ಭಾನುವಾರ, ಏಪ್ರಿಲ್ 11, 2021
32 °C

ಪಾತರಗಿತ್ತಿ ಗತಿ ಸ್ಥಿತಿ!

ಎನ್. ವಾಸುದೇವ್ Updated:

ಅಕ್ಷರ ಗಾತ್ರ : | |

ಕೀಟವರ್ಗಕ್ಕೆ ಸೇರಿದ, ವೈಭವದ ವರ್ಣಾಲಂಕಾರ ಪಡೆದ, ಜೀವಜಾಲದ ಸ್ವಾಸ್ಥ್ಯದಲ್ಲಿ ಮಹತ್ವದ ಪಾತ್ರ ಹೊಂದಿದ, ಹಾಗೆಲ್ಲ ಅತಿ ಉಪಯುಕ್ತ ಜೀವಿಯಾದ ರೈತ ಮಿತ್ರ ಆದ ಪಾತರಗಿತ್ತಿಯ ಬದುಕಿನ ರೀತಿಯ ಬಾಳಿನ ದುಃಸ್ಥಿತಿಯ ಪರಿಚಯ ಬೇಕೇ?1. `ಪಾತರಗಿತ್ತಿ~-ಅದೆಂಥ ಜೀವಿ?

ಪಾತರಗಿತ್ತಿ-ಅದು ಕೀಟಗಳ ವರ್ಗಕ್ಕೆ ಸೇರಿದ ಜೀವಿ. ಇಡೀ ಕೀಟಸಾಮ್ರಾಜ್ಯವನ್ನು ಎರಡು ಪ್ರಧಾನ ಗುಂಪುಗಳನ್ನಾಗಿ ವಿಂಗಡಿಸಲಾಗಿದೆ: “ಆಪ್ಟೆರಿಗೋಟಾ ಮತ್ತು ಟೆರಿಗೋಟಾ” ಟೆರಿಗೋಟಾಗಳ ಇಬ್ಬಗೆಗಳಲ್ಲೊಂದು `ಎಂಡೋಟೆರಿಗೋಟಾ~ ಅತಿ ಸಂಕೀರ್ಣ ರೂಪಾಂತರದ ಮೂಲಕ ಪ್ರೌಢಾವಸ್ಥೆ ತಲುಪುವ ಎಂಡೋಟೆರಿಗೋಟಾಗಳಲ್ಲಿ ಎಂಟು ಉಪವರ್ಗಗಳಿವೆ: “ನ್ಯೂರಾಪ್ಟೆರಾ, ಮೇಕಾಪ್ಟೆರಾ, ಟ್ರೈಕಾಪ್ಟೆರಾ, ಕೋಲಿಯಾಪ್ಟೆರಾ, ಎಫಾನಿಪ್ಟೆರಾ, ಡೈಪ್ಟೆರಾ ಮತ್ತು ಹೈಮನಾಪ್ಟೆರಾ”. ಇವುಗಳ ಪೈಕಿ `ಲೆಪಿಡಾಪ್ಟೆರಾ~ ಗುಂಪಿಗೇ ಎಲ್ಲ ಪಾತರಗಿತ್ತಿಗಳೂ ಸೇರಿವೆ.

2. ಪಾತರಗಿತ್ತಿ ಪ್ರಭೇದಗಳು ಒಟ್ಟು ಎಷ್ಟಿವೆ?

