ಬುಧವಾರ, ಜನವರಿ 29, 2020
23 °C
ದೋಸೆ, ಚಿಕನ್‌ ಬಿರಿಯಾನಿ, ಪಾನಿಪೂರಿ, ಪಂಜಾಬಿ ದಾಲ್‌...

ಪಾಠದ ಜೊತೆ ಅಡುಗೆ ಮಾಡಲು ಸೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಟ್ಕಳ: ಇಲ್ಲಿನ ಅಂಜುಮನ್‌ ಮಹಿಳಾ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ ನಿಮಿತ್ತ ಏರ್ಪಡಿಸಿದ್ದ ಅಡುಗೆ ಸ್ಪರ್ಧೆಯಲ್ಲಿ ವಿದ್ಯಾರ್ಥಿನಿಯರು ವಿವಿಧ ನಮೂನೆಯ ಶುಚಿ, ರುಚಿಯಾದ ತಿನಿಸುಗಳನ್ನು ತಯಾರಿಸುವ ಮೂಲಕ ನಾವು  ಪಾಠದ ಜೊತೆಗೆ ಅಡುಗೆ ಮಾಡುವುದಕ್ಕೂ ಸೈ ಎಂದು ತೋರಿಸಿಕೊಟ್ಟರು.ಗರಿಗರಿ ಮಸಾಲೆ ದೋಸೆ –ಚಟ್ನಿ, ಮಟನ್ ಶೇರ್ವ, ಮಟನ್‌ ಕರಿ, ಆಲೂ ಪರೋಟ, ಚಿಕನ್‌ ಬಿರಿಯಾನಿ, ವೆಜ್‌ ಕುರ್ಮ, ಪ್ರೂಟ್‌ ಸಲಾಡ್‌, ಪಾನಿಪೂರಿ, ಪಂಜಾಬಿ ದಾಲ್‌, ಪರೋಟ ಸೇರಿದಂತೆ ಸುಮಾರು 13 ರಾಜ್ಯಗಳ ಹತ್ತಾರು ನಮೂನೆಯ ಊಟ, ತಿಂಡಿಗಳನ್ನು ತಯಾರಿಸಿ ಎಲ್ಲರನ್ನೂ ಅಚ್ಚರಿಗೊಳಿಸಿದರು.ಕೇವಲ ಅಡುಗೆ, ತಿಂಡಿಗಳನ್ನು ತಯಾರಿಸದ್ದಷ್ಟೇ ಅಲ್ಲ; ಅದನ್ನು ಅಲಂಕರಿಸಿ,   ಜೋಡಿಸಿಡುವ ಮೂಲಕವೂ ವಿದ್ಯಾರ್ಥಿನಿಯರು ಗಮನ ಸೆಳೆದರು.ಇಬ್ಬರನ್ನೊಳಗೊಂಡ 12 ತಂಡ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು.‘ಶುಚಿ, ರುಚಿ, ಆರೋಗ್ಯಕರ ಆಹಾರ ತಯಾರಿಸಿ ಸೇವಿಸಬೇಕು. ಈ ಬಗ್ಗೆ ವಿದಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇಂಥ ಸ್ಪರ್ಧೆಯನ್ನು ಕಾಲೇಜಿನಲ್ಲಿ ನಡೆಸಲಾಗಿದೆ’ ಎಂದು ಪ್ರಾಂಶುಪಾಲೆ ಸಬೀನಾ ಮುಸ್ರತ್‌ ರುಕ್ನುದ್ದೀನ್‌ ಹೇಳಿದರು.ವಿಜೇತ ವಿದ್ಯಾರ್ಥಿಗಳಿಗೆ ವಾರ್ಷಿಕೋತ್ಸವ ಸಮಾರಂಭದಲ್ಲಿ ವಿಶೇಷ ಬಹುಮಾನ ನೀಡಲಾಗುವುದು ಎಂದು ಅವರು ತಿಳಿಸಿದರು.

ನಿರ್ಣಾಯಕರಾಗಿ ಸೀಮಾ ಕಾಶೀಂಜಿ, ಸಬೀಹಾ ರುಕ್ನುದ್ದೀನ್‌, ಸಲೀಹಾ ಕರಿಕಲ್‌  ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)