ಮಂಗಳವಾರ, ಜುಲೈ 14, 2020
26 °C

ಪಶ್ಚಿಮಘಟ್ಟ: ಯಾಕಿಷ್ಟು ವಿರೋಧ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಶ್ಚಿಮಘಟ್ಟ: ಯಾಕಿಷ್ಟು ವಿರೋಧ?

ಜಗತ್ತಿನಲ್ಲೇ ಅತ್ಯಂತ ಸೂಕ್ಷ್ಮಪ್ರದೇಶಗಳಲ್ಲಿ ಒಂದೆನಿಸಿರುವ ಪಶ್ಚಿಮಘಟ್ಟ ಹಿಮಾಲಯ ಹುಟ್ಟುವುದಕ್ಕಿಂತ ಮೊದಲೇ ಅಸ್ತಿತ್ವದಲ್ಲಿರುವಂತಹುದು. 8 ದಶಲಕ್ಷ ವರ್ಷಗಳ ಹಿಂದೆಯೇ ಪಶ್ಚಿಮಘಟ್ಟ ರೂಪುಗೊಂಡಿರುವುದನ್ನು ಸಾಕ್ಷೀಕರಿಸಲು ಸಾಕಷ್ಟು ಕುರುಹುಗಳಿವೆ. ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ಪ್ರಾಣಿ, ಪಕ್ಷಿ, ಸಸ್ಯ ಸಂಕುಲಗಳಿರುವ ನಿಸರ್ಗದ ಖನಿಯನ್ನು ವಿಶ್ವಕ್ಕೆ ತೋರಿಸುವ ಸದಾವಕಾಶ ಬಂದಿರುವಾಗ ಸರ್ಕಾರ ಏಕೆ ಇಷ್ಟೊಂದು ವಿರೋಧ ವ್ಯಕ್ತಪಡಿಸುತ್ತಿದೆ? ಎನ್ನುವುದು ದೊಡ್ಡ ಪ್ರಶ್ನೆ.ಪ್ರಪಂಚದಲ್ಲಿ ಬೇರೆಲ್ಲೂ ಕಾಣಸಿಗದ ಅಪರೂಪದ ಪ್ರಾಣಿ, ಸಸ್ಯ ಸಂಕುಲ ಪಶ್ಚಿಮಘಟ್ಟದಲ್ಲಿವೆ. ಅಳಿವಿನಂಚಿನಲ್ಲಿರುವ ಸಿಂಗಳೀಕ, ಹಾರ್ನ್‌ಬಿಲ್, ಕಾಳಿಂಗ ಸರ್ಪ ವೈವಿಧ್ಯಮಯ ಕಪ್ಪೆಗಳು, ಬಗೆಬಗೆಯ ಆರ್ಕಿಡ್ಸ್, ಬಲ್ಲಿಗೆ ಮರ ಕುದುರೆಮುಖ ಅರಣ್ಯದಲ್ಲಿವೆ. ಶೋಲಾ ಕಾಡು, ಶೋಲಾ ಹುಲ್ಲುಗಾವಲು ಕುದುರೆಮುಖದಲ್ಲಿ ಉತ್ತಮ ಸ್ಥಿತಿಯಲ್ಲಿವೆ. ಹುಲಿ, ಕಾಟಿ, ಕಡವೆ ಇಲ್ಲಿ ಸ್ವಚ್ಛಂದವಾಗಿ ಓಡಾಡುತ್ತಾ ಬದುಕುತ್ತಿವೆ.