ಪಾತರಗಿತ್ತಿಗಳು (ಚಿಟ್ಟೆಗಳು) ಮತ್ತು ಪತಂಗಗಳು-ಇವೆರಡನ್ನೂ ಒಳಗೊಂಡಿರುವ ಲೆಪಿಡಾಪ್ಟೆರಾ ವರ್ಗದಲ್ಲಿ ಈವರೆಗೆ ಒಂದು ಲಕ್ಷ ನಲವತ್ತುಸಾವಿರ ಪ್ರಭೇದಗಳನ್ನು ಗುರುತಿಸಲಾಗಿದೆ.ಈ ಪೈಕಿ ಚಿಟ್ಟೆ ಪ್ರಭೇದಗಳ ಸಂಖ್ಯೆ ಕೇವಲ ಹದಿನೈದು ಸಾವಿರ. ವಿಶೇಷ ಏನೆಂದರೆ ಇಷ್ಟೂ ಚಿಟ್ಟೆ-ಪ್ರಭೇದಗಳನ್ನು ಐದು ಕುಟುಂಬಗಳನ್ನಾಗಿ ವಿಂಗಡಿಸಲಾಗಿದೆ: “ನಾಲ್ಕು ಕಾಲುಗಳ ನಿಂಫೇಲಿಡೇ, ನೀಲಿ ಮತ್ತು ಲೋಹೀಯ ಹೊಳಪಿನ ಲೈಕೇನಿಡೇ, ಬಿಳಿ ಮತ್ತು ಹಳದಿ ವರ್ಣಗಳ ಪಿಯರಿಡೇ, ಸ್ಪಾಲೋಟೇಲ್ ಮತ್ತು ಬರ್ಡ್‌ವಿಂಗ್ ಚಿಟ್ಟೆಗಳ ಪಾಪಿಲ್ಲಿಡೇ ಮತ್ತು `ಉದ್ದ ಮೂಗಿನ~ ಲೈಬಿಥಿಯಿಡೇ” ನೂರಕ್ಕೆ ಎಪ್ಪತ್ತೈದರಷ್ಟು ಪ್ರಭೇದಗಳು ಮೊದಲಿನ ಎರಡು ಕುಟುಂಬಗಳಿಗೇ ಸೇರಿವೆ; ಕೊನೆಯ ಕುಟುಂಬ ಅತ್ಯಂತ ಕಡಿಮೆ ಪ್ರಭೇದಗಳಿಂದ ಕೂಡಿದೆ (ಕೆಲವಾರು ಚಿಟ್ಟೆ ಪ್ರಭೇದಗಳನ್ನು ಚಿತ್ರಗಳಲ್ಲಿ ಗಮನಿಸಿ).

3. ಚಿಟ್ಟೆಗಳ ನೈಸರ್ಗಿಕ ನೆಲೆ ಎಲ್ಲೆಲ್ಲಿದೆ?

ಅಂಟಾರ್ಕ್ಟಿಕಾ ಭೂಖಂಡವನ್ನು ಬಿಟ್ಟು ಇನ್ನೆಲ್ಲ ನೆಲ ಜೀವಾವಾರಗಳಲ್ಲೂ ಪಾತರಗಿತ್ತಿಗಳಿವೆ. ಹೂಗಳಿರುವ ಯಾವುದೇ ಪ್ರದೇಶ ಪಾತರಗಿತ್ತಿಗಳಿಗೆ ಪ್ರಶಸ್ತ. ಸಹಜವಾಗಿಯೇ ಗರಿಷ್ಠ ಸಸ್ಯ ದಟ್ಟಣೆಯ ವೃಷ್ಟಿವನಗಳಲ್ಲಿ ಪಾತರಗಿತ್ತಿ ದಟ್ಟಣೆ ಮತ್ತು ವೈವಿಧ್ಯಗಳೂ ಗರಿಷ್ಠ. ದಕ್ಷಿಣ ಅಮೆರಿಕದ ಅಮೆಜೋನಿಯಾ ಮಳೆ-ಕಾಡುಗಳಲ್ಲಿ ಹತ್ತು ಸಾವಿರ ಚಿಟ್ಟೆ ಪ್ರಭೇದಗಳಿವೆ.4. ಪಾತರಗಿತ್ತಿಗಳ ಜೀವನ ಚಕ್ರ ಹೇಗೆ?

