ಸೋಮವಾರ, ಏಪ್ರಿಲ್ 12, 2021
25 °C

ಪಶುಗಳಿಗೆ ವೈಜ್ಞಾನಿಕ ಆಹಾರ ನೀಡಲು ಸಲಹೆ ಅಡಿಕೆ ಹಾಳೆಯಿಂದ ಹಾಲು ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಸಿ: ವೈಜ್ಞಾನಿಕ ಆಹಾರ ಪೂರೈಕೆಯ ಮೂಲಕ ಹಸುಗಳ ಹಾಲು ಉತ್ಪಾದನೆ ವೃದ್ಧಿಸಲು ಸಾಧ್ಯವಿದೆ ಎಂದು ರಾಷ್ಟ್ರೀಯ ಪಶು ಪೋಷಣೆ ಮತ್ತು ಶರೀರ ಕ್ರಿಯಾ ವಿಜ್ಞಾನ ಸಂಸ್ಥೆಯ ನಿರ್ದೇಶಕ ಕೆ.ಟಿ.ಸಂಪತ್ ಹೇಳಿದರು. ಅವರು ನಗರದ ಟಿ.ಎಸ್.ಎಸ್. ಸಭಾಭವನದಲ್ಲಿ ಶನಿವಾರ ಆಯೋಜಿಸಿದ್ದ ಹೈನು ರಾಸು ಪೋಷಣೆ ಮತ್ತು ಅಡಿಕೆ ಹಾಳೆಯ ಒಣ ಮೇವು ಸಿದ್ಧತೆ ಕುರಿತ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದರು. ಹಸಿರು ಮೇವು, ಸಮತೋಲನ ಆಹಾರದ ಜೊತೆಗೆ ನಾರಿನ ಅಂಶ ಸಿಗುವ ಅಡಿಕೆ ಹಾಳೆಯನ್ನು ವೈಜ್ಞಾನಿಕ ಮಾದರಿಯಲ್ಲಿ ಪಶುಗಳಿಗೆ ನೀಡಿದರೆ ಹಾಲಿನ ಪ್ರಮಾಣದಲ್ಲಿ ಹೆಚ್ಚಳವಾಗುತ್ತದೆ.

ಬದಲಾದ ವಾತಾವರಣದಲ್ಲಿ ಒಣಹುಲ್ಲು, ಹಸಿರು ಮೇವಿನ ಕೊರತೆ ಉಂಟಾಗಿದೆ. ಜೊತೆಗೆ ಉತ್ತಮ ತಳಿಯ ರೋಗಮುಕ್ತ ಹಸುಗಳ ಅಭಾವ ಇದೆ. ಆದರೆ ಭಾರತದಲ್ಲಿ ಹಾಲಿನ ಬೇಡಿಕೆ ಹೆಚ್ಚುತ್ತಿದೆ. ಪ್ರಸ್ತುತ ದೇಶದಲ್ಲಿ 110 ಮಿಲಿಯನ್ ಮೆಟ್ರಿಕ್‌ಟನ್ ಹಾಲು ವಾರ್ಷಿಕವಾಗಿ ಉತ್ಪಾದನೆ ಆಗುತ್ತಿದ್ದು, 2021-22ರ ವೇಳೆಗೆ 180 ಮಿಲಿಯನ್ ಮೆಟ್ರಿಕ್ ಟನ್ ಹಾಲಿಗೆ ಬೇಡಿಕೆ ಬರಲಿದೆ. ಹೀಗಾಗಿ ಇರುವ 500 ಮಿಲಿಯನ್ ಜಾನುವಾರುಗಳಿಗೆ ಸೂಕ್ತ ನಿರ್ವಹಣೆ ಮೂಲಕ ಹಾಲಿನ ಉತ್ಪಾದನೆ ವೃದ್ಧಿಸಬೇಕು ಎಂದು ಹೇಳಿದರು.

 

ಕರ್ನಾಟಕ ಹಾಲು ಮಹಾಮಂಡಳಿ ಉಪನಿರ್ದೇಶಕ ಎಂ.ಎಸ್. ರಮೇಶ ಮಾತನಾಡಿ, ಹಸುಗಳಿಗೆ ನಾರಿನ ಅಂಶ ದೊರಕದಿದ್ದರೆ ಗುಣಮಟ್ಟದ ಹಾಲು ಉತ್ಪಾದನೆಯಾಗದು ಎಂದರು. ಅಡಿಕೆ ತೋಟದಲ್ಲಿ ಹೇರಳವಾಗಿ ದೊರಕುವ ಅಡಿಕೆ ಹಾಳೆಯನ್ನು ಸಂಸ್ಕರಿಸಿ ಹಸುಗಳಿಗೆ ನೀಡಿದರೆ ಹಾಲಿನ ಉತ್ಪಾದನೆ ಹೆಚ್ಚಿಸಲು ಸಾಧ್ಯವಿದೆ ಎಂದು ಅವರು ಹೇಳಿದರು.

 ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಬಸವರಾಜ ಅರಬಗೊಂಡ ಅಧ್ಯಕ್ಷತೆ ವಹಿಸಿದ್ದರು. ಶಿವಮೊಗ್ಗ ಹಾಲು ಒಕ್ಕೂಟದ ಅಧ್ಯಕ್ಷ ಡಿ.ಜಿ.ಷಣ್ಮುಗಪ್ಪ, ನಬಾರ್ಡ್‌ನ ಎಸ್.ವಿ.ರಂಗರಾವ್, ವಿಜ್ಞಾನಿಗಳಾದ ಎನ್.ಕೆ.ಎಸ್.ಗೌಡ, ಎಸ್.ಆನಂದ, ಡಿ.ಟಿ.ಪಾಲ್, ಧಾರವಾಡ ಒಕ್ಕೂಟದ ನಿರ್ದೇಶಕ ಮಧುಕೇಶ್ವರ ಭಟ್ಟ, ಪಶುವೈದ್ಯಾಧಿಕಾರಿ ಡಾ.ಪಿ.ಎಸ್.ಹೆಗಡೆ, ಪಶು ಸಂಗೋಪನಾ ಇಲಾಖೆಯ ದಿವಾಕರ ಭಟ್ಟ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.