 

ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖ ಸೇರಿದಂತೆ ರಾಜ್ಯದ ಪಶ್ಚಿಮಘಟ್ಟದ 10 ತಾಣಗಳನ್ನು ಯುನೆಸ್ಕೋ ವಿಶ್ವಪರಂಪರೆ ಪಟ್ಟಿಗೆ ಸೇರಿಸುವ ಕೇಂದ್ರ ಸರ್ಕಾರದ ಪ್ರಸ್ತಾವಕ್ಕೆ ವಿರೋಧ ವ್ಯಕ್ತಪಡಿಸುವುದು ಮೂರ್ಖತನದ ಪರಮಾವಧಿ.ಯುನೆಸ್ಕೋ ಮಾನ್ಯತೆ ಸಿಕ್ಕಿದರೆ ಅದು ಪಶ್ಚಿಮಘಟ್ಟಕ್ಕೆ ಸಿಗುವ `ಬ್ರಾಂಡಿಂಗ್ ನೇಮ್~. ನಮ್ಮ ಊರು, ನಮ್ಮ ದೇಶಕ್ಕೆ ವಿಶ್ವದಲ್ಲಿ ಮಾನ್ಯತೆ ಸಿಗಬೇಕು ಎಂದು ಪ್ರತಿಯೊಬ್ಬರು ಬಯಸಬೇಕು.ಅದು ಬಿಟ್ಟು ವಿರೋಧಿಸುವುದು ದುರದೃಷ್ಟಕರ ಬೆಳವಣಿಗೆ. ಹಾಗೆ ನೋಡಿದರೆ ಕುದುರೆಮುಖವಷ್ಟೇ ಅಲ್ಲ. ಚಂದ್ರದ್ರೋಣ (ಬಾಬಾ ಬುಡನ್ ಗಿರಿ) ಪರ್ವತಕ್ಕೂ ವಿಶ್ವ ಪರಂಪರೆ ಪಟ್ಟಿ ಸೇರುವ ಅರ್ಹತೆ ಇದೆ. ಇದು ಪ್ರಸ್ತಾವನೆ ಹಂತದಲ್ಲೇ ಕೈಬಿಟ್ಟು ಹೋಗಿರುವುದು ಆಶ್ಚರ್ಯ ಮತ್ತು ಅನುಮಾನಕ್ಕೆ ಕಾರಣವಾಗಿದೆ. ಬೇರೆ ರಾಷ್ಟ್ರಗಳು ತಮ್ಮಲ್ಲಿನ ಪರಂಪರಾ ಸ್ಥಳಗಳನ್ನು ಯುನೆಸ್ಕೋ ಗುರುತಿಸುವಂತೆ ಅಪೇಕ್ಷಿಸುತ್ತವೆ. ಆದರೆ, ಪಶ್ಚಿಮ ಘಟ್ಟಕ್ಕೆ ಯುನೆಸ್ಕೋ ಮಾನ್ಯತೆ ನೀಡಲು ಸಿದ್ಧವಿದ್ದರೂ ತಗಾದೆ ತೆಗೆಯುತ್ತಿರುವುದನ್ನು ನೋಡಿದರೆ ಇದರ ಹಿಂದೆ ಕೆಲವರ ವೈಯಕ್ತಿಕ ಹಿತಾಸಕ್ತಿ ಜತೆಗೆ ಗಣಿ, ಟಿಂಬರ್ ಲಾಬಿ ಹುದುಗಿರುವುದು ಜಗಜ್ಜಾಹೀರಾಗಿದೆ. ಯುನೆಸ್ಕೋದವರು ಅವರಾಗಿಯೇ ವಿಶ್ವ ಪರಂಪರೆ ಪಟ್ಟಿಗೆ ಸೇರಿಸಲು ಮುಂದಾಗಿಲ್ಲ.ನಾವೇ ಶಿಫಾರಸು ಮಾಡಿ, ಈಗ ವಿರೋಧಿಸುವುದು ಎಷ್ಟು ಸರಿ? ಮಾಯನ್ ಸಂಸ್ಕೃತಿ ಇದ್ದಂತಹ ಅಮೆರಿಕದ `ಮಾಚಾಪೀಚು~ ಸ್ಥಳ ವೀಕ್ಷಣೆಗೆ ವಿಶ್ವದ ಮೂಲೆ ಮೂಲೆಯಿಂದಲೂ ಪ್ರವಾಸಿಗರು ಹೋಗುತ್ತಾರೆ. ವಿಶ್ವಪರಂಪರೆ ಪಟ್ಟಿಯಲ್ಲಿ ಒಮ್ಮೆ ಜಾಗ ಪಡೆದರೆ ನಮ್ಮ ನಾಡಿಗೂ ವಿವಿಧೆಡೆಯ ಪ್ರವಾಸಿಗರು ಬರುತ್ತಾರೆ. ಪರಿಸರ ಪ್ರವಾಸೋದ್ಯಮವೂ ಬೆಳೆಯುತ್ತದೆ.