ಭಾನುವಾರ, ಜೂಲೈ 5, 2020
22 °C

ಪಾರ್‌ಸೆಕ್ನಿಂದ ಪ್ಲಾಂಕ್ ಉದ್ದದವರೆಗೆ...

ಎನ್. ವಾಸುದೇವ್ Updated:

ಅಕ್ಷರ ಗಾತ್ರ : | |

ಪಾರ್‌ಸೆಕ್ನಿಂದ ಪ್ಲಾಂಕ್ ಉದ್ದದವರೆಗೆ...

ಉದ್ದ ಅಥವಾ ದೂರದ ಅಳತೆ ನಿತ್ಯ ಜೀವನದ ಅವಿಭಾಜ್ಯ ಅಂಗ-ಹೌದಲ್ಲ? ಅದರ ಅಂತರರಾಷ್ಟ್ರೀಯ ಮೂಲಮಾನ `ಮೀಟರ್~ ಹಾಗೂ ಅದಕ್ಕಿಂತ ಚಿಕ್ಕ ಸೆಂಟಿಮೀಟರ್ ಮತ್ತು ಮಿಲಿಮೀಟರ್ ಅಂತೆಯೇ ಮೀಟರ್‌ಗಿಂತ ದೊಡ್ಡ ಅಳತೆಯಾದ ಕಿಲೋಮೀಟರ್ ಎಲ್ಲರಿಗೂ ಪರಿಚಿತ. ಈ ಅಳತೆ ಮಾನಗಳು ಸರ್ವಗ್ರಾಹ್ಯ; ಸರ್ವದಾ ಬಳಕೆಯಲ್ಲಿವೆ ಕೂಡ.ಆದರೆ, ವಾಸ್ತವ ಏನೆಂದರೆ, ಉದ್ದದ-ದೂರದ ಅಳತೆಯ ಪ್ರಸ್ತುತ ಅಗತ್ಯಗಳಿಗೆ ಇವಿಷ್ಟೇ ಮಾನಗಳು ಸಾಕಾಗುವುದಿಲ್ಲ. ಉತ್ತಮೋತ್ತಮ ವಿಧವಿಧ ದೂರದರ್ಶಕಗಳು ತೆರೆದಿಟ್ಟಿರುವ `ಮ್ಯಾಕ್ರೋ ವಿಶ್ವ~ ಮತ್ತು ಶ್ರೇಷ್ಠಾತಿಶ್ರೇಷ್ಠ ಸೂಕ್ಷ್ಮದರ್ಶಕಗಳು ಹಾಗೂ `ಕಣವೇಗೋತ್ಕರ್ಷಕ~ಗಳು ಪ್ರದರ್ಶಿಸುತ್ತಿರುವ `ಮೈಕ್ರೋವಿಶ್ವ~ಗಳಲ್ಲಿನ ಅಳತೆಗಳಿಗೆ ಕಿಲೋಮೀಟರ್‌ನಿಂದ ಮಿಲಿಮೀಟರ್‌ವರೆಗಿನ ಮಾನಗಳನ್ನಷ್ಟೆ ಬಳಸುವುದು ಸಾಧ್ಯವೇ ಇಲ್ಲ.ಹಾಗಾಗಿ ಕಿಲೋಮೀಟರ್‌ಗಿಂತ ದೊಡ್ಡ ಮತ್ತು ಮಿಲಿಮೀಟರ್‌ಗಿಂತ ಚಿಕ್ಕ ಹಲವಾರು ಅಳತೆಯ ಮಾನಗಳನ್ನು ರೂಪಿಸಿದ್ದಾಗಿದೆ, ಬಳಸಲಾಗುತ್ತಿದೆ ಕೂಡ. `ಪಾರ್‌ಸೆಕ್~ನಿಂದ `ಪ್ಲಾಂಕ್ ಉದ್ದ~ದವರೆಗಿನ ಅಂಥ ಅದ್ಭುತ ಕಲ್ಪನಾತೀತ ಉದ್ದಳತೆ ಮಾನಗಳ, ಅವುಗಳ ಅನ್ವಯಗಳ ಸಂಕ್ಷಿಪ್ತ ಪರಿಚಯ:1. ಪ್ಲಾಂಕ್ ಉದ್ದ: ಕಲ್ಪನೆಗೆಟುಕದ ಪರಮ ಸೂಕ್ಷ್ಮ ಅಳತೆ. ವಿಜ್ಞಾನಿಗಳ ಪ್ರಕಾರ ವಿಶ್ವದಲ್ಲಿ ಇದಕ್ಕಿಂತ ಕಡಿಮೆ ಉದ್ದದ ದೂರದ, ಸಾಧ್ಯತೆ ಇಲ್ಲವೇ ಇಲ್ಲ. `ಒಂದು ಪ್ಲಾಂಕ್ ಉದ್ದ~ದ ಅಳತೆ ಒಂದು ಮೀಟರ್‌ನ ಕೋಟಿ ಕೋಟಿ ಕೋಟಿ ಕೋಟಿ ಕೋಟಿಯ ಒಂದು ಭಾಗಕ್ಕೆ ಸಮ (ಸಂಖ್ಯಾ ರೂಪದಲ್ಲಿ ಇದು 10 ಘಾತ-35 ಮೀಟರ್‌ಗೆ ಸಮ).2. ಯೋಕ್ಟೋಮೀಟರ್: ಮೀಟರ್ ಸಹಿತ ಹೆಸರಿನ ಅತ್ಯಂತ ಚಿಕ್ಕ ಅಳತೆಯ ಮಾನ. ಒಂದು ಮೀಟರ್‌ನ ಒಂದು ಸಾವಿರ ಕೋಟಿ ಕೋಟಿ ಕೋಟಿಯ ಒಂದು ಭಾಗ. (ಸಂಖ್ಯಾ ರೂಪದಲ್ಲಿ 10 ಘಾತ-24 ಮೀ. ಎಂದರೆ 10-24 ಮೀ.).3. ಫೆಮಟೋಮೀಟರ್: ಬಳಕೆಗೆ ಬಂದಿರುವ ಅತ್ಯಂತ ಹ್ರಸ್ವ ಉದ್ದಳತೆ. ಒಂದು ಮೀಟರ್‌ನ ಹತ್ತು ಕೋಟಿ ಕೋಟಿಯ ಒಂದಂಶವೇ ಒಂದು ಫೆಮಟೋಮೀಟರ್. (10 ಘಾತ-15 ಮೀ.). ಪರಮಾಣು ಬೀಜಗಳ ವ್ಯಾಸ 1 ರಿಂದ 10 ಫೆಮಟೋ ಮೀಟರ್. ಕ್ವಾರ್ಕ್ ಮತ್ತು ಎಲೆಕ್ಟ್ರಾನ್‌ಗಳ ವ್ಯಾಸ ಒಂದು ಫೆಮಟೋಮೀಟರ್‌ನ ಸಾವಿರದ ಒಂದಂಶ! (ಚಿತ್ರ-12).4. ಪಿಕೋಮೀಟರ್: ಒಂದು ಮೀಟರ್‌ನ ಒಂದು ಲಕ್ಷ ಕೋಟಿಯ ಒಂದಂಶ (10 ಘಾತ-12 ಮೀ.). ಪರಮಾಣುಗಳ ಇಡೀ ವ್ಯಾಸ ಸುಮಾರು ಒಂದು ನೂರು ಪಿಕೋಮೀಟರ್ (ಚಿತ್ರ-11).5. ನ್ಯಾನೋಮೀಟರ್: ಒಂದು ಮೀಟರ್‌ನ ಶತಕೋಟಿಯ ಒಂದಂಶ (10 ಘಾತ-9 ಮೀ.). ಎಲೆಕ್ಟ್ರಾನ್ ಸೂಕ್ಷ್ಮದರ್ಶಕಗಳಿಗೆಟುಕುವ ಅಳತೆ. ದೃಗ್ಗೋಚರ ಬೆಳಕಿನ ಅಲೆಗಳ (ಚಿತ್ರ-10) ತರಂಗದೂರ 400ರಿಂದ 750 