ಮಂಗಳವಾರ, ಮೇ 24, 2022
28 °C

ಪಾಂಟಿಂಗ್- ವೆಟೋರಿ ಬಳಗದ ಪೈಪೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಗಪುರ: ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳು ಉಪಭೂಖಂಡದ ಪರಿಸ್ಥಿತಿಗೆ ಹೊಂದಿಕೊಳ್ಳಲು ಪರದಾಟ ನಡೆಸುವುದು ಸಾಮಾನ್ಯ. ಭಾರತದ ಪಿಚ್‌ಗಳು ಉಭಯ ತಂಡಗಳಿಗೆ ಒಂದು ರೀತಿಯಲ್ಲಿ ‘ಅಲರ್ಜಿ’ ಹುಟ್ಟಿಸುತ್ತದೆ. ಈ ತಂಡಗಳ ಆಟಗಾರರು ತಮಗೆ ‘ಕಷ್ಟ’ ಎನಿಸುವ ಪರಿಸ್ಥಿತಿಯಲ್ಲಿ ಪರಸ್ಪರ ಪೈಪೋಟಿ ನಡೆಸುವುದೆಂದರೆ ಕುತೂಹಲದ ವಿಚಾರ.ಅಂತಹ ರೋಚಕ ಹೋರಾಟ ಜಾಮ್ತಾದ ವಿದರ್ಭ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆಯಲಿದೆ. ವಿಶ್ವಕಪ್ ಟೂರ್ನಿಯ ‘ಎ’ ಗುಂಪಿನ ಪಂದ್ಯದಲ್ಲಿ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ಪರಸ್ಪರ ಪೈಪೋಟಿ ನಡೆಸಲಿದ್ದು, ಪಿಚ್‌ನ ಪರಿಸ್ಥಿತಿಗೆ ಬೇಗನೇ ಹೊಂದಿಕೊಳ್ಳವ ತಂಡಕ್ಕೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂಬುದರಲ್ಲಿ ಅನುಮಾನ ಬೇಡ. ರಿಕಿ ಪಾಂಟಿಂಗ್ ನೇತೃತ್ವದ ಆಸ್ಟ್ರೇಲಿಯಾ ವಿಶ್ವಕಪ್‌ನಲ್ಲಿ ಸತತ 30 ಪಂದ್ಯಗಳಲ್ಲಿ ಜಯ ಸಾಧಿಸಿದೆ. 1999ರ ಟೂರ್ನಿಯ ಮೊದಲ ಎರಡು ಪಂದ್ಯಗಳಲ್ಲಿ ನ್ಯೂಜಿಲೆಂಡ್ ಮತ್ತು ಪಾಕಿಸ್ತಾನದ ಕೈಯಲ್ಲಿ ನಿರಾಸೆ ಎದುರಿಸಿದ ಬಳಿಕ ಈ ತಂಡ ವಿಶ್ವಕಪ್‌ನಲ್ಲಿ ಸೋಲಿನ ಕಹಿ ಅನುಭವಿಸಿಲ್ಲ. ಇದೊಂದು ಅದ್ಭುತ ಸಾಧನೆಯೇ ಸರಿ. ತಂಡದ ಗೆಲುವಿನ ಓಟ ಮತ್ತೆ ಮುಂದುವರಿಯುವುದೇ? ಅಥವಾ ಡೇನಿಯಲ್ ವೆಟೋರಿ ಸಾರಥ್ಯದ ಕಿವೀಸ್ ಈ ಓಟಕ್ಕೆ ಬ್ರೇಕ್ ಹಾಕುವುದೇ? ಇಂತಹ ಪ್ರಶ್ನೆಗಳಿಗೆ ಶುಕ್ರವಾರ ಸಂಜೆಯ ವೇಳೆಗೆ ಉತ್ತರ ಲಭಿಸಲಿದೆ.