ಭಾರತೀಯರು ಅರಣ್ಯ ಲೂಟಿ ಮಾಡಿಲ್ಲ; ಮುಂದಿನ ಪೀಳಿಗೆಗೆ ನಿಸರ್ಗ ಸಂಪತ್ತನ್ನು ಕಾಪಿಟ್ಟಿದ್ದೇವೆ ಎನ್ನುವುದನ್ನು ಜಗತ್ತಿಗೆ ತೋರಿಸಲಾದರೂ ವಿಶ್ವಮಾನ್ಯತೆ ಬೇಕಾಗಿದೆ. ನಮ್ಮ ಪ್ರಕೃತಿ ಸಂಪತ್ತು ಎಷ್ಟೊಂದು ಶ್ರೀಮಂತ, ಅದ್ಭುತ ಎನ್ನುವುದನ್ನು ವಿಶ್ವದೆದುರು ತೆರೆದಿಡಲು ಇದಕ್ಕಿಂತ ಸುವರ್ಣ ಅವಕಾಶ ಮತ್ತೊಂದು ಇದೆಯೇ? ಅಷ್ಟಕ್ಕೂ ಯುನೆಸ್ಕೋ ಪರಂಪರೆ ಪಟ್ಟಿಗೆ ಪಶ್ಚಿಮಘಟ್ಟ ಸೇರಿದ ತಕ್ಷಣ ಅಲ್ಲಿನ ಜೀವವೈವಿಧ್ಯ, ಗಿರಿಜನರು, ಭೂಮಾಲೀಕರ ಹಕ್ಕುಗಳಿಗೆ ಯಾವುದೇ ಧಕ್ಕೆ ಆಗುವುದಿಲ್ಲ.ಭೌಗೋಳಿಕ ವ್ಯಾಪ್ತಿಯಲ್ಲಿ ವಿಸ್ತರಣೆ ಆಗುವುದಿಲ್ಲ. ಇದ್ದಷ್ಟೇ ಪ್ರದೇಶಕ್ಕೆ ಮಾನ್ಯತೆ ಸಿಗುತ್ತದೆ. ಸಚಿವರು, ಜನಪ್ರತಿನಿಧಿಗಳು ಹೇಳುವಂತೆ ಯಾರದೋ ಕೈಗೆ ಜುಟ್ಟು ಕೊಡುವ ಪ್ರಮೇಯವೇ ಬರುವುದಿಲ್ಲ. ನಮ್ಮದೇ ಭೂಮಿ-ಕಾನೂನು, ನಾವೇ ರಕ್ಷಕರು. ಆ ಜಾಗಕ್ಕೆ ಅವರು(ಯುನೆಸ್ಕೊ) ಮಾನ್ಯತೆ ಕೊಡುತ್ತಾರೆ. ಜತೆಗೆ ರಕ್ಷಣೆ ಜವಾಬ್ದಾರಿಗೆ ಒತ್ತಾಸೆ ಕೊಡುತ್ತಾರೆ ಅಷ್ಟೆ. ನಾವು ಪ್ರಕೃತಿಯನ್ನು ಪೂಜೆಗೆ ಮಾತ್ರ ಮೀಸಲಿಟ್ಟಿದ್ದೇವೆ. ಆದರೆ, ನಿತ್ಯ ದೌರ್ಜನ್ಯ ಮತ್ತು ದಬ್ಬಾಳಿಕೆ ಮುಂದುವರಿಸಿದ್ದೇವೆ. ನಮ್ಮ ಪರಿಸರ ರಕ್ಷಣೆಗೆ ಹೊರಗಿನಿಂದಲೂ ಕಲಿಯುವುದು ಸಾಕಷ್ಟು ಇದೆ.ಪರಂಪರೆ ಪಟ್ಟಿಗೆ ಸೇರಿದರೆ ಪಶ್ಚಿಮಘಟ್ಟದಲ್ಲಿ ಅಭಿವೃದ್ಧಿಗೆ ಅಡ್ಡಿಯಾಗುತ್ತದೆ ಎನ್ನುವ ವಾದದಲ್ಲಿ ಹುರುಳಿಲ್ಲ. ರಾಜಧಾನಿ ಬೆಂಗಳೂರಿನಲ್ಲಿ ಮಜಬೂತಾದ ರಸ್ತೆಗಳನ್ನು ನಿರ್ಮಿಸಲಿ, ಮೆಟ್ರೊ ಅಳವಡಿಸಲಿ, ಅದು ಅಭಿವೃದ್ಧಿ ಎನಿಸಿಕೊಳ್ಳುತ್ತದೆ. ಆದರೆ, ಗಿರಿಶ್ರೇಣಿಗಳನ್ನು ಕಡಿದು ರಸ್ತೆ ವಿಸ್ತರಿಸುವುದು, ಕಾಡು ಕಡಿದು ರೆಸಾರ್ಟ್ ನಿರ್ಮಿಸುವುದು ಅಭಿವೃದ್ಧಿಯಲ್ಲ.

