ಭಾನುವಾರ, ಜನವರಿ 26, 2020
18 °C

ಪಾವಗಡದಲ್ಲಿ ಹೆಚ್ಚಾಯ್ತು ಹೈಟೆಕ್ ಭಿಕ್ಷುಕರ ಕಾಟ

ಪ್ರಜಾವಾಣಿ ವಿಶೇಷ ವರದಿ/ - ಕೆ.ಆರ್.ಜಯಸಿಂಹ Updated:

ಅಕ್ಷರ ಗಾತ್ರ : | |

ಪಾವಗಡ: ತಾಲ್ಲೂಕಿನಲ್ಲಿ ಈಚೆಗೆ ಹೈಟೆಕ್ ಭಿಕ್ಷುಕರ ಕಾಟ ಹೆಚ್ಚುತ್ತಿದೆ. ದೇವರು, ಮಾಟ, ಮಂತ್ರದ ಹೆಸರಿನಲ್ಲಿ ಅಮಾಯಕ ಜನರಿಂದ ಹಣ ಸುಲಿಯಲಾಗುತ್ತಿದೆ.ಜನರ ದುರ್ಬಲ ಮನಸ್ಥಿತಿಯನ್ನು ಬಂಡವಾಳವನ್ನಾಗಿಸಿಕೊಂಡು ಲಕ್ಷಾಂತರ ರೂಪಾಯಿ ಹಣ ಸಂಪಾದಿಸುತ್ತಿದ್ದಾರೆ. ನಿತ್ಯ ಮೋಸ ಹೋಗುವರ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟವಾದರೂ ಭಿಕ್ಷುಕರ ಚಾಕಚಕ್ಯತೆಗೆ ಜನತೆ ಮರುಳಾಗುತ್ತಿದ್ದಾರೆ.ಪಟ್ಟಣದಲ್ಲಿ ಸಂತೆ ದಿನವಾದ ಸೋಮವಾರ ಮತ್ತು ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಶನಿವಾರದಂದು ಹೈಟೆಕ್ ಭಿಕ್ಷಕರು ಆಂಧ್ರದಿಂದ ಆಗಮಿಸಿ ಚಾಕಚಕ್ಯತೆ ಮೆರೆಯುತ್ತಾರೆ. ಶನೈಶ್ಚರ ದೇಗುಲದ ಸುತ್ತಮುತ್ತ ಮತ್ತು ವಿವಿಧ ಬಡಾವಣೆಗಳ ಮನೆಗಳಿಗೆ ತೆರಳಿ ಜನರಿಗೆ ಮಂಕುಬೂದಿ ಎರಚುತ್ತಾರೆ.ಪಟ್ಟಣದ ಟೀಚರ್ಸ್ ಕಾಲೊನಿಗೆ ಸೋಮವಾರ ಆಂಧ್ರದಿಂದ ಬಂದ ಒಬ್ಬ ದಾಸಯ್ಯನಿಗೆ ಮಹಿಳೆಯರು ಭಿಕ್ಷೆ ಹಾಕಿಸಿಕೊಳ್ಳುವಂತೆ ಗೋಗರೆಯುತ್ತಿದ್ದರು. ಆದರೆ ಆತ ಮಹಿಳೆಯರಿಂದ ಭಿಕ್ಷೆ ಪಡೆಯಲು ಸತಾಯಿಸುತ್ತಿದ್ದ. ಭಿಕ್ಷೆ ಹಿಂದಕ್ಕೆ ತೆಗೆದುಕೊಂಡು ಹೋಗಬಾರದೆಂಬ ನಂಬಿಕೆಯಿಂದ ಮಹಿಳೆಯರು ಸಪ್ಪೆ ಮುಖ ಮಾಡಿಕೊಂಡು ನಿಂತಿದ್ದರು.ದಾಸಯ್ಯ ಮಾತ್ರ ‘ನಿಮ್ಮ ಮಗ ಅಥವಾ ನಿಮ್ಮ ಪತಿಯನ್ನು ಕರೆಯಿರಿ. ಅವರು ಮಾತ್ರ ನನಗೆ ಬಿಕ್ಷೆ ನೀಡಬೇಕು. ನಿಮ್ಮಿಂದ ನಾನು ಭಿಕ್ಷೆ ಸ್ವೀಕರಿಸುವುದಿಲ್ಲ. ಅಲ್ಲದೆ ನಿಮ್ಮ ಮನೆಯಲ್ಲಿ ನಡೆಯುತ್ತಿರುವ ಮತ್ತು ಮುಂದೆ ನಡೆಯಲಿರುವ ಅನಾಹುತದ ಬಗ್ಗೆ ತಿಳಿಸಬೇಕು’ ಎಂದು ಮಹಿಳೆಯರಲ್ಲಿ ಭಯದ ಬೀಜ ಬಿತ್ತಿದ.ಇದನ್ನು ಕೇಳಿದ ಮಹಿಳೆ ತಬ್ಬಿಬ್ಬಾಗಿ, ಆತನನ್ನು ಮನೆಯ ಒಳಗೆ ಕರೆದು ಕೂಡಿಸಿದರು. ತಮ್ಮ ಪತಿಯನ್ನು ಕರೆದು ಭಿಕ್ಷೆ ಹಾಕಲು ತಿಳಿಸಿದರು. ದಾಸಯ್ಯ ಮಾತ್ರ ‘ಮೊದಲು ನನ್ನ ಮಾತು ಕೇಳಿ, ನಾನು ಹಣಕ್ಕಾಗಿ ನಿಮಗೆ ಭವಿಷ್ಯ ಹೇಳುತ್ತಿಲ್ಲ; ನಮ್ಮ ದೇವರು ನಿಮಗೆ, ನಿಮ್ಮ ಕುಟುಂಬದವರಿಗೆ ಒಳ್ಳೆಯದಾಗಲೆಂದು, ಮುಂದಾಗಬಹುದಾದ ಅನಾಹುತ ತಪ್ಪಿಸಲೆಂದು ಇಲ್ಲಿಗೆ ಕಳುಹಿಸಿದ್ದಾನೆ’ ಎಂದು ಪೀಠಿಕೆ ಹಾಕಿದ.ಮನೆಯ ವಾತಾವರಣ, ಸ್ಥಿತಿಗತಿ ಗಮನಿಸಿ ಎಲ್ಲರ ಮನೆಯಲ್ಲಿ ಜರುಗುವ ಕೆಲ ಸಾಮಾನ್ಯ ವಿಷಯಗಳನ್ನು ಕುಟುಂಬದ ಸದಸ್ಯರಿಗೆ ತಿಳಿಸುವ ಮೂಲಕ ಅವರನ್ನು ಯಾಮಾರಿಸಿದ.ಮನೆ ಮುಂದೆ ನಿಂತಿರುವ ವಾಹನ ಗಮನಿಸಿ ನಿಮಗೆ ಕಳೆದ ಅಮಾವಾಸ್ಯೆಯೇ ಅಪಘಾತ ಸಂಭವಿಸಬೇಕಿತ್ತು; ಹೇಗೋ ತಪ್ಪಿಸಿಕೊಂಡಿರಿ. ಆದರೆ ಮುಂದಿನ ಹುಣ್ಣಿಮೆ ವೇಳೆಗೆ ನಿಮಗೆ ಗಂಡಾಂತರ ಒದಗಲಿದೆ. ಅಪಘಾತದಲ್ಲಿ ಕೈ, ಕಾಲು ಕಳೆದುಕೊಳ್ಳುವಿರಿ. ಕುಟುಂಬದ ಸದಸ್ಯರು ಸಮಸ್ಯೆ ಎದುರಿಸುತ್ತೀರಿ ಎಂದು ಹೆದರಿಸಿದ.ಇದರಿಂದ ಆತಂಕಿತರಾದ ಮನೆ ಮಂದಿ ಅನಾಹುತದಿಂದ ಪಾರಾಗುವ ಮಾರ್ಗೋಪಾಯ ಕೇಳಿದರು. ಭಿಕ್ಷಕ ಇವರಿಗೆ ಸಾಧ್ಯವಾಗದ ಪರಿಹಾರ ಕ್ರಮಗಳನ್ನು ಸೂಚಿಸಿದ. ಅವರು ಹೆದರಿಕೆಯಿಂದ ನೀನೇ ಏನಾದರೂ ಮಾಡು ಎಂದು ದಾಸಯ್ಯನನ್ನು ಕೇಳಿದರು.