ಮಂಗಳವಾರ, ಜನವರಿ 28, 2020
21 °C

ಪಿಂಚಣಿ ಸಮಸ್ಯೆ ಪರಿಹಾರಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಘಟಗಿ; ಸಾಮಾಜಿಕ ಭದ್ರತಾ ಯೋಜನೆಗಳಡಿಯಲ್ಲಿ ಪಿಂಚಣಿ ಪಡೆಯುತ್ತಿರುವ ಹಿರಿಯ ನಾಗರಿಕರು ಮತ್ತು ಮಹಿಳೆಯರು ತಹಸೀಲ್ದಾರ ಕಚೇರಿಗೆ ಮಾಜಿ ಸಚಿವ ಪಿ.ಸಿ.ಸಿದ್ಧನಗೌಡ್ರ ನೇತೃತ್ವದಲ್ಲಿ ತೆರಳಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.ಸಾಮಾಜಿಕ ಭದ್ರತಾ ಯೋಜನೆಗಳಾದ ವಿಕಲಚೇತನ, ವೃದ್ಧ, ವಿಧವಾ ವೇತನ ಪಡೆಯುವ ಸಾವಿರಾರು ಪಿಂಚಣಿದಾರರು, ಕಳೆದ ಆರು ತಿಂಗಳಿನಿಂದ ಪಿಂಚಣಿ ಪಡೆಯದೆ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಈ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು, ಗುರುತು ಪತ್ರ ವಿತರಣೆಗೆ ಯೋಜನೆಯನ್ನು ಸರಕಾರ ರೂಪಿಸಿದೆ. ಆದರೆ ಗುರುತುಪತ್ರ ವಿತರಣೆಯ ಜವಾಬ್ದಾರಿ ವಹಿಸಿಕೊಂಡ ಖಾಸಗಿ ಕಂಪೆನಿಯು ನಾಗರಿಕರ ಹಿತ ಕಾಯುತ್ತಿಲ್ಲ. ಆದುದರಿಂದ ಗ್ರಾಮಪಂಚಾಯತಿ ಮಟ್ಟದಲ್ಲಿ ಗುರುತುಪತ್ರ ದಾಖಲೀಕರಣಕ್ಕೆ ಕಂಪನಿಗೆ ಸೂಚಿಸಬೇಕು ಎಂದು ಅವರು ಒತ್ತಾಯಿಸಿದರು.ಈಗಾಗಲೇ ಗುರುತುಪತ್ರ ದಾಖಲೀಕರಣಕ್ಕೆ ಹೋಬಳಿ ಮಟ್ಟದಲ್ಲಿ ನಿರ್ವಹಿಸಲಾಗುತ್ತಿದೆ. ಆದರೆ ಕಡಿಮೆ ಸಿಬ್ಬಂದಿ ಸೌಕರ್ಯಗಳ ಕೊರತೆಯ ಕಾರಣದಿಂದ ಗುರುತುಪತ್ರ ದಾಖಲೀಕರಣ ಅತ್ಯಂತ ವಿಳಂಬವಾಗುತ್ತಿದೆ. ಇದರಿಂದ ಅಸಹಾಯಕರು ಅಲೆದಾಡುವಂತಾಗಿದೆ ಎಂದು ಮಹಿಳೆಯರು ತಮ್ಮ ಅಳಲು ತೋಡಿಕೊಂಡರು. ಮಾಜಿ ಸಚಿವ ಪಿ.ಸಿ.ಸಿದ್ದನಗೌಡ್ರ ಮಾತನಾಡಿ, ಸರಕಾರ ವ್ಯವಸ್ಥೆಯನ್ನು ಸುಧಾರಿಸಲು ಹೋಗಿ, ಅವ್ಯವಸ್ಥೆಯನ್ನು ಸೃಷ್ಠಿಸುತ್ತಿದೆ. ಈ ಅಸಹಾಯಕರ ಸಂಕಟವನ್ನು ಅಧಿಕಾರಿಗಳಲ್ಲದೇ, ಸರಕಾರ ನಡೆಸುವ ಪ್ರತಿನಿಧಿಗಳು ಗಮನಿಸಿ, ಸೂಕ್ತ ಬದಲಾವಣೆಯನ್ನು ತಕ್ಷಣ ತರಬೇಕು ಎಂದರು.ಅತಿವೃಷ್ಟಿಯಿಂದಾಗಿ ಬೆಳೆ ಹಾನಿ ಅನುಭವಿಸಿದ ರೈತರಿಗೆ ತಾಲ್ಲೂಕಿಗೆ ಬಿಡುಗಡೆಯಾದ ರೂ. 2.75ಕೋಟಿ ಮೊತ್ತದ ವಿತರಣೆಯಲ್ಲಿಯೂ ಲೋಪವಾಗಿರುವ ಕುರಿತು ದೂರುಗಳು ಬರುತ್ತಿದ್ದು, ಕೆಲವರಿಗೆ ಪ್ರತಿ ಎಕರೆಗೆ ರೂ.800 ವಿತರಿಸಲಾಗಿದೆ. ಉಳಿದವರಿಗೆ ಕಡಿಮೆ ಮೊತ್ತ ವಿತರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಆಗುತ್ತಿರುವ ಲೋಪ ಗಮನಿಸಿ, ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.ಈ ಸಂದರ್ಭದಲ್ಲಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಶಂಕರಗಿರಿ ಬಾವಾನವರ, ವೃಷಭೇಂದ್ರ ಪಟ್ಟಣಶೆಟ್ಟಿ, ಮಂಜುನಾಥ ರೊಟ್ಟಿಗವಾಡ, ಗುರುಸಿದ್ಧ ಟೊಂಗಳೆ, ದ್ಯಾಮಣ್ಣ ಬಾಬರಿ ಮೊದಲಾದವರು ಉಪಸ್ಥಿತರಿದ್ದರು. ತಾಲ್ಲೂಕು ದಂಡಾಧಿಕಾರಿಗಳ ಪರವಾಗಿ ಎಸ್.ಐ.ಪತ್ತಾರ ಮನವಿ ಸ್ವೀಕರಿಸಿದರು.

ಪ್ರತಿಕ್ರಿಯಿಸಿ (+)