 

ಅರಣ್ಯವನ್ನು ತನ್ನಷ್ಟಕ್ಕೆ ಬಿಟ್ಟು, ಇನ್ನಷ್ಟು ಸಮೃದ್ಧವಾಗಿ ಬೆಳೆಯಲು ಅವಕಾಶ ಕಲ್ಪಿಸುವುದು ಮಾತ್ರ ಅರಣ್ಯ ಅಭಿವೃದ್ಧಿ ಎನಿಸಿಕೊಳ್ಳುತ್ತದೆ. ವಿರೋಧದ ಹಿಂದಿನ ವಾಸ್ತವ ಗುಟ್ಟನ್ನು ಭೇದಿಸಿದರೆ, ಕೆಲ ಪಟ್ಟಭದ್ರ ಹಿತಾಸಕ್ತಿಯುಳ್ಳ ರಾಜಕಾರಣಿಗಳು, ಗಣಿ ಉದ್ಯಮಿಗಳು, ಟಿಂಬರ್ ವ್ಯಾಪಾರಿಗಳ ಲಾಬಿ ಇರುವುದು ಸುಳ್ಳಲ್ಲ.ದೂರದೃಷ್ಟಿ ಲಾಭದ ನಿರೀಕ್ಷೆ ಇಟ್ಟುಕೊಂಡು ಬಹಳಷ್ಟು ರಾಜಕಾರಣಿಗಳು, ಉದ್ಯಮಿಗಳು ಬೇನಾಮಿ ಹೆಸರಿನಲ್ಲಿ ಬೆಲೆ ಬಾಳುವ ನಾಟಾಗಳಿಗಾಗಿ, ಭವಿಷ್ಯದ ಗಣಿಗಾರಿಕೆಗಾಗಿ, ಪ್ರವಾಸೋದ್ಯಮಕ್ಕಾಗಿ ಈ ಭಾಗದಲ್ಲಿ ನಾಲ್ಕುಪಟ್ಟು ಬೆಲೆಗೆ ಭೂಮಿ ಖರೀದಿಸಿದ್ದಾರೆ. ತಮ್ಮ ಉದ್ದೇಶಕ್ಕೆ ಅಡ್ಡಿ ಮತ್ತು ಬಂಡವಾಳ ಹೂಡಲು ಅಸಾಧ್ಯ ಎಂಬ ಕಾರಣಕ್ಕೆ ಸರ್ಕಾರದ ಬಾಯಲ್ಲಿ ವಿರೋಧದ ಮಾತು ಆಡಿಸುತ್ತಿದ್ದಾರೆ ಎನ್ನುವುದು ಸ್ಪಷ್ಟ.ಹಕ್ಕು ಹೊಂದಿರುವ ಜಾಗಕ್ಕೆ ಪರವಾನಗಿ ಪಡೆದು, ಅರಣ್ಯ ಜಾಗದಲ್ಲಿರುವ ಮರಗಳನ್ನು ಖಾಲಿ ಮಾಡುವುದು ಬಹಳಷ್ಟು ದಶಕಗಳಿಂದ ಜಿಲ್ಲೆಯ ಪಶ್ಚಿಮಘಟ್ಟದಲ್ಲಿ ಅವ್ಯಾಹತವಾಗಿ ನಡೆದಿದೆ. ವಿಶ್ವ ಪರಂಪರೆ ಪಟ್ಟಿಗೆ ಸೇರಿದ ನಂತರ ಇದೆಲ್ಲಕ್ಕೂ ಪೂರ್ಣ ಕಡಿವಾಣ ಬೀಳುತ್ತದೆ. ಅರಣ್ಯ ಇಲಾಖೆ ಅತ್ಯಂತ ಚುರುಕಾಗುತ್ತದೆ. ಕಂಡಕಂಡ ಜಾಗಕ್ಕೆ ಪರ್ಮಿಟ್ ಪಡೆದು, ಅರಣ್ಯ ನಾಟಾ-ಉತ್ಪನ್ನಗಳ ಕಳ್ಳಸಾಗಣೆಗೆ ಅವಕಾಶ ಸಿಗದು ಎಂಬ ಹತಾಶೆಯೇ ವಿರೋಧದ ಧ್ವನಿಯ ಹಿಂದೆ ಕೆಲಸ ಮಾಡುತ್ತಿರುವಂತಿದೆ.