ನ್ಯಾನೋಮೀಟರ್. ನೂರೇ ನ್ಯಾನೋಮೀಟರ್ ಉದ್ದ `ವೈರಸ್~ಗಳದು.6. ಮೈಕ್ರೋಮೀಟರ್: ಒಂದು ಮೀಟರ್‌ನ ದಶಲಕ್ಷದ ಒಂದು ಭಾಗ (10 ಘಾತ-6 ಮೀ.). ಇದಕ್ಕೇ `ಮೈಕ್ರಾನ್~ ಎಂಬ ಹೆಸರು ಕೂಡ. ಚಾಕ್ಷುಷ ಸೂಕ್ಷ್ಮದರ್ಶಕಗಳು ಕಾಣಬಲ್ಲ ಅಳತೆ. ಬ್ಯಾಕ್ಟೀರಿಯಾಗಳ, ಪರಾಗ ಕಣಗಳ (ಚಿತ್ರ-9) ಉದ್ದ ಅಗಲ ವ್ಯಾಸಗಳ ಅಳತೆಗೆ ಅತ್ಯಂತ ಸೂಕ್ತ ಮಾನ.7. ಮಿಲಿಮೀಟರ್: ಮೀಟರ್‌ನ ಸಾವಿರದ ಒಂದು ಭಾಗ. ಬರಿಗಣ್ಣಿಗೇ ಸುಲಭವಾಗಿ ಗೋಚರಿಸುವ ಅಳತೆ. ನೇರವಾಗಿ ಕಾಣುವ ಸ್ಪಷ್ಟವಾಗಿ ಅರ್ಥವಾಗುವ ಅತಿ ಹ್ರಸ್ವ ಅಳತೆ.8. ಸೆಂಟಿಮೀಟರ್: ಮೀಟರ್‌ನ ನೂರರ ಒಂದಂಶ. ಇರುವೆ ಗೆದ್ದಲುಗಳಿಂದ ಚಿಟ್ಟೆ ಮಿಡತೆಗಳವರೆಗಿನ ಕಿಟಗಳದು (ಚಿತ್ರ-8), ಬಹುಪಾಲು ಎಲ್ಲ ಪುಟ್ಟ ಸೃಷ್ಟಿಗಳದೂ ಸೆಂಟಿಮೀಟರ್ ಮತ್ತು ಮಿಲಿಮೀಟರ್‌ಗಳಷ್ಟೆ ಉದ್ದ, ಅಗಲ, ಎತ್ತರ.9. ಮೀಟರ್: ಉದ್ದಳತೆಯ ಮೂಲಮಾನ. ಗರಿಷ್ಠ ಬಳಕೆಯ ಮಾನ ಕೂಡ. ಬೆಟ್ಟ-ಪರ್ವತಗಳ (ಚಿತ್ರ-6) ಕಟ್ಟಡಗಳ (ಚಿತ್ರ-7), ವಾಹನಗಳ.... ಹಾಗೆಲ್ಲ ಸಾಮಾನ್ಯ ಅಳತೆಯ ಸಕಲ ನೆಲೆಗಳ ಸೃಷ್ಟಿಗಳ ಉದ್ದ-ಅಗಲ-ಎತ್ತರ-ಆಳ- ಸುತ್ತಳತೆಗಳ ನಿರ್ಣಯದ ಅತ್ಯಂತ ಪರಿಚಿತ ಮಾನ.10. ಕಿಲೋಮೀಟರ್: ಒಂದು ಸಾವಿರ ಮೀಟರ್‌ಗೆ ಸಮ. ಅಧಿಕ ಉದ್ದದ-ದೂರದ ಅತಿ ಬಳಕೆಯ ಮಾನ. ಭೂಮಿಯ ಮೇಲಿನ ದೂರಗಳಿಗೆ, ಭೂ-ಚಂದ್ರ ಅಂತರಕ್ಕೆ (ಚಿತ್ರ 5,4) ಗ್ರಹಗಳ, ನಕ್ಷತ್ರಗಳ ವ್ಯಾಸಗಳ ಅಳತೆಗೆ.... ಹಾಗೆಲ್ಲ ವಿಪರೀತ ಉಪಯುಕ್ತ. ಸುಲಭವಾಗಿ ಅರ್ಥವಾಗುವ ಅತ್ಯಂತ ದೀರ್ಘ ಮಾನ.11. ಖಗೋಳ ಮಾನ: ಬಹು ದೂರದ ಅಳತೆಗಳ ಮಾನ. ಅಂತರಿಕ್ಷ ಕಾಯಗಳ-ಅದರಲ್ಲೂ ಸೌರವ್ಯೆಹದಲ್ಲಿ `ಸೂರ್ಯ-ಗ್ರಹ~, `ಗ್ರಹ-ಗ್ರಹ~ ನಡುವಣ (ಚಿತ್ರ-3) ದೂರಗಳ ನಿರೂಪಣೆಗೆ ವೈಜ್ಞಾನಿಕ ಬಳಕೆಗೆ ಸೀಮಿತವಾಗಿರುವ ವಿಶೇಷ ಮಾನ. ಒಂದು ಖಗೋಳಮಾನ ಹದಿನಾಲ್ಕು ಕೋಟಿ ತೊಂಬತ್ತಾರು ಲಕ್ಷ ಕಿಲೋಮೀಟರ್‌ಗೆ ಸಮ. ಸೂರ್ಯ-ಭೂಮಿ ನಡುವಣ ಸರಾಸರಿ ದೂರವೇ ಖಗೋಳ ಮಾನ.12. ಜ್ಯೋತಿರ್ವರ್ಷ: ವಿಶ್ವದಲ್ಲಿನ ಗ್ಯಾಲಕ್ಸಿಗಳ (ಚಿತ್ರ-2), ನೀಹಾರಿಕೆಗಳ (ಚಿತ್ರ-1) ಉದ್ದಗಲಗಳ ನಕ್ಷತ್ರಗಳ ನಡುವಣ ದೂರಗಳ ಅಳತೆ-ನಿರೂಪಣೆಗಳಿಗೆ ರೂಪಿಸಲಾಗಿರುವ ವಿಶೇಷ ಮಾನ. ಪ್ರತಿ ಸೆಕೆಂಡ್‌ಗೆ 3 ಲಕ್ಷ ಕಿ.ಮೀ. ವೇಗದಲ್ಲಿ ಚಲಿಸುವ ಬೆಳಕು ನಿರಂತರ ಒಂದು ವರ್ಷದಲ್ಲಿ ಕ್ರಮಿಸುವ ಒಟ್ಟು ದೂರವೇ ಒಂದು ಜ್ಯೋತಿರ್ವರ್ಷ. ಇದು 9.5 ಲಕ್ಷ ಕೋಟಿ ಕಿ.ಮೀ.ಗೆ ಸಮ-ನಮಗೆ ಅತಿ ಸನಿಹದ ಸೌರೇತರ ನಕ್ಷತ್ರ 4.2 ಜ್ಯೋತಿರ್ವರ್ಷ ದೂರದಲ್ಲಿದೆ. ಈವರೆಗೆ ಪತ್ತೆಯಾಗಿರುವ ಅತ್ಯಂತ ದೂರದ ಗ್ಯಾಲಕ್ಸಿ 15 ಶತಕೋಟಿ ಜ್ಯೋತಿರ್ವರ್ಷ ದೂರದಲ್ಲಿದೆ.13. ಪಾರ್‌ಸೆಕ್: ಮತ್ತೂ ಬೃಹತ್ ಅಳತೆಯ ಮಾನ. 3.26 ಜ್ಯೋತಿರ್ವರ್ಷ ದೂರಕ್ಕೆ ಒಂದು ಪಾರ್‌ಸೆಕ್ ಸಮ. ಪಾರ್‌ಸೆಕ್‌ನ ಬಳಕೆಯೂ ಸ್ಪಷ್ಟವಾಗಿಯೇ ಖಗೋಳ ವಿಜ್ಞಾನ ಕ್ಷೇತ್ರಕ್ಕಷ್ಟೇ ಸೀಮಿತ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.