 

ಆಸೀಸ್ ಮತ್ತು ಕಿವೀಸ್ ತಂಡಗಳು ಪ್ರಸಕ್ತ ಟೂರ್ನಿಯಲ್ಲಿ ಶುಭಾರಂಭ ಮಾಡಿ ಇಲ್ಲಿಗೆ ಆಗಮಿಸಿವೆ. ಕಾಂಗರೂ ನಾಡಿನವರು ತಮ್ಮ ಮೊದಲ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ 91 ರನ್‌ಗಳ ಗೆಲುವು ಪಡೆದಿದ್ದರು. ಮತ್ತೊಂದೆಡೆ ನ್ಯೂಜಿಲೆಂಡ್ 10 ವಿಕೆಟ್‌ಗಳಿಂದ ಕೀನ್ಯಾ ತಂಡವನ್ನು ಬಗ್ಗುಬಡಿದಿತ್ತು. ಮೊದಲ ಪಂದ್ಯದಲ್ಲಿ ದುರ್ಬಲ ಎದುರಾಳಿಗಳು ಲಭಿಸಿದ್ದ ಕಾರಣ ಉಭಯ ತಂಡಗಳಿಗೆ ನಿಜವಾದ ಅಗ್ನಿಪರೀಕ್ಷೆ ಶುಕ್ರವಾರ ಎದುರಾಗಲಿದೆ.ಕಿವೀಸ್- ಆಸೀಸ್ ನಡುವಿನ ಪಂದ್ಯ ಭಾರತ- ಪಾಕಿಸ್ತಾನ ನಡುವಿನ ಹೋರಾಟವನ್ನು ನೆನಪಿಸುತ್ತದೆ. ಒಂದು ರೀತಿಯಲ್ಲಿ ಇದು ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಹಣಾಹಣಿ. ಇವೆರಡೂ ತಂಡಗಳು ಟೂರ್ನಿಯ ಕ್ವಾರ್ಟರ್ ಫೈನಲ್ ಪ್ರವೇಶಿಸುವುದು ಖಚಿತ. ಆದರೆ ‘ಎ’ ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ಗುರಿ ಈಡೇರಬೇಕಾದರೆ ಶುಕ್ರವಾರದ ಪಂದ್ಯ ಮಹತ್ವದ್ದಾಗಿದೆ.ಆಸೀಸ್ ಬ್ಯಾಟ್ಸ್‌ಮನ್‌ಗಳು ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಸ್ಪಿನ್ ಬೌಲಿಂಗ್ ದಾಳಿಯನ್ನು ಎದುರಿಸಲು ಪರದಾಟ ನಡೆಸಿದ್ದರು. ಇದನ್ನು ಗಮನದಲ್ಲಿಟ್ಟುಕೊಂಡೇ ವೆಟೋರಿ ಶುಕ್ರವಾರದ ಪಂದ್ಯಕ್ಕೆ ತಮ್ಮ ಯೋಜನೆ ರೂಪಿಸಿದ್ದಾರೆ. ಸ್ವತಃ ವೆಟೋರಿ ಅಲ್ಲದೆ, ನಥಾನ್ ಮೆಕ್ಲಮ್ ಅವರು ಸ್ಪಿನ್ ಬೌಲಿಂಗ್‌ಗೆ ಬಲ ನೀಡಲಿದ್ದಾರೆ. ಗುರುವಾರ ಅಭ್ಯಾಸದ ವೇಳೆ ಉಭಯ ತಂಡಗಳು ಸ್ಪಿನ್ ಬೌಲಿಂಗ್ ಹಾಗೂ ಅದನ್ನು ಎದುರಿಸುವ ಕಲೆಯನ್ನು ಕರಗತಮಾಡಿಕೊಳ್ಳುವತ್ತ ಹೆಚ್ಚಿನ ಗಮನ ಹರಿಸಿದ್ದು ಕಂಡುಬಂತು. ರಿಕಿ ಪಾಂಟಿಂಗ್ ತಮ್ಮ ವೇಗಿಗಳಾದ ಬ್ರೆಟ್ ಲೀ, ಮಿಷೆಲ್ ಜಾನ್ಸನ್ ಮತ್ತು ಶಾನ್ ಟೇಟ್ ಅವರನ್ನು ಎದುರಾಳಿ ತಂಡದ ಮೇಲೆ ಬ್ರಹ್ಮಾಸ್ತ್ರದಂತೆ ಪ್ರಯೋಗಿಸುವುದು ಖಚಿತ. ಇವರ ಉರಿಚೆಂಡಿಗೆ ಕಿವೀಸ್ ಬ್ಯಾಟ್ಸ್‌ಮನ್‌ಗಳು ಎಷ್ಟರಮಟ್ಟಿಗೆ ಎದೆಕೊಟ್ಟು ನಿಲ್ಲುವರು ಎಂಬುದನ್ನು ನೋಡಬೇಕು. ಲೀ ಮತ್ತು ಬ್ರೆಂಡನ್ ಮೆಕ್ಲಮ್ ನಡುವಿನ ಕದನ ಕುತೂಹಲಕ್ಕೆ ಕಾರಣವಾಗಿದೆ.