ಪಾತರಗಿತ್ತಿಗಳದು ತುಂಬ ಸಂಕೀರ್ಣ ಜೀವನ ಚಕ್ರ. ಪ್ರೌಢ ಹೆಣ್ಣು ಚಿಟ್ಟೆ ಇಡುವ ಮೊಟ್ಟೆಗಳಿಂದ (ಚಿತ್ರ-11) `ಹುಳು~ ರೂಪದ ಮರಿಗಳು (ಚಿತ್ರ-12) ಹೊರಬರುತ್ತವೆ. `ತಿನ್ನುವ ಯಂತ್ರ~ದಂತೆ ಎಲೆಗಳನ್ನು ತಿಂದು ಬೆಳೆಯುತ್ತದೆ. ನಂತರ ತಾವೇ ನೇಯ್ದುಕೊಳ್ಳುವ ಗೂಡಲ್ಲಿ ಅಡಗಿ, ಅಲುಗದೆ ಉಳಿದು ಅಲ್ಲೇ ಮುಂದಕ್ಕೆ ಬೆಳೆದು ಪ್ರೌಢವಾಗುತ್ತವೆ. ಹಾಗಾದೊಡನೆ ಗೂಡನ್ನು ಸೀಳಿ ಸುಂದರ ಚಿಟ್ಟೆಗಳಾಗಿ ಹೊರಬರುತ್ತವೆ.ಇಲ್ಲೊಂದು ಮುಖ್ಯ ವಿಷಯ: ಪಾತರಗಿತ್ತಿಗಳಿಗೆ ಈ ಹೆಸರು ಬರುವುದೇ ಅವು ಪ್ರೌಢ ಹಂತ ತಲುಪಿದ ನಂತರ. ಚಿಟ್ಟೆಗಳದು ತುಂಬ ಅಲ್ಪ ಆಯುಷ್ಯ. ಎರಡು-ಮೂರು ತಿಂಗಳುಗಳಿಂದ ಏಳು-ಎಂಟು ತಿಂಗಳ ಕಾಲವಷ್ಟೇ ಅವುಗಳ ಬದುಕು. ಅದಕ್ಕಿಂತ ದೀರ್ಘಾಯುಷಿ ಪ್ರಭೇದಗಳು ಬಹು ವಿರಳ.

5. ಚಿಟ್ಟೆಗಳು ಬಹಳ ವರ್ಣಮಯ, ಚಿತ್ರ-ವಿಚಿತ್ರ ಚಿತ್ತಾರಮಯ-ಏಕೆ?

ಚಿಟ್ಟೆಗಳು ಹಗಲಿನ ಜೀವಿಗಳು. ಅವಕ್ಕೆ ವರ್ಣದೃಷ್ಟಿ ಇದೆ. ಹಾಗಾಗಿ ಗಾಢ ವರ್ಣಾಲಂಕರಣಗಳಿಂದ, ಚಿತ್ರ-ವಿಚಿತ್ರ ಚಿತ್ತಾರಗಳಿಂದ ಚಿಟ್ಟೆಗಳಿಗೆ ಬಹಳ ಪ್ರಯೋಜನಗಳಿವೆ.ಪ್ರಮುಖವಾಗಿ ತಮ್ಮದೇ ಪ್ರಭೇದದ ಸದಸ್ಯರನ್ನು ಗುರುತಿಸಲು, ಶತ್ರುಗಳ ಕಣ್ಣಿಗೆ ಕಾಣದಂತೆ ಹೂಗಳ ನಡುವೆ ಮರೆಯಾಗಿರಲು ಅಥವಾ ಶತ್ರುಗಳನ್ನು ಮೋಸಗೊಳಿಸುವ ಕಪಟ ರೂಪ ಪ್ರದರ್ಶಿಸಲು ಇಲ್ಲವೇ ತಮ್ಮ ವಿಷಕರ ಸ್ವರೂಪವನ್ನು ಜಾಹೀರುಗೊಳಿಸಲು ವರ್ಣ ವಿನ್ಯಾಸಗಳು ಚಿಟ್ಟೆಗಳಿಗೆ ತುಂಬ ಉಪಯುಕ್ತ.

6. ಚಿಟ್ಟೆಗಳ ಆಹಾರ ಏನು?

ಚಿಟ್ಟೆಗಳ ಬಹುಪಾಲು ಎಲ್ಲ ಪ್ರಭೇದಗಳದೂ ಶುದ್ಧ ಸಸ್ಯಾಹಾರ. ಅವುಗಳ ಆಹಾರ ಪ್ರಧಾನವಾಗಿ ಹೂಗಳಲ್ಲಿನ ಮಕರಂದ. ಇತರ ವಿಧವಿಧ ಪೋಷಣಕಾಂಶಭರಿತ ಪೇಯಗಳನ್ನೂ ಅವು ಸೇವಿಸುತ್ತವೆ: “ಕೊಳೆಯುತ್ತಿರುವ ಮರಗಳು ರಸ, ಅತಿ ಕಳಿತ ಕಣ್ಣುಗಳ ರಸ, ನದೀ ದಂಡೆಗಳ ಖನಿಜ-ಲವಣ ಭರಿತ ಕೆಸರು ನೀರು (ಚಿತ್ರ-6)..... ಇತ್ಯಾದಿ”. ಹೇಗೂ ಎಲ್ಲ ಚಿಟ್ಟೆಗಳದೂ ಬರೀ ದ್ರವ ರೂಪದ ಆಹಾರ.

