಕಟ್ಟೆಗೆ ಬಿಟ್ಟಿದೆ.

ಜೈವಿಕ ತ್ಯಾಜ್ಯ

ಗಾಳಿ ಹಾಗೂ ನೀರಿನಿಂದ ಚಲಿಸುವ ಕಾರುಗಳಿರುವುದನ್ನು ತಿಳಿದುಕೊಂಡಾಯಿತು. ಆದರೆ ಜೈವಿಕ ತ್ಯಾಜ್ಯಗಳನ್ನು ಬಳಸಿಯೂ ಕಾರು ಚಲಿಸಬಹುದು ಎಂಬುದಕ್ಕೆ ಇಲ್ಲಿದೆ ಒಂದು ಉದಾಹರಣೆ. ನೀರು ಕಾಯಿಸಿಕೊಳ್ಳಲು ಒಲೆಗೆ ಹಾಕಿ ಸುಡುವ ಯಾವುದೇ ಒಣ ಜೈವಿಕ ತ್ಯಾಜ್ಯದಿಂದ ಸಿದ್ಧಪಡಿಸಬಹುದಾದ ವುಡ್ ಪ್ಯಾಲೆಟ್ಸ್‌ನಿಂದ ಶಾಖ ಉತ್ಪಾದಿಸಿ ಆ ಮೂಲಕ ಕಾರು ಚಲಿಸುವ ಸಾಹಸವೂ ಜಗತ್ತಿನಲ್ಲಿ ನಡೆದಿದೆ. ಬದುಕಿರುವ ಅಥವಾ ಇತ್ತೀಚೆಗೆ ಮೃತಪಟ್ಟ ಜೈವಿಕ ಪದಾರ್ಥದಿಂದ ಇಂಧನ ಉತ್ಪಾದಿಸಿಯೂ ಕಾರು ಚಲಿಸುವ ಪ್ರಯತ್ನಗಳು ನಡೆದಿವೆ. ಆನ್ ರೋಡ್:

ಷೆವರ್ಲೆ ಎಂಜಾಯ್


ಮಹೀಂದ್ರಾ ಕ್ಸೈಲೊ, ನಿಸ್ಸಾನ್ ಎವಾಲಿಯಾ, ಟೊಯೊಟಾ ಇನ್ನೋವಾ, ಮಾರುತಿ ಎರ್ಟಿಗಾಕ್ಕೆ ಉತ್ತರ ನೀಡಲು ಷವರ್ಲೆ ಸಜ್ಜಾಗಿದೆ. ಎಂಜಾಯ್ ಎಂಬ ಮಲ್ಟಿ ಯುಟಿಲಿಟಿ ವೆಹಿಕಲ್ ಅನ್ನು ಬಿಡುಗಡೆ ಮಾಡಿರುವ ಚೆವಿ 1.4 ಲೀ. ಸಾಮರ್ಥ್ಯದ ಪೆಟ್ರೋಲ್ ಹಾಗೂ 1.3 ಲೀ. ಸಾಮರ್ಥ್ಯದ ಡೀಸೆಲ್ ಎಂಜಿನ್ ಮಾದರಿಯಲ್ಲಿ ಪರಿಚಯಿಸಿದ್ದು,  ಇದು ಪ್ರತಿಸ್ಪರ್ಧಿಗಳಿಗಿಂತ ಅಗ್ಗಕ್ಕೆ ಲಭ್ಯ ಎಂದು ಹೇಳಲಾಗುತ್ತಿದೆ.ನೋಡಲು ಇನ್ನೋವಾ ಹಾಗೂ ಇವಾಲಿಯಾದಿಂದ ಪ್ರೇರಣೆ ಪಡೆದಂತೆನಿಸಿದರೂ ಇದರ ಆಕಾರ ಹಾಗೂ ಗಾತ್ರ ಕೊಂಚ ಬೇರೆಯದ್ದೇ ಆಗಿದೆ. ಮೂರು ಸಾಲುಗಳ ಆಸನಗಳನ್ನು ಹೊಂದಿರುವ ಎಂಜಾಯ್‌ನಲ್ಲಿ 7ರಿಂದ 8 ಮಂದಿ ಆರಾಮವಾಗಿ ಪ್ರಯಾಣಿಸಬಹುದಾಗಿದೆ.ದೊಡ್ಡ ಕುಟುಂಬ, ಟ್ಯಾಕ್ಸಿ ಮಾರುಕಟ್ಟೆಗೆ ಹೇಳಿಮಾಡಿಸಿದಂತಿದೆ. ವಾಹನ ತಯಾರಿಕಾ ವೆಚ್ಚ ತಗ್ಗಿಸಲು ಸಾಕಷ್ಟು ಕ್ರಮ ಕೈಗೊಳ್ಳಲಾಗಿದೆ. ಉಳಿದಂತೆ ಪವರ್ ಸ್ಟಿಯರಿಂಗ್, ಪವರ್ ವಿಂಡೊ, ಹವಾನಿಂತ್ರಣ, ಹಾಗೂ ಟಾಪ್ ಎಂಡ್ ಎಲ್‌ಟಿಝಡ್‌ನಲ್ಲಿ ಮ್ಯೂಸಿಕ್ ಸ್ಟಿಸ್ಟಂ ಕೂಡಾ ಅಳವಡಿಸಲಾಗಿದೆ. ದೆಹಲಿಯಲ್ಲಿ ಇದರ ಬೆಲೆ 6.5ರಿಂದ 9.5ಲಕ್ಷ ರೂಪಾಯಿ (ತೆರಿಗೆ ಪ್ರತ್ಯೇಕ) ಎಂದು ಹೇಳಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.