ಪಟ್ಟಣದ ದೇವಸ್ಥಾನವೊಂದರ ಬಳಿಯಿಂದ ಖರೀದಿಸಿ ತಂದಿದ್ದ ಫೋಟೋ, ದೇವರ ವಿಗ್ರಹ, ದೇವರ ಡಾಲರ್ ತೋರಿಸಿ ಹಿಮಾಲಯದಿಂದ ಪೂಜಿಸಿ ತಂದಿದ್ದೇನೆ. ನೀವು ಮನೆಯಲ್ಲಿಟ್ಟುಕೊಂಡರೆ ನಿಮಗೆ ಯಾವುದೇ ಅಪಾಯ ತಲೆದೋರುವುದಿಲ್ಲ. ಅಪಘಾತವೂ ಸಂಭವಿಸುವುದಿಲ್ಲ ಎಂದು ಗಾಳಿಯಲ್ಲಿ ಚಿಟಿಕೆ ಹಾಕಿ ವಿಭೂತಿ ತೆಗೆದು ಕೊಟ್ಟು ಯಜಮಾನನ್ನು ಮತ್ತಷ್ಟು ನಂಬಿಸಿದ.ರೂ 1000 ಹಣ ಪಡೆದು, ಪಕ್ಕದ ಬೀದಿಯಲ್ಲಿ ಇದೇ ನಾಟಕ ಮುಂದುವರಿಸಿದ. ‘ಮಂಗಳವಾರ ಕ್ಷೌರ  ಮಾಡಿಕೊಳ್ಳಬೇಡಿ, ಶುಕ್ರವಾರ ಬೇರೆಯವರಿಗೆ ಹಣ ಕೊಡಬೇಡಿ. ಹಾಗೆ ಕೊಟ್ಟರೆ ಲಕ್ಷ್ಮಿಯನ್ನು ನೀವೇ ಹೊರ ದಬ್ಬಿದಂತೆ’ ಎಂದು ಬಿಟ್ಟಿ ಸಲಹೆ ಕೊಟ್ಟು ಪರಾರಿಯಾಗುತ್ತಾನೆ.ಹೊಟ್ಟೆ ಪಾಡಿಗಾಗಿ ಬಿಕ್ಷೆ ಬೇಡುವ ಮಂದಿ ಧಾನ್ಯ, ಹರಿದ ಬಟ್ಟೆ, ಒಂದೆರಡು  ರೂಪಾಯಿ ಚಿಲ್ಲರೆ ಪಡೆದು ಜೀವನ ಸಾಗಿಸುತ್ತಾರೆ. ಆದರೆ ಇಂಥ ಹೈಟೆಕ್ ಬಿಕ್ಷುಕರು ದವಸ ಧಾನ್ಯ ಪಡೆಯದೆ, ಪೂರ್ವ ಯೋಜಿತ ಚಿತ್ರಕತೆಯೊಂದಿಗೆ ನಾಟಕವಾಡಿ ಜನರಿಂದ ಹಣ ಸುಲಿಯುತ್ತಿದ್ದಾರೆ.ಇಂಥವರಿಂದ ಮೋಸ ಹೋದವರು ಮುಜುಗರದಿಂದ ಬೇರೆಯವರಿಗೆ ಈ ಬಗ್ಗೆ ತಿಳಿಸುವುದಿಲ್ಲ. ಮನೆಗೆ ಪ್ರವೇಶಿಸುವ ಅಪರಿಚಿತರು ಕಳ್ಳತನ– ದರೋಡೆ ನಡೆಸುವ ಸಾಧ್ಯತೆಯೂ ಇಲ್ಲದಿಲ್ಲ. ಪೊಲೀಸರು ಇಂಥವರ ಬಗ್ಗೆ ನಿಗಾ ವಹಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಪ್ರತಿಕ್ರಿಯಿಸಿ (+)