7. ಪ್ರಕೃತಿಯ ಸಮತೋಲನದಲ್ಲಿ ಪಾತರಗಿತ್ತಿಗಳ ಪಾತ್ರ ಏನು?

ಧರೆಯಲ್ಲಿ ಇಲ್ಲಿನ ಜೀವಲೋಕದಲ್ಲಿ ಚಿಟ್ಟೆಗಳದು ತುಂಬ ಮಹತ್ವದ, ಬಹುವಿಧ ಪಾತ್ರ. ಹೂಗಿಡಗಳ ಪರಾಗಸ್ಪರ್ಶ, ಕಳೆಗಿಡಗಳ ನಿಯಂತ್ರಣ-ಈ ಕಾರ್ಯಗಳಲ್ಲಿ ಚಿಟ್ಟೆಗಳ ಮತ್ತು ಅವುಗಳ ಮರಿಹುಳುಗಳ ನೆರವು ಅಪಾರ. ಜೊತೆಗೆ ಹಲವಾರು ಪ್ರಾಣಿಗಳಿಗೆ ಹಾಗೂ ನೂರಾರು ಹಕ್ಕಿ ಪ್ರಭೇದಗಳಿಗೆ ಚಿಟ್ಟೆಗಳೇ ಪ್ರಧಾನ ಆಹಾರ. ಆದ್ದರಿಂದಲೇ ಚಿಟ್ಟೆಗಳು ಅಳಿದರೆ ಪ್ರಕೃತಿಯಲ್ಲಿ ನೂರಾರು ಜೀವ ಸರಪಳಿಗಳು ತುಂಡಾಗುತ್ತವೆ.

8. ಪಾತರಗಿತ್ತಿಗಳ ಪ್ರಸ್ತುತ ಸ್ಥಿತಿ ಹೇಗಿದೆ?

ವಾಸ್ತವವಾಗಿ ಬಹುಪಾಲು ಎಲ್ಲ ಪಾತರಗಿತ್ತಿಗಳೂ ಅವುಗಳ ಮರಿಹುಳುಗಳೂ ಕೂಡ ಉಪಯುಕ್ತ ಕೀಟಗಳು; ಅವು ಪಿಡುಗಿನ ಕೀಟಗಳಲ್ಲ. ಆದರೂ ಅವು ಮನುಷ್ಯರಿಂದಾಗಿ ದುಃಸ್ಥಿತಿಯ ಹಾದಿಯಲ್ಲಿವೆ. ನಗರಗಳು ವಿಸ್ತಾರಗೊಂಡಂತೆಲ್ಲ ಕಾಂಕ್ರೀಟ್ ಕಾಡುಗಳು ಹಬ್ಬುತ್ತ, ಹೂಗಿಡಗಳು ಇಲ್ಲವಾಗುತ್ತ ಚಿಟ್ಟೆಗಳು ನಿರ್ನಾಮವಾಗುತ್ತಿವೆ.

 

ಗದ್ದೆ-ತೋಟಗಳಲ್ಲಿ, ಕೃಷಿ ಭೂಮಿಯಲ್ಲಿ ಪಿಡುಗಿನ ಕೀಟಗಳ ನಿಯಂತ್ರಣಕ್ಕೆಂದು ಸಿಂಪಡಿಸುವ ವಿಷ-ಪಾಷಾಣಗಳಿಗೆ ಅಮಾಯಕ, ರೈತಮಿತ್ರ ಪಾತರಗಿತ್ತಿಗಳೂ ಬಲಿಯಾಗುತ್ತಿವೆ. ಅತ್ಯಾಕರ್ಷಕ ಚಿಟ್ಟೆಗಳನ್ನು ಸಂಗ್ರಹಿಸಿ ಪ್ರದರ್ಶಿಸುವ ಮನುಷ್ಯ ಹವ್ಯಾಸವೂ ಹೇರಳ ಪಾತರಗಿತ್ತಿಗಳ ಸರ್ವನಾಶಕ್ಕೆ ಕಾರಣವಾಗುತ್ತಿದೆ. ಎಂಥ ಜೀವಿ! ಎಂಥ ದೌರ್ಭಾಗ್ಯ! ಅಲ್ಲವೇ?

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.