ಹಾಗೆ ನೋಡಿದರೆ ಮೊದಲು ವಿರೋಧ ವ್ಯಕ್ತವಾಗಿದ್ದೇ ಕೊಡಗಿನಲ್ಲಿ. ಅಲ್ಲಿ ಟಿಂಬರ್ ಲಾಬಿ ವಿರೋಧ ಹುಟ್ಟುಹಾಕಲು ಯಶಸ್ವಿಯಾಯಿತು. ಕೊಡಗಿನಲ್ಲಿ ಭೂಮಾಲೀಕತ್ವ ಇಂದಿಗೂ ಪ್ರಶ್ನಾರ್ಹ. ಅಲ್ಲಿನ ಬಹುತೇಕರು ಭೂಮಿಗೆ ಗೇಣಿದಾರರು. ಈಗಿರುವ ಕಾನೂನು ತೊಡಕುಗಳ ಜತೆಗೆ ಇನ್ನೊಂದು ಕಾನೂನು ಸೇರಿದರೆ ತೊಂದರೆ ಎನ್ನುವ ಕಾರಣಕ್ಕೆ ಜನರನ್ನು ದಿಕ್ಕು ತಪ್ಪಿಸಲು ಹೊರಟಿದ್ದಾರೆ.

 

ಈಗ ಪಶ್ಚಿಮಘಟ್ಟದಲ್ಲಿ ಸ್ಥಳೀಯರಿಂದಲೂ ವಿರೋಧ ವ್ಯಕ್ತಪಡಿಸಲು ಹುನ್ನಾರ ನಡೆಯುತ್ತಿದೆ. ಇದಕ್ಕಾಗಿ ರೈತರು, ಗಿರಿಜನರನ್ನು ಎತ್ತಿಕಟ್ಟುವುದು ನಡೆಯುತ್ತಿದೆ. ವಾಸ್ತವ ನೆಲೆಗಟ್ಟಿನಿಂದ ದೂರ ಉಳಿದವರು ವಿರೋಧಿಸಬೇಕಷ್ಟೆ. ಸ್ಥಳೀಯ ನಿವಾಸಿಗಳ ಪರಂಪರೆ, ಸಂಸ್ಕೃತಿ ಉಳಿಯಬೇಕೆಂದು ನಕ್ಸಲೀಯರು ವಿರೋಧಿಸುವುದಾದರೆ ಅದನ್ನು ಒಪ್ಪಲಾಗದು. ಅವರ ತತ್ವ ಸಿದ್ಧಾಂತಗಳ ಹೋರಾಟಗಳು ಏನೇ ಇರಲಿ. ಆದರೆ ಅವರೂ ವಾಸ್ತವದಲ್ಲಿ ಪಶ್ಚಿಮಘಟ್ಟ ವಿಶ್ವ ಪರಂಪರೆ ಪಟ್ಟಿಗೆ ಸೇರುವುದನ್ನು ವಿರೋಧಿಸಲಾರರು.ಕುದುರೆಮುಖ ಇಡೀ ದೇಶದಲ್ಲೇ ಅತ್ಯಂತ ವಿಶಿಷ್ಟ ಅರಣ್ಯ. ವರ್ಷವಿಡೀ ಹಸಿರುಕ್ಕುವ ಕಾಡು ಇದೆ. 5ರಿಂದ 6 ಸಾವಿರ ಅಡಿ ಎತ್ತರದ, ಅತ್ಯಂತ ವಿರಳವಾಗಿರುವ ಮಳೆ ಕಾಡುಗಳು ಕುದುರೆಮುಖದಲ್ಲಿವೆ. ತುಂಗಾ, ಭದ್ರಾ, ನೇತ್ರಾವತಿ ಇದರ ವ್ಯಾಪ್ತಿಯಲ್ಲೇ ಹುಟ್ಟುತ್ತವೆ. ಕಾವೇರಿ, ಹೇಮಾವತಿ, ವೇದಾವತಿ ನದಿಗಳಿಗೂ ಪಶ್ಚಿಮಘಟ್ಟವೇ ಉಗಮ ಸ್ಥಾನ. ಸಾವಿರಾರು ಝರಿ-ಜಲಪಾತಗಳು ಇಲ್ಲಿ ದುಮ್ಮಿಕ್ಕುತ್ತವೆ.