ಸ್ಪಿನ್ ಬೌಲಿಂಗ್‌ನ್ನು ಸಮರ್ಥವಾಗಿ ಎದುರಿಸುವ ತಾಕತ್ತು ಹೊಂದಿರುವುದು ಮೈಕಲ್ ಕ್ಲಾರ್ಕ್ ಮಾತ್ರ. ಈ ಕಾರಣ ಆಸೀಸ್ ಯಶಸ್ಸಿನಲ್ಲಿ ಕ್ಲಾರ್ಕ್‌ಗೆ ಮಹತ್ವದ ಪಾತ್ರ ನಿರ್ವಹಿಸಬೇಕಿದೆ. ಜಿಂಬಾಬ್ವೆ ಎದುರು ಕ್ಲಾರ್ಕ್ ಅಜೇಯ ಅರ್ಧಶತಕ ಗಳಿಸಿದ್ದರು. ವೆಟೋರಿ- ಕ್ಲಾರ್ಕ್ ನಡುವಿನ ಮುಖಾಮುಖಿ ಕೂಡಾ ಪ್ರೇಕ್ಷಕರಿಗೆ ಸಾಕಷ್ಟು ರಸದೌತಣ ನೀಡಬಹುದು.ಕ್ರೈಸ್ಟ್‌ಚರ್ಚ್‌ನಲ್ಲಿ ಮಂಗಳವಾರ ನಡೆದ ಭೂಕಂಪದ ಕಹಿ ಘಟನೆಯನ್ನು ಮರೆತು ಕಿವೀಸ್ ಕಣಕ್ಕಿಳಿಯಲಿದೆ. ಭೂಕಂಪದಲ್ಲಿ ಬಲಿಯಾದವರಿಗೆ ತಮ್ಮ ಶೋಕ ವ್ಯಕ್ತಪಡಿಸುವ ನಿಟ್ಟಿನಲ್ಲಿ ಉಭಯ ತಂಡಗಳ ಆಟಗಾರರು ಕೈಗೆ ಕಪ್ಪು ಪಟ್ಟಿ ಧರಿಸಿ ಅಂಗಳಕ್ಕಿಳಿಯುವರು.ಗೆದ್ದವರಿಗೆ ‘ಚಾಪೆಲ್- ಹ್ಯಾಡ್ಲಿ’ ಟ್ರೋಫಿ: ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳು ಈ ಪಂದ್ಯದಲ್ಲೇ ‘ಚಾಪೆಲ್- ಹ್ಯಾಡ್ಲಿ’ ಟ್ರೋಫಿಗೆ ಪೈಪೋಟಿ ನಡೆಸಲು ನಿರ್ಧರಿಸಿದೆ. ಶುಕ್ರವಾರ ಗೆಲ್ಲುವ ತಂಡ ಟ್ರೋಫಿ ತನ್ನದಾಗಿಸಲಿದೆ. ಇಯಾನ್ ಚಾಪೆಲ್ ಮತ್ತು ಡೇಲ್ ಹ್ಯಾಡ್ಲಿ ಅವರು ಪಂದ್ಯ ವೀಕ್ಷಿಸಲಿದ್ದು, ವಿಜೇತ ತಂಡಕ್ಕೆ ಟ್ರೋಫಿ ನೀಡಲಿದ್ದಾರೆ.ಆಸೀಸ್ ಹಾಗೂ ಕಿವೀಸ್ ‘ಚಾಪೆಲ್- ಹ್ಯಾಡ್ಲಿ’ ಟ್ರೋಫಿಗಾಗಿ ಏಕದಿನ ಪಂದ್ಯಗಳ ಸರಣಿಯಲ್ಲಿ ಆಡುವುದು ವಾಡಿಕೆ. ಆದರೆ ಪ್ರಸಕ್ತ ವರ್ಷ ಇನ್ನುಳಿದ ಅವಧಿಯಲ್ಲಿ ಈ ತಂಡಗಳಿಗೆ ಪರಸ್ಪರ ಪೈಪೋಟಿ ನಡೆಸಲು ಅವಕಾಶವೇ ಸಿಗುತ್ತಿಲ್ಲ. ಈ ಕಾರಣ ವಿಶ್ವಕಪ್ ಟೂರ್ನಿಯ ಪಂದ್ಯದ ಮೂಲಕವೇ ಈ ಟ್ರೋಫಿಯ ವಿಜೇತರನ್ನು ನಿರ್ಣಯಿಸಲು ಉಭಯ ದೇಶಗಳ ಕ್ರಿಕೆಟ್ ಮಂಡಳಿಗಳು ಒಪ್ಪಿಕೊಂಡಿವೆ.  ಆದರೆ ಕಿವೀಸ್ ತಂಡ ಭಾರತದ ನೆಲದಲ್ಲಿ ಒಮ್ಮೆಯೂ ಆಸೀಸ್ ತಂಡವನ್ನು ಮಣಿಸಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.