ಇದೆಲ್ಲ ಗೊತ್ತಿರುವವರಿಗೆ ಪಶ್ಚಿಮಘಟ್ಟ ಏಕೆ ವಿಶ್ವಪರಂಪರೆ ಪಟ್ಟಿಗೆ ಸೇರಬೇಕು ಎನ್ನುವುದು ಸುಲಭವಾಗಿ ಅರ್ಥವಾಗುತ್ತದೆ. 1969ರಲ್ಲಿ ಕುದುರೆಮುಖದಲ್ಲಿ ಗಣಿಗಾರಿಕೆಗೆ ಸರ್ಕಾರ ಅನುಮತಿ ನೀಡಿದ ನಂತರ ಎರಡೂವರೆ ದಶಕ ಕಳೆಯುವುದರಲ್ಲಿ 400 ಹೆಕ್ಟೇರ್ ಅರಣ್ಯ ನಾಶವಾಗಿದೆ.ಗಣಿ ಸಂಬಂಧಿಸಿದ ಜನವಸತಿ, ರಸ್ತೆ, ವಿದ್ಯುತ್ ಇನ್ನಿತರ ಸವಲತ್ತುಗಳಿಗಾಗಿ ಗಣಿಗಾರಿಕೆಗೆ ಮೀಸಲಿಟ್ಟಷ್ಟೇ ಅರಣ್ಯ ಪ್ರದೇಶ ಹೆಚ್ಚುವರಿ ಬಲಿಯಾಗಿದೆ. ಪರಿಣಾಮ ಇಂದು ಭದ್ರಾ ನದಿಯಲ್ಲಿ ಹೂಳು ತುಂಬಿದೆ. ಕುದುರೆಮುಖ ಅದಿರು ಕಂಪನಿಗೆ ಗಂಗಡಿಕಲ್ಲು ಪ್ರದೇಶದಲ್ಲೂ ಗಣಿಗಾರಿಕೆಗೆ ಅನುಮತಿ ನೀಡಿದ್ದರೆ ತುಂಗಾನದಿಯೂ ಮುಚ್ಚಿಹೋಗಿರುತ್ತಿತ್ತು.ಕುದುರೆಮುಖದಲ್ಲಿ ಪೊಲೀಸ್ ಕಮಾಂಡೋ ತರಬೇತಿ ಕೇಂದ್ರ ತೆರೆಯುವ ಸರ್ಕಾರದ ಯತ್ನ, ಕುದುರೆಮುಖ ಕಂಪನಿಯ ಎಕೋ ಟೂರಿಸಂ ಪ್ರಸ್ತಾವನೆಯೂ ಅರಣ್ಯ ಸಂರಕ್ಷಣೆಗೆ ವಿರುದ್ಧವಾದಂತಹುದೇ ಆಗಿದೆ. ಭವಿಷ್ಯದ ದೃಷ್ಟಿಯಿಂದ ಪಶ್ಚಿಮಘಟ್ಟ ಉಳಿವಿಗಾಗಿ ವಿಶ್ವ ಪರಂಪರೆ ಪಟ್ಟಿಗೆ ಸೇರಿಸಿ ಸಂರಕ್ಷಿಸುವುದು ಅನಿವಾರ್ಯ-ಅತ್ಯಗತ್ಯ.ಟ್ರಾಫಿಕ್ ಸಿಗ್ನಲ್‌ನಲ್ಲಿ ಪೊಲೀಸರು ಕಾಣಿಸದಿದ್ದರೆ ಸಿಗ್ನಲ್ ಜಂಪ್ ಮಾಡುವ ಜನ ಹೆಚ್ಚುತ್ತಿರುವ ಕಾಲವಿದು. ಇಂಥ ಸನ್ನಿವೇಶದಲ್ಲಿ ಅರಣ್ಯ ರಕ್ಷಣೆ ದೊಡ್ಡ ಸವಾಲು. ಪಶ್ಚಿಮಘಟ್ಟ ರಕ್ಷಣೆಗಿರುವ ಕಾರ್ಯಪಡೆ ಸರ್ಕಾರಕ್ಕೆ ಸರಿಯಾದ ಮಾರ್ಗದರ್ಶನ ನೀಡಬೇಕಾದ ಸಮಿತಿಯಾಗಬೇಕು.ಕಾರ್ಯಪಡೆಯಲ್ಲಿ ಇರುವವರು ಮೊದಲು ಪಶ್ಚಿಮಘಟ್ಟವನ್ನು ಸಮಗ್ರವಾಗಿ ಅರಿಯಬೇಕು. ಇದರಲ್ಲಿ ವೈಯಕ್ತಿಕ ಹಿತಾಸಕ್ತಿ ಇರಬಾರದು. `ನಾನು ಹೇಳ್ತಾನೇ ಇದೀನಿ, ಸರ್ಕಾರ ಕೇಳ್ತಿಲ್ಲ~ ಎನ್ನುವ ಹಾರಿಕೆ ಉತ್ತರ ಸರಿಯಲ್ಲ. ಸರ್ಕಾರ ಮಾತು ಕೇಳದಿದ್ದರೆ, ಕಾರ್ಯಪಡೆಯಿಂದ ಹೊರಬರಬೇಕು.ರಸ್ತೆ ನಿರ್ಮಿಸಲು ವಿಶ್ವಬ್ಯಾಂಕ್ ಸಾಲ ಕೊಡುವಾಗ ಏಕೆ ಯಾವುದೇ ರಾಜಕಾರಣಿ ಚಕಾರ ಎತ್ತುವುದಿಲ್ಲ. ಯುನೆಸ್ಕೊ ಕೂಡ ಹಣ ಕೊಡುವುದಾಗಿದ್ದರೆ ಸುಲಭವಾಗಿ ಒಪ್ಪಿಕೊಳ್ಳುತ್ತಿದ್ದರೇನೋ? ಪಶ್ಚಿಮಘಟ್ಟವು ಆಹಾರ, ನೀರು, ಜೀವವೈವಿಧ್ಯಕ್ಕಷ್ಟೇ ಅಲ್ಲ. ಇದು ರಾಜ್ಯ, ರಾಷ್ಟ್ರದ ಹವಾಮಾನ, ಜಾಗತಿಕ ತಾಪಮಾನ ವಿಚಾರದಲ್ಲಿ ಪ್ರಾಮುಖ್ಯ. ಭವಿಷ್ಯದ ಪೀಳಿಗೆಗೆ ಪಶ್ಚಿಮಘಟ್ಟ ಸುಸ್ಥಿತಿಯಲ್ಲಿ ಉಳಿಯಬೇಕು.ವಿಶ್ವಕ್ಕೆ ಇಂಥದೊಂದು ಅದ್ಭುತ ಸ್ಥಳದ ಪರಿಚಯ ಆಗಬೇಕು. ಅದಕ್ಕೆ ವಿಶ್ವ ಪರಂಪರೆ ಪಟ್ಟಿಗೆ ಸೇರುವುದನ್ನು ಪ್ರತಿಯೊಬ್ಬರೂ ಸ್ವಾಗತಿಸಬೇಕು.ಕುದುರೆಮುಖ ರಾಷ್ಟ್ರೀಯ ಉದ್ಯಾನ ಸದ್ಯದಲ್ಲೇ ಹುಲಿ ರಕ್ಷಿತ ತಾಣವಾಗಿ ಗುರುತಿಸಿಕೊಳ್ಳಲಿದೆ. ವಿಶ್ವ ಪರಂಪರೆ ತಾಣವಾಗಿ ಮಾನ್ಯತೆ ಸಿಕ್ಕಿದ್ದರೆ ಈಗ ಅದಕ್ಕೆ ಇನ್ನಷ್ಟು ಮಹತ್ವ ಬರುತ್ತಿತ್ತು. ಯುನೆಸ್ಕೊ ಪಟ್ಟಿ ಪ್ರಕಟಿಸುವುದರೊಳಗೆ ಸರ್ಕಾರ ಸಕರಾತ್ಮಕ ಒಪ್ಪಿಗೆ ಸೂಚಿಸಿ, ಈ ಬಾರಿಯೇ ಪಶ್ಚಿಮಘಟ್ಟ ವಿಶ್ವ ಪರಂಪರೆ ಪಟ್ಟಿಯಲ್ಲಿ ಕಂಗೊಳಿಸುವಂತಾಗಲಿ.(ಲೇಖಕರು ಚಿಕ್ಕಮಗಳೂರಿನ ಭದ್ರಾ ವೈಲ್ಡ್‌ಲೈಫ್ ಕನ್ಸರ್‌ವೇಷನ್ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.